ಅದ್ಯಾಕೋ ಶಾಲಾ ಮಕ್ಕಳು ಮೊದಲಿನ ತರ ಇಲ್ಲಾ ! (ಭಾಗ 2)
ಘಟನೆ 4 : ಕಳೆದ ಕೆಲ ದಿನಗಳ ಹಿಂದೆ ಚನ್ನಗಿರಿ ತಾಲ್ಲೂಕಿನ ಪ್ರೌಢಶಾಲೆಯ ಮಕ್ಕಳು ಅವರ ತರಗತಿಯ ಶಿಕ್ಷಕರ ತಲೆಗೆ ಡಸ್ಟ್ ಬಿನ್ ಮುಚ್ಚಿ ಹಲ್ಲೆ ಮಾಡಲು ಆಡಿದ ಆಟ ನೋಡದೇ ಇರುವವರು ಯಾರೂ ಇಲ್ಲ. ಈ ಘಟನೆಯಲ್ಲಿ ತಲೆ ಮೇಲೆ ಕುಳ್ಳರಿಸಿಕೊಂಡಿರುವ ಶಿಕ್ಷಕನದೇ ತಪ್ಪು ಸ್ಟೂಡೆಂಟ್ಸ್ ಎಲ್ಲಿರಬೇಕೋ ಅಲ್ಲಿಡಬೇಕಿತ್ತು ಎಂದು ಸಾರ್ವಜನಿಕರಿಗೆ ಅನಿಸಿದರೂ ನಾನೊಬ್ಬ ಶಿಕ್ಷಕನಾಗಿ ಹೇಳುವುದಾದರೇ ಇದು ಶಿಕ್ಷಕನ ದೌರ್ಬಲ್ಯ ಅಲ್ಲವೇ ಅಲ್ಲ.
ಈ ಮೇಲಿನ ನಾಲ್ಕೂ ಉದಾಹರಣೆಗಳು ಕೇವಲ ಸ್ಯಾಂಪಲ್ ಮಾತ್ರ. ಇಂತಹವು ಸಾವಿರ ಉದಾಹರಣೆಗಳು ಸಿಗುತ್ತಾವಾದರೂ ನಾವು ಈ ಮಕ್ಕಳ ಬಗ್ಗೆ ಗಂಭೀರವಾಗಿ ಯೋಚಿಸುವ ಅನಿವಾರ್ಯತೆ ಪೋಷಕ ಮತ್ತು ಶಿಕ್ಷಕರಿಗೆ ಬಂದೊದಗಿದೆ. ಕೊರೋನಾ ಮುನ್ನಾ ಶಿಕ್ಷಕರಿಗೆ ಇದ್ದಂತಹ ತರಗತಿ ಮಕ್ಕಳ ಹಿಡಿತ, ಕೋರೋನಾ ಪೂರ್ವದಲ್ಲಿದ್ದ ಮಕ್ಕಳ ಕಲಿಕೆಯ ಮಟ್ಟ ಕೋರೋನೋತ್ತರ ದಿನಗಳಲ್ಲಿ ಕಾಣಿಸುತ್ತಿಲ್ಲ. ಕಲಿಕೆಯ ಬಗ್ಗೆ ಮಕ್ಕಳ ನಿರಾಸಕ್ತಿ ಹೇಳ ತೀರದು. ಅದ್ಯಾವುದೋ 'ಸ್ಟೈಲ್ ಕಟಿಂಗ್' ಎಂಬ ಹೆಸರಿನ ಕೆಟ್ಟ ಕೆಟ್ಟ ಡಿಸೈನ್ ಡಿಸೈನ್ ಕಟಿಂಗ್ ಗಳು, ಕಲರ್ ಕಲರ್ ಹೇರ್ ಡೈ, ಬಾಯಲ್ಲಿ ಅಡಿಕೆ ಗುಟ್ಕಾಗಳು..! ಅಬ್ಬಾ ಒಂದಾ ಎರಡಾ...??? ಮೊನ್ನೆ ನನ್ನ ಸಹೋದ್ಯೋಗಿ ಒಬ್ಬರು ಹೇಳ್ತಾ ಇದ್ದರು ಒಂಭತ್ತನೇ ತರಗತಿಯ ಹುಡುಗನೊಬ್ಬನ ಬಳಿ ಮದ್ಯದ ಬಾಟಲಿಯೊಂದು ಪಾಠಮಾಡುವಾಗಲೇ ಕಂಡಿದ್ದು..!! ಅಯ್ಯೋ... ಈ ಮಕ್ಕಳ ಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೇ ಅದನ್ನು ಶಿಕ್ಷಕನಾಗಿ ಹೇಳಲು ಬಹಳ ದುಃಖ ಆಗುತ್ತಿದೆ. ಇವರ ಮುಖದಲ್ಲಿ ಈ ಮೊಬೈಲ್ ಹಾವಳಿ ಎಷ್ಟಿದೆ ಎಂದರೆ ಕಣ್ಣು ಮತ್ತು ಮುಖಚರ್ಯೆನೇ ಬದಲಾಗಿದೆ.
