ಸ್ವಲ್ಪ ದಿನದ ಹಿಂದೆ ಯಾಕೊಕಾಣೆ ಕೈತುತ್ತು ತಿನ್ನುವ ಬಯಕೆ ಹೆಚ್ಚಾಗಿ , ಮನೆಯವರೆಲ್ಲಾ ಟೆರಸ್ ಮೇಲೆ ಹೋಗಿ ಚಾಪೆಹಾಸಿ ಕುಳಿತು ಹುಣ್ಣಿಮೆ ಚಂದಿರನ ಬೆಳಕಲ್ಲಿ ಕೈತುತ್ತಿನ ಊಟ ಮಾಡಿದೆವು.ಇದ್ದದ್ದು ನಾಲ್ಕೆಜನ ಅಮ್ಮ ಎಲ್ಲರಿಗೂ ಸಾರನ್ನ [ ಸೊಪ್ಪಿನ ಸಾರಿನಿಂದ ಕಲೆಸಿದ ಅನ್ನ] ಹಾಗು ಮೊಸರನ್ನವನ್ನು ಕೈ ತುತ್ತಿನ ಉಂಡೆಮಾಡಿ ಎಲ್ಲರ ಕೈಗೂ ಹಾಕುತ್ತಿದ್ದಳು ನಾವು ಒಬ್ಬರಿಗೊಬ್ಬರು ಕೀಟಲೆ ಮಾಡುತ್ತಾ ನಗುತ್ತಾ ಅಮ್ಮ ನೀಡಿದ ತುತ್ತುಗಳನ್ನು ಸ್ವಾಹ ಮಾಡುತ್ತಿದ್ದೆವು. ಬೇಸಿಗೆಯಲ್ಲಿ ಮನೆಯಲ್ಲಿ ಕುಳಿತು ಊಟ ಮಾಡುವುದಕ್ಕಿಂತಾ ಇದು ತುಂಬಾ ಖುಷಿಕೊಟ್ಟಿತು. ನಾನು ಹಾಗೆ ಬಾಲ್ಯದ ನೆನಪಿಗೆ ಜಾರಿದೆ .. ನಾನು ಚಿಕ್ಕವನಿದ್ದಾಗ ನನ್ನ ಬಾಲ್ಯ ಹಳ್ಳಿಯಲ್ಲಿ ಕಳೆದಿತ್ತು. ಹಳ್ಳಿಯಲ್ಲಿ ಮನೆಯ ಮುಂದೆ ವಿಶಾಲವಾದ ಅಂಗಳವಿತ್ತು. ನಮ್ಮ ಮನೆಯಲ್ಲಿ ಹುಣ್ಣಿಮೆ ಬಂತೆಂದರೆ ನಮ್ಮ ಅಪ್ಪ ಅಮ್ಮ ಎಲ್ಲರನ್ನೂ ಅಂಗಳದಲ್ಲಿ ಕುಳ್ಳಿರಿಸಿ ಕೈತುತ್ತು ತಿನ್ನಿಸುತ್ತಿದ್ದ ನೆನಪು ಯಾವಾಗಲೂ ಮೂಡುತ್ತದೆ.ಇನ್ನು ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಬರುವ ನೆಂಟರು ಹಾಗು ಅವರ ಮಕ್ಕಳು ಬಂದಾಗ ಗದ್ದೆಯ ಹತ್ತಿರವಿದ್ದ ನಾಲೆಯ ಬಳಿ ವೃತ್ತಾಕಾರದಲ್ಲಿ ಕುಳಿತು ಕೈತುತ್ತು ತಿಂದು ನಲಿದದ್ದು ಮರೆಯಲಾರದ ಕ್ಷಣ .