ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

ಬರಹ

(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ)


ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಪ್ರತಿಕ್ರಿಯೆಗಳು, ರಿಟೈರ್ ಮೆಂಟ್ ನಂತರದ ಯೋಜನೆಗಳು ಇವುಗಳ ಬಗ್ಗೆ ಎಲ್ಲಾ ತುಂಬಾ ಕೂಲಂಕುಶವಾಗಿ ಅಧ್ಯಯನ ಮಾಡಿ ಬಹುದೊಡ್ಡ ಗ್ರಂಥಗಳನ್ನು ಬರೆದು, ಭೀಷಣ ಭಾಷಣಗಳನ್ನು ಕೊರೆದು ಹೆಸರು ಮಾಡಿದವರು ಅನೇಕರಿದ್ದಾರೆ.ದುಡಿಯುವಾಗಲೇ, ಮದುವೆಯಾಗುವ ಮುನ್ನವೇ, ಚಿಗುರು
ಮೀಸೆ ಒತ್ತೊತ್ತಾಗಿ ವ್ಯಾಪಿಸಿಕೊಳ್ಳುವ ಮುಂಚಿನಿಂದಲೇ ರಿಟೈರ್ ಮೆಂಟ್ ಬಗ್ಗೆ ಆಲೋಚಿಸಿ
ಸೂಕ್ತವಾಗಿ ಪ್ಲಾನ್ ಮಾಡಿ ಹಣ ಕೂಡಿಡುವ ಬುದ್ಧಿವಂತರಿದ್ದಾರೆ
. ತಾವು ರಿಟೈರ್ ಮೆಂಟ್ ಪಡೆಯುವವರೆಗೂ ಬದುಕಿರುತ್ತೇವೆ ಎಂಬ ಯಾವ ಗ್ಯಾರಂಟಿಯೂ ಇಲ್ಲದವರೂ ಸಹ ತಜ್ಞರ ಸಲಹೆ, ಮಾರ್ಗದರ್ಶನಗಳನ್ನು ಪಡೆದು ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುತ್ತಿದ್ದಾರೆ. ರಿಟೈರ್ ಮೆಂಟ್ ಪ್ಲಾನುಗಳನ್ನು ಹಾಕಿಕೊಡುವ ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳು ವಿಜೃಂಭಿಸುತ್ತಿವೆ. ಆದರೆ ಕ್ರಿಕೆಟ್ ಎಂಬ ಮಾಯಾ ಜಗತ್ತಿನಿಂದ ರಿಟೈರ್ ಆದವರು ಆಟದಲ್ಲಿನ ತಮ್ಮ ಹೆಸರು, ಖ್ಯಾತಿ, ಕುಖ್ಯಾತಿ, ಜಾಹೀರಾತು
ಮಾರುಕಟ್ಟೆಯಲ್ಲಿನ ತಮ್ಮ ಚಾಲ್ತಿಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಏನು
ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಂತಿರುವವರು ಆಸ್ಟ್ರೇಲಿಯಾದ ದಾಂಡಿಗ
ಹಾಗೂ ವಿಕೆಟ್ ಕೀಪರ್ ಅದಮ ಗಿಲ್ಲಿ ಕಷ್ಟ
.


 

