ಅನಕೃ ಆಡಿಯೋ ಬುಕ್ ಬಿಡುಗಡೆಯಾಗಲಿದೆ!

ಅನಕೃ ಆಡಿಯೋ ಬುಕ್ ಬಿಡುಗಡೆಯಾಗಲಿದೆ!

ಬರಹ


    ಕನ್ನಡದ ಬಗ್ಗೆ ಆಸಕ್ತಿಯಿದ್ದು,ಕನ್ನಡದ ಓದಲು ಒದ್ದಾಡಬೇಕಾಗುತ್ತದೆಯೇ?ಅಂತವರಿಗೆಂದು ಖ್ಯಾತ ಸಾಹಿತಿ ಅನಕೃ ಅವರ ಕಾದಂಬರಿ ಸಂಧ್ಯಾರಾಗ ಆಡಿಯೋಬುಕ್ ರೂಪದಲ್ಲಿ ಲಭ್ಯವಾಗಲಿದೆ.ಸಂಭಾಷಣೆಗಳ ರೂಪದಲ್ಲಿ "ಸಂಧ್ಯಾರಾಗ" ಕಾದಂಬರಿಯನ್ನು ಪ್ರಸ್ತುತ ಪಡಿಸುವ ಹೊಸ ಶೈಲಿಯನ್ನಿದರಲ್ಲಿ ಅಳವಡಿಸಲಾಗಿದೆ.ಕಲಾವಿದ ರಾಜಾರಾಮ್ ಮತ್ತು ಕೇಶವರಾವ್ ಅವರ ನಿರ್ದೇಶನದಲ್ಲಿ ಅಪರ್ಣಾ ಅವರು ಆಡಿಯೋಬುಕ್ ಅನ್ನು ನಿರೂಪಿಸಿದ್ದಾರೆ.ಅನಕೃ ಕುಟುಂಬದವರೂ ಧ್ವನಿ ನೀಡಿದ್ದಾರೆ. ಎಂಪಿತ್ರೀ ರೂಪದಲ್ಲಿರುವ ಟ್ರ್ಯಾಕ್‍ಗಳನ್ನು ಕೇಳಲು ಮೂರು ಗಂಟೆ ಸಮಯಾವಕಾಶ ಬೇಕು. ಆಡಿಯೋ ಬುಕ್ ಬೆಲೆ ನೂರೈವತ್ತು ರೂಪಾಯಿಗಳು.ಜುಲಾಯಿ ಕೊನೆಗೆ ಆಡಿಯೋ ಬುಕ್ ಬಿಡುಗಡೆಯನ್ನು ನಿರೀಕ್ಷಿಸಬಹುದು.
ವಿಂಡೋಸ್ ಎಕ್ಸ್‌ಪಿ:ಮೈಕ್ರೋಸಾಫ್ಟ್ ಬಿಟ್ಟರೂ ಜನ ಬಿಡರು
    ಮೈಕ್ರೋಸಾಫ್ಟ್ ಕಂಪೆನಿ ಕಂಪ್ಯೂಟರ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ವಿಸ್ತಾವನ್ನು ತಂದು ವರ್ಷವೇ ಉರುಳಿತು.ಹದಿನಾಲ್ಕು ಕೋಟಿ ಪ್ರತಿ ತಂತ್ರಾಂಶವನ್ನದು ಮಾರಿಯೂ ಆಗಿದೆ.ಹೊಸ ತಂತ್ರಾಂಶ ಲಭ್ಯವಿರುವಾಗ,ಹಳೆಯದನ್ನು ಮುಂದುವರಿಸಲು ಕಂಪೆನಿಗೆ ಯಾವ ಕಾರಣವೂ ಇಲ್ಲ.ಇನ್ನು ಜೂನ್ ಮೂವತ್ತರ ನಂತರ ವಿಂಡೋಶ್ ಎಕ್ಸ್‌ಪಿಯನ್ನು ಕಂಪ್ಯೂಟರಲ್ಲಿ ಅಳವಡಿಸುವುದನ್ನು ನಿಲ್ಲಿಸುವುದಾಗಿ ಕಂಪೆನಿ ಪ್ರಕಟಿಸಿಯೂ ಬಿಟ್ಟಿದೆ.