ಅಧಿವೇಶನಕ್ಕೆ ಅಡ್ಡಿ ಪಡಿಸುವ ಯತ್ನ ಖಂಡನೀಯ

ಮುಗಿದುಹೋದ ವಿವಾದಗಳನ್ನು ಕೆದಕುವುದು, ಜನರ ಭಾವನೆಗಳನ್ನು ಪ್ರಚೋದಿಸುವುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳಿಗೆ ಅಭ್ಯಾಸವೇ ಆಗಿಹೋಗಿದೆ. ಅಲ್ಲದೆ, ಗಡಿ ವಿವಾದ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ ಎಂಬುದು ಗೊತ್ತಿದ್ದರೂ, ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ.
ಬೆಳಗಾವಿಯಲ್ಲಿ ಸೋಮವಾರ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದೆ. ಪ್ರತಿ ವರ್ಷವೂ ಅಧಿವೇಶನದ ಹೊತ್ತಲ್ಲಿ ಅಡ್ಡಿ ಉಂಟುಮಾಡಲು, ಉದ್ವಿಗ್ನತೆ ಸೃಷ್ಟಿಸಲು ಎಂಇಎಸ್ ಯತ್ನಿಸುತ್ತಿದೆ. ಆದರೆ, ಈ ಬಾರಿ ವಿಧಾನ ಮಂಡಲದ ಚಳಿಗಾಲ ಅಧಿವೇಶನವನ್ನು ವಿರೋಧಿಸಿ ಎಂಇಎಸ್ ಸೋಮವಾರ ನಡೆಸಲು ಉದ್ದೇಶಿಸಿದ್ದ ಮಹಾಮೇಳಾವ್ ವಿಫಲಗೊಂಡಿದೆ. ಜಿಲ್ಲಾಡಳಿತ ಮಹಾಮೇಳಾವ್ ಕ್ಕೆ ಅನುಮತಿ ನಿರಾಕರಿಸುವ ಮೂಲಕ, ಸಕಾಲಿಕ ಹೆಜ್ಜೆಯನ್ನು ಇರಿಸಿತು. ಆದರೂ, ‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ’ ಎಂದು ಘೋಷಣೆ ಕೂಗುತ್ತ ಸಾಗಿದ್ದ ಎಂಇಎಸ್ ನ ೫೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದರು.
ಎಂಇಎಸ್ ನವರು ಆಗಾಗ ಇಂಥ ಉದ್ಧಟತನ ಪ್ರದರ್ಶಿಸುತ್ತಲೇ ಇರುತ್ತಾರೆ. ‘ದಾಖಲಾತಿಗಳನ್ನು ಮರಾಠಿಯಲ್ಲಿ ಮುದ್ರಿಸಿ ಕೊಡಿ’ ಎಂದು ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಎಂಇಎಸ್ ಸದಸ್ಯರು ಇತ್ತೀಚೆಗಷ್ಟೇ ಒತ್ತಾಯಿಸಿ, ಗದ್ದಲ ಮಾಡಿದ್ದರು. ಕನ್ನಡ ನೆಲದಲ್ಲಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಸದಸ್ಯರು ತನಗೆ ಕನ್ನಡ ಗೊತ್ತಿಲ್ಲವೆಂದು ಹೇಳುತ್ತಿರುವುದೇ ನಾಚಿಕೆಗೇಡು. ಇವರಿಗೆ ಕನ್ನಡ ಗೊತ್ತಿಲ್ಲವೆಂದೇನಿಲ್ಲ. ಕನ್ನಡವನ್ನು, ಕನ್ನಡಿಗರನ್ನು ಅವಮಾನಿಸುವ ಉದ್ದೇಶದಿಂದಲೇ ಹೀಗೆ ಮಾಡುತ್ತಿರುವುದು ಸ್ಪಷ್ಟ. ಇಂತಹ ಉದ್ಧಟತನವನ್ನು ರಾಜ್ಯ ಸರಕಾರ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಧೃಡವಾದ ಆತ್ಮಬಲದಿಂದ ಮಟ್ಟ ಹಾಕಬೇಕು.
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಶಿವಸೇನೆ (ಉದ್ಭವ್ ಠಾಕ್ರೆ ಬಣ) ನೇತಾರ ಆದಿತ್ಯ ಠಾಕ್ರೆ ಈ ವಿವಾದದ ಅಗ್ನಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ‘ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶದ ಕನ್ನಡ ಮತ್ತು ಮರಾಠಿ ಭಾಷಿಕರು ಪರಸ್ಪರ ಸಾಮರಸ್ಯ ಹಾಗೂ ವಿಶ್ವಾಸದಿಂದಲೇ ಬದುಕುತ್ತಿದ್ದಾರೆ. ಆದರೆ, ಎಂಇಎಸ್ ಮತ್ತು ಶಿವಸೇನೆ (ಯುಬಿಟಿ ಬಣ) ರಾಜಕೀಯ ಹಿತಾಸಕ್ತಿಗೋಸ್ಕರ ವಿವಾದವನ್ನು ಜೀವಂತವಾಗಿ ಇರಿಸುವ ಯತ್ನ ಮಾಡುತ್ತಿದೆ. ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಕಿತ್ತೂರು ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಿದರೆ ಇವರಿಗೇನು ತೊಂದರೆ? ಅಧಿವೇಶನದ ಸಂದರ್ಭದಲ್ಲಿ ಕಾನೂನು - ಸುವ್ಯವಸ್ಥೆಗೆ ಧಕ್ಕೆ ಒದಗಿಸುವಂತಹ ಪ್ರಯತ್ನ ಮಾಡುವುದು, ಜನರಲ್ಲಿ ಗೊಂದಲ, ಭಯ ಮೂಡಿಸುವುದು ಅಕ್ಷಮ್ಯ. ರಾಜ್ಯ ಸರ್ಕಾರ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಂಇಎಸ್ ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಅಧಿವೇಶನದ ವೇದಿಕೆಯಿಂದಲೇ ನಿಖರ ಹಾಗೂ ದಿಟ್ಟ ಪ್ರತ್ಯುತ್ತರ ನೀಡಬೇಕು. ಕಾನೂನು ಸುವ್ಯವಸ್ಥೆಯನ್ನು ಭಂಗ ಮಾಡುವ ಪ್ರಯತ್ನ ನಡೆದರೆ, ಅಂಥವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೧೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