ಅಧಿಕಾರ ಕಳೆದು ಹೋದ ಬಳಿಕ…

ಸುಮಾರು ೪-೫ ವರ್ಷಗಳ ಹಿಂದಿನ ಕಥೆ. ಮಂಗಳೂರಿನ ಫಳ್ನೀರ್ ಎಂಬಲ್ಲಿ ನಾನು ವೈದ್ಯರೊಬ್ಬರನ್ನು ಭೇಟಿಯಾಗಿ ಹೊರ ಬರುತ್ತಿರುವಾಗ ನನಗೆ ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ ಇವರು ಸಿಕ್ಕಿದರು. ಅವರು ಎರಡು ಅವಧಿಗಳಿಗೆ ಅಂದಿನ ಸುರತ್ಕಲ್ (ಈಗ ಮಂಗಳೂರು ಉತ್ತರ) ಕ್ಷೇತ್ರದ ಶಾಸಕರಾಗಿದ್ದರು. ಅವರು ನನ್ನ ತಂದೆಯವರ ಬಾಲ್ಯದ ಶಾಲಾದಿನಗಳ ಸಹಪಾಠಿಯಾಗಿರುವುದರಿಂದ ಹಾಗೂ ನಮ್ಮ ಕ್ಷೇತ್ರದ ಶಾಸಕರಾಗಿರುವುದರಿಂದ ನನಗೆ ಮುಖ ಪರಿಚಯ ಇತ್ತು. ಅಧಿಕಾರದಲ್ಲಿರುವಾಗ ನಾನು ಒಮ್ಮೆಯೂ ಅವರನ್ನು ಭೇಟಿಯಾದದ್ದಿಲ್ಲ. ನನ್ನ ತಂದೆಯವರು ಒಮ್ಮೆ ನನ್ನ ಸೋದರ ಮಾವನ ಕೆಲಸದ ವರ್ಗಾವಣೆಯ ಬಗ್ಗೆ ಮಾತನಾಡಲು ಶಾಸಕರ ಕಚೇರಿಗೆ ಹೋಗಿದ್ದು ಬಿಟ್ಟರೆ, ಅಧಿಕಾರಸ್ಥರಿಂದ ನಾವೆಲ್ಲಾ ಯಾವಾಗಲೂ ದೂರ ದೂರ.
ಅಂದು ನಾನೇ ಅವರನ್ನು ಗುರುತು ಹಿಡಿದು ಮಾತನಾಡಿಸಿದೆ. ನಾನು ಇಂಥವರ ಮಗ ಎಂದು ಹೇಳಿದಾಗ ಅವರಿಗೆ ಬಹಳ ಅಚ್ಚರಿ. ಅವರು ಅಂದು ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ. “ಬಹಳ ಸಂತೋಷವಪ್ಪಾ, ಅಧಿಕಾರದಲ್ಲಿ ಇಲ್ಲದ ರಾಜಕಾರಣಿಯನ್ನು ಗುರುತಿಸುವವರೇ ಇಲ್ಲ, ಗುರುತು ಹಿಡಿದರೂ ಮಾತನಾಡಿಸುವವರಿಲ್ಲ. ಅಧಿಕಾರದಲ್ಲಿರುವಾಗ ನನ್ನಿಂದ ಸಹಾಯ ಪಡೆದುಕೊಂಡಿರುವವರೂ ಮಾತನಾಡಿಸಲು ಹೋಗುವುದಿಲ್ಲ. ಅದರಲ್ಲಿ ನೀನು ನನ್ನನ್ನು ಮಾತನಾಡಿಸಿದ್ದು ಬಹಳ ಖುಷಿ ಆಯ್ತು ಮಾರಾಯಾ” ಎಂದರು. ನಂತರ ಕುಶಲೋಪರಿ ಮಾತನಾಡಿ ಅವರು