ಅಧಿಕಾರ, ಸಂಪತ್ತಿಗಾಗಿ ಮೌಲ್ಯ ಮರೆತವರು…(ಭಾಗ 1)

ಮಹಾಭಾರತದಲ್ಲಿ ಒಂದು ಅರ್ಥಪೂರ್ಣ ಸನ್ನಿವೇಶ ಬರುತ್ತದೆ. ಕುರುಕ್ಷೇತ್ರ ಯುದ್ಧಗಳೆಲ್ಲಾ ಮುಗಿದ ಮೇಲೆ, ಶ್ರೀ ಕೃಷ್ಣ ಮತ್ತು ಅರ್ಜುನ ಹೀಗೆ ನಡೆದುಕೊಂಡು ಹೋಗುತ್ತಿದ್ದಾರೆ. ಅವರು ಒಂದು ಇಕ್ಕಟ್ಟಾದ ದಾರಿ ಮಧ್ಯೆ ನಡೆಯಲಾಗಿ ಒಂದು ದೃಶ್ಯವನ್ನು ನೋಡುತ್ತಾರೆ. ದಾರಿಯ ಎರಡೂ ಬದಿಗಳಲ್ಲಿ ಜಮೀನು. ಮೇಲ್ಭಾಗದ ಜಮೀನು ಒಬ್ಬನದ್ದಾಗಿದ್ದರೆ, ಕೆಳಭಾಗದ ಜಮೀನು ಮತ್ತೊಬ್ಬನಿಗೆ ಸೇರಿರುತ್ತದೆ. ಮೇಲಿನ ಜಮೀನಿನಲ್ಲಿದ್ದ ಮರವೊಂದರ ಹಣ್ಣು, ಕೆಳಗಿನ ಜಮೀನಿನಲ್ಲಿ ಬಿದ್ದಿರುತ್ತದೆ. ಇಲ್ಲೊಂದು ಜಗಳ ನಡೆಯುತ್ತಿತ್ತು. ಕೆಳಭಾಗದ ಜಮೀನಿನಲ್ಲಿ ಬಿದ್ದ ಹಣ್ಣನ್ನು ಹೆಕ್ಕಿ ಮೇಲ್ಭಾಗದ ಜಮೀನಿನ ವ್ಯಕ್ತಿಗೆ ನೀಡಲು ಹೋದರೆ ಅವನು ನಯವಾಗಿ ತಿರಸ್ಕರಿಸುತ್ತಿದ್ದಾನೆ. "ಮರ ನನ್ನದಾದರೂ ಬಿದ್ದದ್ದು ನಿನ್ನ ಜಾಗದಲ್ಲಿ ಆದು ನಿನಗೇ ಸೇರಬೇಕು" ಎಂದು ಒಬ್ಬ ವಾದಿಸಿದರೆ, "ನನ್ನ ಜಮೀನಿನಲ್ಲಿ ಬಿದ್ದಿದ್ದರೂ ಮರ ನಿನ್ನದು, ಅದು ನಿನಗೇ ಸೇರಬೇಕು" ಎಂದು ಇನ್ನೊಬ್ಬ ವಾದಿಸುತ್ತಿದ್ದ. ಕೃಷ್ಣಾರ್ಜುನರಿಬ್ಬರೂ, ಆ ವಾಗ್ವಾದವನ್ನು ನೋಡುತ್ತಾ ತಮ್ಮಷ್ಟಕ್ಕೆ ಪ್ರಯಾಣ ಮುಂದುವರಿಸುತ್ತಾರೆ.
ಕೆಲವು ದಿನಗಳು ಕಳೆದವು. ಯಾವುದೋ ಊರಿಗೆ ತೆರಳಿದ್ದ ಕೃಷ್ಣಾರ್ಜುನರು ಅದೇ ದಾರಿಯಲ್ಲಿ ಮರಳಿ ಪ್ರಯಾಣಿಸುತ್ತಿದ್ದರು. ಅಂದು ಜಗಳ ನಡೆದ ಸ್ಥಳಕ್ಕೆ ಬಂದರೆ, ಅಲ್ಲಿ ಅದೇ ವ್ಯಕ್ತಿಗಳು ಈಗಲೂ ಜಗಳ ಮಾಡುತ್ತಿದ್ದರು. ಈಗಲೂ ಸನ್ನಿವೇಶ ಅದೇ ಆಗಿತ್ತು. ಆದರೆ ವಾದಗಳು ಬದಲಾಗಿದ್ದವು. ಕೆಳಗಿನ ಜಮೀನಿನಲ್ಲಿ ಬಿದ್ದ ಹಣ್ಣನ್ನು ನೋಡಿದ ಮೇಲ್ಭಾಗದ ಜಮೀನಿನ ವ್ಯಕ್ತಿ "ಅದು ನನ್ನ ಮರದಲ್ಲಿ ಬೆಳೆದ ಹಣ್ಣು, ನನಗೇ ಸೇರಬೇಕು" ಎಂದು ವಾದಿಸಿದರೆ, ಮತ್ತೊಬ್ಬ "ಮರ ನಿನ್ನದಾಗಿದ್ದರೂ, ಬಿದ್ದದ್ದು ನನ್ನ ಜಾಗದಲ್ಲಿ, ಅದು ನನಗೇ ಸೇರಬೇಕು" ಎಂದು ವಾದಿಸುತ್ತಿದ್ದ.
