ಅಧಿಕಾರ, ಸಂಪತ್ತಿಗಾಗಿ ಮೌಲ್ಯ ಮರೆತವರು…(ಭಾಗ 2)

ಅಧಿಕಾರ, ಸಂಪತ್ತಿಗಾಗಿ ಮೌಲ್ಯ ಮರೆತವರು…(ಭಾಗ 2)

ನನಗೊಂದು ಕತೆ ನೆನಪಾಗುತ್ತಿದೆ. ಅದೊಂದು ರಾಜ್ಯ. ಅಲ್ಲೊಬ್ಬ ರಾಜ. ರಾಜನಿಗೆ ಸಂಪತ್ತಿನ ಮೇಲೆ ವಿಪರೀತ ಮೋಹ. ಆತನ ಉದ್ದೇಶವೇ ಸಂಪತ್ತಿನ ಸಂಗ್ರಹ. ಪ್ರಜೆಗಳು ಜೀವನಕ್ಕಾಗಿ ಪರದಾಟ ನಡೆಸಿದರೂ ಪರವಾಗಿಲ್ಲ. ಪ್ರಜೆಗಳ ಸುಖದ ಚಿಂತೆ ರಾಜನಿಗಿರಲಿಲ್ಲ. ಅದ್ಯಾವುದೇ ವಿಧಾನವಾಗಿರಲಿ, ಆತನಿಗೆ ವಜ್ರ, ವೈಡೂರ್ಯ, ಚಿನ್ನ, ಬೆಳ್ಳಿಗಳನ್ನು ಸಂಪಾದಿಸುವುದೇ ಪರಮ ಗುರಿಯಾಗಿತ್ತು. ಸಂಗ್ರಹಿಸಿದ ಸಂಪತ್ತನ್ನು ಬಹಳ ಗುಪ್ತವಾದ ಕೋಣೆಯಲ್ಲಿ ರಕ್ಷಿಸಿಟ್ಟಿದ್ದ. ಆ ಕೋಣೆಯಲ್ಲಿ ಮತ್ತೆ ಮತ್ತೆ ಸಂಪತ್ತು ಕೂಡಿಡುತ್ತಿದ್ದನೇ ಹೊರತು ಅದರಿಂದ ಒಂದಿನಿತೂ ತೆಗೆಯಲಾರ. ಭದ್ರವಾದ ಆ ಕೋಣೆಯನ್ನು ತೆರೆಯಲು ಎರಡು ಕೀಲಿ ಗಳಿದ್ದವು. ರಾಜ ತನ್ನಲ್ಲಿ ಒಂದು ಕೀಲಿ ಇಟ್ಟುಕೊಂಡಿದ್ದರೆ, ಮತ್ತೊಂದನ್ನು ತನ್ನ ಅತೀ ನಂಬಿಗಸ್ಥ ಮಂತ್ರಿಯಲ್ಲಿ ಕೊಟ್ಟಿದ್ದ.

