ಅದ್ಭುತವಲ್ಲದ ಅದ್ಭುತ!

ಅದ್ಭುತವಲ್ಲದ ಅದ್ಭುತ!

ಬರಹ

ಅದ್ಭುತವಲ್ಲದ ಅದ್ಭುತ!
ಈಗ ಸ್ವಲ್ಪ ದಿನಗಳ ಹಿಂದೆ 'ವಿಶ್ವದ ಏಳು ಅದ್ಭುತ'ಗಳಲ್ಲಿ ಒಂದನ್ನಾದರೂ ನೊಡಿದ್ದೇನೆ ಎಂದು ನಾನು ನನ್ನಷ್ಟಕ್ಕೇ ಬೀಗಿಕೊಳ್ಳುತ್ತಿದ್ದೆ.ಆದರೆ ನವೀಕರಿಸಿದ ಏಳು ಅದ್ಭುತಗಳ ಪಟ್ಟಿ ಬಿಡುಗಡೆಗೊಂಡಾಗ ನನಗೆ ಮಾತ್ರ ನಿರಾಶೆ ಕಾದಿತ್ತು.ಹೌದು! ವಿಶ್ವದ ಅತೀ ಪುರಾತನ ಮತ್ತು ಅತೀ ಬ್ರಹತ್ ಕಟ್ಟಡವೊಂದು ವಿಸ್ಮಯಗಳ ಸಾಲಿಗೆ ಸೇರಿಲ್ಲದಿರುವುದು. ಯಾವುದೀ ರಚನೆ ಎಂದು ಯೋಚಿಸುತ್ತಿದ್ದೀರಾ? ಹಾಂ,ಅದೇ-ಈಜಿಪ್ಟನ "ಗಿಜಾ ಪಿರಾಮಿಡ್"ಗಳು.

ಕಳೆದ ಏಪ್ರಿಲ್ ನಲ್ಲಿ ನನಗೆ ಹೀಗೊಮ್ಮೆ ಈಜಿಪ್ಟ್ ಗೆ ಪ್ರವಾಸ ಕೈಗೊಳ್ಳುವ ಸುಯೋಗವೊಂದು ಕೂಡಿ ಬಂದಿತ್ತು.ಅಲ್ಲಿ ನಾ ನೋಡಿದ ವಿಸ್ಮಯಗಳನ್ನು,ತಿಳಿದುಕೊಂಡ ಅಲ್ಪ ಸ್ವಲ್ಪ ವಿಷಯಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಚಿಕ್ಕ ಪ್ರಯತ್ನ ಇದು.

ಈಜಿಪ್ಟ್ ನ ರಾಜಧಾನಿ'ಕೈರೊ'ದಿಂದ ಸುಮಾರು 20 ರಿಂದ 25 ಕಿ.ಮೀ ಅಂತರದಲ್ಲಿ ಗ್ರೇಟ್ ಗಿಜಾ ಪಿರಾಮಿಡ್ ಗಳಿವೆ.ನಾಲ್ಕು ತ್ರಿಕೋನಾಕಾರದ ಮುಖ ಮತ್ತು ಒಂದು ಚೌಕಾಕಾರದ ತಳ ಹೊಂದಿರುವ ಈ ಪಿರಾಮಿಡ್ ಗಳ ಎತ್ತರ 461 ಅಡಿ! ತಳದ ಅಗಲ ಸುಮಾರು 13 ಎಕರೆ! ಅಂದರೆ ಸುಮಾರು 10 ಫುಟ್ ಬಾಲ್ ಕ್ರೀಡಾಂಗಣದಷ್ಟು.ಇದೊಂದು ಮಾನವ ನಿರ್ಮಿತ ಬ್ರಹತ್ ಪರ್ವತ! ಪಿರಾಮಿಡ್ ಒಂದರ ರಚನೆಯಲ್ಲಿ ಬಳಕೆಯಾದ ಕಲ್ಲುಗಳ ಸಂಖ್ಯೆ ಸುಮಾರು 2.5 ಮಿಲಿಯನ ಗಳು. ಈಜಿಪ್ಟನ ಬಹುಪಾಲು ಮರುಭೂಮಿಯೇ.ಅಂಥಹುದರಲ್ಲಿ ಅಷ್ಟೊಂದು ಅಗಾಧ ಪ್ರಮಾಣದ ಕಲ್ಲುಗಳನ್ನು ಕಲೆ ಹಾಕುವುದು ಸುಲಭದ ಕೆಲಸವೇನಲ್ಲ.