ಕೋರೋನಾ ನಂತರ ಶಾಲೆಗಳು ಪುನಾರಂಭಗೊಂಡ ನಂತರ ಮಕ್ಕಳು ಶಾಲೆಗೆ ಬಂದವಾದರೂ ಶಾಲೆಗೆ ಬಂದ ಬಹುತೇಕ ಮಕ್ಕಳ ತಲೆಯಲ್ಲಿ ಹಿಂದಿನ ತರಗತಿಯ ಪೂರ್ವಜ್ಞಾನ ಕನಿಷ್ಟವೂ ಉಳಿದಿರಲಿಲ್ಲ. ಎಲ್ಲದನ್ನೂ ಹೊಸದಾಗಿ ಸೊನ್ನೆಯಿಂದ ಶುರು ಮಾಡಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಉಂಟಾಯಿತು.
ಕೋರೋನೋತ್ತರವಾಗಿ ಮಕ್ಕಳ ಸಾಮಾಜಿಕ ವರ್ತನೆಯೇ ಬದಲಾಯಿತು. ಇದು ಕೊರೋನಾ ಅವಧಿಯಲ್ಲಾದ ಕ್ಷಿಪ್ರ ಸಾಮಾಜಿಕ ಬದಲಾವಣೆ ಎಂದೇ ಹೇಳಬಹುದು. ಅಂತಹ ಸಾಮಾಜಿಕ ಬದಲಾವಣೆಗಳೆಂದರೇ ಕೊರೋನಾಗಮನಕ್ಕಿಂತ ಮುಂಚೆ ಮಕ್ಕಳಿಗೆ ಸಾಮಾಜಿಕ ವ್ಯವಸ್ಥೆಗಳೊಂದಿಗೆ ಇದ್ದ ಸಕರಾತ್ಮಕ ಆಂಶಗಳು ದೂರಾದವು. ಶಿಕ್ಷಕರು ಮತ್ತು ಶಿಕ್ಷಣದ ಬಗ್ಗೆ ಇದ್ದ ಗೌರವ ಕಾಣೆಯಾಯಿತು. ಗೆಳೆಯರೊಂದಿಗಿನ ವರ್ತನೆಯೂ ಬದಲಾಗಿದೆ. ಎಲ್ಲರದೂ ಒಂದೇ ಮನಸ್ಥಿತಿ... ಅವರಿಗೆಲ್ಲಾ ಎಲ್ಲದರಲ್ಲೂ ಉದಾಸೀನ ಮನೋಧೋರಣೆ. ಯಾವ ವಿಷಯಕ್ಕೂ ಗಂಭೀರ ಆಲೋಚನೆಯಿಲ್ಲ. ತರಗತಿ, ಪಾಠ ಬೋಧನೆ, ಪರೀಕ್ಷೆ ಎಂದರೂ ಕಿಂಚಿತ್ತೂ ಕಿಮ್ಮತ್ತಿಲ್ಲದ ತಾತ್ಸಾರ ಮನೋಭಾವ. ಬಹುಶ: ನಾವು ಕೋರೋನಾ ಅವಧಿಯಲ್ಲಿ ಒಂದರಿಂದ ಪದವಿಯ ಮಕ್ಕಳನ್ನು ಬೇಷರತ್ ಆಗಿ ಉತ್ತೀರ್ಣಗೊಳಿಸಿದ್ದು ಇಂದು ಈ ಮಕ್ಕಳ ಇಂತಹ ಮನೋಧೋರಣೆಗಳು ಉದಯಿಸಲು ಕಾರಣವಾಗಿರಬಹುದು. ಈ ಯೋಚನೆ ಆ ಸಂದರ್ಭದಲ್ಲಿ ವಿದ್ದಾರ್ಥಿಗಳ ಪಾಲಿಗೆ ವರವಾಗಿತ್ತಾದರೂ ಪ್ರಸ್ತುತ ಕಲಿಯುತ್ತಿರುವ ಬಹಳ ಮಕ್ಕಳಿಗೆ ಬೌದ್ದಿಕವಾಗಿ ಇದು ಶಾಪವೇ ಸರಿ..!!