ಇಂದು ನಮ್ಮ ದುರಾದೃಷ್ಟ ನಮ್ಮ ಜೀವನ ಶೈಲಿ ಬದಲಾಗಿ ಬೆಳದಿಂಗಳ ಊಟ , ಕೈತುತ್ತು ತಿನ್ನುವ ಆ ಮಜಾ ನಶಿಸಿಹೋಗಿ , ನಮ್ಮ ಭಾವನೆಗಳನ್ನು ಮೂರ್ಖ ಪೆಟ್ಟಿಗೆಯ ಮುಂದೆ ಹಂಚಿಕೊಂಡು ನಾವೂ ಮೂರ್ಖರಾಗಿ ಜೀವನ ವನ್ನು ಆಧುನಿಕ ಜೀವನ ಅಂತಾ ಜಂಬ ಪಡುತ್ತಿದ್ದೇವೆ. ಇನ್ನು ಮಕ್ಕಳಿಗಂತೂ ಅಜ್ಜಿಯ ಕಥೆ ಕೇಳುತ್ತಾ ಕೈತುತ್ತು ತಿನ್ನುವ ಯೋಗವೇ ಇಲ್ಲದಾಗಿದೆ. ಯಾಕೆಂದ್ರೆ ಸುಮಾರು ಮಕ್ಕಳ ಅಜ್ಜಿ ಅಜ್ಜಂದಿರು ಇಂದು ವೃದ್ಧ ಸೇವಾಶ್ರಮ ವಾಸಿಗಳಾಗಿ ಮರೆಯಾಗಿದ್ದಾರೆ.ನಮಗೆ ಪ್ರೈವೆಸಿ ಬೇಕೆಂದು ನಾವು ಹಾಕಿಕೊಂಡ ಬದುಕು ಇಂದು ನಮ್ಮ ಜೀವನಶೈಲಿಯನ್ನು ಹಾಳು ಮಾಡುತ್ತಾ ಅಟ್ಟಹಾಸದಿಂದ ರಕ್ಕಸನಂತೆ ನಗುತ್ತಿದೆ.ಬನ್ನಿ ಮತ್ತೆ ಕಾಲವನ್ನು ಹಿಂದೆ ಸರಿಸೋಣ.ಆಗದಿದ್ದಲ್ಲಿ ಹಳೆಯ ಜೀವನದ ಕೆಲವು ಆಚರಣೆಗಳನ್ನು ಮತ್ತೆ ಹುಟ್ಟಿಹಾಕೋಣ. ಇದನ್ನು ಓದಿದ ನೀವು ನಿಮ್ಮ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ನಗುತ್ತಾ ಕೈತುತ್ತು ಊಟ ಮಾಡುವ ಹವ್ಯಾಸ ಶುರುಮಾಡಿಕೊಳ್ಳಿ. ಹಾಗು ಪುಟ್ಟ ಮಕ್ಕಳಿದ್ದರೆ ಅವಕ್ಕೂ ಕಥೆ ಹೇಳುತ್ತಾ ಕೈತುತ್ತಿನ ರುಚಿ ನೀಡಿ. ಸಂಭ್ರಮಿಸುವ ಹಿರಿಯರ ಕಾರ್ಯಕ್ಕೆ ಯಾರೂ ಬೆಲೆ ಕಟ್ಟಲಾರರು.
ಇಷ್ಟೆಲ್ಲಾ ಆದನಂತರ ಅಜ್ಜಿ ಅಜ್ಜಂದಿರನ್ನು ವಾಪಸ್ಸು ಮನೆಗೆ ಕರೆತರುವ ಬಗ್ಗೆ [ಒಂದು ವೇಳೆ ವೃದ್ಧ ಸೇವಾಶ್ರಮದಲ್ಲಿದ್ದರೆ ] ಯೋಚಿಸಿ ಕರೆತಂದು ಮಕ್ಕಳಿಗೆ ಅವರ ವಾತ್ಸಲ್ಯ ನೀಡೋಣ.ಬನ್ನಿ ಇಂದೇ ಈ ಬಗ್ಗೆ ಕಾರ್ಯತತ್ಪರರಾಗೋಣ. ಕಳೆದುಹೋದ ಸಂತಸವನ್ನು ಮತ್ತೆ ವಾಪಸ್ಸು ತರೋಣ.
ಅದ್ಸರೀ ನೀವು ಕೈತುತ್ತಿನ ಬಾಲ್ಯ ಅನುಭವಿಸಿದ್ದೀರ??? ಆಹಾ ಆ ಸುಂದರ ನೆನಪೇ!!!!