ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್

ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ ಕೆ.ಎಸ್. ನಿಸಾರ್ ಅಹಮದ್ (೮೪) ಇಂದು ನಮ್ಮೊಂದಿಗಿಲ್ಲ. ನಿನ್ನೆ, ೩ ಮೇ ೨೦೨೦ರಂದು ನಮ್ಮನ್ನಗಲಿದರು. (ಜನನ: ೫ ಫೆಬ್ರವರಿ ೧೯೩೬, ದೇವನಹಳ್ಳಿ, ಬೆಂಗಳೂರು ಜಿಲ್ಲೆ)

ನಮ್ಮ “ಸಂಪದ"ದ "ಶ್ರಾವ್ಯ" ವಿಭಾಗದಲ್ಲಿ ಅವರ ಸಂದರ್ಶನ ಲಭ್ಯ (ಸಂಪುಟ ೭). ಆ ಸಂದರ್ಶನವನ್ನು (೪೮ ನಿಮಿಷ) ಇವತ್ತು ಪುನಃ ಕೇಳಿದೆ. ಜನಪ್ರಿಯ ಕವಿಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕನ್ನಡದ ಕಟ್ಟಾಳುವಾಗಿ, ಮಾನವತಾವಾದಿಯಾಗಿ ನಿಸಾರ್ ಅಹಮದರ ವ್ಯಕ್ತಿತ್ವ ಅದರಲ್ಲಿ ಮೂಡಿ ಬಂದಿದೆ.

ಆ ಸಂದರ್ಶನದ ಆರಂಭದಲ್ಲಿಯೇ ಅವರು ಹೇಳಿದ್ದಾರೆ, “ವಿಜ್ನಾನದ ಜೊತೆಯಲ್ಲಿ ಕನ್ನಡ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ಮುಂದುವರಿಯಲು ಆಗಲ್ಲ.” ತಂತ್ರಜ್ನಾನದ ಅಡಿಪಾಯದಿಂದ “ಸಂಪದ" ಬೆಳೆದು ಬಂದಿರುವುದು ಸಿಹಿಸುದ್ದಿ ಎಂದ ನಿಸಾರ್ ಅಹಮದರು ಇದು ಜಗತ್ತಿನ ಕನ್ನಡಿಗರೆಲ್ಲ ಸಂವಾದ ನಡೆಸಲು ವೇದಿಕೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

"ಕವಿಯೊಬ್ಬ ಬೆಳೆಯುತ್ತಲೇ ಇರಬೇಕು. ಹಾಗೆ ಬೆಳೆಯದೆ ಕಾವ್ಯವನ್ನು ಬೆಳೆಸುತ್ತೇನೆ ಅನ್ನೋದು ಮೂರ್ಖತನ” ಎಂಬುದು ಆ ಸಂದರ್ಶನದಲ್ಲಿ ನಿಸಾರರ ನೇರ ನುಡಿ. ಅದೇ ಉಸಿರಿನಲ್ಲಿ ಅವರು ಹೇಳುವ ಇನ್ನೊಂದು ಮಾತು: “(ಸಾಹಿತಿಗಳು) ನಾವೆಲ್ಲರೂ ಒಂದು ಬೃಹತ್ ಶಿಲ್ಪದ ರಚನೆಗೆ ದುಡಿತಿರೋ ಶಿಲ್ಪಿಗಳು ಅಂದುಕೋ ಬೇಕು. ನಮ್ಮಿಂದ ಕೆಲಸ ಮಾಡಿಸ್ತಿರೋನು ಮೇಲೊಬ್ಬನಿದ್ದಾನೆ … ನಾವು ಬರಿತಿರೋದಲ್ಲ, ಕಾವ್ಯದ ಆಂತರಿಕ ಅವಶ್ಯಕತೆ ನಮ್ಮಿಂದ ಬರೆಸುತ್ತಾ ಇದೆ …. ನಮ್ಮೆಲ್ಲರದೂ  ಒಂದು ಟೀಮ್ ವರ್ಕ್. ಟೀಂನಲ್ಲಿ ಎಲ್ಲರೂ ಮುಖ್ಯ." ಎಂತಹ ದೊಡ್ಡ ಮಾತು!

ಹಲವಾರು ವೇದಿಕೆಗಳಲ್ಲಿ, ಕನ್ನಡ ನಾಡಿನಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮ ಆಗಬೇಕು. ಜೊತೆಗೆ ಇಂಗ್ಲೀಷೂ ಬೇಕು ಎಂದು ಪ್ರತಿಪಾದಿಸಿದ ಅವರು, ಆ ಸಂದರ್ಶನದಲ್ಲಿಯೂ ಅದನ್ನೇ ಸ್ಪಷ್ಟ ಪಡಿಸಿದ್ದಾರೆ: “ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಆಗ್ಬೇಕು. ಶಿಕ್ಷಣದಲ್ಲಿ ಎಲ್ಲ ಹಂತದಲ್ಲೂ ಕನ್ನಡವೇ ಮಾಧ್ಯಮ ಆಗಬೇಕು. ಜೊತೆಗೆ, ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲೀಬೇಕು. ಅದನ್ನೂ ಚೆನ್ನಾಗಿ ಕಲೀಬೇಕು - ನಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಆಗುವಷ್ಟು ಕಲೀಬೇಕು. ಇವತ್ತು ಬಹಳಷ್ಟು ಜ್ನಾನ ಇಂಗ್ಲೀಷಿನಲ್ಲಿ ಅಡಕವಾಗಿ ಸಿಗ್ತದೆ - ಅದನ್ನು ಪಡೀಬೇಕು.”