ಕೊರೋನಾವಧಿಯಲ್ಲಿ ಶಾಲೆ ಇಲ್ಲದ ವೇಳೆಯಲ್ಲಿ ಆನ್ಲೈನ್ ಕ್ಲಾಸಿಗೆಂದು ತಂದೆ ತಾಯಿ ಕೊಟ್ಟ /ಕೊಡಿಸಿದ ಮೊಬೈಲ್ ಅಥವಾ ಆ ಸಂದರ್ಭದಲ್ಲಿ ಶಾಲೆಗಳಿಲ್ಲದೇ ಇರುವಾಗ ಹೊಟ್ಟೆಪಾಡಿಗಾಗಿ ಪೋಷಕರು ಪರದಾಡುತಿದ್ದಾಗ ಯಾರ ಮೇಲುಸ್ತುವಾರಿಗೂ ಸಿಗದ ಮಕ್ಕಳು ಒಟ್ಟಾರೆ ಕೋರೋನಾ ಅವಧಿಯಲ್ಲಿ ಕಲಿತ ಕೆಲಸವಿಲ್ಲದ ಹಿರಿಯ ವಿದ್ಯಾರ್ಥಿಗಳಿಂದಲೋ, ಮೊಬೈಲ್ ನಂತಹ ಸಾಧನಗಳಿಂದಲೋ ಕಲಿತ ಪಾಠವೇ ಆಗಿದೆ.
ಈ ಮಕ್ಕಳು ಶಿಕ್ಷಕರ ಮಾತಿಗೆ ರೆಸ್ಪಾನ್ಸ್ ಇಲ್ಲ, ಮಾಡಬೇಡ ಎಂಬುದನ್ನೇ ಅತಿ ಹೆಚ್ಚು ಮಾಡಲ್ಪಡುವ boomerang ಎಪೆಕ್ಟ್ ಗೆ ಒಳಗಾಗುವ ಮಕ್ಕಳು. ಗುರಿ ಮುಟ್ಟದ ಕಲಿಕೆ ಮತ್ತು ನೀರೀಕ್ಷಿತ ಕಲಿಕಾ ಫಲಗಳನ್ನು ಮಕ್ಕಳು ತಲುಪಲಾಗುತ್ತಿಲ್ಲ. ಮಕ್ಕಳು ಮನೆಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಸಮಯ ತೀರಾ ಕನಿಷ್ಟ ಮಟ್ಟಕ್ಕೆ ತಲುಪಿದೆ...!!
