ಅಧಿಕಾರಿ/ವಿಜ್ಞಾನಿಗಳ ಬಹುಮುಖ ದರ್ಶನ

ಅಧಿಕಾರಿ/ವಿಜ್ಞಾನಿಗಳ ಬಹುಮುಖ ದರ್ಶನ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

ಒ೦ದು ವರುಷ ಏಣಿಲು ಬೆಳೆ (ಮಳೆಗಾಲದ ಬೆಳೆ)ಗಾಗಿ ಹಾಕಿದ್ದ ನೇಜಿಗೆ ಸೈನ್ಯ ಹುಳ ಮುತ್ತಿಕೊ೦ಡಿತು. ಇಲಾಖಾ ಅಧಿಕಾರಿಯೊಬ್ಬರು ಜೀಪಿನಲ್ಲಿ ತಿರುಗಾಡಿ ಪರಿಶೀಲಿಸಿ, ಕೀಟನಾಶಕ ಹಾಕಲು ಹೇಳಿದರು. ತಮ್ಮ ಸೂಚನೆಗೆ ರೈತರು ಕಿವಿ ಕೊಡದೇ ಇದ್ದಾಗ ‘ದಡ್ಡರು’ ಎ೦ದು ಅವರನ್ನು ಟೀಕಿಸಿದರು. ನಾನು ಆಗ ಕೇಳಿದೆ – ‘ನೀವು ಸಭೆಗಳಲ್ಲಿ ಅವರನ್ನು ಬಹಳ ಬುದ್ಡಿವ೦ತರೆ೦ದಿದ್ದೀರಿ.’  ಆಗ ಅವರು ‘ಹಾಗೆ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಕೆಲಸ ನಡೆಯುವುದಿಲ್ಲ’ ಎ೦ದರು!

ಒ೦ದು ಸಮಾವೇಶದಲ್ಲಿ ಶಕ್ತಿತಳಿ ಬಗ್ಗೆ ವಿಚಾರಸ೦ಕಿರಣ ಏರ್ಪಡಿಸಿದ್ದರು.  ‘ಶಕ್ತಿತಳಿ ಕಣೆನಿರೋಧಕವೇನೋ ಸರಿ, ಆದರೆ ಅನ್ನ ರುಚಿಯಿಲ್ಲ. ಬರೇ ಸಪ್ಪೆ’ ಎ೦ದಾಗ ಜವಾಬ್ದಾರಿ ಸ್ಥಾನದಲ್ಲಿದ್ದ ಅಧಿಕಾರಿ ‘ದಯವಿಟ್ಟು ಅದೆಲ್ಲ ಹೇಳಬೇಡಿ’ ಎ೦ದು ವಿನ೦ತಿಸಿದರು! ಈಗಲೂ ಹೆಚ್ಚಿನ ಕೃಷಿಕರು ಬೆಳೆಸುತ್ತಿರುವುದು ಶಕ್ತಿ ತಳಿ.

ಸೆಮಿನಾರ್ ಒ೦ದರಲ್ಲಿ ನಾನು ವಿಜ್ಞಾನಿಗಳೊ೦ದಿಗೆ “ನೀವು ಕೊಡುವ ತಳಿಗಳಾವುದೂ ಹಿ೦ದಿನ ಭತ್ತದ ತಳಿಗಳಷ್ಟು ಉತ್ಕೃಷ್ಟವಾಗಿಲ್ಲ, ರುಚಿಯೂ ಇಲ್ಲ. ಕಣೆನಿರೋಧಕವಾದ ಒಂದು ಕೆ೦ಪು ತಳಿ ನಮಗೆ ಕೊಡಿ” ಎ೦ದು ಕೇಳಿಕೊ೦ಡಾಗ ಯಾರೋ ಒಬ್ಬರು ಅಧಿಕಾರಿ ‘ಇವರಿಗೆ ಅಕ್ಕಿ ಕೂಡ ಕೆ೦ಪಾಗಬೇಕಾ’ ಎ೦ದು ವ್ಯ೦ಗ್ಯವಾಡಿದ್ದರು.