“ಸಂಪದ ಶ್ರಾವ್ಯ" ಸಂದರ್ಶನದ ಮುಕ್ತಾಯದಲ್ಲಿ ನಿಸಾರ್ ಅಹಮದರು ವ್ಯಕ್ತಪಡಿಸಿರುವ ಆಶಯ: “ಕನ್ನಡಿಗರು ನೆಮ್ಮದಿಯಿಂದ ಬಾಳುವಂತಾಗಬೇಕು. ಕನ್ನಡಿಗರು ಸ್ವಾಭಿಮಾನದಿಂದ ಬದುಕಬೇಕು. ಯಾಕೆಂದರೆ ಕನ್ನಡಕ್ಕೆ ದೊಡ್ಡ ಪರಂಪರೆ ಇದೆ. ಬಂಗಾಳಕ್ಕೆ ಹೋಗಿ ಅಲ್ಲಿ ಸೇನಾಪುರ ಕಟ್ಟಿದವರು ನಮ್ಮ "ಸೇನ"ರು. ಹರಪ್ಪಾದಲ್ಲಿಯೂ ಕನ್ನಡದ ಕುರುಹುಗಳು ಸಿಕ್ಕಿವೆ.”

ಕನ್ನಡ ಸಾಹಿತ್ಯ ಸಮ್ಮೇಳನದ (೨೦೦೬, ಶಿವಮೊಗ್ಗ) ಅಧ್ಯಕ್ಷ ಸ್ಥಾನದಿಂದ ನಾಡಿನ ನಾಳೆಗಳು ಹೇಗಿರಬೇಕು ಎಂದು ಸ್ಪಷ್ಟ ಮಾರ್ಗದರ್ಶನ ನೀಡಿದವರು ನಿಸಾರ್ ಅಹಮದರು. ಅವರನ್ನು ೨೦೧೭ರ ನಾಡಹಬ್ಬ ದಸರಾ ಉದ್ಘಾಟನೆಗೆ ಕರ್ನಾಟಕ ಸರಕಾರ ಆಹ್ವಾನಿಸಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಕನ್ನಡನಾಡಿನ ಪರಂಪರೆ ಎಷ್ಟು ಸತ್ವಯುತವಾದದ್ದು ಎಂಬುದನ್ನು ಘೋಷಿಸಿದರು. ಅವರ "ಕುರಿಗಳು ಸಾರ್ ಕುರಿಗಳು" ಕವನ ಪಿಯುಸಿಯಲ್ಲಿ ನನಗೆ ಪಠ್ಯವಾಗಿತ್ತು. ನಿಸಾರರ ವೈಚಾರಿಕತೆಯ ಉನ್ನತಮಟ್ಟಕ್ಕೆ ಪುರಾವೆ ಈ ವಿಡಂಬನಾ ಕವನ.

ನಿಸಾರ್ ಅಹಮದರನ್ನು ೧೯೮೧ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ೨೦೦೩ರಲ್ಲಿ ಅವರಿಗೆ ಸಂದಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ “ನಾಡೋಜ" ಪುರಸ್ಕಾರ. ಅನಂತರ ೨೦೦೫ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಭಾಜನರಾದರು. ಭಾರತ ಸರಕಾರ ೨೦೦೮ರಲ್ಲಿ ಪದ್ಮಶ್ರೀ ನೀಡಿ ಅವರನ್ನು ಪುರಸ್ಕರಿಸಿತು.

ಇಂತಹ ಹಲವಾರು ಪ್ರತಿಷ್ಠಿತ ಪ್ರಶಸ್ತಿ/ ಗೌರವ ಗಳಿಸಿದ್ದರೂ ಅವರಲ್ಲಿ ವಿನಯ ತುಂಬಿ ತುಳುಕುತ್ತಿತ್ತು. ಮೂಡಬಿದರೆಯ ಆಳ್ವಾಸ್ ನುಡಿಸಿರಿ ಕನ್ನಡ ಸಾಹಿತ್ಯ ಸಂಸ್ಕೃತಿ ಹಬ್ಬದ ಅಧ್ಯಕ್ಷರಾಗಿದ್ದ ಅವರು ಮೂರು ದಿನಗಳಲ್ಲಿ ಎಲ್ಲ ಗೋಷ್ಠಿಗಳಿಗೂ ಬಂದು ಭಾಗವಹಿಸುವ ಸೌಜನ್ಯ ಮೆರೆದದ್ದನ್ನು ಕಣ್ಣಾರೆ ಕಂಡಿದ್ದೇನೆ.

