ಅದು ಯುದ್ಧವಲ್ಲ, ಮಹಾ ಅತ್ಯಾಚಾರ!
ಅದು ಗಣರಾಜ್ಯ ಚೀನಾದ ಹಳೆಯ ರಾಜಧಾನಿ. ಸುಮಾರು ಆರು ಸಾಮ್ರಾಜ್ಯಗಳ ರಾಜಧಾನಿಯಾಗಿ ಮೆರೆದ ಸಾಂಸ್ಕೃತಿಕ ನಗರ ನಾನ್ಜಿಂಗ್. ಆದ್ರೆ 1937ರ ಡಿಸೆಂಬರ್ ತಿಂಗಳಿನಲ್ಲಿ ಆರು ವಾರಗಳ ಕಾಲ ನಡೆದ ನರಮೇಧದಿಂದಾಗಿ ನಾನ್ಜಿಂಗ್ ನಗರ ಚೀನಾ ಇತಿಹಾಸದ ಕರಾಳ ಅಧ್ಯಾಯವಾಗಿ ಉಳಿದಿದೆ.
ಅದು 1930ರ ಎರಡನೇ ಚೀನಾ-ಜಪಾನ್ ಯುದ್ಧದ ಅವಧಿ. ಅದಾಗ್ಲೇ ಇಂಪೀರಿಯಲ್ ಜಪಾನ್ ಸೇನೆ ಶಾಂಘೈನಗರವನ್ನು ವಶಪಡಿಸಿಕೊಂಡಿತ್ತು. ಆ ಸೊಕ್ಕಿನಲ್ಲಿ ಯುದ್ಧವನ್ನು ಮುಂದುವರ್ಸೋಕೆ ಜಪಾನ್ ತನ್ನ ಸೇನೆಗೆ ಆದೇಶ ನೀಡಿತ್ತು. ಶಾಂಘೈನ ನಂತ್ರ ನಾನ್ಜಿಂಗ್ ನಗರವನ್ನು ವಶಪಡಿಸಿಕೊಳ್ಳುವಂಥ ಅಭೂತಪೂರ್ವ ಸಾಹಸಕ್ಕೆ ಜಪಾನ್ ಸೇನೆ ಸಜ್ಜಾಗಿತ್ತು. ಎಲ್ಲಾ ತಂಡಗಳಿಗೆ ಉತ್ಸುಕರಾಗಿ ಮುನ್ನುಗ್ಗುವಂತೆ ಆದೇಶವೂ ರವಾನೆಯಾಗಿತ್ತು. ಸಾಮ್ರಾಜ್ಯಷಾಹಿ ಜಪಾನ್ ಪೂರ್ವ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿತ್ತು. ಆ ಸಂದರ್ಭ ಚೀನಾ, ದಕ್ಷಿಣ ಕೊರಿಯಾದ ಮೇಲೆ ಯುದ್ಧಕ್ಕೆ ಮುಂದಾಗಿತ್ತು. ಅದಕ್ಕಾಗಿ ಉತ್ತರ ಕೊರಿಯಾಗೆ ನಾಲ್ಕು ಲಕ್ಷ ಸೈನಿಕರನ್ನು ಕಳುಹಿಸಿ ಸೇನಾಬಲವನ್ನೂ ಸಹ ಕಳೆದುಕೊಂಡಿತ್ತು.