ತೆರಳಿದರು. ಅವರೇನು ಬಹಳ ಹಳೆಯ ರಾಜಕಾರಣಿಯಲ್ಲ. ಹೀಗೊಂದು ನಾಲ್ಕು ಅವಧಿಯ ಮೊದಲು ಶಾಸಕರಾಗಿದ್ದವರು. ನಂತರದ ರಾಜಕೀಯ ಕಾರಣಗಳಿಂದ ಅವರು ಸೋತದ್ದು, ನಂತರದ ದಿನಗಳಲ್ಲಿ ಪಕ್ಷ ಅವರಿಗೆ ಟಿಕೇಟ್ ನಿರಾಕರಿಸಿದ್ದು ಎಲ್ಲವೂ ನನಗೆ ನೆನಪಾಯ್ತು. ಅವರು ಅಂದು ಮಾತನಾಡುವಾಗ ಅವರ ಕಣ್ಣುಗಳಲ್ಲಿ ಏನೋ ಒಂದು ರೀತಿಯ ಖುಷಿ ಕಂಡು ಬಂತು. ನನ್ನ ಗಲ್ಲವನ್ನು ಮುಟ್ಟಿ ಮುಟ್ಟಿ ಮಾತನಾಡಿದರು. ತಾನಿನ್ನೂ ಅಪ್ರಸ್ತುತವಾಗಿಲ್ಲ ಎನ್ನುವ ಭಾವನೆ ಅವರಲ್ಲಿ ನನಗೆ ಕಂಡು ಬಂತು.
ಈ ವಿಚಾರ ಏಕೆ ಬರೆದೆನೆಂದರೆ ಕೇವಲ ರಾಜಕಾರಣಿಗಳು ಮಾತ್ರವಲ್ಲ, ಉನ್ನತ ಅಧಿಕಾರದಲ್ಲಿದ್ದವರು ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಇದೇ ರೀತಿಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ ಅಥವಾ ಇವರು ಹಾಗೆ ತಿಳಿದುಕೊಳ್ಳುತ್ತಾರೆ. ಅಧಿಕಾರ ಇದ್ದ ಸಮಯದಲ್ಲಿ ಅವರ ಹಿಂದೆ ಮುಂದೆ ಓಡಾಡುತ್ತಿದ್ದ ಬೆಂಬಲಿಗರು (?) ಮತ್ತೆ ಕಾಣದಂತೆ ಮಾಯವಾಗುತ್ತಾರೆ. ಇದೇ ಪ್ರಪಂಚ. ಮೊನ್ನೆ ಮೊನ್ನೆ ‘ವಿಶ್ವವಾಣಿ’ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ಟರು ‘ಸಂಪಾದಕರ ಸದ್ಯ ಶೋಧನೆ' ಯಲ್ಲಿ ಇದೇ ಬಗೆಯ ಒಂದು ನೈಜ ಘಟನೆಯನ್ನು (ಅಧಿಕಾರ ಇದ್ದಾಗ ಮತ್ತು ಇಲ್ಲದಾಗ) ಬರೆದಿದ್ದರು. ಅದನ್ನು ಓದಿದ ನಂತರ ನನಗೆ ಮೇಲಿನ ಸಂಗತಿಯೆಲ್ಲಾ ನೆನಪಾದವು. ಪತ್ರಿಕೆಯಲ್ಲಿ ಅವರು ಬರೆದ ವಿಷಯವನ್ನು ಯಥಾವತ್ತಾಗಿ ಇಲ್ಲಿ ನೀಡಿರುವೆ. ವಿಶ್ವವಾಣಿಗೆ ಕೃತಜ್ಞತೆಗಳು.
