ಅದ್ಭುತ ಪ್ರತಿಭೆಯುಳ್ಳ ವ್ಯಕ್ತಿಯೊಬ್ಬರ ಕುರಿತು...

ಅದ್ಭುತ ಪ್ರತಿಭೆಯುಳ್ಳ ವ್ಯಕ್ತಿಯೊಬ್ಬರ ಕುರಿತು...

 

ದಿವ್ಯಾಂಗ ಚೇತನ, ಕರ್ನಾಟಕದ ಹೆಮ್ಮೆ, ಪಶ್ಚಿಮ ಬಂಗಾಳದ ಮಿಡ್ನಾಪುರದ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು. ಕೆಲವು ವರ್ಷಗಳ ಹಿಂದೆ ಅಂಗವಿಕಲ ಎಂಬ ಪದವನ್ನು ಬದಲಾಯಿಸಿ ವಿಕಲಚೇತನರು ಅಥವಾ ವಿಶೇಷಚೇತನರು ಅಥವಾ ದಿವ್ಯಾಂಗ ಚೇತನರು ಎಂಬುದಾಗಿ ಸರ್ಕಾರದ ಮಟ್ಟದಲ್ಲಿ ಬದಲಾಯಿಸಲಾಗಿದೆ. ಏಕೆಂದರೆ ದೇಹದ ಯಾವುದೇ ಭಾಗದ ಅಸಹಜತೆ ಅಥವಾ ನ್ಯೂನ್ಯತೆ ಒಂದು ದೌರ್ಬಲ್ಯ, ಅದನ್ನು ಮತ್ತೆ ಮತ್ತೆ ಹೇಳಿ ಅಂಗವಿಕಲರು ಎಂದರೆ ಅದೊಂದು ವ್ಯಕ್ತಿ ನಿಂದನೆಯಾಗಬಹುದು ಮತ್ತು ಅವರಲ್ಲಿ ಕೀಳರಿಮೆ ಉಂಟುಮಾಡುತ್ತದೆ ಎಂಬ ಕಾರಣದಿಂದ ಅದನ್ನು ದಿವ್ಯಾಂಗ ಚೇತನ ಎಂದು ಬದಲಾಯಿಸಲಾಯಿತು...

ಅನೇಕ ಸಾಮಾನ್ಯ ಜನರಿಗೆ ಇದು ಒಂದು ರೀತಿ ಆಶ್ಚರ್ಯಕರ ಎನಿಸುತ್ತಿತ್ತು. ಒಂದು ಅಂಗವಿಕಲತೆ ದಿವ್ಯಾಂಗ ಹೇಗಾಗುತ್ತದೆ ಎಂಬ ಒಳ ಮನಸ್ಸಿನ ಪ್ರಶ್ನೆಗೆ ಉತ್ತರ ರೂಪದಲ್ಲಿ ಅನೇಕ ಉದಾಹರಣೆಗಳಿವೆ. ಅವರಲ್ಲಿ ಪ್ರಮುಖರೊಬ್ಬರು ಇಲ್ಲಿದ್ದಾರೆ, ಅವರೇ ಈಗಿನ ಪಶ್ಚಿಮ ಬಂಗಾಳದ ಐತಿಹಾಸಿಕ ಜಿಲ್ಲೆ ಮಿಡ್ನಾಪುರದ ವಿಶೇಷ ಜಿಲ್ಲಾಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು, ದಕ್ಷಿಣ ಭಾರತದ ಮೊದಲ ದೃಷ್ಠಿಯಿಲ್ಲದ ಐಎಎಸ್ ಅಧಿಕಾರಿ.

