ಅಧಿಕಾರ ಮತ್ತು ಅಧೀನತೆ
ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ ಹೇಳಬಹುದು. ಪುರುಷ ಪ್ರಧಾನತೆಯ ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕುಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಯಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು ಹೇಗೆಲ್ಲ ಸೃಷ್ಟಿಸಿಕೊಂಡು ಹೆಣ್ಣನ್ನು ಅಧೀನವಾಗಿಸುವ ತಂತ್ರಗಳನ್ನು ಹೆಣೆದಿದೆ ಎಂಬುದರ ವಿಸ್ತೃತ, ವಿದ್ವತ್ಪೂರ್ಣ ಅಧ್ಯಯನವೇ ಈ ಕೃತಿ. ಇನ್ನು ಇದರ ಕನ್ನಡ ನಿರೂಪಣೆಯನ್ನು ಮಾಡಿರುವ ಡಾ. ಶ್ರೀಮತಿ ಅವರು ಅನುವಾದಕ್ಕೊಂದು ಹೊಸ ಮಾದರಿಯನ್ನು ಸೃಷ್ಟಿಸಿದ್ದಾರೆ.
"ಈಗ ವಿವಿಧ ಶಿಕ್ಷಣ ವಲಯಗಳಲ್ಲಿ ತರಬೇತಿಗೆ ಒಳಗಾದವರಲ್ಲಿ ಸಂವೇದನಾಶೀಲರಾದ ಕೆಲವರಿಗಾದರೂ ತರಬೇತಿಯ ಪಾಠಗಳಿಗೂ ತಮ್ಮ ಜೀವನವು ಕಾಣಿಸುತ್ತಿರುವ ಅನುಭವಗಳಿಗೂ ತಾಳೆಯಾಗುತ್ತಿಲ್ಲ ಎಂಬ ಅರಿವು ಮೂಡುತ್ತಿದೆ. ಇಂಥವರು ಹೀಗೇಕೆ ಎಂಬ ಶೋಧಗಳಿಗೆ ತೊಡಗುತ್ತಾರೆ. ಇಂಥ ಶೋಧಗಳು ವ್ಯವಸ್ಥೆಯು ಹರಡಿರುವ ಕಣ್ಕಟ್ಟುಗಳನ್ನು ಭೇದಿಸಬಲ್ಲವು. ಇಂಥ ಪ್ರಯತ್ನಗಳಲ್ಲಿ ತೊದಗುವ ಸ್ತ್ರೀವಾದೀ ಶೋಧಗಳಿಗೆ ಕೇಟ್ ಮಿಲೆಟ್ ಸಮರ್ಥವಾದ ಒಂದು ಮಾದರಿಯನ್ನು ಒದಗಿಸುತ್ತಾಳೆ. ಲೈಂಗಿಕತಾ ರಾಜಕಾರಣವನ್ನು ಸ್ಪಷ್ಟವಾಗಿ ವಿವರಿಸಲು ಆಕೆಯು ಸಾಹಿತ್ಯ ವಲಯವನ್ನು ಸೂಕ್ಷ್ಮ ವಿಶ್ಲೇಷಣೆಗಳಿಗೆ ಒಳಪಡಿಸುತ್ತಾಳೆ. ವಿವಿಧ ವಲಯಗಳವರು ತಾವು ತರಬೇತಿಯನ್ನು ಪಡೆದ ವಲಯಗಳನ್ನು ಕೇಂದ್ರವಾಗಿರಿಸಿಕೊಂಡು ಇಂಥದೇ ಪ್ರಯೋಗಗಳಿಗೆ ತೊಡಗಬಹುದು. ಇಂಥ ಪ್ರತಿಯೊಂದು ಅಧ್ಯಯನವೂ ಲೈಂಗಿಕತಾ ರಾಜಕಾರಣದ ವಿವಿಧ ಆಯಾಮಗಳನ್ನು ಗ್ರಹಿಸಲು ನೆರವನ್ನು ನೀಡುವಂಥವೇ ಆಗಿರುತ್ತವೆ. ಕೇಟ್ ಮಿಲೆಟ್ ತನ್ನ ವಿಶ್ಲೇಷಣೆಗಳಿಗಾಗಿ ಸಾಹಿತ್ಯ ವಲಯವನ್ನು ಆಯ್ದುಕೊಂಡಿದ್ದಾಳೆ. ಸಾಹಿತ್ಯವಲಯವನ್ನು ವ್ಯಕ್ತಿಗಳ ಸಾಮರ್ಥ್ಯಗಳ ಅಭಿವ್ಯಕ್ತಿಯ ಮಾಧ್ಯಮಗಳೆಂದು ಗ್ರಹಿಸುವ ರೂಢಿ ನಮ್ಮಲ್ಲಿ ಪ್ರಚಲಿತವಾಗಿದೆ. ಆದರೆ ಕೇಟ್ ಮಿಲೆಟ್ ಈ ವಲಯವು ಕೂಡಾ ಒಂದು ಸಾಂಸ್ಥಿಕ ರಚನೆಯೇ ಆಗಿದೆ ಎಂಬುದನ್ನು ನಿರೂಪಿಸುತ್ತಾಳೆ.