ಅದ್ವಿತೀಯ ಚೆಲುವೆ
ಕವನ
ಪ್ರೇಮ ಸುಧೆಯನು ಎದೆಯ ಗೂಡಲಿ
ಮೆಲ್ಲ ಮೆಲ್ಲನೆ ಸುರಿದಳು
ಸುಮವು ಬಿಮ್ಮನೆ ಬಿರಿದು ನಿಲ್ಲುತ
ಕಂಪು ಸೂಸಿತು ಮನದೊಳು||
ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ
ಚೆಲುವೆ ರೂಪವು ಸುಂದರ
ಒಲವೆ ಹಾಸಿಗೆ ಒಲವೆ ಹೊದಿಕೆಯು
ಪ್ರೀತಿ ಬಾಳಿಗೆ ಹಂದರ||
ಇಂದ್ರ ಲೋಕದ ಯಾವ ಅಪ್ಸರೆ
ಸಾಟಿ ಇಲ್ಲವೊ ಚೆಲುವೆಗೆ
ಚಂದ್ರ ಬಾನಲಿ ನಾಚಿ ಕರಗಿದ
ಇವಳ ಅಂದದ ಚೆಲುವಿಗೆ||
ಮೇಘರಾಜನು ಮಳೆಯ ರೂಪದಿ
ಜೊಲ್ಲು ಸುರಿಸಿದ ಬಾಲೆಗೆ
ಸೂರ್ಯಕಾಂತಿಯ ಕುಸುಮ ತಿರುಗಿತು
ಚೆಲುವೆ ಇರುವೆಡೆ ಮೆಲ್ಲಗೆ||
ಭವ್ಯ ಬಾಲೆಯು ದಿವ್ಯ ಕೋಮಲೆ
ಮತ್ತೆ ಬಾರಳು ಭುವಿಯಲಿ
ಇಂಥ ಸೊಬಗಿನ ಭವ್ಯ ಬೆಡಗಿಯ
ವರಿಸಿ ನಿಂದೆನು ಇಳೆಯಲಿ||
-*ಶ್ರೀ ಈರಪ್ಪ ಬಿಜಲಿ*
ಚಿತ್ರ್
