ಅಧಿಕಾರ ರಾಜಕಾರಣವೇ ಮುಖ್ಯವಾಗಬಾರದು…

ಅಧಿಕಾರ ರಾಜಕಾರಣವೇ ಮುಖ್ಯವಾಗಬಾರದು…

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅಧಿಕಾರದ ದಾಹಕ್ಕೆ ಬಲಿಯಾಗುತ್ತಿದ್ದಾರೆಯೇ? ಹೊಂದಾಣಿಕೆ ರಾಜಕೀಯ ಮತ್ತು ತಂತ್ರಗಾರಿಕೆಗೆ ಶರಣಾಗಿದ್ದಾರೆಯೇ ? ನಿಧಾನವಾಗಿ ಮುಖವಾಡ ಕಳಚುತ್ತಿದೆಯೇ ? ಶಿಕ್ಷಣ ಆರೋಗ್ಯ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ಹಿನ್ನೆಲೆಗೆ ಸರಿಯುತ್ತಿದೆಯೇ ?

ಈಗಲೂ ಆಡಳಿತದ ದೃಷ್ಟಿಯಿಂದ ಭಾರತದ ಮುಖ್ಯಮಂತ್ರಿಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಕೇಜ್ರಿವಾಲ್ ಗುಜರಾತಿನ ಚುನಾವಣಾ ಕಣದಲ್ಲಿ ನೀಡಿದ ಹೇಳಿಕೆ ಖಂಡಿತ ಸ್ವೀಕಾರಾರ್ಹ ಅಲ್ಲ ಮತ್ತು ಬೇಜವಾಬ್ದಾರಿ ಹೇಳಿಕೆ. ಭಾರತದ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸಬೇಕಂತೆ. ಆಗ ಭಾರತದ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದಂತೆ.

75 ವರ್ಷಗಳ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವೇನಾದರೂ ಒಂದಷ್ಟು ಭರವಸೆಯೊಂದಿಗೆ ಉತ್ತಮ ಜೀವನ ಮಾಡುತ್ತಿದ್ದರೆ ಮತ್ತು ಊಟ ಬಟ್ಟೆ ವಸತಿ ವಿಷಯದಲ್ಲಿ ಸ್ವಲ್ಪ ಸಮಾಧಾನ ಹೊಂದಿದ್ದರೆ ಅದಕ್ಕೆ ಕಾರಣ ಮಹಾತ್ಮ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಹೋರಾಟ ಮತ್ತು ತ್ಯಾಗ ಬಲಿದಾನಗಳು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಡಿಮೆ ಹಿಂಸೆಯಾಗಿ ನಮ್ಮ ಅಜ್ಜ ಮುತ್ತಜ್ಜ ಬದುಕಿ ಬಾಳಲು ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹ ಕಾರಣ. ಇಲ್ಲದಿದ್ದರೆ ಹೋರಾಟ ಹಿಂಸಾತ್ಮಕವಾಗಿದ್ದರೆ ಇನ್ನೆಷ್ಟು ವಂಶಗಳು ನಾಶವಾಗಿರುತ್ತಿದ್ದವೋ?

ಅಂದು ಭಾರತದ ಮೇಲೆ ದಾಳಿ ಮಾಡಿದ ಯಾವ ವಿದೇಶಿ ಶಕ್ತಿಗಳನ್ನು ಈ ಲಕ್ಷ್ಮೀ ಗಣೇಶ ಅಲ್ಲಾ ಜೀಸಸ್ ತಡೆಯಲಿಲ್ಲ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸೇರಿ ಅಸಂಖ್ಯಾತ ಭಾರತದ ಸ್ವಾತಂತ್ರ್ಯ ಹೋರಾಟಗಾರರು ನೇಣುಗಂಭ ಏರುವುದನ್ನು ಈ ದೇವರುಗಳು ತಡೆಯಲಿಲ್ಲ. ಆದರೆ ಆ ಬರಿಮೈ ಫಕೀರ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ತನ್ನ ಇಡೀ ಬದುಕನ್ನು ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟು ಕೊನೆಗೆ ಅದಕ್ಕಾಗಿಯೇ ಹತ್ಯೆಯಾಗಿ ಹೋದ. ಈಗ ನೋಡಿದರೆ ಈತನ್ಯಾರೋ ಪಕ್ಕದಲ್ಲಿ ಇನ್ನೆರಡು ಪುರಾಣ ಪಾತ್ರಗಳನ್ನು ಸೇರಿಸಬೇಕು ಎಂದು ಗುಜರಾತಿನ ಚುನಾವಣಾ ಸಮಯದಲ್ಲಿ ಹೇಳುತ್ತಿದ್ದಾನೆ.