ನನ್ನ ಮೈಸೂರಿನ ಆತ್ಮೀಯ ಗೆಳೆಯರು ಒಂದು ದಿನ ಕರೆ ಮಾಡಿ ಮಿಡ್ನಾಪುರದ ವಿಶೇಷ ಜಿಲ್ಲಾಧಿಕಾರಿಯವರು ನಿಮ್ಮೊಂದಿಗೆ ಮಾತನಾಡಬೇಕಿದೆ. ಅವರು ನಿಮ್ಮ ಬರಹಗಳನ್ನು ಓದಿ ಸದಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ  ಎಂದು ಹೇಳಿದರು. ಹಾಗೆಯೇ ಶ್ರೀ ಕೆಂಪ ಹೊನ್ನಯ್ಯನವರು ನನ್ನೊಂದಿಗೆ ದೂರವಾಣಿ ಕರೆ ಮಾಡಿ ಕೆಲವು ವಿಷಯಗಳನ್ನು ಚರ್ಚಿಸಿ ಒಮ್ಮೆ ಮಿಡ್ನಾಪುರಕ್ಕೆ ಅವರ ಅತಿಥಿಯಾಗಿ ಬರಲು ಆಹ್ವಾನಿಸಿದರು. ನಾನು ಬಹಳ ಹಿಂದೆ ಕೊಲ್ಕತ್ತಾ ಪ್ರವಾಸ ಮಾಡಿದ್ದೆ. ಈಗ ಈ ನೆಪದಲ್ಲಿ ಮತ್ತೊಮ್ಮೆ ಪಶ್ಚಿಮ ಬಂಗಾಳದ ರಾಜಧಾನಿ ಮತ್ತು ಐತಿಹಾಸಿಕ ಮಿಡ್ನಾಪುರ ಜಿಲ್ಲೆಯನ್ನು ನೋಡುವ ಸಲುವಾಗಿ ಗೆಳೆಯರೊಂದಿಗೆ ಮಿಡ್ನಾಪುರಕ್ಕೆ ಭೇಟಿ ನೀಡಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನವರಾದ, 2017 ನೇ ಬ್ಯಾಚಿನ ಐಎಎಸ್ ಅಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು ಕಳೆದ ಏಳು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಕಳೆದ ಮೂರು ವರ್ಷಗಳಿಂದ ಮಿಡ್ನಾಪುರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದಾರೆ. ಅವರನ್ನು ಮೊದಲ ಬಾರಿ ಮಿಡ್ನಾಪುರದಲ್ಲಿ ಭೇಟಿಯಾದಾಗ ಅವರ ಫಿಸಿಕಲ್ ಅಪಿಯರೆನ್ಸ್ ನಿಜಕ್ಕೂ ಗಮನ ಸೆಳೆಯಿತು. ಸಿನಿಮಾ ನಟನ ರೀತಿಯಲ್ಲಿ ದೃಷ್ಟಿ ಹೊರತುಪಡಿಸಿ  ಆರೋಗ್ಯಕರ ದೈಹಿಕ ರಚನೆ ಹೊಂದಿದ್ದ ಕೆಂಪ ಹೊನ್ನಯ್ಯನವರು ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಅವರೇ ನಮ್ಮನ್ನು ಉಳಿಸಿದ್ದ ಅತಿಥಿಗೃಹಕ್ಕೆ ಬಂದರು. ಅಲ್ಲಿ ನಮಗೆಲ್ಲ ಆತ್ಮೀಯ ಸ್ವಾಗತ ಕೋರಿ ಆತಿಥ್ಯ ನೀಡಿದರು. ಪ್ರೀತಿಸಿ ಮದುವೆಯಾದ ಈ ಜೋಡಿಯದು ಒಂದು ಆದರ್ಶ ಕುಟುಂಬ. ಆ ಹೆಣ್ಣು ಮಗಳು ಮನೆಯವರ ಪ್ರತಿರೋಧವನ್ನು ಎದುರಿಸಿ ಇವರನ್ನು ಮದುವೆಯಾದ ಪ್ರಕ್ರಿಯೆ ಪ್ರೀತಿಯ ಭಾವ ತರಂಗಗಳ ವೈಶಾಲ್ಯತೆಗೆ ಎಲ್ಲೆ ಮೀರಿದ  ಅರ್ಥದ ಅತ್ಯುತ್ತಮ ಉದಾಹರಣೆ.