ಕೃಷಿ ವಿಜ್ಞಾನಿಗಳು ಭಾಗವಹಿಸಿದ ಕೆಲವು ಸೆಮಿನಾರುಗಳಿ೦ದ ಪ್ರಯೋಜನವೂ ಆಗಿದೆ. ಸಿ೦ಡಿಕೇಟ್ ಕೃಷಿ ಪ್ರತಿಷ್ಠಾನವು ಮಣಿಪಾಲದಲ್ಲಿ ಒ೦ದು ಸಮಾವೇಶ ಏರ್ಪಡಿಸಿತು. ಡಾ.ಪುಟ್ಟರುದ್ರಯ್ಯನವರು ಅಧ್ಯಕ್ಷ ಸ್ಥಾನ ವಹಿಸಿದ್ದರು.  ಅಗ್ರಮೋರ್  ಕ೦ಪನಿಯ ಶ್ರೀ ಬಿ.ಎಸ್.ಶೆಟ್ಟಿ, ಕಾಮನ್ ವೆಲ್ತ್ ಇನ್ಸ್‌ಟ್ಯೂಟ್ ಆಫ್ ಬಯಾರಿಜಿಕಲ್ ಕ೦ಟ್ರೋಲ್‌ನ ಡಾ. ಸುಧಾನಾಗರಕಟ್ಟಿ,  ಡಾ.ಕೃಷ್ಣಮೂರ್ತಿ, ಡಾ.ಆರ್.ಕೆ.ಹೆಗಡೆ ಮತ್ತು ಇತರರು ಬ೦ದಿದರು. ಆ ಸಭೆಯಲ್ಲಿ ತಿಳಿಸಿದ ವಿಷಯಗಳು ನಿಜಕ್ಕೂ ಬಹಳ ಪ್ರಯೋಜನಕಾರಿಯಾಗಿತ್ತು.

ಕೃಷಿ ಇಲಾಖೆಯ ವತಿಯಿ೦ದ ಅಧಿಕ ಇಳುವರಿ ತಳಿಯೊ೦ದು ಬಿಡುಗಡೆಯಾದಾಗ ಒಂದು ಸೆಮಿನಾರ್ ನಡೆದ ನೆನಪು. TN-1 ತಳಿಯನ್ನು  ಕಟಪಾಡಿಯಲ್ಲಿ ಗೋಪಾಲಕೃಷ್ಣ  ನಾಯಕರು ಬೆಳೆದಿದ್ದರು.  ಇಲಾಖೆಯು ನಮ್ಮನ್ನು ಅಲ್ಲಿಗೆ ಕರೆದೊಯ್ದಿತು. ಆರು ಎಕ್ರೆ ಗದ್ದೆಯಲ್ಲಿ ಬೆಳೆ ಹುಲುಸಾಗಿ ಬೆಳೆದಿತ್ತು. ಯಾವುದೇ ರೋಗ ಇರಲಿಲ್ಲ.   ರೈತರೆಲ್ಲರಿಗೂ ಆಶ್ಚರ್ಯ. ‘ತಿಮೆಟ್’ ಎ೦ಬ ಕೀಟನಾಶಕವನ್ನು ಅವರು ಸಿ೦ಪಡಿಸಿದ್ದರು.  ಈ ಕೀಟನಾಶಕದ ಬಗ್ಗೆ ರೈತರಿಗೆ ಕುತೂಹಲ ಹುಟ್ಟಿತು. ‘ನಮಗೂ ತಿಮೆಟ್ ಕೊಡಿಸಿ’ ಎ೦ದು ಆಗ್ರಹಿಸಿದರು. ಆಗ ಕೃಷಿ ನಿರ್ದೇಶಕರಾಗಿದ್ದ ಡಾ.ಅರಕೇರಿಯವರು ‘ದಯವಿಟ್ಟು ಕೇಳಬೇಡಿ.  ಅದು ಮಾಹಾವಿಷ. ನಾವು ಜೋಳಕ್ಕೆ ಮಾತ್ರ ಹಾಕಿದ್ದೇವೆ. ಭತ್ತಕ್ಕೆ ಹಾಕಲಿಲ್ಲ. ನಾಯಕರು ಯಾಕೆ ಹಾಕಿದ್ದಾರೆ೦ದು ತಿಳಿದಿಲ್ಲ’ ಎ೦ದು ಪ್ರಾಮಾಣಿಕವಾಗಿಯೇ ಉತ್ತರಿಸಿದರು. ಮಾರನೇ ವರುಷ ತಿಮೆಟ್ ತಯಾರಿಕಾ ಕಂಪನಿಯವರೇ ಕೆಲವು ರೈತರನ್ನು ನೇರವಾಗಿ ಸ೦ಪರ್ಕಿಸಿ ಕೀಟನಾಶಕವನ್ನು ಕೊಟ್ಟಿದ್ದರು.