ಈಜಿಪ್ಟನ ದೂರದ ಪ್ರದೇಶವಾದ 'ಲಕ್ಸರ್' ಎಂಬಲ್ಲಿಂದ ಭಾರೀ ಗಾತ್ರದ ಕಲ್ಲುಗಳನ್ನು 'ನೈಲ್' ನದಿಯ ಮೂಲಕ ತರಲಾಯಿತಂತೆ.ಆದರೆ ಈ ಕಾರ್ಯ ನೈಲ್ ಗೆ ಪ್ರವಾಹ ಬಂದಾಗ ಮಾತ್ರ ಸಾಧ್ಯವಾಗುತ್ತಿತ್ತಂತೆ.ಯಾವುದೋ ಆಕಾರದಲ್ಲಿ ಇರುವ ಆ ಕಲ್ಲುಗಳನ್ನು ನಿರ್ದಿಷ್ಟವಾಗಿ ಆಯತಾಕಾರಕ್ಕೆ ಕತ್ತರಿಸಿದ್ದಾದರೂ ಹೇಗೆ?ಕತ್ತರಿಸಿದ ಆ ದೈತ್ಯ ಕಲ್ಲುಗಳನ್ನು ಮೇಲಮೇಲಕ್ಕೆ ಏರಿಸಿದ್ದಾದರೂ ಹೇಗೆ? ಅಂತೆಯೇ ಪಿರಾಮಿಡ ಒಂದೊಂದು ಮುಖವೂ ನಿಖರವಾಗಿ ಪೂರ್ವ,ಪಶ್ಚಿಮ,ಉತ್ತರ ಮತ್ತು ದಕ್ಷಿಣಾಭಿಮುಖವಾಗಿದೆ.'ದಿಕ್ಸೂಚಿ'ಯೂ ಇರದ ಆ ಕಾಲದಲ್ಲಿ ಅಷ್ಟು ನಿಖರವಾಗಿ ದಿಕ್ಕುಗಳನ್ನು ಗುರುತಿಸಿದ್ದಾದರೂ ಹೇಗೆ?...ಎಲ್ಲವೂ ನಿಗೂಡವೆ......

ಪಿರಾಮಿಡ್ ಗಳ ರಚನೆಗೆ ಈಜಿಪ್ಷಿಯನ್ನರ ನಂಬಿಕೆಯೆ ಮೂಲ ಕಾರಣ.ಈಜಿಪ್ಷಿಯನ್ನರು 'ಸತ್ತ ನಂತರದ ಬದುಕು' ಮತ್ತು 'ಪುನರ್ಜನ್ಮ'ಗಳಲ್ಲಿ ನಂಬಿಕೆ ಇದ್ದಂಥವರು.ಈ ನಂಬಿಕೆಯಂತೆ ಮ್ರತ ದೇಹಗಳನ್ನು ಸಂರಕ್ಷಿಸಿಡುವುದು ಅತ್ಯವಶ್ಯಕ.ಮನುಷ್ಯನ ದೇಹ ಐದು ಮೂಲಭೂತವಾದ ಸಂಗತಿಗಳಿಂದಾಗಿದೆ.ಅವು ಕ,ಬ ಅಖ್,ನೇಮ್ ಮತ್ತು ಶ್ಯಾಡೊ.ಬ ಅಂದರೆ ಎಂದರೆ ಆತ್ಮ.ಕ ಮತ್ತು ಬ ಗಳು ಸೇರಿ ಆಗಿರುವುದು ಅಖ್(ದೇಹ).ನೇಮ್ ಎಂದರೆ ವ್ಯಕ್ತಿಗತವಾದದ್ದು-ವ್ಯಕ್ತಿತ್ವ.ದೇಹದಲ್ಲಿ ಇರುವ ಆತ್ಮ,ವ್ಯಕ್ತಿ ಸತ್ತ ನಂತರ ಭಗವಂತನನನ್ನು ಸೇರುವಂಥದ್ದು.ಹೀಗೆ ಭಗವಂತನ ಸನ್ನಿಧಿಯನ್ನು ಸೇರುವುದಕ್ಕೆ ಮುಂಚೆ ಎದುರಾಗುವುದು 'ಮ್ರತ್ಯುಲೋಕ'.ಇಲ್ಲಿ ಎದಿರಾಗುವ ಕಷ್ಟಗಳನ್ನು ಭೇದಿಸಲು ದೇಹ ಒಂದು ಸಾಧನ.