ಪಶ್ಚಿಮ ಬಂಗಾಳ ರಾಜ್ಯದ ಮಿಡ್ನಾಪುರ ಜಿಲ್ಲೆ  ಭಾರತದ ಒಂದು ಐತಿಹಾಸಿಕ ಮಹತ್ವದ ಸ್ಥಳ. ವಿಸ್ತಾರದಲ್ಲಿ ಸಹ ಬಂಗಾಳದ ಬಹುದೊಡ್ಡ ಜಿಲ್ಲೆಯಾಗಿದೆ. ಭಾರತ ಸ್ವಾತಂತ್ರ್ಯ ಹೋರಾಟಗಾರ ಧೀರೋದಾತ್ತ ಖುದಿರಾಮ್ ಬೋಸ್ ಇದೇ ಮಿಡ್ನಾಪುರದವರು. ಖ್ಯಾತ ಹಿಂದಿ ಸಾಹಿತಿ ಮತ್ತು ಸಾಮಾಜಿಕ ಹೋರಾಟಗಾರ ಈಶ್ವರ ಚಂದ್ರ ವಿದ್ಯಾಸಾಗರ ಅವರು ಸಹ ಮಿಡ್ನಾಪುರ ಜಿಲ್ಲೆಯವರೇ. ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಸ್ವಾಭಿಮಾನಿ ನೆಲ. ಇಂತಹ ಜಿಲ್ಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕೆಂಪಹೊನ್ನಯ್ಯನವರು  ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗೂ ಅಲ್ಲಿನ ಮುಖ್ಯಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿ ಅವರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಕಣ್ಣು ಕಾಣದ ಜಿಲ್ಲಾಧಿಕಾರಿಯೊಬ್ಬರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎನ್ನುವ ಕುತೂಹಲ ಅನೇಕರಿಗೆ ಇದೆ. ಆದರೆ ದೃಷ್ಟಿ ಇರುವ ಎಲ್ಲರಿಗಿಂತಲೂ ಸ್ಪಷ್ಟವಾಗಿ ತಮ್ಮ ಮುಂದಿನ ಫೈಲ್ ಗಳನ್ನು ಅರ್ಥ ಮಾಡಿಕೊಂಡು ಡಿಜಿಟಲ್ ಸಹಿಯನ್ನು ಉಪಯೋಗಿಸಿಕೊಂಡು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆಡಳಿತಾತ್ಮಕವಾಗಿ ಅತ್ಯುತ್ತಮ ಕೆಲಸ ಮಾಡಲು ಯಾವ ತೊಂದರೆಯೂ ಇಲ್ಲ. ಅದಕ್ಕೆಂದೇ ಹೇಳಿದ್ದು ಅವರು ಒಬ್ಬ ದಿವ್ಯಾಂಗ ಚೇತನರು. ಆಡಳಿತಾತ್ಮಕವಾಗಿ ಯಾವುದೇ ಸಮಸ್ಯೆಯನ್ನು  ಎದುರಿಸದೆ, ಕೆಲವೊಮ್ಮೆ ಎದುರಾಗುವ ಕ್ಲಿಷ್ಟಕರ ಸನ್ನಿವೇಶದಲ್ಲಿ ಆಧುನಿಕ ತಂತ್ರಜ್ಞಾನ ಅವರಿಗೆ ಸಹಾಯ ಮಾಡಿದೆ.