ಡಿಸೆಂಬರ್ 13, 1937 ರಂದು ತಾಯ್ನೆಲವನ್ನು ಕಬಳಿಸಲು ಬರುತ್ತಿದ್ದ ಜಪಾನ್ ಬೃಹತ್ ಸೇನೆಯನ್ನು ಹಿಮ್ಮೆಟ್ಟಲು ಚೀನಾ ಸೈನಿಕರು ಹೆಗಲಿಗೆ ಹೆಗಲೊಡ್ಡಿ ನಿಂತಿದ್ರು. ಆದ್ರೆ ರಕ್ಕಸ ಗಾತ್ರದ ಜಪಾನ್ ಸೇನೆಗೆ ಚೀನಿ ಸೈನಿಕರನ್ನು ದಾಟಿ ಹೋಗುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ನಗರದ ಬಾಗಿಲಿಗೆ ಅಡ್ಡವಾಗಿ ಇಟ್ಟಿದ್ದ ಮೂಟೆಗಳನ್ನು ತಳ್ಳಿ ಜಪಾನ್ ಸೈನಿಕರು ನಗರವನ್ನು ವಶಪಡಿಸಿಕೊಂಡ್ರು. ನಾನ್ಜಿಂಗ್ನೊಳಗೆ ನುಗ್ಗಿ ತಮ್ಮ ಗೆಲುವಿನ ಧ್ವಜವನ್ನು ಹಾರಿಸಿಬಿಟ್ರು. ಆ ವಿಜಯದ ಬಾವುಟ ನಾನ್ಜಿಂಗ್ನಲ್ಲಿ ನಡೆಯಬೇಕಿದ್ದ ಅಮಾನವೀಯ ಚರಿತ್ರೆಗೆ ಮುನ್ನುಡಿಯಾಗಿತ್ತು.
ನಗರದೊಳಗೆ ನುಗ್ಗಿದ ಜಪಾನ್ ಸೈನಿಕರಿಗೆ ಕಂಡಿದ್ದು ಮುರುಟಿ ಬಿದ್ದ ಗೋಡೆಗಳು, ರಸ್ತೆಯುದ್ಧಕ್ಕೂ ಅಸ್ತವ್ಯಸ್ತವಾಗಿ ಬಿದ್ದ ವಸ್ತುಗಳು, ಹೊಗೆಯಿಂದ ಕೂಡಿದ ಸ್ಮಶಾನ ಸದೃಶ್ಯ ಚಿತ್ರಣ. ಒಂದೇ ಒಂದು ನರಪಿಳ್ಳೆಯ ಸುಳಿವೂ ಇಲ್ಲವೆಂಬಂಥ ವಾತಾವರಣ ನಗರವನ್ನು ಆವರಿಸಿತ್ತು. ಜಪಾನ್ ಸೈನಿಕರ ಕಣ್ಣು ಮತ್ತವರ ಫಿರಂಗಿ ನಳಿಕೆಗಳು ಮಾತ್ರ ನಗರದ ನಾಗರೀಕರನ್ನ, ಚೀನಿ ಸೈನಿಕರನ್ನ ಹುಡುಕುತ್ತಿದ್ದವು.
ಆ ಶೋಧದಲ್ಲಿಯೇ ಜಪಾನ್ ಸೇನೆಯ ಸಣ್ಣ ತುಕಡಿ ದೊಡ್ಡದೊಂದು ಕಟ್ಟಡದ ಬಳಿ ಹೋಯ್ತು. ಒಮ್ಮೆಗೆ ತುಕಡಿ ಬೆಚ್ಚಿಬೀಳಿಸುವಂಥ ದೃಶ್ಯವದು. ಅಲ್ಲಿ ನಾನ್ಜಿಂಗ್ನ ಸಾವಿರಾರು ನಾಗರೀಕರು, ಅಳಿದುಳಿದ ಚೀನಿ ಸೈನಿಕರು ಜೀವ ಕೈಯಲ್ಲಿ ಹಿಡ್ದು ಅವಿತು ಕೂತಿದ್ರು. ಜಪಾನ್ ಸೇನಾ ತುಕಡಿಯನ್ನ ಕಂಡ ನಾನ್ಜಿಂಗ್ ಜನ ಭಯಗೊಂಡ್ರು. ಹಿರಿಯರಿಂದ ಹಿಡ್ದು ಸಣ್ಣ ಮಗುವಿನವರೆಗೆ ಎಲ್ರೂ ಕೈ ಮೇಲೆತ್ತಿ ಶರಣಾಗಿದ್ರು...