ಆದ್ದರಿಂದಲೇ ದೇಹದ ಸಂರಕ್ಶಣೆಗೆ ಅಷ್ಟು ಪ್ರಾಮುಖ್ಯತೆಯನ್ನು ಕೊಟ್ಟಿದ್ದು.ಹೀಗೆ ಸಂರಕ್ಷಿಸಲ್ಪಟ್ಟ ಮ್ರತ ದೇಹವನ್ನು 'ಮಮ್ಮಿ'ಎಂದು ಕರೆಯಲಾಗುತ್ತದೆ.ಈ ಮಮ್ಮಿಗಳನ್ನು ಸಿದ್ಧಪಡಿಸುವ ಕ್ರಿಯೆಗೆ 'ಮಮ್ಮಿಫಿಕೇಷನ್'ಎಂದು.(ನಾವು ನೀವು ಮನೆಯಲ್ಲಿ ಕರೆಯುವ ಮಮ್ಮಿ ಅಲ್ಲ ಇದು! ಅವಳು 'ಅಮ್ಮ'-ನನ್ನಮ್ಮ ನಮ್ಮೆಲ್ಲರ ಸರ್ವಸ್ವ ಅಮ್ಮ.ಅಲ್ಲವೆ?)
ಮಮ್ಮಿಫಿಕೇಶನ್ ಎರಡು ಹಂತವನ್ನೊಳಗೊಂಡಿದೆ. ಮ್ರತ ದೇಹವನ್ನು ಮೊದಲು ನೈಲ್ ನೀರಿನಿಂದ ಶುದ್ಧೀಕರಿಸಿ,ದೇಹದ ಎಡ ಭಾಗವನ್ನು ಕೌಯ್ದು ಕರುಳು,ಜಠರ ಮುಂತಾದ ಅಂಗಾಂಗಗಳನ್ನು ಹೊರತೆಗೆದು ನಂತರ ದೇಹವನ್ನು ನಲವತ್ತು ದಿನಗಳ ಕಾಲ ಮರಳು ಮತ್ತು ಸ್ವಾಭಾವಿಕ ಲವಣದಲ್ಲಿ ಮುಚ್ಚಿಡಲಾಗುತ್ತದೆ. ನಂತರ ನಲವತ್ತು ದಿನಗಳ ಬಳಿಕ ಸ್ವಲ್ಪವೂ ಆರ್ದ್ರತೆ ಹೊಂದಿರದ ದೇಹದೊಳಕ್ಕೆ,ಇದರಂತೆಯೆ ಸಿದ್ಧಪಡಿಸಿದ ಜಠರ ಕರುಳುಗಳನ್ನು ಸರಿಯಾಗಿ ತುಂಬಿ,ಮತ್ತೆ ಕೆಲವು ಕೆಡದಂತೆ ಕಾಪಾಡುವ ಗುಣವುಳ್ಳ ದ್ರವ್ಯಗಳನ್ನೂ,ಸುಗಂಧ ದ್ರವ್ಯಗಳನ್ನೂ ಲೇಪಿಸಿದರೆ 'ಮಮ್ಮಿ' ರೆಡಿಯಾಗಿಬಿಡುತ್ತಿತ್ತು. ಇಂಥಹ ಸಂಕೀರ್ಣ ವಿಧಾನದಿಂದ ತಯಾರಿಸಿದ ಮಮ್ಮಿಯನ್ನು ಮರ ಮತ್ತು ಚಿನ್ನದ ದೊಡ್ಡ ದೊಡ್ಡ ಪೆಟ್ಟಿಗೆಗಳಲ್ಲಿ ಮಲಗಿಸಲಾಗುತ್ತಿತ್ತು.ಇವುಗಳ ಜೊತೆಯಲ್ಲಿಯೇ ಆಹಾರ ಪದಾರ್ಥಗಳು,ಕೇಶಾಲಂಕಾರಿಕ ವಸ್ತುಗಳು,ಬೆಲೆ ಬಾಳುವ ಆಭರಣಗಳು,ಬರವಣಿಗೆಯ ಸಾಮಗ್ರಿಗಳು,ಪ್ರಚಲಿತದಲ್ಲಿದ್ದ ಸಾರಿಗೆ ವಾಹನವಾದ ದೋಣಿಗಳು ಹೀಗೆ ದಿನಬಳಕೆಯ ಅನೇಕ ವಸ್ತುಗಳನ್ನು ಇಡಲಾಗುತ್ತಿತ್ತು.ಈ ಎಲ್ಲವೂ ಆತ್ಮಕ್ಕೆ 'ಮ್ರತ್ಯುಲೋಕ'ದಲ್ಲಿ ಬೇಕಾದ ಅವಶ್ಯಕ ಪರಿಕರಗಳು.