ಅವರೊಂದಿಗೆ ಸಾಕಷ್ಟು ಮಾತುಕತೆ, ಚರ್ಚೆ, ಸಂವಾದ, ಸಂದರ್ಶನ ನಡೆಯಿತು. ತಮ್ಮ ಮಾತೃ ಭೂಮಿ ಕರ್ನಾಟಕ ರಾಜ್ಯದ ಬಗ್ಗೆ, ತಾಯಿ ಭಾಷೆ ಕನ್ನಡದ ಬಗ್ಗೆ ಅವರು ತೀವ್ರವಾದ ಅಭಿಮಾನ ಹೊಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳೇ ಆಗಲಿ, ನೀಟ್ ಪರೀಕ್ಷೆಗಳೇ ಆಗಲಿ, ಕನ್ನಡ ತಾಯಿ ಭಾಷೆಯಲ್ಲಿ ಅವಕಾಶ ನೀಡುವುದು ಸಂವಿಧಾನಾತ್ಮಕ ಹಕ್ಕಾಗಿದೆ. ಸಂವಿಧಾನಾತ್ಮಕವಾಗಿ ಎಲ್ಲಾ 22 ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕು. ನಮ್ಮ ಮಾತೃಭಾಷೆಯಲ್ಲಿ ನಾವು ಓದಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಏಕೆಂದರೆ ತಾಯಿ ಭಾಷೆಯೇ ನಿಜವಾದ ಅರಿವಿನ ಭಾಷೆ. ನಮ್ಮದಲ್ಲದ ಇತರೆ ಭಾಷೆಗಳು ಜ್ಞಾನ, ಸಂಪರ್ಕ, ಉದ್ಯೋಗ, ವ್ಯವಹಾರದ ದೃಷ್ಟಿಯಿಂದ ಉತ್ತಮವಾಗಬಹುದೇ ಹೊರತು, ನಮ್ಮೊಳಗಿನ ಅರಿವನ್ನು ಸಂಪೂರ್ಣ ಪ್ರಮಾಣದಲ್ಲಿ ಹೊರ ಹಾಕುವುದು ಕಷ್ಟ. ಒಂದು ತಾಯಿ ಭಾಷೆಯಲ್ಲಿ ಆ ನೆಲದ ಸಂಸ್ಕೃತಿ ಅಡಗಿರುತ್ತದೆ ಎಂಬುದನ್ನು ಅತ್ಯಂತ ಪ್ರಾಮಾಣಿಕವಾಗಿ, ಅರ್ಥಗರ್ಭಿತವಾಗಿ ಮಾತನಾಡಿದರು.

ಅವರನ್ನು ನೀವು ಐಎಎಸ್ ಪಾಸಾಗಲು ನಿಮ್ಮೊಳಗಿನ ಸಹಜ ಪ್ರತಿಭೆ ಕಾರಣವೋ ಅಥವಾ ನೀವು ಸಾಕಷ್ಟು ಶ್ರಮವಹಿಸಿ ಈ ಪರೀಕ್ಷೆಯನ್ನು ಪಾಸು ಮಾಡಿದಿರೋ ಎಂಬುದಾಗಿ  ಕೇಳಿದಾಗ ಅದಕ್ಕೆ ಅವರು ಕೊಟ್ಟ ಉತ್ತರ ಬಹುತೇಕ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವವರಿಗೆ ಮಾರ್ಗದರ್ಶನವಾಗಬಹುದು, ಪ್ರೇರಣೆಯೂ ಆಗಬಹುದು. 

