ಅತ್ಯದ್ಭುತ ಸೃಷ್ಟಿ ಯಾವುದು?
ಅತ್ಯದ್ಭುತ ಸೃಷ್ಟಿ?
ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ
ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ?
ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ
ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ
ಸೂರ್ಯನ ನೋಡಿದರೆ ಸುಡುವಗ್ನಿ ಕುಂಡ
ಮಂಗಳನಿಲ್ಲಾಗಿಹನು ಕಡು ಕೆಂಪು ಕೆಂಡ
ಗುರುವಿಗೆ ಕ್ಷುದ್ರಗ್ರಹದ ಕಾಟವಿರುವುದಿಲ್ಲಿ
ನೆಪ್ಚೂನ್-ಯುರೇನಸ್ ಬಿಳಿಚಿಹರು ಅಲ್ಲಿ
ಇದರ ಮಧ್ಯೆ ಹೊಳೆದಿಹುದು ಫಳಫಳ ಈ ಗೋಳ
ಗೋಳವು ಪ್ರಜ್ವಲಿಸಿದೆ - ಇದರ ಬಣ್ಣ - ನೀಲ
ಭೂಗೋಳದ ಒಳಗೆ ಹೊಕ್ಕಿಹನು ದೇವ
ಅಚ್ಚರಿಯ ಆಘಾತವು - ಅದ್ಭುತದ ಅಭಾವ
ಮೂಲೆ ಮೂಲೆ ತಿರುಗಿದನು - ಅಮೇರಿಕ - ಚೀನ
ಎಲ್ಲರಲೂ ಕಂಡಿಹುದು - ಊನ-ಅಪೂರ್ಣ
ಸೃಷ್ಟಿ ಬಲವು ಇಷ್ಟೇ? ಎಂದು ದೇವನಲಿ ಲಜ್ಜೆ
ಅಷ್ಟರಲಿ ಕೇಳಿಸಿತು ಸುನಾದದ ಹೆಜ್ಜೆ
ಅಲೆ ಅಲೆಯಲಿ ಕೇಳಿದೆ ಸಂಗೀತದ ನಾದ
ಸಾಗರವು ಸ್ಪರ್ಶಿಸಿಹುದು ಈಕೆಯ ಪಾದ
ಉಟ್ಟಿಹಳು ಕೇಸರಿಯ ರೇಶಿಮೆ ಸೀರೆ
ದೇವರಿಗೂ ರೋಮಾಂಚನ - ರೂಪಸಿ - ಈ ನೀರೆ
ಮೆರಗನ್ನು ನೀಡಿಹುದು ಹಸಿರ-ಹೊನ್ನ ಅಂಚು
ಮೈಯಲ್ಲಿ ಹುಟ್ಟಿತು ಝಲ್ಲನೆ ಕೋಲ್ಮಿಂಚು
ಬಲದ ಕೈಯಲಿ ಇಹುದು ಕ್ಷೀರದಾ ಕಲಶ
ಎಡಗಡೆ ಹರಿದಿಹಳು ಪಾವನೀ ಗಂಗೆ
ಯಮುನೆ-ತುಂಗೆ-ನರ್ಮದೆಯರ ಜಲಲ ಜಲಲ ಧಾರೆ
ಇವುಗಳಿಂದ ಮೂಡಿದೆ ಜಲದ ನಿರಿಗೆ ಸೀರೆ
ಸಿಂಧು ನದಿಯ ಕೆಮ್ಮಣ್ಣೇ ಇವಳ ಸಿಂಧೂರ
ಮಂದಸ್ಮಿತೆ ಈಕೆ - ಇದೇ ದಿವ್ಯಾಕಾರ
ಝಗಮಗಿಸಿದೆ ಈ ಸುಂದರ ಮಕುಟ
ಕಣ್ಣ ಕೋರೈಸಿದೆ ಇದು ಹಿಮಕಿರೀಟ
ಇವಳ ಕಂಡ ದೇವನು ಆದ ಕೊನೆಗೆ ಧನ್ಯ
"ನಿನಗಿಂತಿನ್ಯಾರಿಹರು - ನೀನು ಅಸಾಮಾನ್ಯ"
ದೇವನು ಉದ್ಘೋಷಿಸಿದ - "ನೀನೆ ಉತ್ಕೃಷ್ಟೆ!"
"ಜಗದಲಿ ನಿನಗೆ ಅಸಮ -ನೀ ಸೃಷ್ಟಿ ಪರಾಕಾಷ್ಟೆ!"
----------*----------
ತಕ್ಷಣವೇ ಮೊಳಗಿತು -
ಜಯಹೇ ಜಯಹೇ ಮಾತೆ
ಜಯ ಭಾರತಿ ಮಾತೆ
ಜಯ ಗಂಗಾ ಜನನಿ
ನೀ ಪತಿತ ಪಾವನಿ
ಜಯ ಭಾರತಾಂ.....ಬೆ!