ಅದ್ಯಾಕೋ ಶಾಲಾ ಮಕ್ಕಳು ಮೊದಲಿನ ತರ ಇಲ್ಲಾ ! (ಭಾಗ 1)
ಕೋವಿಡ್ ಬಂದ ಮೇಲೆ ಇಡೀ ಪ್ರಪಂಚದ ಎಲ್ಲಾ ವ್ಯವಸ್ಥೆಗಳು ಪಾತಾಳಕ್ಕೆ ಕುಸಿದಿದ್ದು ನಮಗೆಲ್ಲಾ ಚೆನ್ನಾಗಿಯೇ ಗೊತ್ತಿದೆ. ಅದರಲ್ಲೂ ಶಾಲೆಯ ಮಕ್ಕಳ ತಲೆಯಲ್ಲಿ ಕಲಿತದ್ದೆಲ್ಲಾ ಅಳಿಸಿ ಹೋಗಿ ಹೊಸದೇನಾದರೂ ಕಲಿಸೋಣ ಎಂದರೆ ಅದೂ ಕೂಡ ಕೆಲವರ ತಲೆಗೆ ಹತ್ತುತ್ತಿಲ್ಲ.!ಆಶ್ಚರ್ಯವಾದರೂ ಇದು ಸತ್ಯ.ಕರೋನ ನಂತರದಲ್ಲಿ ನಾನೊಬ್ಬ ಶಿಕ್ಷಕನಾಗಿ ಈ ಮಾತನ್ನು ಹೇಳುತ್ತಿದ್ದೇನೆಂದರೇ ಅದು ಈ ಕೆಳಗಿನ ಘಟನೆಗಳಿಂದ....!!
ಘಟನೆ -1: ನಮ್ಮ ಶಾಲೆಯ ಇಬ್ಬರು ಹುಡುಗರು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಟಾಪ್ ಮೆರಿಟಲ್ಲಿ ಆಯ್ಕೆ ಆಗಿದ್ದರು. ಆ ಹುಡುಗರು ಬಹುತೇಕ ಸ್ವತಂತ್ರವಾಗಿ ಬದುಕಲು ಶಕ್ತವಾದವರು. ಈ ಏರಿಯಾದ ಮಕ್ಕಳಿಗೆ ಶಾಲಾ ಸೌಕರ್ಯಗಳು ಸರಿಯಾಗಿಲ್ಲಾದುದರಿಂದ ಇವರು ಈ ಹಾಸ್ಟೆಲ್ ಗೆ ಸೇರಿದ್ದರು. ಇವರ ವಿದ್ಯಾಭ್ಯಾಸ ಒಂದು ಹಂತ ಮುಟ್ಟಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಬಂದು ತಲುಪಿದ ಸುದ್ದಿ ಎಂದರೆ, ಆ ಹುಡುಗರು ಹಾಸ್ಟೆಲ್ನಿಂದ ವಾಪಾಸು ಊರಿಗೆ ಬಂದು ಸಿಕ್ಕವರಿಗೆಲ್ಲಾ ಆ ಶಾಲೆ ಬೇಡ ಅಲ್ಲಿ ಮೊಬೈಲ್ ಇಲ್ಲ ಏನು ಇಲ್ಲ.. ಬರೀ ಶಾಲೆ ಓದು ಬರೆ... ಓದು ಬರೆ.... ನಾವು ಹೋಗಲ್ಲ ಇಲ್ಲೇ ಆದರೆ ಶಾಲೆಗೆ ಹೋಗುವೆವು ಎಂದು. ಈ ವಿಷಯ ನಮ್ಮ ಕಿವಿಗೂ ಬಂದು ತಲುಪಿತು. ಈಗ ತಾನೇ ಹೊಸ ವಸತಿ ಶಾಲೆಗೆ ಹೋಗಿದ್ದಾರೆ. ಒಂದೆರಡು ದಿನ ಸರಿಯಾಗುವರು ಎಂಬ ಆಶಾದಾಯಕತೆ ನಮ್ಮಲ್ಲಿ ಇತ್ತು. ಇಲ್ಲಿ ಊರಲ್ಲಿ ಅವರಿಗಿಂತ ಹಿರಿಯ ಹಳೇ ವಿದ್ಯಾರ್ಥಿಗಳೊಂದಿಗೆ ಮೊಬೈಲ್ ಹಿಡಿದು ಊರು ತುಂಬಾ ಸುತ್ತುತ್ತಿದ್ದ ಸುದ್ದಿ. ಊರಷ್ಟೇ ಅಲ್ಲ.. ಊರು ಸುತ್ತ ಮುತ್ತ ಇರುವ ಅನೈತಿಕ ಸ್ಥಳಗಳ ಹೊಸ ಸದಸ್ಯರಾಗಿದ್ದಾರೆ. ನಾಲ್ಕೈದು ದಿನಗಳ ನಂತರ ಒಮ್ಮೆ ರಸ್ತೆಯಲ್ಲಿ ಕಂಡಾಗ ನಮ್ಮ ಶಾಲೆಗಾದರೂ ಬರ್ರೋ ಎಂದು ಹೇಳಿದ್ದಕ್ಕೆ ಸುಮ್ಮನೇ ನಮ್ಮ ಇತರ ಹುಡುಗರ ಜೊತೆಗೆ ಶಾಲೆಗೆ ಬರುತ್ತಿದ್ದರು. ಹೊಸ ಶಾಲೆ. ಸ್ವಲ್ಪ ದಿನಗಳ ಮಟ್ಟಿಗೆ ಇದ್ದು ಹೋಗುತ್ತಾರೆಂದು ಅಂದು ಕೊಂಡಿದ್ದ ನಮಗೆ ಎರಡು ವಾರ ಕಳೆದರೂ ಹೋಗಲೇ ಇಲ್ಲ. ಕೊನೆಗೆ ಒಂದು ದಿನ ಪ್ರತ್ಯೇಕವಾಗಿ ಕರೆದು ಯಾಕ್ರೋ ನೀವ್ ಹಾಸ್ಟೆಲ್ ಗೆ ಹೋಗಲಿಲ್ಲ...?? ಇಷ್ಟ ಅಗಲಿಲ್ಲವಾ...? ಎಂದು ಹೆಗಲ ಮೇಲೆ ಕೈ ಹಾಕಿ ಪ್ರೀತಿಯ ನುಡಿಗಳೊಂದಿಗೆ ಕೇಳಿದಾಗ "ಸಾರ್ ಶಾಲೆಗೆ ಹೋಗಬೇಕಂತ ಹೋಗ್ತೀನಿ ಸಾರ್ ಆದ್ರೆ ಕ್ಲಾಸಲ್ಲಿ ಕುತ್ಕಂಡ್ರೆ ಬರೀ ಈ ಊರೇ ನೆನಪಾಗತ್ತೆ" ಇಂಟರೆಸ್ಟೇ ಬರಲ್ಲ ಎಂದ. ಹೌದು ಕಣ್ರೋ ಸ್ವಲ್ಪ ದಿನ ಹಾಗೇ ಅಲ್ಲಿ ಫ್ರೆಂಡ್ಸ್ ಆದ ಮೇಲೆ ಸರಿ ಆಗತ್ತೆ ಹೋಗ್ರಪ್ಪ ಎಂದೇಳಿದ್ದಕ್ಕೆ "ಸರಿ ಸಾರ್ ಸೋಮವಾರ ಹೋಗುತ್ತೀವಿ ಸಾರ್.. ನಿಮ್ ತರ ಓದಿ ನಾನು ಜಾಬ್ ತೆಗೆದುಕೊಳ್ಳುತ್ತೀವಿ ಸಾರ್" ಎಂದೇಳಿ ಹೋದವರು ಮತ್ತೆ ನಮ್ಮ ಎದುರಿಗೆ ಕಂಡಿಲ್ಲ ಹಾಗಂತ ಶಾಲೆಗೂ ಹೋಗಿಲ್ಲ...! ಬೇರೆ ಹುಡುಗರನ್ನು ಕೇಳಿದ್ರೆ ದೊಡ್ಡವರ ಜೊತೆಗೆ ಹೆಡ್ ಅಂಡ್ ಟೈಲ್, ಕ್ರಿಕೆಟ್ ಬೆಟ್ಟಿಂಗ್, ಮೊಬೈಲ್ ಲಿ ಪಬ್ಜಿ, ಆಡುತ್ತಾ ಸೀನಿಯರ್ಸ್ ಗಳಿಗೆ ತಂಬಾಕು, ಮದ್ಯ ದಂತಹ ಪರಿಕರಗಳನ್ನು ಪೂರೈಸುತ್ತಿದ್ದಾರೆ. ಮೊಬೈಲ್ ಹಿಡಿದು ಏನೇನೋ ನೋಡುವರು ಎಂದು ಹೇಳುವರು. ಹಾಗೆ ಮನೆಯಲ್ಲಿ ಹೊಸದೊಂದು ಆ್ಯಂಡ್ರಾಯ್ಡ್ ಮೊಬೈಲ್ ಬೇಕೇಂಬ ಬೇಡಿಕೆಯನ್ನೂ ಇಟ್ಟಿದ್ದಾರಂತೆ...!
