ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ
ಆದೇಶ ಪಾಲಿಸದ ವ್ಯವಸ್ಥೆ ವಿರುದ್ಧ ಆಕ್ರೋಶ. ರಾಜ್ಯದ ನಾನಾ ಪೌರಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 'ಗ್ರೂಪ್ ಸಿ' ಸಿಬ್ಬಂದಿಗಳನ್ನು 'ಗ್ರೂಪ್ - ಬಿ' ಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕ ನಿಯಮಗಳಿಗೆ ತಿದ್ದುಪಡಿ ತರಬೇಕು. ಈ ನಿಟ್ಟಿನಲ್ಲಿ ಎರಡು ತಿಂಗಳಲ್ಲಿ ಕರಡು ನಿಯಮ ಪ್ರಕಟಿಸಬೇಕು ಎಂದು ೨೦೨೧ರ ಜುಲೈ ೧೯ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಕರ್ನಾಟಕ ನಗರ ಪಾಲಿಕೆಗಳ ಉದ್ಯೋಗಿಗಳ ಸಂಘ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ವೇಳೆ ಘನ ನ್ಯಾಯಾಲಯವು ಅಧಿಕಾರಿಗಳ ವಿಳಂಬ ಧೋರಣೆ ವಿರುದ್ಧ ಚಾಟಿ ಬೀಸಿ, ಚುರುಕು ಮುಟ್ಟಿಸಿರುವುದು ಸ್ವಾಗತಾರ್ಹವಾಗಿದೆ.
ವಿಚಾರಣೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿಗಳು "ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ. ಅವರ ಮೇಲೆ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು" ಎಂದು ಖಡಕ್ ಸೂಚನೆ ನೀಡಿರುವುದು, ಆಡಳಿತ ವ್ಯವಸ್ಥೆಯ ಜಡತ್ವಕ್ಕೆ ಕೈಗನ್ನಡಿಯಂತಿದೆ. "ಕೋರ್ಟ್ ಆದೇಶ ಪಾಲಿಸದ ಸರಕಾರ ಮತ್ತು ಅಧಿಕಾರಿಗಳ ವರ್ತನೆಯಿಂದ ಬೇಸತ್ತಿದ್ದೇವೆ. ಹಿರಿಯ ಐ ಎ ಎಸ್ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸದ ಹೊರತು ಸರಕಾರ ಎಚ್ಚೆತ್ತುಕೊಳ್ಳುವುದಿಲ್ಲ, ಅಧಿಕಾರಿಗಳನ್ನು ಜೈಲಿಗೆ ಕಳಿಸಲು ಇದು ಸಕಾಲ" ಎಂದು ಹೈಕೋರ್ಟ್ ಕಟುಶಬ್ಧಗಳಲ್ಲಿ ಹೇಳಿದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಿಜೆ ಋತುರಾಜ್ ಅವಸ್ಥಿ ನೇತೃತ್ವದ ನ್ಯಾಯಪೀಠ, ಸರಕಾರಿ ಅಧಿಕಾರಿಗಳ ನಡೆಯನ್ನು ಕಟುಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಳ್ಳುವ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಪ್ರತ್ಯೇಕ ಅಸ್ತಿತ್ವವಿದೆ. ಈ ಮೂರೂ ಅಂಗಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಒಂದು ಇನ್ನೊಂದರ ಕಾರ್ಯದ ನಡುವೆ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಶಾಸಕಾಂಗ ಮತ್ತು ಕಾರ್ಯಾಂಗಗಳ ಎಚ್ಚರ ತಪ್ಪಿದಾಗ, ಕಾನೂನು ದಾರಿ ಬಿಟ್ಟು ನಡೆದಾಗ, ಸರಿ ದಾರಿಗೆ ತರುವ ಕೆಲಸವನ್ನು ನ್ಯಾಯಾಂಗ ಮಾಡುತ್ತದೆ ಮತ್ತು ಅದರ ಪ್ರಾಥಮಿಕ ಜವಾಬ್ದಾರಿಯೂ ಅದೇ ಆಗಿದೆ. ಮೇಲ್ನೋಟಕ್ಕೆ ಕಾರ್ಯಾಂಗ ಕೆಲಸದ ನಡುವೆ ನ್ಯಾಯಾಂಗ ಹಸ್ತಕ್ಷೇಪ ಮಾಡುತ್ತಿದೆ ಎನಿಸಿದರೂ, ವಾಸ್ತವದಲ್ಲಿ ಆಡಳಿತ ವ್ಯವಸ್ಥೆಯನ್ನು ತಿದ್ದುವುದಕ್ಕೆ ಕೈಹಾಕಿರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಗಳು ನಿರ್ದಯವಾಗಿ ವರ್ತಿಸದಿದ್ದರೆ, ಆಡಳಿತ ವ್ಯವಸ್ಥೆಗಳು ಬೇಕಾಬಿಟ್ಟಿಯಾಗಿ ವರ್ತಿಸಲಾರಂಭಿಸುತ್ತವೆ. ಈ ಹಿನ್ನಲೆಯಲ್ಲಿ ಅನೇಕ ಪ್ರಕರಣಗಳಲ್ಲಿ ಹೈಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ, ನ್ಯಾಯಾಂಗ ನಿಂದನೆಯ ಪ್ರಕರಣಗಳನ್ನು ದಾಖಲಿಸುವ ಎಚ್ಚರಿಕೆಯನ್ನು ರವಾನಿಸುತ್ತವೆ ಮತ್ತು ಇದರ ಒಟ್ಟು ಉದ್ದೇಶವು ಸಂತ್ರಸ್ಥರಿಗೆ ತ್ವರಿತ ನ್ಯಾಯ ಕೊಡಿಸುವುದೇ ಆಗಿರುತ್ತದೆ.