ಅವರು ಹೇಳಿದ್ದು " ನಾನು ಇತಿಹಾಸವನ್ನು ಓದುವಾಗ ಅದು ನನ್ನ ಇತಿಹಾಸ, ನನ್ನ ಮನೆಯ ಇತಿಹಾಸ, ನನ್ನ ಸಮಾಜದ ಇತಿಹಾಸ ಎಂಬುದಾಗಿ ಓದುತ್ತಿದ್ದೆ. ವಿಜ್ಞಾನವನ್ನು ಓದುವಾಗ ಅದು ನನಗೆ ಸಂಬಂಧಿಸಿದೆ ನನ್ನದೇ ವಿಜ್ಞಾನ ಎಂಬುದಾಗಿ ಓದುತ್ತಿದ್ದೆ. ಗಣಿತವನ್ನು ಓದುವಾಗ ಅದು ನನ್ನದೇ ಲೆಕ್ಕಾಚಾರ, ನನ್ನ ಬದುಕಿನ ಲೆಕ್ಕಾಚಾರ ಎಂದೇ ಭಾವಿಸಿ ಅದನ್ನು ಓದುತ್ತಿದ್ದೆ. ಹೀಗೆ ಯಾವುದೇ ವಿಷಯವನ್ನು ಅದು ನನ್ನದು, ನನಗೆ ಸಂಬಂಧಿಸಿದ್ದು ಎನ್ನುವ ಭಾವದಲ್ಲಿ ಓದಿದರೆ ಯಾವ ವಿಷಯವೂ ಕಷ್ಟವಾಗುವುದಿಲ್ಲ ಅಥವಾ ಬೇಸರವೂ ಆಗುವುದಿಲ್ಲ. ಏಕೆಂದರೆ ನಾನು ನನ್ನನ್ನು ಅರಿಯುತ್ತಾ ಮುನ್ನಡೆಯುತ್ತೇನೆ. ಈ ಒಂದು ಭಾವದಲ್ಲಿ ಓದಿದ್ದರಿಂದ ನನಗೆ ಐಎಎಸ್ ಪಾಸ್ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ನಿಜಕ್ಕೂ ಅತ್ಯುತ್ತಮವಾದ, ಸ್ಪೂರ್ತಿದಾಯಕ ಮಾತುಗಳಿವು.‌

ಈಗಾಗಲೇ ಏಳು ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರತರಾಗಿರುವ ಶ್ರೀ ಕೆಂಪಹೊನ್ನಯ್ಯನವರು ಕರ್ನಾಟಕದಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದಾರೆ. ಅದಕ್ಕೆ ಏನು ಕಾನೂನಾತ್ಮಕ ತೊಡಕುಗಳಿದೆಯೋ ಗೊತ್ತಿಲ್ಲ. ಆದರೆ ಅವರು ನಮ್ಮ ರಾಜ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತರೆ ಖಂಡಿತವಾಗಲೂ ರಾಜ್ಯಕ್ಕೆ ಒಬ್ಬ ಅತ್ಯುತ್ತಮ ಮತ್ತು ಉಪಯುಕ್ತ ಐಎಎಸ್ ಅಧಿಕಾರಿ ದೊರೆಯುತ್ತಾರೆ. ಕೇವಲ ಅರಳಿತಾತ್ಮಕವಾಗಿ ಮಾತ್ರವಲ್ಲ ಇತರರಿಗೆ ಸ್ಪೂರ್ತಿಯಾಗಿ, ದಿವ್ಯಾಂಗ ಚೇತನರಿಗೆ ಆದರ್ಶವಾಗಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಮಾದರಿಯಾಗಿ ಶ್ರೀ ಕೆಂಪಹೊನ್ನಯ್ಯನವರು ಈ ನೆಲದಲ್ಲಿ ಸೇವೆ ಸಲ್ಲಿಸುವಂತಾಗಲಿ.

ಅವರ ಪ್ರತಿಭೆ ಮತ್ತು ಚಿಂತನೆಗಳ ಬಗ್ಗೆ ಹೇಳಲು ಸಾಕಷ್ಟು ವಿಷಯಗಳಿವೆ. ಆದರೆ ಅವರು ಉನ್ನತ ಸರ್ಕಾರಿ ಅಧಿಕಾರಿಯಾಗಿ ರುವುದರಿಂದ ಎಚ್ಚರಿಕೆಯಾಗಿ ಕೆಲವನ್ನು ಮಾತ್ರ ಸರಳವಾಗಿ ಹೇಳಿದ್ದೇನೆ. ನಮ್ಮ ನಡುವಿನ ಸಮಕಾಲೀನ ಪ್ರತಿಭೆಗೆ ಶುಭಾಶಯಗಳನ್ನು ಕೋರುತ್ತಾ...

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