ಇನ್ನೇನಿದ್ದರೂ ವಿಸ್ತಾ ಬಳಸಿ ಎಂದು ಅದರ ಸಲಹೆ. ಆದರೆ ಜನರಿಗೆ ಎಕ್ಸ್‌ಪಿಯೇ ಅಚ್ಚುಮೆಚ್ಚು.ವಿಸ್ತಾ ಮೂರು ಆಯಾಮದ ಅನುಭವ ನೀಡಿದರೂ,ಅದು ಬಯಸುವ ಕಂಪ್ಯೂಟರ್ ಯಂತ್ರಾಂಶ ಬಹಳ ದುಬಾರಿ.ಹಳೆ ಕಂಪ್ಯೂಟರುಗಳಲ್ಲಿ ಅದನ್ನು ಅಳವಡಿಸಲಾಗದು,ಒಂದು ವೇಳೆ ಅಳವಡಿಸಿದರೂ,ಅದು ಆಮೆಗತಿಯಲ್ಲಿ ಕೆಲಸ ಮಾಡುತ್ತದೆ.ಹಾಗಾಗಿ ಹಳೆಯ ಎಕ್ಸ್‌ಪಿಯೇ ಹಳೆ ಪಿಸಿಗಳಲ್ಲಿ ಮುಂದುವರಿದಿದೆ.ಆದರೆ ಮೈಕ್ರೋಸಾಫ್ಟ್‌ಗೆ ಹೊಸ ತಂತ್ರಾಂಶವನ್ನು ಮಾರುವ ತವಕ.ಕೊನೆಗೂ ಎಕ್ಸ್‌ಪಿಯನ್ನು ಹೊಸ ಕಂಪ್ಯೂಟರುಗಳಲ್ಲಿ ಇನ್ನು ಅಳವಡಿಸುವಡಿಸದಿರಲು ಮೈಕ್ರೋಸಾಫ್ಟ್ ಕಂಪೆನಿ ನಿರ್ಧರಿಸಿದೆ.ಆದರೆ ಅನಧಿಕೃತವಾಗಿ ಎಕ್ಸ್‌ಪಿಯು ಮುಂದುವರಿಯುವುದು ಬಹುತೇಕ ನಿಶ್ಚಿತ.ಮುಂದಿನ ಹೊಸ ಆವೃತಿ ವಿಂಡೋಸ್ 7 ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಮುಂದಿನ ವರ್ಷವಷ್ಟೆ.ಹಾಗಾಗಿ ವಿಸ್ತಾ ಒಲ್ಲದವರು ಮೈಕ್ರೋಸಾಪ್ಟಿನ ಹೊಸ ತಂತ್ರಾಂಶಕ್ಕಾಗಿ ಕಾಯುವುದು ಅನಿವಾರ್ಯ.ಉಬುಂಟು,ಮ್ಯಾಂಡ್ರಿವಾ ಅಂತಹ ಲಿನಕ್ಸ್ ವಿತರಣೆಗಳು ಮುಕ್ತವಾಗಿ ಲಭ್ಯವಿದ್ದು,ವಿಂಡೋಸಿನಷ್ಟೇ ಸರಳವಾಗಿವೆ.ವಿಂಡೋಸ್ ವ್ಯವಸ್ಥೆಯಲ್ಲಿರುವ ವೈರಸ್ ಕಾಟವೂ ಲಿನಕ್ಸ್‌ನಲ್ಲಿಲ್ಲ.ಹೀಗಾಗಿ ಕಂಪ್ಯೂಟರನ್ನು ಬಳಸಲು ಲಿನಕ್ಸ್ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶಕ್ಕೆ ಬದಲಾಯಿಸಿಕೊಳ್ಳಲಿದು ಸಕಾಲ.ಹೊಸ ಅನುಭವ ನೀಡುವ ಎಂಬರ್ಥದಲ್ಲಿ ಎಕ್ಸ್‌ಪಿ(eXPerience) ಈಗ ಅವಸಾನದ ಅಂಚಿನಲ್ಲಿದ್ದು eXPiry ಆಗಲಿದೆ!