ಜಪಾನ್ ಸೈನಿಕ್ರು ನಾಂಜಿಂಗ್ ನಗರವನ್ನು ಹೊಕ್ಕ ಬಳಿಕ ಚೀನಾದ ರಾಷ್ಟ್ರೀಯ ಕ್ರಾಂತಿಕಾರಿ ಸೇನೆಯ ದಂಡನಾಯಕ್ರು ಅಲ್ಲಿಂದ ಕಾಲ್ಕಿತ್ರು. ಜಪಾನ್ ಸೇನೆ ಬೀದಿಯುದ್ದಕ್ಕೂ ಸಾವಿರಾರು ಸೈನಿಕರನ್ನು, ಸಾರ್ವಜನಿಕರನ್ನು, ಮಹಿಳೆಯರನ್ನು ಕೊಂದು, ಗಲ್ಲಿಗೇರ್ಸಿದ್ರು. ಹಾದಿಯುದ್ಧಕ್ಕೂ ಎದುರಾಗುತ್ತಿದ್ದವರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು. ಹಾಗಾಗಿ ರಸ್ತೆಯುದ್ಧಕ್ಕೂ ಹೆಣಗಳ ರಾಶಿ ಕಣ್ಣಿಗೆ ರಾಚುತ್ತಿತ್ತು.
ಜಪಾನಿ ಸೇನೆ ನಾನ್ಜಿಂಗ್ನ್ನು ವಶಪಡಿಸಿಕೊಂಡಿದ್ದಾಗ ಅಲ್ಲಿ ವಿದೇಶೀಯರೂ ಇದ್ರು. ನಾನ್ಜಿಂಗ್ನಲ್ಲಿ ಮಿಶನರಿಗಳು, ವ್ಯಾಪಾರಿಗಳು ಹೇರಳವಾಗಿದ್ರು. ಅವ್ರಲ್ಲಿ ಒಬ್ಬ ಜಾನ್ ರೇಬ್. ಜರ್ಮನಿಯಿಂದ ಬಂದು ನೆಲೆಸಿದ ಹಿಟ್ಲರ್ ಪರ ವ್ಯಕ್ತಿ. ಶ್ರೀಮಂತನಾಗಿದ್ದ, ಆರಾಮಾಗಿ ಜರ್ಮನ್ಗೆ ಹೋಗಬಹುದಿತ್ತು. ಆದ್ರೆ ತನ್ನನ್ನು ನಂಬಿದ್ದ ಚೀನಿಯರನ್ನು ಬಿಟ್ಟು ಹೋಗುವುದು, ಅವ್ರ ನಂಬಿಕೆಗೆ ದ್ರೋಹ ಬಗೆಯುವಂತದ್ದು ಅಂತ ಭಾವಿಸಿದ್ದ. ಏನೇ ಆಗ್ಲೀ ಎಲ್ಲವನ್ನೂ ಎದುರಿಸೋಣ ಅಂತ ಜನರನ್ನ ಸಂಘಟಿಸಿ ಒಂದು ಸುರಕ್ಷಾ ವಲಯವನ್ನು ರಚಿಸಿದ. ಜಪಾನಿಯರ ಆಕ್ರೋಶದ ನಡುವೆಯೂ ಸುರಕ್ಷಾ ವಲಯದಲ್ಲಿ ಉಳಿದುಕೊಂಡಿದ್ದು ಭರ್ತಿ 2 ಲಕ್ಷ ಜನ. ಖುದ್ದು ಜಾನ್ ರೇಬ್ ತನ್ನ ಸ್ವಂತ ಜಾಗದಲ್ಲಿ 650ಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಿದ್ದ.
ಇಡೀ ನಗರವೇ ತಮ್ಮ ವಶದಲ್ಲಿದ್ದರಿಂದಾಗಿ ಸುಲಿಗೆ, ಲೂಟಿ ಸಲೀಸು ಕೆಲಸವಾಗಿತ್ತು. ಅತ್ಯಾಚಾರವೆಂಬುದು ಸಾಮಾನ್ಯವಾಗಿತ್ತು. ಜಪಾನ್ ಸೈನಿಕರಿಗೆ ಉನ್ನತಾಧಿಕಾರಿಗಳು ಮತ್ತಷ್ಟು ಉತ್ತೇಜನ ನೀಡ್ತಿದ್ರು. ಹಾಗಾಗಿಯೇ ಜಪಾನ್ ಸೈನಿಕರು ಹೊಸ ಹೊಸ ವಿಧಾನಗಳಲ್ಲಿ ಕೊಲೆಯನ್ನು ಕಲೆಯೆಂಬಂತೆ ಮಾಡುತ್ತಿದ್ರು. ಅವ್ರ ಕ್ರೌರ್ಯದ ಪರಮಾವಧಿ ಎಷ್ಟಿತ್ತಂದ್ರೆ ಒಬ್ಬ ಹೆಂಗಸಿನ ಮೇಲೆ ಹಲವು ಸೈನಿಕರು ಅತ್ಯಾಚಾರ ನಡೆಸ್ತಿದ್ರು..
ಅಂತರಾಷ್ಟ್ರೀಯ ಪ್ರಭಾವವನ್ನು ಬಳಸಿ ರೂಪಿಸಿಕೊಂಡಿದ್ದ ಸುರಕ್ಷಾ ವಲಯವನ್ನೂ ಛಿದ್ರಗೊಳಿಸಿತ್ತು ಜಪಾನಿ ಸೈನಿಕರ ದೌರ್ಜನ್ಯ. ಜಾನ್ ರೇಬ್ನ ಸಹಾಯಕ ಟಾಂಗ್ನ ಮಗಳು ಜಪಾನಿ ಸೈನಿಕರ ಕಾಮಕ್ಕೆ ಬಲಿಯಾದ್ಳು. ಅವನ ನಾದಿನಿ ಕೂಡ ಅತ್ಯಾಚಾರಕ್ಕೆ ಒಳಗಾದ್ಳು. ಇದ್ರಿಂದ ಜಾನ್ ರೇಬ್ ರೋಷಗೊಂಡ. ಆದ್ರೆ ವಿದೇಶದಲ್ಲಿದ್ದು, ಏನೂ ಮಾಡದ ಅಸಹಾಯಕತೆಯಲ್ಲಿ ಅವ್ನಿದ್ದ.
`ಚೀನಾ ನಾನ್ಜಿಂಗ್ ನಗರವನ್ನು ಕಳೆದುಕೊಂಡಿದೆ. ಮೂರು ದಿನಗಳಲ್ಲಿ ನಾನ್ಜಿಂಗ್ ಅನ್ನು ವಶಪಡಿಸಿಕೊಂಡಿರೋ ನಮಗೆ ನಿಮ್ಮ ಸುರಕ್ಷಾವಲಯವನ್ನು ಧ್ವಂಸಗೊಳಿಸೋದು ಕಷ್ಟದ ಕೆಲಸವೇನೂ ಅಲ್ಲ' ಎಂಬ ಎಚ್ಚರಿಕೆಯ ಮಾತನ್ನು ಜಪಾನ್ ಇಂಪೀರಿಯಲ್ ಸೇನೆಯ ಸೇನಾಧಿಕಾರಿ, ಜಾನ್ ರೇಬ್ಗೆ ತಿಳಿಸಿದ. ಅಲ್ಲದೇ ತಮ್ಮ ಸೈನಿಕರಿಗೆ ಸುಖಿಸಲಿಕ್ಕೆ 100 ಹೆಂಗಸರನ್ನು ಪೂರೈಸಿ ಅಂತ ಪೀಡಿಸಿದ...
ತಮ್ಮ ಮನೆ, ಮಠ, ಮಕ್ಕಳನ್ನು ಕಳೆದುಕೊಂಡಿದ್ದ ನಾನ್ಜಿಂಗ್ ನಾಗರೀಕರು ಜಪಾನ್ ಸೈನಿಕ್ರ ಹಿಂಸೆಗೆ ಭಯಗೊಂಡಿದ್ದರು. ಜಾನ್ ರೇಬ್ನ ಸುರಕ್ಷಾ ವಲಯದಲ್ಲಿದ್ದರೂ ಸಹ ಸಾವು-ನೋವು ಯಾವ ದಿಕ್ಕಿನಿಂದ ನುಗ್ಗಿ ಬರುತ್ತೋ ಅನ್ನೋ ಭಯ ಕಾಡ್ತಿತ್ತು. ಜಾನ್ ರೇಬ್, ಟಾಂಗ್ ಮತ್ತವನ ನಾದಿನಿ ಸುರಕ್ಷಾ ವಲಯದಲ್ಲಿದ್ದ ಯುವತಿಯರನ್ನ, ಮಹಿಳೆಯರನ್ನ ಕರೆದು ಜಪಾನ್ ಸೈನಿಕರ ವಿಕೃತ ಬಯಕೆಯನ್ನು ತಿಳಿಸಿದರು. ಅಸಹಾಯಕರಾಗಿದ್ದ ಚೀನಿ ಯುವತಿಯರು ಎಲ್ಲವನ್ನೂ ಕಳೆದುಕೊಂಡು ದಿಕ್ಕು ತೋಚದಂತಾಗಿ ನಿಂತ್ರು...