ಹೀಗೆ ಮ್ರತ್ಯುಲೋಕವನ್ನು ದಾಟಿ ದೇವಲೋಕಕ್ಕೆ ಹೋದಾಗ ದೇವರು 'ಅನುಬಿಸ್' ಆತ್ಮವನ್ನು ಅಳೆದು ಅದಕ್ಕನುಗುಣವಾಗಿ ಸ್ವರ್ಗ ಮತ್ತು ನರಕವನ್ನು ನೀಡುತ್ತಾನೆ. ನರಕ ಎಂದರೆ ಮರುಹುಟ್ಟು.ಸ್ವರ್ಗ ಎಂದರೆ ಎಲ್ಲ ಬಂಧನಗಳಿಂದ ನಿರ್ಮುಕ್ತವಾಗುವುದು, ಅನುಬಿಸ್ ನಲ್ಲಿ ಒಂದಾಗಿಬಿಡುವುದು.ಈ ನಂಬಿಕೆಗಳೊಂದಿಗೆ ಮಮ್ಮಿಗಳನ್ನು ಹೊತ್ತ ಪೆಟ್ಟಿಗೆಗಳನ್ನು ದೈತ್ಯ ಪಿರಮಿಡ್ ನ ಒಳಗೆ ಭದ್ರವಾಗಿಡಲಾಗುತ್ತಿತ್ತು. ಪಿರಮಿಡ್ ನ ಅನತಿ ದೂರದಲ್ಲಿಯೇ ಇನ್ನೊಂದು ಆಕರ್ಷಣೆಯಿದೆ.ಅದು 'ಸ್ಪಿಂಕ್ಸ್'.ಮನುಷ್ಯನ ಮುಖ ಮತ್ತು ಸಿಂಹದ ದೇಹ ಹೊಂದಿರುವ ಈ ದೇವತೆಗೆ ಪಿರಮಿಡ್ ಗಳನ್ನು ರಕ್ಷಿಸುವುದೇ ಕೆಲಸ.ಜಗತ್ತಿನಲ್ಲಿಯೇ ಈ ಸ್ಪಿಂಕ್ಸ್ -ಏಕಶಿಲೆಯಿಂದ ನಿರ್ಮಿತವಾದ ಅತೀ ದೊಡ್ಡ ಮತ್ತ್ತು ಅತೀ ಪುರಾತನವಾದ ಶಿಲ್ಪವಾಗಿದೆ. ಅಂತೆಯೆ ಗಿಜಾದ ಈ ಪಿರಾಮಿಡ್ "ಕುಫು" ರಾಜನದ್ದು.ಕಟ್ಟಿಸಿದವ ಕೂಡ ಇವನೇ.ಪಿರಾಮಿಡ್ ನ ಮೇಲ್ಪದರದಲ್ಲಿ ಬೆಲೆಬಾಳುವ ಗ್ರಾನೈಟ್,ಚಿನ್ನ ಕೂಡ ಬಳಕೆ ಆಗಿತ್ತು.ಆದರೆ ಈಗ ನಾವು ಪಿರಾಮಿಡ್ ನ ತುತ್ತ ತುದಿಯಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಕಾಣಬಹುದು. ಹಾಗೆಯೇ ಜಗತ್ತಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಹಿಳಾ ಆಡಳಿತ ಈಜಿಪ್ಟ್ ನಲ್ಲಿ ಜಾರಿಯಲ್ಲಿತ್ತು. ಇವರಲ್ಲಿ ಹ್ಯಾಟ್ಷೆಪ್ಸಟ್,ಕ್ಲಿಯೋಪಾತ್ರ,ನೆಫೆರ್ಟರಿ,ನೆಫೆರ್ಟಿಟಿ ಮುಂತಾದವರು ಪ್ರಮುಖರು.ಹ್ಯಾಟ್ಷೆಪ್ಸಟ್ 21 ವರ್ಷಗಳ ಕಾಲ ಸುದೀರ್ಘವಾಗಿ ಈಜಿಪ್ಟ್ ನ್ನು ಆಳಿದ್ದಳು.