ಅರ್ಜುನ ಪ್ರಯಾಣದ ಮಧ್ಯೆ ಮೌನ ಮುರಿದು ಕೃಷ್ಣನತ್ತ ನೋಡಿ "ಕೃಷ್ಣಾ, ನನಗೆ ಬಹಳ ವಿಚಿತ್ರ ಕಾಣಿಸುತ್ತಿದೆ. ಅಂದು ಇವರಿಬ್ಬರು ಇದು ನಿನ್ನದು, ನಿನಗೇ ಸೇರಬೇಕು ಎಂದು ವಾದಿಸುತ್ತಿದ್ದರು. ಆದರೆ ಇಂದು ಇದು ನನ್ನದು, ನನಗೇ ಸೇರಬೇಕು ಎಂದು ವಾದಿಸುತ್ತಿದ್ದಾರೆ. ಅಷ್ಟೊಂದು ವಿಶಾಲ ಹೃದಯವಿದ್ದ ಅವರಿಬ್ಬರು ಇಷ್ಟೊಂದು ಸಂಕುಚಿತರಾಗಲು ಕಾರಣವೇನು?" ಎಂದು ಕುತೂಹಲದಿಂದ ಕೇಳುತ್ತಾನೆ. ಕೃಷ್ಣ ಮುಗುಳ್ನಗುತ್ತಾ "ಅರ್ಜುನ, ನಾವು ಅಂದು ಹೋಗುತ್ತಿರಬೇಕಾದರೆ, ದ್ವಾಪರಯುಗದ ಅಂತ್ಯದಲ್ಲಿದ್ದೆವು. ಹಿಂತಿರುಗುವಾಗ ಕಲಿಯುಗದ ಆರಂಭದಲ್ಲಿದ್ದೇವೆ. ಇದು ಕಲಿಯುಗದ ಆರಂಭದ ಲಕ್ಷಣ" ಎಂದು ಹೇಳುತ್ತಾನೆ.
ಇಲ್ಲಿ ಗಮನಿಸಬೇಕಾದದ್ದು, ಕಲಿಯುಗದ ಆರಂಭವೇ ಮೌಲ್ಯ ಕಳೆದುಕೊಳ್ಳತೊಡಗಿದ್ದರೆ, ಇಂದು ಕಲಿಯುಗದ ಅಂತ್ಯಭಾಗದಲ್ಲಿರುವ ನಮ್ಮಲ್ಲಿ ಅದೆಷ್ಟು ಮೌಲ್ಯಗಳಿರಬಹುದು. ಅಥವಾ ಇದ್ದರೂ ಅದೆಷ್ಟು ಮಂದಿಯಲ್ಲಿ ಉಳಿದಿರಬಹುದು. ಸಂಪತ್ತು ಮತ್ತು ಅಧಿಕಾರ ನಮ್ಮ ಧ್ಯೇಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಹಣ ಗಳಿಸುವ ಯಂತ್ರಗಳಾಗಿ ನಿರ್ಮಿಸುತ್ತಿದ್ದೇವೆ.
ಅಧಿಕಾರದ ಬಯಕೆ ತಪ್ಪಲ್ಲ. ರಾಜಯೋಗವಿದ್ದವರು ಅಧಿಕಾರ ನಡೆಸಲೇಬೇಕು. ಹಣ ಸಂಪಾದನೆಯೂ ಪಾಪವಲ್ಲ. ಅದು ಅತೀ ಅಗತ್ಯವೂ ಆಗಿದೆ. ಯೋಚಿಸಬೇಕಾಗಿರುವುದು ಅವೆರಡನ್ನೂ ಸಂಪಾದಿಸಲು ನಾವು ಅನುಸರಿಸುತ್ತಿರುವ ವಿಧಾನ. ಅಧಿಕಾರ ಪಡೆಯಲು ರಾಜಮಾರ್ಗವಾಗಲಿ, ಅಥವಾ ಅಧಿಕಾರ ನಡೆಸುವಲ್ಲಿ ರಾಜಧರ್ಮವಾಗಲಿ ನಮ್ಮೊಂದಿಗಿಲ್ಲ. ಹಣಗಳಿಸುವಲ್ಲಿ ನ್ಯಾಯ, ಧರ್ಮದ ಮಾರ್ಗಗಳಿಲ್ಲ. "ಸತ್ಯಮೇವ ಜಯತೇ" ಎಂದು ಬರೆದಿರುವ ಕರೆನ್ಸಿಯನ್ನು ಮಾನವನ್ನು ಅಡವಿಟ್ಟು ಸಂಪಾದಿಸುತ್ತಿದ್ದೇವೆ.
(ಇನ್ನೂ ಇದೆ)
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