ತಮ್ಮ
ಬಹು ಯಶಸ್ವೀ ಕ್ರಿಕೆಟ್ ಬದುಕಿನಿಂದ ವೈಭವೋಪೇತವಾದ ನಿವೃತ್ತಿಯನ್ನು ಘೋಷಿಸಿದ ನಂತರ
ಗಿಲ್ಲಿಯವರು ತಮ್ಮ ಆತ್ಮಚರಿತ್ರೆಯನ್ನು ಬರೆಸುವ ಕೆಲಸದಲ್ಲಿ ತೊಡಗಿಸಿಕೊಂಡರು
. ಕ್ರಿಕೆಟ್
ಮೈದಾನದಲ್ಲಿದ್ದಾಗ ಹೇಗೆ ಅವರು ಜಗತ್ತಿನ ಎಲ್ಲಾ ಕ್ರೀಡಾಪಟುಗಳಿಗೆ ಆದರ್ಶ
ಪ್ರಾಯರಾಗಿದ್ದರೋ ಹಾಗೆಯೇ ನಿವೃತ್ತರಾದ ಕ್ರೀಡಾಪಟುಗಳು ಹೇಗೆ ತಮ್ಮ ಪ್ರಸಿದ್ಧಿಯನ್ನು
ಕಾಪಾಡಿಕೊಳ್ಳಬೇಕು ಎಂದು ಹೇಳಿಕೊಟ್ಟು ಅದನ್ನು ಸ್ವತಃ ಪಾಲಿಸುವ ಮೂಲಕ
ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ
. ಇತ್ತೀಚೆಗೆ ಬಿಡುಗಡೆಯಾದ ಅವರ ಆತ್ಮಕತೆ ಟ್ರೂ ಕಲರ್ಸ್ನಲ್ಲಿ ಅವರು ಸಾಧ್ಯವಾದಷ್ಟು ಮಟ್ಟಿಗೆ ಕ್ರಿಕೆಟ್ ಜಗತ್ತನ್ನು ಕಾಡಿದ ವಿವಾದಗಳ ಭೂತಗಳನ್ನು ಆವಾಹಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಭಾರತದ ಖ್ಯಾತ ಆಟಗಾರ ಸಚಿನ್ ಹರ್ಭಜನ್ ಸಿಂಗ ಹಾಗೂ ಸೈಮಂಡ್ಸ್‌ರ ನಡುವಿನ ವಿವಾದದಲ್ಲಿ ಸುಳ್ಳು ಹೇಳಿದ್ದರು ಎಂದು ಗಿಲ್ಲಿ ಬರೆದುಕೊಂಡಿದ್ದಾರೆನ್ನಲಾಗಿದೆ. ಅಲ್ಲದೆ ಶ್ರೀಲಂಕಾದ ಸೈಲಂಟ್ ಕಿಲ್ಲರ್ ಮುರಳಿಯವರು ಮೋಸಗಾರರು, ಬಾಲನ್ನು ಎಲ್ಲರೂ ಮಾಡುವಂತೆ ಬೌಲ್ ಮಾಡದೆ ಚಕ್ಕರ್ ಎಸೆಯುತ್ತಾರೆ ಎಂದು ಆರೋಪಿಸಿದ್ದಾರೆ.


 

ಖ್ಯಾತ
ಆತ್ಮಕತೆಗಳನ್ನೆಲ್ಲಾ ಓದಿ ನಾನಾ ಹೆಸರುಗಳಲ್ಲಿ ವಿವಿಧ ಪತ್ರಿಕೆಗಳಿಗೆ ಒಂದೇ
ವಿಮರ್ಶೆಯನ್ನು ಕಳುಹಿಸುವ ಖ್ಯಾತಿಯನ್ನು ಪಡೆದಿರುವ ಸಾಮ್ರಾಟರನ್ನು ಪ್ರಸ್ತುತ
ಗಿಲ್ಲಿಯವರ ಆತ್ಮಕತೆಯ ಬಗ್ಗೆ ನಗೆ ನಗಾರಿ ಕೇಳಿದಾಗ ಅವರು ಹೇಳಿದ್ದಿಷ್ಟು
: ‘ಗಿಲ್ಲಿ ಎಷ್ಟು ಬುದ್ಧಿವಂತರು ಎಂಬುದನ್ನು ಅವರೊಂದಿಗೆ ಕ್ರಿಕೆಟ್ ಆಡಿದ ಎಲರೂ ಬಲ್ಲರು. ಅವರ ಆಟವನ್ನು ನೋಡಿದ ಯಾರು ಬೇಕಾದರೂ ಅವರು ಅಪ್ರತಿಮ ಚಾಲಾಕಿಗಳು ಎಂಬುದನ್ನು ಬಲ್ಲರು. ವಿಕೆಟ್ ಮುಂದಿರಲಿ, ವಿಕೆಟ್ ಹಿಂದಿರಲಿ ಅವರು ಎಂದಿಗೂ ತಮ್ಮ ತೀಕ್ಷ್ಣ ಬುದ್ಧಿಮತ್ತೆಯಿಂದ ಗಮನ ಸೆಳೆದವರು. ಹಿಂದೊಮ್ಮೆ
ಶ್ರೀಲಂಕಾದ ವಿರುದ್ಧ ಬ್ಯಾಟ್ ಮಾಡುವಾಗ ನಿರುಪದ್ರವಿ ಪಿಂಗ್ ಪಾಂಗ್ ಚೆಂಡನ್ನು
ಗ್ಲೌಸಿನೊಳಕ್ಕೆ ಹಾಕಿಕೊಂಡು ಬಂದು ಎಲ್ಲರನ್ನೂ ಬೆಪ್ಪುತಕ್ಕಡಿಯಾಗಿಸಿದ್ದರು
. ವಿಕೆಟ್
ಹಿಂದೆ ನಿಂತು ಬ್ಯಾಟ್ಸ್ ಮನ್ ಹಾಗೂ ಆ ದೇವರ ಹೊರತು ಬೇರಾರಿಗೂ ಕೇಳದ ಹಾಗೆ ಸ್ಲೆಡ್ಜ್
ಮಾಡುವುದು ಆಸ್ಟ್ರೇಲಿಯನ್ ಆಟಗಾರರಾಗಿ ಅವರು ಬಹಳ ಚೆನ್ನಾಗಿ ರೂಢಿಸಿಕೊಂಡಿದ್ದರು
ಎಂಬುದರ ಬಗ್ಗೆ ಎರಡು ಮಾತಿಲ್ಲ
.