ಈಜಿಪ್ಟ್ ನಲ್ಲಿ ಇನ್ನೊಂದು ನೋಡಲೇಬೇಕಾದ ತಾಣವೆಂದರೆ ಅದು 'ಕೈರೊ ಮ್ಯೂಸಿಯಮ್'.ಪುರಾತನ ಕಾಲದ ಸುಮಾರು 120000 ವಸ್ತುಗಳನ್ನು ಮತ್ತು 30 ರೊಯಲ್ ಮಮ್ಮಿಗಳನ್ನು ಇಲ್ಲಿ ಕಾಣಬಹುದು.ಬಹು ವಿಶಾಲವಾದ ಈ ಮ್ಯೂಸಿಯಮ್ ನ್ನು ಒಮ್ಮೆ ಪ್ರವೇಶಿಸಿದರೆ ಸಾಕು ಹೊರಕ್ಕೆ ಬರುವ ಮನಸ್ಸಾಗುವುದೇ ಇಲ್ಲ.ಅರಗಿಸಿಕೊಳ್ಳಬೇಕಾದ ನೂರಾರು ವಿಷಯಗಳಿವೆ,ಕುತೂಹಲವೆನಿಸುವ ಸಾವಿರಾರು ಸಂಗತಿಗಳಿವೆ...ಪಿರಾಮಿಡ್ ನ ಒಳ ಹೊರಗೆ ಕಂಡು ಕೇಳಿದ,ಕಲ್ಪಿಸಿಕೊಂಡ ಎಲ್ಲ ವಿಚಾರಗಳೂ ಇಲ್ಲಿ ರೂಪ ಪಡೆಯುತ್ತದೆ.ಅಷ್ಟೆ ಅಲ್ಲ:ಶಾಲಾದಿನಗಳಿಂದಲೂ ಬರೀ ಮನಸ್ಸಿನಲ್ಲಿ ಕಲ್ಪಿಸಿಕೊಂಡ'ಮಮ್ಮಿ'ಗಳನ್ನೂ ಮನಸೋ ಇಚ್ಚೆ ನೋಡಬಹುದು! ಈಗಿಪ್ಷಿಯನ್ನರು ಬಳಸುತ್ತಿದ್ದ ಗಾಜಿನ ಪಾತ್ರೆಗಳು,ಮಡಿಕೆ-ಕುಡಿಕೆಗಳು,ಕತ್ತಿ-ಕಠಾರಿ,ಖಡ್ಗಗಳು,ಚಿನ್ನ ಮತ್ತು ಬೆಳ್ಳಿಯ ಆಭರಣಗಳು,ದೇವ ದೇವತೆಯರ,ರಾಜ ರಾಣಿಯರ ಅನೇಕ ಶಿಲ್ಪಗಳು,ಅವರು ಬಳಸುತ್ತಿದ್ದ ಮರದ ದೋಣಿಗಳು,ಮಮ್ಮಿಗಳನ್ನು ಇಟ್ಟ ಭಾರೀ ಗಾತ್ರದ ಚಿನ್ನದ ಪೆಟ್ಟಿಗೆಗಳು...ಮುಂತಾದ ಅನೇಕ ವಸ್ತುಗಳನ್ನು ನೋಡಬಹುದು.ಗಾಜಿನ ಬಳಕೆಯನ್ನು ಮೊದಲು ಮಾಡಿದ ಖ್ಯಾತಿ ಕೂಡ ಇವರದ್ದೇ.ಅಂತೆಯೆ ಈಜಿಪ್ಷಿಯನ್ನರ ಬಗೆಬಗೆಯ ಅನೇಕ ಚಿತ್ರಕಲೆಗಳೂ ಅಷ್ಟೇ ಆಕರ್ಷಿತವಾಗಿದೆ.ವಿಷೇಷವಾಗಿ'ಪೆಪರಸ್'ಎಂದು ಕರೆಯಲ್ಪಡುವ ತೈಲ ವರ್ಣಚಿತ್ರಗಳು.