ವ್ಯಕ್ತಿಗಳು ಅಧಿಕಾರದಲ್ಲಿ ಇದ್ದರೆ ಒಂದು ರೀತಿ, ಇಲ್ಲದಿದ್ದರೆ ಇನ್ನೊಂದು ರೀತಿ. ಯಾವತ್ತೂ ಅಧಿಕಾರದಲ್ಲಿರುವವರನ್ನು ಜನ ಇಷ್ಟಪಡುತ್ತಾರೆ. ಅದೇ ವ್ಯಕ್ತಿ ಅಧಿಕಾರದಿಂದ ಇಳಿದರೆ ಸಾಕು, ಅವರ ಹತ್ತಿರವೂ ಸುಳಿಯುವುದಿಲ್ಲ. ವೈಯನ್ಕೆಯವರು ತಮಗಾದ ಒಂದು ಪ್ರಸಂಗವನ್ನು ಹೇಳುತ್ತಿದ್ದರು. ಅವರು 'ಪ್ರಜಾವಾಣಿ' ಸಂಪಾದಕರಾಗಿದ್ದಾಗ, ಅವರಿಗೆ ರಾಜ್ಯದ ಪ್ರತಿಷ್ಠಿತ ಬ್ರಾಹ್ಮಣ ಮಠ ಒಂದು ಸನ್ಮಾನ ಮಾಡಲು ನಿರ್ಧರಿಸಿತ್ತಂತೆ. ಅದಕ್ಕೆ ವೈಯನ್ಕೆಯವರು ಸಮ್ಮತಿಸಿದ್ದರಂತೆ. ಈ ಕಾರ್ಯಕ್ರಮ ಸುಮಾರು ೨ ತಿಂಗಳು ಮುಂಚಿತವಾಗಿಯೇ ನಿಶ್ಚಯವಾಗಿತ್ತಂತೆ. ಕಾರ್ಯಕ್ರಮಕ್ಕೆ ಇನ್ನು ಒಂದು ವಾರ ಇರುವಾಗ ಮಠದ ಆಡಳಿತ ಮಂಡಳಿ ಸದಸ್ಯರೊಬ್ಬರು ವೈಯೆನ್ಕೆಯವರ ಮನೆಗೆ ಬಂದು ಕಾರ್ಯಕ್ರಮದ ದಿನದಂದು ಬೆಳಿಗ್ಗೆ ಹತ್ತು ಗಂಟೆಗೆ ವಾಹನದೊಂದಿಗೆ ಬರುವುದಾಗಿ ಹೇಳಿದ್ದರಂತೆ. ಸರಿ, ಕಾರ್ಯಕ್ರಮದ ದಿನ ಬಂತು. ಹತ್ತು ಗಂಟೆಯೂ ಆಯ್ತು. ವೈಯನ್ಕೆ ಸಿದ್ದರಾಗಿ ವಾಹನಕ್ಕಾಗಿ ಎದುರು ನೋಡುತ್ತಿದ್ದರು. ಹತ್ತಾಯಿತು... ಹನ್ನೊಂದಾಯಿತು..... ಹನ್ನೆರಡೂ ಆಯಿತು. ಮಠದ ಸದಸ್ಯನ ಸುಳಿವೇ ಇಲ್ಲ. ಇನ್ನು ಆತ ಬರುವುದಿಲ್ಲ ಎಂದು ವೈಯನ್ಕೆಯವರಿಗೆ ಖಾತ್ರಿಯಾಯಿತು. ಇದಕ್ಕೆ ಕಾರಣವಿತ್ತು. ೩ ದಿನಗಳ ಹಿಂದೆ, ವೈಯೆನ್ಕೆ ಅವರು 'ಪ್ರಜಾವಾಣಿ' ಸಂಪಾದಕ ಸ್ಥಾನದಿಂದ ನಿವೃತ್ತರಾಗಿದ್ದರು. ಈ ಸಂಗತಿ ಮಠದ ಸ್ವಾಮೀಜಿ ಅವರಿಗೂ ಗೊತ್ತಾಗಿತ್ತು. ನಿವೃತ್ತ ಸಂಪಾದಕರಿಂದ ಏನು ಪ್ರಯೋಜನ ಎಂದು