ರಾಜ ತನ್ನಲ್ಲಿ ವಿಧ ವಿಧವಾದ ಸಂಪತ್ತಿನ ರಾಶಿಯ ಬಗ್ಗೆ ಬಹಳನೇ ಗರ್ವ ಹೊಂದಿದ್ದ. ಒಂದು ದಿನ ರಾಜನಿಗೆ ತನ್ನ ಸಂಪತ್ತನ್ನು ಕಣ್ಣಾರೆ ನೋಡಿ ಆನಂದಿಸಬೇಕೆಂಬ ಬಯಕೆ ಉಂಟಾಗುತ್ತದೆ. ಮುಂಜಾನೆ ಯಾರೂ ಗಮನಿಸದಂತೆ ತನ್ನ ಗುಪ್ತ ಕೋಣೆಯತ್ತ ನಡೆದ ರಾಜ, ತನ್ನಲ್ಲಿದ್ದ ಕೀ ಬಳಸಿ ಬಾಗಿಲು ತೆರೆದು ಒಳಗಡೆ ಹೋಗುತ್ತಾನೆ. ಅಲ್ಲಿದ್ದ ಸಂಪತ್ತಿನ ರಾಶಿ ನೋಡಿ ಹುಚ್ಚನಂತಾಗುತ್ತಾನೆ. ಒಂದೆಡೆ ಬಂಗಾರದ ರಾಶಿ. ಮತ್ತೊಂದೆಡೆ ಬೆಳ್ಳಿ ರಾಶಿ. ಅಲ್ಲಿರುವ ವಜ್ರ, ವೈಡೂರ್ಯಗಳು ಅಪರಿಮಿತ. ಅವುಗಳನ್ನು ತನ್ನ ಬೊಗಸೆಯಲ್ಲಿ ಎತ್ತಿಕೊಳ್ಳುತ್ತಾ " ನಾನೆಷ್ಟೊಂದು ಶ್ರೀಮಂತ" ಎಂದು ನಲಿದಾಡುತ್ತಿದ್ದ. ಅವುಗಳ ಮೇಲೆ ಬಿದ್ದು ಹೊರಳಾಡ ತೊಡಗಿದ.

ಅಂದು ಅರಮನೆಗೆ ಬಂದ ಮಂತ್ರಿ ಎಂದಿನಂತೆ ಗುಪ್ತ ಕೋಣೆಯನ್ನು ಗಮನಿಸುತ್ತಾನೆ. ಅದರ ಬಾಗಿಲು ಅಲ್ಪ ತೆರದಿರುವುದು ನೋಡಿ ದಿಗಿಲುಗೊಳ್ಳುತ್ತಾನೆ. ಬಹುಶಃ ನಿನ್ನೆ ರಾತ್ರಿ ಪರಿಶೀಲನೆ ಮಾಡುವಾಗ ನಾನೇ ಬೀಗ ಹಾಕಲು ಮರೆತಿರಬಹುದು. ರಾಜನಿಗೆ ವಿಷಯ ತಿಳಿದರೆ ನನಗೆ ಆಪತ್ತು ಖಚಿತ ಎಂದು ಭಾವಿಸಿದವನೇ, ಕೋಣೆಯ ಬಾಗಿಲನ್ನು ತನ್ನಲ್ಲಿರುವ ಕೀ ಮೂಲಕ ಭದ್ರಪಡಿಸಿ ಅರಮನೆಗೆ ತೆರಳುತ್ತಾನೆ. ಅಂದು ಸ್ವಲ್ಪ ಸಮಯ ಕಳೆದ ಮೇಲೆ, ರಾಜನನ್ನು ಕಾಣದಿದ್ದಾಗ, ಹುಡುಕ ತೊಡಗುತ್ತಾರೆ. ಸಮಯ ಕಳೆದಂತೆ ಹುಡುಕಾಟ ತೀವ್ರವಾಯಿತು. ಆದರೆ ರಾಜನ ಪತ್ತೆಯಿಲ್ಲ. ದಿನ ಕಳೆದು ವಾರವಾದರೂ ರಾಜ ಪತ್ತೆಯಾಗಲಿಲ್ಲ.