ನೈಲ್ ನದಿಯ ಫಲವತ್ತಾದ ಭೂಮಿಯಲ್ಲಿ ಬೆಳೆದ ಪೆಪರಸ್ ಗಿಡವನ್ನು ಹದಗೊಳಿಸಿ ಹಾಳೆ(ಪೇಪರ್) ತಯಾರಿಸಿ, ಚಿತ್ರ ಬಿಡಿಸುವುದು ಇವರ ವಿಷೇಷ.ಈ ಕಲೆ ಇಂದಿಗೂ ಕೂಡ ಇಲ್ಲಿ ಜೀವಂತವಾಗಿದೆ.ಆದರೆ ಕಲೆಗಾರರು ಮಾತ್ರ ಈಜಿಪ್ಷಿಯನ್ನರಲ್ಲ! ಅರಬ್ ಜನರು! ಹೌದು. ಕಾಲಗರ್ಭದಲ್ಲಿ ಈಜಿಪ್ಷಿಯನ್ನರು ಕಾಲವಾಗಿಬಿಟ್ಟಿದ್ದಾರೆ.ಈಗ ಈಜಿಪ್ಟ್ ಒಂದು ಸಂಪೂರ್ಣ ಅರಬ್ ರಾಷ್ಟ್ರ .
ಈಜಿಪ್ಟ್ ನಲ್ಲಿ ಇರುವ ನೈಲ್ ನದಿಗೂ ಒಂದು ವಿಷೇಷವಿದೆ.ಇದು ಜಗತ್ತಿನಲ್ಲಿ ಅತೀ ಉದ್ದವಾಗಿ ಹರಿಯುವ ನದಿಯಾಗಿದೆ.ಇದರ ಉದ್ದ 4132ಮೈಲಿಗಳು.ಆಫ್ರಿಕಾದಲ್ಲಿ ಹುಟ್ಟಿ ಉತ್ತರದೆಡೆಗೆ ಹರಿಯುವ ಈ ನದಿ 'ಸುಡಾನ್' ಕಡೆಯಿಂದ ಈಜಿಪ್ಟ್ ಪ್ರವೇಶಿಸಿ,ಕೊನೆಯಲ್ಲಿ ಮೆಡಿಟರೇನಿಯಮ್ ಸಮುದ್ರವನ್ನು ಸೇರುತ್ತದೆ.
ಹೀಗೆ ಈಜಿಪ್ಟ್ ನಲ್ಲಿ ಎಲ್ಲವೂ ವಿಷೇಷವೇ.ಎಷ್ಟು ನೋಡಿದರೂ ಮುಗಿಯದ,ಕುತೂಹಲವೆನಿಸುವ,ನಿಗೂಡವಾದ ನೂರಾರು ವಿಷಯಗಳನ್ನು ತನ್ನ ಗರ್ಭದಲ್ಲಿ ಬಚ್ಚಿಟ್ಟುಕೊಂಡಿದೆ.ಜಗತ್ತಿನ ಏಕಮಾದ್ವಿತೀಯ,ಉಳಿದಿರುವ ಅತೀ ಬ್ರಹತ್ ಮತ್ತು ಪುರಾತನ ಕಟ್ಟಡವಾದ 'ಗಿಜಾ ಪಿರಾಮಿಡ್' ಅದ್ಭುತ ಅನಿಸಿಲ್ಲವೇ ನಿಮಗೆ?ಜಗತ್ತಿನ ಏಳು ಅದ್ಭುತಗಳ ಪಟ್ಟಿಯಿಂದ ಇದನ್ನು ಕೈಬಿಟ್ಟಿರುವುದು ಸಮಂಜಸವೇ? ನಿಜಕ್ಕೂ ವಿಷಾದನೀಯ. ಆದರೂ ಈ 'ಅದ್ಭುತವಲ್ಲದ ಅದ್ಭುತ'ವನ್ನು ನೋಡಿದ ಖುಶಿ,ತ್ರಪ್ತಿ ನನಗಂತೂ ಇದೆ. ಸಾಧ್ಯವಾದರೆ ನೀವೂ ಒಮ್ಮೆ ಹೋಗಿ ಬನ್ನಿ.