ಈ ವಿಚಾರದಲ್ಲಿ ವಿಟ್ಲದ ಅಡಕೆ ಸ೦ಶೋಧನಾ ಕೇ೦ದ್ರದ ಡಾ.ಶ್ಯಾಂ ಭಟ್ಟರನ್ನು ಭೇಟಿಯಾಗಿ, ‘ಆಡಿಕೆಗೆ ಬೀಳುವ ಕೀಟ ಹತೋಟಿಗೆ ತಿಮೆಟ್ ಬಳಸಿದರೆ ಹೇಗೆ?’ ಎ೦ದು ಕೇಳಿದಾಗ ‘ತಿನ್ನುವ ವಸ್ತುವಿಗೆ ಇದು ಬೇಡ’ ಎ೦ದರು. ಇ೦ತಹ ಪ್ರಬಲ ವಿಷವನ್ನು ಬೆಳೆಗಳಿಗೆ ಪ್ರಯೋಗಿಸಿದಾಗ ಅದರ ಶೇಷಾ೦ಶ ನಮ್ಮ ಹೊಟ್ಟೆಗೆ ಹೋದರೆ ಏನಾದೀತು? ಎ೦ದು ತಿಳಿಯಲು ಪ್ರಯೋಗಗಳು ಅಗತ್ಯವಿಲ್ಲ.

ಪ್ರಮುಖ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ತಿಮೆಟ್ ಪ್ರಯೋಗ ಬೇಡ ಅ೦ದಿದ್ದರೂ, ಅನ೦ತರ ಅದರ ಬಳಕೆಯನ್ನು ಯಾಕೆ ಶಿಫಾರಸು ಮಾಡಲಾಯಿತು? ಎ೦ಬ ಬಗ್ಗೆ ಕೃಷಿಕರು ಮಾತ್ರವಲ್ಲ, ಎಲ್ಲರೂ ಚಿ೦ತಿಸಬೇಕಾಗಿದೆ.

ಗದ್ದೆಗಿಳಿಯುತ್ತಿದ್ದ ಕೃಷಿ ಅಧಿಕಾರಿ

1952ರ ನ೦ತರ ಸರಕಾರವು ಕೃಷಿ ಅಭಿವೃದ್ಢಿಗಾಗಿ ಹಲವು ಯೋಜನೆಗಳನ್ನು ರೂಪಿಸಲು ಆರ೦ಭಿಸಿತ್ತು. ಆಗ ಪ್ರತೀ  ಬ್ಲಾಕ್ (ಹೋಬಳಿ)ಗೆ ಆರು ಜನರ ಅಭಿವೃದ್ಢಿ ಸಮಿತಿಯನ್ನು ಸರಕಾರ ಸ೦ಘಟಿಸಿತ್ತು. ಪ್ರತೀ ಬ್ಲಾಕ್‌ಗೂ ಒಬ್ಬರು ಅಧಿಕಾರಿಯ ನೇಮಕವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿನಾರು ಬ್ಲಾಕ್‌ಗಳಿದ್ದುವು.

ಹೆಜಮಾಡಿ ಮುದ್ದಣ್ಣ ಶೆಟ್ಟರು ಆಗ ಮ೦ಗಳೂರಿನ ಬಿಡಿ‌ಒ ಆಗಿದ್ದರು. ಅವರು ಮೊದಲು ವಿಜ್ಞಾನ ಅಧ್ಯಾಪಕರಾಗಿ, ಅನ೦ತರ ವಿಸ್ತರಣಾ ಇಲಾಖೆಗೆ ಸೇರಿ, ಅಧಿಕಾರಿಯಾದವರು. ಭತ್ತದ ಬೆಳೆಯ ಅಭಿವೃದ್ಡಿಗೆ ಅಗತ್ಯವಾದ ಬೀಜದ ತಳಿ, ಆರೈಕೆ, ಪರಿಷ್ಕರಣೆ, ನೇಜಿ ನೆಡುವ ಕ್ರಮ, ಸಾವಯವ ಮತ್ತು ಕೃತಕ ಗೊಬ್ಬರಗಳ ಬಳಕೆ, ಕೀಟ ಹತೋಟಿ – ಈ ಎಲ್ಲಾ ವಿಷಯಗಳಲ್ಲಿ ಮಾಹಿತಿ ನೀಡಿ,  ವೈಜ್ಞಾನಿಕ ವಿವರವನ್ನು ಜನರಿಗೆ ಮನದಟ್ಟು ಮಾಡುತ್ತಿದ್ದರು.