ಆಡಳಿತ ವ್ಯವಸ್ಥೆ ಕೂಡ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವುದರ ತನಕ ಪ್ರಕರಣಗಳನ್ನು ಬೆಳೆಯಲು ಬಿಡಬಾರದು. ಹಾಗೊಮ್ಮೆ ಕೋರ್ಟುಗಳ ಆಕ್ರೋಶಕ್ಕೆ ತುತ್ತಾದರೆ ಅದು, ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯಾದಂತೆಯೇ ಸರಿ. ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕಾದದ್ದು ಸರಕಾರ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ. ಇದಕ್ಕೆ ಚ್ಯುತಿಯಾದರೆ, ನ್ಯಾಯಾಲಯದ ಮೇಲಿನ ವಿಶ್ವಾಸಕ್ಕೆ ಧಕ್ಕೆ ಬರುತ್ತದೆ.
ಆಡಳಿತ ವರ್ಗವು ಸದಾ ಒಂದಿಲ್ಲ ಒಂದು ನೆಪಗಳನ್ನು ಒಡ್ಡಿ, ವಿಳಂಬ ಧೋರಣೆಯನ್ನು ಅನುಸರಿಸುವುದು ಹೊಸತೇನಲ್ಲ. ಇದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಇಲ್ಲ ಎಂದಲ್ಲ. ಆದರೂ ವ್ಯವಸ್ಥೆ ನಿಧಾನಗತಿಯ ಮೊರೆ ಹೋಗುತ್ತದೆ. ಆಗೆಲ್ಲ, ನ್ಯಾಯಾಲಯಗಳು ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಅವಕಾಶ ಇಲ್ಲದಂತೆ ಕಾರ್ಯಾಂಗ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೮-೦೬-೨೦೨೨
ಚಿತ್ರ ಕೃಪೆ: ಇಂಟರ್ನೆಟ್ ತಾಣ
Comments
ಕೆಲವು ಸರಕಾರಿ ಅಧಿಕಾರಿಗಳು ತಾವು…
ಕೆಲವು ಸರಕಾರಿ ಅಧಿಕಾರಿಗಳು ತಾವು ಏನು ಅನ್ಯಾಯ ಮಾಡಿದರೂ ತಮಗೇನೂ ಆಗೋದಿಲ್ಲ ಎಂಬ ಭ್ರಾಂತಿನಲ್ಲಿ ಇದ್ದಾರೆಯೇ? ಕರ್ನಾಟಕದ ಮುಖ್ಯ ಕಾರ್ಯದರ್ಶಿಯೊಬ್ಬರಿಗೆ ನ್ಯಾಯಾಂಗ ನಿಂದನೆಗಾಗಿ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದ್ದರೂ ಅಂಥವರು ಪಾಠ ಕಲಿತಿಲ್ಲ. ಜನಸಾಮಾನ್ಯರ ಆಕ್ರೋಶದ ಜ್ವಾಲೆ ಅಂತಹ ಅಧಿಕಾರಿಗಳನ್ನು ತಟ್ಟುವ ಮುನ್ನ "ತಾವು ಜನಸಾಮಾನ್ಯರ ಸೇವಕರು" ಎಂಬ ಅರಿವು ಅವರಲ್ಲಿ ಮೂಡಲಿ.