ಘಟನೆ -2: ನನ್ನ ಸ್ನೇಹಿತೆಯೊಬ್ಬರು ಚಿಕ್ಕಮಗಳೂರು ಜಿಲ್ಲೆಯ ತಾಲೂಕೊಂದರಲ್ಲಿ ಸರ್ಕಾರಿ ಪ್ರೌಢಶಾಲೆಯೊಂದರ ಕನ್ನಡ ಶಿಕ್ಷಕಿ. ಆ ಶಾಲೆಗೆ ಬರುವ ಮಕ್ಕಳ ಬಹುತೇಕರು ಹಾಸ್ಟೆಲ್ ನಿಂದ ಬರುವಂತವರು. ಬಹಳ ದಿನಕ್ಕೆ ಕರೆ ಮಾಡಿ ಪರಸ್ಪರ ಯೋಗಕ್ಷೇಮ ವಿಚಾರಿಸಿ ಮತ್ತೆ ನಿಮ್ಮ ಕ್ಲಾಸ್ ಮಕ್ಕಳು ಹೇಗಿದ್ದಾರೆ...?? ಎಂದು ನಾನು ಕೇಳಿದೆ. ಅಯ್ಯೋ ಮಕ್ಕಳ ಅವರು....? ಇಷ್ಟು ವರ್ಷದ ಸರ್ವೀಸ್ ನಲ್ಲಿ ಇಂತಹ 'ಭಯಂಕರ' ಮಕ್ಕಳನ್ನು ನಾನು ಕಂಡಿರಲಿಲ್ಲಪ್ಪ... ಥೂ.. ಅಂದರು. ಯಾಕಮ್ಮ ಏನಾಯಿತು ಎಂಬ ಪ್ರಶ್ನೆಗೆ ಅವರು ಉತ್ತರ ಕೊಟ್ಟಿದ್ದು "ಎಲ್ಲರ ಕೈಯಲ್ಲೂ ಆ್ಯಂಡ್ರಯ್ಡ್ ಮೊಬೈಲ್ ಇವೆ. ರಾತ್ರಿ ಎಲ್ಲಾ ಏನೇನೋ ನೋಡಬಾರದೆಲ್ಲಾ ನೋಡಿ ಕ್ಲಾಸಿಗೆ ಹೋದರೆ ನನ್ನನ್ನೇ ಬಹಳ ಅಸಹ್ಯವಾಗಿ ನೋಡುತ್ತಿರುತ್ತಾರೆ, ನಿದ್ದೇ ಕಾಣದ ಕಣ್ಗಳು..!! ನಮಗೆ ನಿಮ್ಮ ಪಾಠವೇ ಬೇಡ ಎನ್ನುವಂತಹ ಮುಖಭಾವನೆಗಳು. ಛೀ ಕ್ಲಾಸಿಗೆ ಹೋಗಲು ಇರಿಸು ಮುರಿಸು ಆಗತ್ತೆ ಏನ್ ಹುಡುಗ್ರೋ ಏನೋ ಮಾರಾಯ.. ಸಾಕಾಗಿದೆ. ಈ ಸಾರಿ ಎಸ್ ಎಸ್ ಎಲ್ ಸಿ ರಿಸಲ್ಟ್ ಹೇಗ್ ಕೊಡ್ಬೇಕೋ ಗೊತ್ತಾಗುತ್ತಿಲ್ಲ... ನಿಮ್ ಕಡೆ ಮಕ್ಕಳು ಹೇಗಿದ್ದಾರೆ....??