ಖಜಾನೆಯ ಕೋಣೆಯೊಳಗೆ ತನ್ನ ಸಂಪತ್ತಿನ ನೋಟವನ್ನು ಕಣ್ಣಾರೆ ನೋಡಿ ಆನಂದಿಸಿದ ರಾಜ, ತೃಪ್ತಿಯೊಂದಿಗೆ ಬಾಗಿಲಿನ ಬಳಿ ಬಂದರೆ, ಬಾಗಿಲು ಮುಚ್ಚಲಾಗಿದೆ. ಕೀ ಬಳಿಯಿದ್ದರೂ ಒಳಗಿನಿಂದ ತೆರೆಯಲು ಸಾಧ್ಯವಿಲ್ಲ. ಆತ ಬಾಗಿಲಿಗೆ ಬಡಿಯುತ್ತಾನೆ. ಅದೆಷ್ಟು ಸಾಧ್ಯವೋ ಅಷ್ಟು ಚೀರಾಟ, ಕೂಗಾಟ ನಡೆಸುತ್ತಾನೆ. ಆದರೂ ಇವನ ಶಬ್ದ ಯಾರಿಗೂ ಕೇಳಿಸದು. ಸಮಯ ಕಳೆದಂತೆ ಹಸಿವು, ಬಾಯಾರಿಕೆ ತೀವ್ರವಾಗುತ್ತದೆ. ಅಲ್ಲಿದ್ದ ವಜ್ರವನ್ನು ಕೈಯಲ್ಲಿ ಹಿಡಿದು ನನಗೊಂದು ಲೋಟ ನೀರು ಕೊಡಿ ಎಂದು ಬೇಡುತ್ತಾನೆ. ಚಿನ್ನವನ್ನು ಬಾಚಿಕೊಂಡು ನನಗಿಷ್ಟು ಅನ್ನ ಕೊಡಿ ಎಂದು ಅಂಗಲಾಚುತ್ತಾನೆ. ಅವ್ಯಾವುದೂ ಆತನ ಮಾತನ್ನು ಆಲಿಸದು, ಹಸಿವು ಬಾಯಾರಿಕೆ ನೀಗಿಸದು. ದಣಿದು ಶಕ್ರಿಹೀನನಾಗಿ ಪ್ರಜ್ಞೆ ತಪ್ಪಿ ಅಲ್ಲೇ ತಾನು ಪ್ರಜೆಗಳ ರಕ್ತ ಹೀರಿ ಸಂಪಾದಿಸಿದ ಸಂಪತ್ತಿನ ಮೇಲೆ ಕುಸಿದು ಬೀಳುತ್ತಾನೆ. ಅದೆಷ್ಟೋ ಸಮಯದ ನಂತರ ಆತನಿಗೆ ಎಚ್ಚರವಾಗುತ್ತದೆ. ಆದರೆ ಆತ ಶಕ್ತಿಹೀನನಾಗಿದ್ದ. ತಾನು ಬದುಕಲಾರೆ ಎಂಬುವುದು ಆತನಿಗೆ ಖಚಿತವಾಗಿತ್ತು. ತನ್ನ ಶಕ್ತಿಯನ್ನೆಲ್ಲಾ ಬಳಸಿ ವಜ್ರದ ರಾಶಿಯನ್ನು ಹರಡಿ ಹಾಸಿಗೆ ಮಾಡುತ್ತಾನೆ. ಅದರ ಮೇಲೆ ಮಲಗಿದವನೇ ತನ್ನ ಬೆರಳು ಕೊಯ್ದು ರಕ್ತದಿಂದ ಗೋಡೆಯಲ್ಲಿ ಬರೆಯತೊಡಗುತ್ತಾನೆ. "ನಾನು ಸಂಪಾದಿಸಿದ ಈ ಅಗಾಧ ಸಂಪತ್ತು, ಬಾಯಾರಿದ ನನಗೆ ಒಂದು ಲೋಟ ನೀರು ಕೊಡಲು ಅಸಮರ್ಥವಾಗಿದೆ. ನನ್ನ ಚಿನ್ನದ ರಾಶಿ ಒಂದು ತುತ್ತು ಅನ್ನ ನೀಡದಾಗಿದೆ. ಇಷ್ಟೊಂದು ಸಂಪತ್ತಿದ್ದರೂ, ನನ್ನ ಜೀವ ಉಳಿಸಲು ಅವುಗಳಿಂದ ಸಾಧ್ಯವಾಗಿಲ್ಲ." ಎಂದು ಬರೆಯುತ್ತಿದ್ದ.