ಅವರ ಸಾಹಿತ್ಯ ಕೃಷಿ ಯಾವತ್ತೂ ನಿಂತ ನೀರಾಗಲಿಲ್ಲ. ಗಮನಿಸಿ: “ನಿತ್ಯೋತ್ಸವ" ಕವನ ಸಂಕಲನ ಪ್ರಕಟವಾದದ್ದು ೧೯೭೬ರಲ್ಲಿ. ಇದರ ಕವನಗಳನ್ನು ಒಳಗೊಂಡ “ನಿತ್ಯೋತ್ಸವ" ಕನ್ನಡದ ಪ್ರಪ್ರಥಮ ಸುಗಮ ಸಂಗೀತದ ಕ್ಯಾಸೆಟ್ (ಮೈಸೂರು ಅನಂತಸ್ವಾಮಿಯವರ ಮಾಂತ್ರಿಕ ಸಂಗೀತ ಸಂಯೋಜನೆಯಲ್ಲಿ) ಲೋಕಾರ್ಪಣೆಯಾದದ್ದು ೧೯೭೮ರಲ್ಲಿ. ಇವು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿದವು. ಆದರೂ, ನಂತರ ಅಂತಹ ಕವನಗಳನ್ನು ಇನ್ನಷ್ಟು ಬರೆಯಲು ಅವರು ಆಸಕ್ತಿ ತೋರಲಿಲ್ಲ. ಯಾಕೆಂದರೆ, ಬರೆದದ್ದರಲ್ಲಿ ಹೊಸತನ ಇರಬೇಕೆಂಬುದು ಅವರು ನಿಲುವು; ಪುನರಾವರ್ತನೆ ಅವರಿಗೆ ಇಷ್ಟವಿರಲಿಲ್ಲ.

ಭಾವೈಕ್ಯತೆಯನ್ನು ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸಿದವರು ನಿಸಾರ್ ಅಹಮದ್. “ಧರ್ಮಾಂಧತೆ, ಭಯೋತ್ಪಾದನೆಗೆ ಬಹು ಮುಖ್ಯ ಕಾರಣ ಅಜ್ನಾನ. ನಾನು ಕುರಾನ್ ಓದಿದ್ದೇನೆ; ಹಾಗೆಯೇ ಭಗವದ್ಗೀತೆ ಮತ್ತು ಬೈಬಲ್ ಸಹ. ಎಲ್ಲದರಲ್ಲಿರುವುದೂ ಉದಾತ್ತ ತತ್ವಗಳೇ. ಎಲ್ಲದರ ಗುರಿಯೂ ಸಹಜೀವನ ಮತ್ತು ಮನುಕುಲದ ಹಿತವೇ. ಇದನ್ನು ಎಲ್ಲರೂ ತಿಳಿಯಬೇಕಾಗಿದೆ. ತಿಳಿದವರು ತಿಳಿಯದವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸದ್ವಿದ್ಯೆಯೊಂದೇ ಧರ್ಮಾಂಧತೆಗೆ ಮದ್ದು” ಎಂದು ನಂಬಿ ಬದುಕಿದವರು ನಿಸಾರ್ ಅಹಮದ್ -ಹೀಗೆಂದು ತಮ್ಮ ನುಡಿನಮನದಲ್ಲಿ ನೆನಪು ಮಾಡಿಕೊಂಡಿದ್ದಾರೆ ಅವರ ಒಡನಾಡಿ ಬಿ.ಆರ್. ಲಕ್ಷ್ಮಣ ರಾವ್.

ಕನ್ನಡ ಭಾಷೆ ಎಂದೆಂದಿಗೂ ಉಳಿದೇ ಉಳಿಯುತ್ತದೆ ಎಂದು ನಂಬಿದ ನಿಸಾರ್ ಅಹಮದ್ ಇಂದು ನಮ್ಮೊಂದಿಗಿಲ್ಲ. ಆದರೆ, ಕನ್ನಡವನ್ನು, ಕನ್ನಡ ನಾಡನ್ನು, ಮಾನವ ಬದುಕನ್ನು, ಪ್ರಕೃತಿಯನ್ನು, ವಿಜ್ನಾನವನ್ನು ಸಂಭ್ರಮಿಸಿದ ಅವರ ಕಾವ್ಯಚೇತನ ಸದಾ ನಮ್ಮೊಂದಿಗಿರುತ್ತದೆ. ಅವರು ನಂಬಿದ ಜೀವನಮೌಲ್ಯಗಳಲ್ಲಿ ನಂಬಿಕೆಯಿರುವ ಎಲ್ಲರಿಗೂ ನಿರಂತರ ಪ್ರೇರಣೆ ಒದಗಿಸುತ್ತದೆ.

ಫೋಟೋ ಕೃಪೆ: ಡೆಕ್ಕನ್ ಡೈಜೆಸ್ಟ್