 

51469868HB001_Aus_Train

 

 

ಈಗ ರಿಟೈರ್ ಆದ ನಂತರವೂ ಗಿಲ್ಲಿಯವರು ತಮ್ಮ ಜಾಣತನಕ್ಕೆ ನಿವೃತ್ತಿ ನೀಡಿಲ್ಲ. ತಮ್ಮ ಆತ್ಮಚರಿತ್ರೆಯನ್ನು ಬರೆಯುವಾಗಲೂ ಸಹ ಅವರು ತಮ್ಮ ಅಪ್ರತಿಮ ಚುರುಕು ಬುದ್ಧಿಯನ್ನು ಪ್ರದರ್ಶಿಸಿದ್ದಾರೆ. ಜಗತ್ತಿನಲ್ಲಿ ಕ್ರಿಕೆಟ್ಟನ್ನು ಧರ್ಮವಾಗಿ, ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುವುದು ಭಾರತ, ಪಾಕಿಸ್ತಾನ, ಶ್ರೀಲಂಕಾ ಸೇರಿದ ಉಪಖಂಡ ಎಂಬುದು ಕ್ರಿಕೆಟ್‌ನ ಅ ಆ ಇ ಈ ಬಲ್ಲ ಪ್ರತಿಯೊಬ್ಬರಿಗೂ ತಿಳಿದಿರುವಂಥದ್ದು. ಆದರೆ
ಈ ತಿಳುವಳಿಕೆಯನ್ನು ಯಶಸ್ವಿಯಾಗಿ ಬಳಸಿಕೊಂಡ ಗಿಲ್ಲಿಯವರು ತಮ್ಮ ಆತ್ಮಕತೆಯು ಕ್ರಿಕೆಟ್
ಜಗತ್ತಿನಲ್ಲಿ ಅಲೆಗಳನ್ನೆಬ್ಬಿಸಬೇಕು ಎಂದರೆ ಜೇನಿನ ಹುಟ್ಟಿನಂತಹ ಉಪಖಂಡಕ್ಕೆ ಒಂದೆರಡು
ಕಲ್ಲು ತೂರಬೇಕು ಎಂಬ ಸೂತ್ರವನ್ನು ಕಂಡುಕೊಂಡಿದ್ದಾರೆ
. ಅದರಂತೆಯೇ ಇಲ್ಲಿನ ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಮುರಳಿಯವರ ಪ್ರಸ್ತಾಪವನ್ನು ಮಾಡಿ ಸ್ವಲ್ಪ ಮಸಾಲೆ ಅರಿದು ಒಗ್ಗರಣೆ ಹಾಕಿದ್ದಾರೆ.


 

ಗಿಲ್ಲಿಯವರ ಈ ಪ್ರತಿಭೆಯನ್ನು ಭಾರತದಲ್ಲಿನ ನಿವೃತ್ತ ಕ್ರೀಡಾಪಟುಗಳು ಅನುಕರಣೆ ಮಾಡುವ ಪ್ರಯತ್ನ ಮಾಡಬೇಕು.
ನಷ್ಟದಲ್ಲಿರುವ ಭಾರತದ ಉದ್ದಿಮೆಗಳು ಗಿಲ್ಲಿಯವರಿಂದ ಈ ರೀತಿಯ ಮಾರುಕಟ್ಟೆ ಗೆಲ್ಲುವ
ತಂತ್ರಗಳನ್ನು ಕಲಿತುಕೊಳ್ಳಬೇಕು ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ
.’

 

ಸಾಮ್ರಾಟರ ಈ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅದಮ ಗಿಲ್ಲಿ ಕಷ್ಟರು, ‘ಇದು ಪೂರ್ವಾಗ್ರಹಪೀಡಿತವಾದ, ಅತಿರಂಜಿತವಾದ, ವೈಯಕ್ತಿತ ನಿಂದನೆಯುಕ್ತವಾದ, ಅಸತ್ಯಗಳಿಂದ ಕೂಡಿದ ಬಾಲಿಶ ಅಭಿಪ್ರಾಯ’, ಎಂದು ತಿಳಿಸಿ, ‘ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.