ಟಾಂಗ್ನ ನಾದಿನಿ ದುಃಖಿತಳಾಗಿ ಜಪಾನ್ ಸೈನಿಕರ ಬಯಕೆಗೆ ಬಲಿಯಾಗಲು ಮುಂದೆ ಬರುವಂತೆ ಕೇಳಿಕೊಂಡಳು. ಅಲ್ಲಿ ಶ್ಮಶಾನ ಮೌನ ಆವರಿಸಿತ್ತು. ಗುಂಪಿನೊಳಗಿಂದ ಯುವತಿಯೊಬ್ಬಳು ಕೈಯೆತ್ತುವ ಮೂಲಕ ಮಹಾನ್ ತ್ಯಾಗಕ್ಕೆ ಮುನ್ನುಡಿಯಾದಳು. ನಂತರ ಒಬ್ಬೊಬ್ಬರೇ ಮಹಿಳೆಯರು ಅಸಹಾಯಕರಾಗಿ ಕೈಯೆತ್ತುವ ಮೂಲಕ ಜಪಾನ್ ಸೈನಿಕರ ಕಾಮಕ್ಕೆ ಬಲಿಯಾಗಲು ರೆಡಿಯಾದ್ರು. ಅವತ್ತು ಚೀನಿ ಮಹಿಳೆಯರು ತೆಗೆದುಕೊಂಡ ನಿಧರ್ಾರ ಇಂದಿಗೂ ಅಜರಾಮರ. ಜಪಾನಿಗರ ವಿಕೃತ ತೃಷೆಗೆ ಸಿದ್ಧವಾಗುವ ಮೂಲಕ ಉಳಿದವ್ರನ್ನನು ಉಳಿಸುವ ಮಹಾನ್ ತ್ಯಾಗಕ್ಕೆ ಅವ್ರು ಸಿದ್ಧರಾಗಿದ್ರು.
ಕಾಮುಕರಂತೆ ಕಾದಿದ್ದ ಜಪಾನ್ ಸೈನಿಕ್ರು ಚೀನಿ ಯುವತಿಯರನ್ನು ಮುಕ್ಕಿ ಬಿಸಾಡಿದ್ರು. ಅಲ್ಲಿ ಮಾನಭಂಗವೂ ಯುದ್ಧದ ಒಂದು ಭಾಗವೇ ಆಗಿ ಹೋಗಿತ್ತು. ಅತ್ಯಾಚಾರ ಯಾವ ಮಟ್ಟಕ್ಕಿತ್ತಂದ್ರೆ ಹಲವಾರು ಸೈನಿಕರ ಕಾಮದ ಹಸಿವಿಗೆ ಬಲಿಯಾಗುತ್ತಿದ್ದ ಯುವತಿಯರು ಸಾಯುತ್ತಿದ್ದರು. ಅವ್ರ ದೇಹಗಳನ್ನು ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಹೊರಗೆಸೆಯುತ್ತಿದ್ದರು. ಇದು ಜಗತ್ತಿನ ಅತ್ಯಂತ ಹೇಯವಾದ ದುರಂತ...