ಅರಮನೆಯಲ್ಲಿ ಸಂಪೂರ್ಣ ಶೋಕ. ರಾಜನಿಗಾಗಿ ಹುಡುಕಾಟ ನಡೆಸದ ಜಾಗವೇ ಇರಲಿಲ್ಲ. ಕಡೆಗೆ ರಾಜ ಪತ್ತೆಯಾಗುವ ಆಸೆ ಯಾರಿಗೂ ಇರಲಿಲ್ಲ. ಒಂದು ದಿನ ಮಂತ್ರಿ ರಾಜನ ಸಂಪತ್ತಿನ ಬಗ್ಗೆ ಯೋಚಿಸಿದ. ಆ ಕೋಣೆಯ ಕೀ ಇರೋದು ಇಬ್ಬರಲ್ಲಿ ಮಾತ್ರ. ಒಂದು ರಾಜನಲ್ಲಿ ಒಂದು ನನ್ನಲ್ಲಿ. ರಾಜನಂತೂ ಪತ್ತೆಯಿಲ್ಲ. ನಾನೀಗ ಅದರಲ್ಲಿರುವ ಸಂಪತ್ತನ್ನು ಸ್ವಲ್ಪ ದೋಚಿದರೆ ಯಾರಿಗೂ ತಿಳಿಯದು ಎಂದು ಯೋಚಿಸುತ್ತಾ, ಯಾರಿಗೂ ತಿಳಿಯದಂತೆ ಖಜಾನೆಯ ಕೋಣೆಯತ್ತ ತೆರಳಿ ಅದನ್ನು ತೆರೆದ. ಸಂಪತ್ತನ್ನು ದೋಚುವ ಆತುರದಿಂದ ಒಳಗಡೆ ತೆರಳಿದ ಮಂತ್ರಿ ವಜ್ರದ ರಾಶಿಯ ಮೇಲೆ ಶವವಾಗಿ ಮಲಗಿದ್ದ ರಾಜನನ್ನು ಕಂಡು ದಿಗ್ಭ್ರಮೆಗೊಂಡ. ಅಲ್ಲೇ ಗೋಡೆಯಲ್ಲಿ ಬರೆದ ಸಾಲುಗಳನ್ನು ನೋಡಿ ಆವಕ್ಕಾದ. ಸಂಪತ್ತಿನ ಆಸೆಯನ್ನು ಮರೆತು ಅರಮನೆಗೆ ಧಾವಿಸಿದವನೇ ವಿಷಯ ಎಲ್ಲರಿಗೂ ತಿಳಿಸಿದ....

ಅಗಾಧವಾದ ಸಂಪತ್ತನ್ನು ಸಂಗ್ರಹಿಸುವಲ್ಲಿ ನೀತಿ, ಧರ್ಮ ಎಲ್ಲವೂ ರಾಜನ ಕಾಲ ಕಸವಾಗಿತ್ತು. ಪ್ರಜೆಗಳ ಹಿತ ಕಾಪಾಡಬೇಕಿದ್ದ ಆತ, ಪ್ರಜೆಗಳ ಪಾಲಿನ ರಾಕ್ಷಸನಾಗಿದ್ದ. ಪ್ರಜೆಗಳು ಕಷ್ಟ ಕಾರ್ಪಣ್ಯಗಳಿಂದ ನರಳುತ್ತಿದ್ದರೂ ಆತನ ಸಂಪತ್ತು ಪ್ರಯೋಜನಕ್ಕೆ ಬಾರಲಿಲ್ಲ. ಕಟ್ಟ ಕಡೆಗೆ ತನ್ನ ಸಂಪತ್ತಿನ ರಾಶಿಯ ಮೇಲೆ ಒಂದು ತೊಟ್ಟು ನೀರೂ ಲಭ್ಯವಿಲ್ಲದೆ ಪ್ರಾಣಬಿಟ್ಟ.