ಮಠದವರು, ವೈಯೆನ್ಕೆಯವರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬರಲೇ ಇಲ್ಲ. ಅಷ್ಟರೊಳಗೆ ವೈಯನ್ಕೆಯವರಿಗೂ ಮನದಟ್ಟಾಗಿತ್ತು. ತಾವು ನಿವೃತ್ತರಾದ ಕಾರಣದಿಂದಲೇ ಮಠದವರು ತಮ್ಮನ್ನು ಅಲಕ್ಷ್ಯ ಮಾಡಿದರು ಎಂದು. 'ಪ್ರಜಾವಾಣಿ'ಯಿಂದ ನಿವೃತ್ತರಾಗಿ ಅವರು ಮೂರು ವರ್ಷ ಮನೆಯಲ್ಲೇ ಇದ್ದರು. ಅಲ್ಲಿ ತನಕ ಅವರ ಎಡತಾಕುವವರೆಲ್ಲ ಜಾಗ ಖಾಲಿ ಮಾಡಿದ್ದರು. ರಾತ್ರಿ ಗುಂಡು ಪಾರ್ಟಿಗೆ ಕರೆದುಕೊಂಡು ಹೋಗುವವರು, ಸಿನೆಮಾ ಪಾರ್ಟಿಗಳಿಗೆ ಕರೆಯುವವರು, ಏನೇನೋ ನೆಪ ಹೇಳಿ ನುಣುಚಿಕೊಳ್ಳುತ್ತಿದ್ದರು. ರಾಜಕಾರಣಿಗಳಂತೂ ಹತ್ತಿರ ಸುಳಿಯುತ್ತಿರಲಿಲ್ಲ. ನೋಡನೋಡುತ್ತಿದ್ದಂತೆ, ಅವರ ಹತ್ತಿರವಿದ್ದವರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ತೀರ ಆಪ್ತರನ್ನು ಬಿಟ್ಟರೆ, ಬೇರೆ ಯಾರೂ ಅವರಿಗೆ ಫೋನ್ ಕೂಡ ಮಾಡುತ್ತಿರಲಿಲ್ಲ. ವೈಯನ್ಕೆಯವರು 'ಕನ್ನಡಪ್ರಭ' ಸಂಪಾದಕರಾಗಿ ನೇಮಕವಾದರು. ಈ ವಿಷಯ ಎಲ್ಲೆಡೆ ಹರಡಿತು. ಅವರಿಂದ ದೂರವಾದವರೆಲ್ಲ ಪುನಃ ಅವರನ್ನು ಹುಡುಕಿಕೊಂಡು ಬರಲಾರಂಭಿಸಿದರು. ರಾತ್ರಿ ಗುಂಡು ಪಾರ್ಟಿಗೆ ಕರೆದುಕೊಂಡು ಹೋಗುವವರ ಮಧ್ಯೆ ಪೈಪೋಟಿ ಏರ್ಪಡಲಾರಂಭಿಸಿತು. ಮಠಕ್ಕೆ ಕರೆದು ಸನ್ಮಾನ ಮಾಡಲು ನಿರ್ಧರಿಸಿ, ನಂತರ ಅವರು ನಿವೃತ್ತರಾದ ಸುದ್ದಿ ಕೇಳಿ, ಅವರ ಹತ್ತಿರ ಸುಳಿಯದ ಆ ಮಠಾಧೀಶರು, ವೈಯೆನ್ಕೆ ಅವರಿಗೆ ಅಭಿನಂದನೆ ಸಲ್ಲಿಸುವವರ ಪೈಕಿ ಮುಂದಿದ್ದರು. ತಮ್ಮ ಆಪ್ತ ಸಹಾಯಕರ ಮೂಲಕ ಅವರ ಮನೆಗೆ ಶಾಲು, ಹಣ್ಣು-ಹಂಪಲು, ಮಂತ್ರಾಕ್ಷತೆ... ಎಲ್ಲವನ್ನೂ ಕಳಿಸಿದರು. ಆದರೆ ವೈಯನ್ಕೆ ಮಾತ್ರ ಅವರನ್ನು ಎಲ್ಲಿಡಬೇಕೋ ಅಲ್ಲಿಟ್ಟರು. ಆ ಮಠಾಧೀಶರು ಫೋನ್ ಮಾಡಿದಾಗಲೆಲ್ಲ, ವೈಯೆನ್ಕೆ ಅವರು ಫೋನ್ ಕಟ್ ಮಾಡುತ್ತಿದ್ದರು. ರಾಜಕಾರಣಿಗಳು ಎಂದಿನಂತೆ ಅವರ ಎಡತಾಕಲಾರಂಭಿಸಿದರು. ಅದರಲ್ಲೂ ಪ್ರಮುಖ ರಾಜಕಾರಣಿಯೊಬ್ಬರು, ' ವೈಯನ್ಕೆ ಅವರೇ, ನೀವು ನಿವೃತ್ತರಾದ ಬಳಿಕ ಕನ್ನಡ ಪತ್ರಿಕೋದ್ಯಮ ಬಹಳ ಸೊರಗಿ ಹೋಗಿತ್ತು. ಪ್ರಜಾವಾಣಿಯನ್ನು ಓದಲಾಗುತ್ತಿರಲಿಲ್ಲ. ನೀವು ಈಗ 'ಕನ್ನಡಪ್ರಭ'ಕ್ಕೆ ಬಂದಿದ್ದೀರಿ. ನಾನು ನಿನ್ನೆಯಿಂದಲೇ ಕನ್ನಡಪ್ರಭ ಹಾಕು ಎಂದು ಹೇಳಿದ್ದೇನೆ' ಎಂದರು. ವೈಯನ್ಕೆ ಅವರು ಮನಸ್ಸಿನೊಳಗೆ. 'ಎಲಾ ಇವನಾ?' ಎಂದು ಅಂದುಕೊಂಡರು.
ಇದು ಅಧಿಕಾರದಿಂದ ಕೆಳಗಿಳಿದವರ ನಿಜವಾದ ಕಥೆ. ಅಧಿಕಾರ ಇಲ್ಲವೆಂದ ಕೂಡಲೇ ಆ ವ್ಯಕ್ತಿಯಿಂದ ದೂರ ಓಡುವವರು ಹೇಗೆ ಇದ್ದಾರೆಯೋ ಹಾಗೆಯೇ ದೊಡ್ದ ದೊಡ್ದ ಹುದ್ದೆಯಲ್ಲಿದ್ದವರಿಗೆ ತಾವು ನಿವೃತ್ತರಾದ ಬಳಿಕವೂ ಅದೇ ಮರ್ಯಾದೆ ಸಿಗಬೇಕೆಂಬ ಹಂಬಲ ಇರುತ್ತದೆ. ತಾವು ಅಧಿಕಾರದಲ್ಲಿದ್ದಾಗ ತಮ್ಮ ಸುತ್ತ-ಮುತ್ತ ತಿರುಗಾಡುತ್ತಿದ್ದ ಜನರು ಅಧಿಕಾರದಿಂದ ಕೆಳಗಿಳಿದ ಕೂಡಲೇ ಮಾಯವಾಗುವುದನ್ನು ಅರಗಿಸಿಕೊಳ್ಳಲಾಗುವುದಿಲ್ಲ. ಅದರಲ್ಲೂ ರಾಜಕಾರಣಿಗಳಿಗಂತೂ ಬಹಳವೇ ನೋವಾಗುತ್ತದೆ. ಅದಕ್ಕೆ ಅವರು ಸಾಯುವ ತನಕ ಅಧಿಕಾರದಲ್ಲೇ ಇರಬೇಕೆಂದು ಬಯಸುತ್ತಾರೆ. ‘ಗೆದ್ದ ಎತ್ತಿನ ಬಾಲ ಹಿಡಿ' ಎಂಬ ಮಾತಿನಂತೆ ಎಲ್ಲರೂ ಗೆದ್ದವರ ಹಿಂದೆಯೇ ಓಡುವವರು, ಈ ವಿಷಯದಲ್ಲಿ ಸೋಲು ಅನಾಥ. ಅಲ್ಲವೇ?
ಚಿತ್ರ ಕೃಪೆ: ಅಂತರ್ಜಾಲ ತಾಣ