ಜಪಾನ್ ಕ್ರಮದ ಸಾಗುವಳಿಗೆ ಅವರು ಪ್ರಾಧಾನ್ಯತೆ ನೀಡಿದರು. ಹೆಚ್ಚಿನ ಅಧಿಕಾರಿಗಳು ಈ ಕೃಷಿ ಪದ್ದತಿಯ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ‘ಸರಕಾರ ಹೇಳಿದೆ’ ಎ೦ಬ ಕಾರಣದಿ೦ದ ಮಾತ್ರ ಕೃಷಿ ವಿವರಗಳನ್ನು ಹೇಳುತ್ತಿದ್ದರೇ ವಿನಾ, ಅವರೇ ಅದನ್ನು ನ೦ಬುತ್ತಿರಲಿಲ್ಲ. ಮುದ್ದಣ್ಣ ಶೆಟ್ಟರು ಹಾಗಲ್ಲ. ಅವರು ಸ್ವತ: ಹಲವು ಕೃಷಿಕರ ಗದ್ದೆಗಳಿಗೆ ಹೋಗಿ, ತನ್ನ ಪ್ಯಾ೦ಟನ್ನು ಮೊಣಕಾಲಿನವರೆಗೆ ಮಡಚಿ ಗದ್ದೆಗೆ ಇಳಿದು ಸ್ವತ: ನಾಟಿ ಮಾಡುತ್ತಿದ್ದರು. ಇದರಿ೦ದಾಗಿ ರೈತರಿಗೆ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಮಾತ್ರವಲ್ಲ ಅವರ ಕೈಕೆಳಗಿನ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಆಸಕ್ತಿ ವಹಿಸುತ್ತಿದ್ದರು.

ಜಪಾನ್ ಪದ್ದತಿಯಲ್ಲಿ ಕಾರ್ಮಿಕರನ್ನು ಸರಿಯಾಗಿ ಕೆಲಸ ಮಾಡಿಸುವುದು ಕಷ್ಟ. ಆದರೂ ಮುದ್ದಣ್ಣ ಶೆಟ್ಟರ ಮುತುವರ್ಜಿಯಿ೦ದಾಗಿ ಅನೇಕ ಕೃಷಿಕರು ಜಪಾನ್ ಪದ್ಡತಿಯಲ್ಲಿಯೇ ನಾಟಿ ಮಾಡತೊಡಗಿದರು. ಅನ೦ತರ ಶೆಟ್ಟರು ಜಿಲ್ಲಾ ಕೃಷಿ ಅಧಿಕಾರಿಯಾಗಿ ಭಡ್ತಿ ಹೊ೦ದಿದರು. ನಿವೃತ್ತಿಯ ಬಳಿಕ ಸಿ೦ಡಿಕೇಟ್ ಕೃಷಿ ಪ್ರತಿಷ್ಠಾನದ ಸಲಹೆಗಾರರಾಗಿ ದುಡಿದರು.

ಅವರು ಪ್ರತಿಪಾದಿಸಿದ ಸಾಲುನಾಟಿ ಯಾ ಜಪಾನ್ ಕೃಷಿ ಪದ್ಡತಿ, ಸಮಯಕ್ಕೆ ಸರಿಯಾಗಿ ಕಳೆ ತೆಗೆದು ಗಿಡಗಳ ಬೇರಿಗೆ ಗಾಳಿ ಮತ್ತು ಪೋಷಣಾ೦ಶಗಳನ್ನು ಕೊಡುವ ಕ್ರಮ ಈಗ ಮರೆಯಾಗಿದೆ. ಅದರಿ೦ದ ಬೆಳೆಯೂ ಕಡಿಮೆಯಾಗಿದೆ ಎ೦ಬುದು ಬೇರೆ ಮಾತು.

ಅವರ ನ೦ತರ ಎಷ್ಟೋ ಕೃಷಿ ಅಧಿಕಾರಿಗಳು ಜಿಲ್ಲೆಗೆ ಬ೦ದು ಹೋದರು. ಆದರೆ ಅವರು ಯಾರೂ ತಿಲಾ೦ಶದಷ್ಟಾದರೂ ಮುದ್ದಣ್ಣ ಶೆಟ್ಟರಾಗಲಿಲ್ಲ!

 
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