ಇದು ಕತೆಯಾದರೂ ಜೀವನಕ್ಕೆ ಪಾಠವಿದೆ. ಸಂಪಾದಿಸಿಟ್ಟ ಕೋಟಿ ಕೋಟಿ ಸಂಪತ್ತು ಅನುಭವಿಸಲಾಗದವರೂ ಅದೆಷ್ಟೋ ಇದ್ದಾರೆ. ಮಾಡಿದ್ದೇ ಸರಿ, ನಡೆದದ್ದೇ ದಾರಿ ಎಂದವರು, ಕರೆದರೆ ಓಡಿ ಬರುವ ಸಾವಿರಾರು ಜನರು ನನ್ನೊಂದಿಗಿದ್ದಾರೆ, ನಾನು ನಿಂತರೆ ಭೂಮಿಯನ್ನು ಕಂಪಿಸುವಂತೆ ಮಾಡಬಲ್ಲೆ, ಎಂದೆಲ್ಲಾ ಮೆರೆದವರು ಆಸ್ಪತ್ರೆಯ ಐಸಿಯುನಲ್ಲಿ ಮಲಗಿ ಅಸಹಾಯಕರಾದವರನ್ನು ಕಂಡಿದ್ದೇವೆ. ತಟ್ಟನೆ ಕುಸಿದು ಸತ್ತವರನ್ನು ಕಂಡಿದ್ದೇವೆ. ಕೋಟ್ಯಾಧೀಶನಾಗಿದ್ದ ರೈಮಂಡ್ ಕಂಪೆನಿಯ ಒಡೆಯನನ್ನು ಅವನ ಮಕ್ಕಳೇ ಉಟ್ಟ ಬಟ್ಟೆಯಲ್ಲಿ ಬೀದಿಗೆ ತಳ್ಳಿದ್ದನ್ನು ಕಂಡಿದ್ದೇವೆ. ನಮ್ಮ ಅನಾಚಾರ, ಪಾಪಗಳಿಗೆ ನಮ್ಮ ಹಿರಿಯರನ್ನು, ಹಿಂದಿನ ತಲೆಮಾರನ್ನು ತಪ್ಪಿತಸ್ಥರು ಎಂದು ನಾವು ಸಾಬೀತುಪಡಿಸಿದರೆ, ನಮ್ಮನ್ನು ಅದೇ ತಟ್ಟೆಯಲ್ಲಿ ತೂಗುವ ಮಂದಿ ನಮ್ಮ ಭವಿಷ್ಯದಲ್ಲಿ ಇರುತ್ತಾರೆ.

ಇರುವಷ್ಟು ಸಮಯ, ಬದುಕಿದಷ್ಟು ದಿನ ನೆಮ್ಮದಿಯಿಂದ ಬದುಕಬೇಕು. ಜೇಬು ತುಂಬಿದಾಗ ಮಾತ್ರ ಅದು ದೊರೆಯದು. ಖಾಲಿ ಜೇಬುಗಳೂ ನೆಮ್ಮದಿ ನೀಡಬಲ್ಲುದು. ಅಸಹಾಯಕರಿಗೆ ಊರುಗೋಲು, ಅಂಧರ ಪಾಲಿನ ಕಣ್ಣು, ಕಿವುಡರ ಕಿವಿಯಾಗಿ. ಹಸಿದವರಿಗೆ ಒಂದು ತುತ್ತು ಅನ್ನ ಕೊಟ್ಟಾಗ ಸಿಗುವ ಸಂತೃಪ್ತಿಯ ಮುಂದೆ ಎಲ್ಲವೂ ನಗಣ್ಯ. ಅಧಿಕಾರ ದೊರೆಯಲಿ, ಸಂಪತ್ತು ಬರಲಿ. ಆದರೆ ಅದು ಮಾನ್ಯವಾಗಿರಲಿ. ಅದರ ಹಿಂದೆ ರಕ್ತದ ಕಲೆಗಳಾಗಲಿ, ಅಶಕ್ತರ ಕಣ್ಣೀರಿನ ಹನಿಗಳಾಗಲಿ ಇಲ್ಲವಾಗಲಿ. ಸಾವಿರಾರು ಮಂದಿಯ ಕಣ್ಣೀರು ಅದರಿಂದ ಶಮನವಾಗಲಿ.

(ಮುಗಿಯಿತು)

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