ಒಂದು ವೇಳೆ ಆ ಕರೆನ್ಸಿಯಲ್ಲಿ ಗಾಂಧಿಯ ಜೊತೆ ಮತ್ತೊಂದು ಚಿತ್ರ ಅನಿವಾರ್ಯ ಎನ್ನುವುದಾದರೆ ಆ ಸ್ಥಾನ ಪಡೆಯಲು ಅರ್ಹ ಬೇರಾರು ಅಲ್ಲ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ. ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸುವಾಗ ತಾಳ್ಮೆ ಇರಬೇಕು. ‌ದುರಾಸೆಗೆ ಬೀಳಬಾರದು.‌ ಅಧಿಕಾರ ರಾಜಕಾರಣವೇ ಮುಖ್ಯವಾಗಬಾರದು. ಆರ್ಥಿಕ ಪರಿಸ್ಥಿತಿ ನೋಟಿನ ಬಣ್ಣ ಆಕಾರ ಚಿತ್ರಗಳ ಮೇಲೆ ಅವಲಂಬಿಸಿರುವುದಿಲ್ಲ. ಅದು ಆ ದೇಶದ ಪ್ರಾಕೃತಿಕ ಸಂಪನ್ಮೂಲ, ಮಾನವ ಸಂಪನ್ಮೂಲಗಳ ಗುಣಮಟ್ಟ, ಆಡಳಿತದ ದಕ್ಷತೆ, ರಾಜಕೀಯ ಮತ್ತು ಆರ್ಥಿಕ ಸಿದ್ದಾಂತಗಳು, ಒಟ್ಟು ಅಂತರರಾಷ್ಟ್ರೀಯ ಪರಿಸ್ಥಿತಿ ಎಲ್ಲವನ್ನೂ ಒಳಗೊಂಡಿರುತ್ತದೆ.

ಒಬ್ಬ ಮುಖ್ಯಮಂತ್ರಿಗೆ ಇದರ ಅರಿವಿರಬೇಕು. ಒಂದು ದೇಶ ನಾಗರಿಕವಾಗಿ ನೆಮ್ಮದಿಯ ಜೀವನ ಶೈಲಿಯನ್ನು ಹೊಂದಿ ಅಭಿವೃದ್ಧಿಯ ಪಥದಲ್ಲಿ ಚಲಿಸಬೇಕಾದರೆ ಅದನ್ನು ವೈಚಾರಿಕ ಹಿನ್ನೆಲೆಯ ತತ್ವಗಳ ಆಧಾರದ ಮೇಲೆ ನಿರ್ಮಿಸಬೇಕು. ಕೇವಲ ಧರ್ಮದ ಹಾಗು ಧಾರ್ಮಿಕ ನಂಬಿಕೆಗಳ ಮೇಲೆ ನಿರ್ಮಿಸಿದರೆ ಆಗಬಹುದಾದ ಪರಿಣಾಮಗಳನ್ನು ಜಗತ್ತು ಗಮನಿಸುತ್ತಿದೆ. ಜೊತೆಗೆ ಈಗ ಆಗಬೇಕಾಗಿರುವ ಕೆಲಸ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜನರ ಜೀವನಮಟ್ಟ ಸುಧಾರಣೆಯೇ ಹೊರತು ಹೆಸರುಗಳ ಬದಲಾವಣೆ ಅಥವಾ ಚಿತ್ರಗಳ ರಚನೆಯಲ್ಲ. ಭ್ರಷ್ಟಾಚಾರ ರಹಿತ - ಜಾತಿ ರಹಿತ - ಹಿಂಸಾಚಾರ ರಹಿತ - ಮಾನವೀಯ ಮೌಲ್ಯಗಳ ಸಮಾಜ ಮತ್ತು ಸರ್ಕಾರವೇ ಹೊರತು ನೋಟಿನ ಬಣ್ಣ ಆಕಾರ ಚಿತ್ರಗಳಲ್ಲ ಮಿಸ್ಟರ್ ಅರವಿಂದ್ ಕೇಜ್ರಿವಾಲ್ ಮತ್ತು ತಂಡದವರೇ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