ಈಗಿನ ಮಕ್ಕಳು ಶಾಲೆಯ ಹೊರಗಿರಲು ಇಚ್ಚಿಸುವಷ್ಟು ತರಗತಿಯ ಒಳಗಡೆ ಇರಲು ಇಚ್ಚಿಸುತ್ತಿಲ್ಲ. ಅದಕ್ಕೆ ಕಾರಣ ಕೋರೋನಾದಲ್ಲಿ ಎರಡು ವರ್ಷ ಆರಾಮವಾಗಿ ತಿರುಗಾಡಿದ ಪರಿಣಾಮ...! ಅಲ್ಪ ಸಮಯದ ಬಹು ಕೆಲಸದೊತ್ತಡಗಳ ಮಧ್ಯೆ ಇಂತಹ ಮಕ್ಕಳಿಗೆ ಯಾವುದನ್ನೂ ಪೂರಾ ಮಾಡಲಾಗದ ಶಿಕ್ಷಕರು ಅಸಹಾಯಕತೆಯಲ್ಲಿ ಇವರು ಹೀಗೆ ಮುಂದುವರೆಯುತ್ತಿದ್ದಾರೆ. ಇಂದಿನ ಮಕ್ಕಳು ಮುಂದಿನ ಪ್ರಜೆಗಳು.. ಈ ಮಕ್ಕಳ ಇಂದಿನ ವರ್ತನೆ ಭವಿಷ್ಯದ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುವುದು ಖಂಡಿತ. ಈ ಮೇಲೆ ವಿವರಿಸಿದ ಎಲ್ಲದೂ ಕೂಡ ಆರೋಗ್ಯಕರ ಸಮಾಜಕ್ಕೆ ಗಂಡಾಂತರದ ಸೂಚನೆಯಲ್ಲದೇ ಮತ್ತೇನೂ ಅಲ್ಲ. ಹಾಗೆಯೇ ಮುಂದುವರೆದ ವೈಜ್ಞಾನಿಕ ಕಾಲದಲ್ಲಿ ಎಲ್ಲರ ಜೀವನ ಸುಧಾರಿಸಿ ಬದುಕು ಸುಲಭ ಮತ್ತು ಸುಖಮಯಗೊಳಿಸ ಬೇಕಾಗಿದ್ದು ವಿಜ್ಞಾನ. ಸದ್ಯದ ಆಧುನಿಕ ಜೀವನ ಶೈಲಿ ಬಾಳಿ ಬದುಕಬೇಕಾಗಿರುವ ಮಕ್ಕಳ ಬದುಕು ದುಸ್ತರ ಗೊಳಿಸುತ್ತಿರುವುದು ದುರಂತವೇ ಸರಿ....!!
ಬರಹ ಮುಗಿಸುವ ಮುನ್ನ ಈ ಕೊರೋನಾ ಬಾರದಿರಲೆಂದು ಸುರಕ್ಷತಾ ದೃಷ್ಠಿಯಿಂದ ವ್ಯಾಕ್ಷಿನ್ , ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಈ ಮಕ್ಕಳ ಕಲಿಕೆ ಮತ್ತು ಇವರ ವಿಚಿತ್ರ ವರ್ತನೆಯ ಬಗ್ಗೆ ಪೋಷಕರು, ಶಿಕ್ಷಕರು, ಮನಶಾಸ್ತ್ರಜ್ಞರು ಸಮರೋಪಾದಿಯಲ್ಲಿ ಇವರ ಈ ರೋಗಕ್ಕೂ ಮದ್ದು ಕಂಡುಕೊಳ್ಳಬೇಕಿದೆ. ಇವರಿಗೂ ಬೂಸ್ಟರ್ ಲರ್ನಿಂಗ್ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಈ ಸಮಾಜವು ಅತ್ಯಂತ ವೇಗವಾಗಿ ಅಪಾಯದಂಚಿಗೆ ನೂಕಲ್ಪಡುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಪೋಷಕರೇ, ಶಿಕ್ಷಕರೇ ಎಚ್ಚರ ಎಚ್ಚರ..!! 'ಮಕ್ಕಳು ನಮ್ಮ ಮತ್ತು ದೇಶದ ಅಮೂಲ್ಯ ಆಸ್ತಿ' ಕಾಪಾಡಿಕೊಳ್ಳೋಣ....
-ನಾಗೇಂದ್ರ ಬಂಜಗೆರೆ, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