ನಮ್ ಕಡೇನೂ ಹಾಗೇ ಬಿಡಿ. ಈ ಕೊರೋನಾ ಗ್ಯಾಪ್ ಲ್ಲಿ ಮಕ್ಕಳು ಪೂರಾ ಹದಗೆಟ್ಟು ಹೋಗಿದ್ದಾರೆ. ಏನಿಲ್ಲ.. ಎಲ್ಲದೂ ಹೊಸದಾಗಿ ಪ್ರಾರಂಭಿಸಬೇಕು. ಸರಿ ಸರಿ ನನಗೆ ಸ್ವಲ್ಪ ಕೆಲಸ ಇದೆ ಪ್ರೀ ಆದಾಗ ಮಾತಾಡುವೆ ಎಂದೇಳಿ ಮಾತು ಮುಗಿಸಿದೆ.
ಘಟನೆ 3 : ನಾನು ಪ್ರತಿದಿನ ಶಾಲೆಗೆ ಹೋಗುವ ದಾರಿಯಲ್ಲಿ ಕೇಂದ್ರೀಯ ವಿದ್ಯಾಲಯ ಒಂದು ಶಾಲೆ ಇದೆ. ಅವರ ವೇಳಾಪಟ್ಟಿ ನಮ್ಮ ವೇಳಾಪಟ್ಟಿ ವಿಭಿನ್ನವಾದರೂ ಒಂದು ಶನಿವಾರ ನಾನು ಶ್ರೀಮತಿಯೊಂದಿಗೆ ಶಾಲೆಗೆ ಹೋಗುವಾಗ ಆ ಶಾಲೆಗೆ ಸುಮಾರು ನೂರು ಮೀಟರ್ ದೂರದಲ್ಲಿ ಹತ್ತು ಹನ್ನೆರಡು ಹುಡುಗರು ವಯೋಸಹಜ ತರಲೆ ಕೀಟಲೆಗಳೊಂದಿಗೆ ಲೋಕಾಭಿರಾಮವಾಗಿ ಆಡುತ್ತಿದ್ದರು. ಅಷ್ಟಾಗಿ ಎಂದು ಕಾಣಿಸದ ಹುಡುಗರು ಇವತ್ತೇಕೆ ಇಲ್ಲಿ ಆಡುತ್ತಿದ್ದಾರಲ್ಲ ಎಂದೆನಿಸಿತಾದರೂ ಇನ್ನೂ ಬೆಲ್ ಆಗಿಲ್ವೇನೋ ಸೋ ಹೊರಗಡೆ ಇರಬೇಕು ಎಂದೆನಿಸಿ ನಾವು ಶಾಲೆಗೆ ಬಂದು ಬಿಟ್ಟೆವು. ನಾವು ಮಾರ್ನಿಂಗ್ ಕ್ಲಾಸ್ ಮುಗಿಸಿಕೊಂಡು ಮಧ್ಯಾಹ್ನ 12-30 ಆದರೂ ಆ ಮಕ್ಕಳು ಅಲ್ಲೇ ಆಡುತ್ತಿದ್ದಾರೆ. ಏನಾಶ್ಚರ್ಯ...?? ಆ ಹುಡುಗರೆಲ್ಲಾ ಬೆಳಿಗ್ಗೆಯಿಂದಲೂ ಅಲ್ಲಿಯೇ ಆಡುತ್ತಿದ್ದಾರೆ. ಅದೇ ಹುಡುಗರು...! ಮುಖ ಮಾತ್ರ ಡಲ್ ಅಗಿದೆ. ಅವರು ಕ್ಲಾಸಿಗೂ ಹೋಗಿಲ್ಲ. ಇತ್ತ ಮನೆಗೂ ಹೋಗಲು ಅವರನ್ನು ಕರೆದುಕೊಂಡು ಹೋಗುವ ಆಟೋ /ವಾಹನ ಇನ್ನೂ ಬಂದಿಲ್ಲ. ಇಲ್ಲಿ ಈ ಮಕ್ಕಳ ವಿಶೇಷ ಏನೆಂದರೇ ಅವರೆಲ್ಲಾ ಸರ್ಕಾರಿ ನೌಕರರ ಮಕ್ಕಳು....!ಣ
(ಇನ್ನೂ ಇದೆ)
-ನಾಗೇಂದ್ರ ಬಂಜಗೆರೆ, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