ನಾನ್ಜಿಂಗ್ನಲ್ಲಿ ಜಪಾನ್ ಸೇನೆ ಇದ್ದದ್ದು ಆರೇ ವಾರ. ಆದ್ರೆ ಅಷ್ಟರಲ್ಲಿ ಎರಡು ಲಕ್ಷ ಮಂದಿ ಸಾವು ಕಂಡಿದ್ರು. ಜಪಾನ್ ಸೈನಿಕರಿಂದ ಅತ್ಯಾಚಾರಗೊಳಗಾದವ್ರು 20 ಸಾವಿರಕ್ಕೂ ಹೆಚ್ಚಿನ ಚೀನಿ ಮಹಿಳೆಯರು ಮತ್ತು ಮಕ್ಕಳು. ಮಕ್ಕಳನ್ನೂ ಬಿಡದೆ ಮುಕ್ಕಿದ ಜಪಾನಿಗರ ಕ್ರೌರ್ಯ ನಿಜಕ್ಕೂ ಪರಮ ಅಸಹ್ಯ..
ನಾನ್ಜಿಂಗ್ ಅನ್ನೋ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಗರ ಆರು ವಾರಗಳಲ್ಲಿ ಅತ್ಯಾಚಾಕ್ಕೊಳಗಾಯಿತು. ನಗರದ ತುಂಬೆಲ್ಲಾ ಉಳಿದದ್ದು ಸತ್ತ ದೇಹಗಳು, ಮಾನ ಕಳೆದುಕೊಂಡು ಜೀವಂತ ಶವವಾಗಿದ್ದ ಮಂದಿ ಮಾತ್ರ.. 1938ರ ಅಂತ್ಯದ ವೇಳೆಗೆ ಜಾನ್ ರೇಬ್ ರೂಪಿಸಿದ್ದ ಸುರಕ್ಷಾ ವಲಯದಲ್ಲಿದ್ದ ನಿರಾಶ್ರಿತರನ್ನು ಜಪಾನ್ ಸೇನೆ ಮನೆಗಳಿಗೆ ವಾಪಾಸ್ಸಾಗುವಂತೆ ಬಲವಂತಪಡಿಸಿತ್ತು. ತುತರ್ಾಗಿ ಯಥಾ ಸ್ಥಿತಿಯನ್ನು ಸ್ಥಾಪಿಸಲು ಮುಂದಾಗಿತ್ತು. ಇದೇ ವೇಳೆ ಜಪಾನ್ ಮತ್ತು ನಾನ್ಜಿಂಗ್ ಸಹಯೋಗದ ಸಕರ್ಾರ ರಚನೆಯಾಯ್ತು. ಇದ್ರಿಂದಾಗಿ ಯಥಾಸ್ಥಿತಿಯ ಆದೇಶ ಸಕ್ರಿಯವಾಗಿ ಜಾರಿಗೆ ಬಂತು. ಜಪಾನ್ ಸೈನಿಕರ ಕ್ರೌರ್ಯ ಕ್ರಮೇಣ ಕೊನೆಯಾಯ್ತು. ಆದ್ರೆ ಚೀನಾ ಯಾವತ್ತೂ ಮರೆಯೋದಕ್ಕೆ ಆಗ್ದಂಥ ಗಾಯದ ನೆನಪನ್ನು ಅದು ಉಳಿಸಿಹೋಗಿದೆ...
ಚಿತ್ರಕೃಪೆ-ಅಂತರ್ಜಾಲ
Comments
ಉ: ಅದು ಯುದ್ಧವಲ್ಲ, ಮಹಾ ಅತ್ಯಾಚಾರ!
In reply to ಉ: ಅದು ಯುದ್ಧವಲ್ಲ, ಮಹಾ ಅತ್ಯಾಚಾರ! by venkatb83
ಉ: ಅದು ಯುದ್ಧವಲ್ಲ, ಮಹಾ ಅತ್ಯಾಚಾರ!
ಉ: ಅದು ಯುದ್ಧವಲ್ಲ, ಮಹಾ ಅತ್ಯಾಚಾರ!
In reply to ಉ: ಅದು ಯುದ್ಧವಲ್ಲ, ಮಹಾ ಅತ್ಯಾಚಾರ! by ಸುಮ ನಾಡಿಗ್
ಉ: ಅದು ಯುದ್ಧವಲ್ಲ, ಮಹಾ ಅತ್ಯಾಚಾರ!