ಸ್ಮಾರ್ಟ್ ರೊಬೋಟ್smart robot
    ಬಾಂಬು ಪತ್ತೆ ಮತ್ತು ವಿಲೇವಾರಿ ಮಾಡಲು ಜನರನ್ನು ಬಳಸುವುದು ಅಪಾಯಕಾರಿ. ರೊಬೋಟ್‌ಗಳನ್ನು ಇದಕ್ಕೆ  ಬಳಸ ಬೇಕಿದ್ದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಬೇಕು.ಈ ರೊಬೋಟ್‌ಗಳನ್ನು ನಿಸ್ತಂತು ಮಾಧ್ಯಮದ ಮೂಲಕ ನಿಯಂತ್ರಿಸುವಂತಿರಬೇಕು.ರೊಬೋಟ್ ಸುತ್ತ ಇರುವ ವಸ್ತುಗಳನ್ನು ರೊಬೋಟ್ ಚಲಾಯಿಸುವ ವ್ಯಕ್ತಿ ನೋಡಲು ಕ್ಯಾಮರಾ ಅಳವಡಿಸಿರಬೇಕು. ಕಂಪ್ಯೂಟರ್ ಮೂಲಕ ರೊಬೋಟ್ ಅನ್ನು ನಿಯಂತ್ರಿಸುವ ಹಾಗಿರಬೇಕು.ರೊಬೋಟ್ ವಸ್ತುಗಳನ್ನು ಸರಿಸಲು ಶಕ್ತವಿರಬೇಕು.ಅದು ತನ್ನ ಸುತ್ತವಿರುವ ಅಡೆ ತಡೆಗಳನ್ನು ನಿವಾರಿಸಿಕೊಂಡು ಮುಂದುವರಿಯಲು,ದಿಕ್ಕು ಬದಲಿಸಿ ಚಲಿಸುವಂತಿರಬೇಕು.ಈ ರೀತಿ ವಿನ್ಯಾಸಗೊಳಿಸಲು ವಿದ್ಯಾರ್ಥಿಗಳಾದ ಸಂದೇಶ್ ಜೆ ಕೆ ಮತ್ತು ಷಣ್ಮುಖ ಕೆ ಅವರಿಗೆ ಸಾಧ್ಯವಾಗಿದೆ.ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಈ ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ "ಸ್ಮಾರ್ಟ್ ರೊಬೋಟ್"ಗೆ ಹತ್ತು ಸಾವಿರ ರೂಪಾಯಿಗೂ ಅಧಿಕ ವ್ಯಯಿಸಿದ್ದಾರೆ.ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಇದಕ್ಕೆ ಸಹಾಯಧನ ನೀಡಿದೆ.ಕಾಲೇಜಿನ ಪ್ರಾಜೆಕ್ಟ್ ಪ್ರದರ್ಶನದಲ್ಲೂ "ಸ್ಮಾರ್ಟ್ ರೊಬೋಟ್" ಅತ್ಯುತ್ತಮ ಪ್ರಾಜೆಕ್ಟ್ ಎಂದು ಆಯ್ಕೆಯಾಗಿದೆ.ಕಾಲೇಜಿನ ಸಹಪ್ರಾಧ್ಯಾಪಕ ಗೋವರ್ಧನ್ ಹೆಗ್ಡೆಯವರು ಮಾರ್ಗದರ್ಶನ ನೀಡಿದ್ದಾರೆ.
ಸಂಪಾದಕರಿಗೆ ಪತ್ರ ಪ್ರಕಟಿಸುವುದೀಗ ಸುಲಭ
    ವಿಶ್ವದ ಯಾವುದೇ ಜನಪ್ರಿಯ ಪತ್ರಿಕೆಗೆ ನಿಮ್ಮ ಅನಿಸಿಕೆ ಬಗ್ಗೆ ಬರೆಯಬೇಕಿದೆಯೇ?ಪತ್ರಿಕೆಯ ಮಿಂಚಂಚೆ ವಿಳಾಸವನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗಿಲ್ಲವಾದರೆ ಚಿಂತಿಲ್ಲ.http://www.publishaletter.com/ ಅಂತರ್ಜಾಲ ತಾಣದಲ್ಲಿ ಜಗತ್ತಿನ ಯಾವುದೇ ದಿನಪತ್ರಿಕೆ ಮತ್ತು ಆಯ್ದ ನಿಯತಕಾಲಿಕಗಳ ಸಂಪಾದಕರಿಗೆ ನಿಮ್ಮ ಅನಿಸಿಕೆ ಮುಟ್ಟಿಸುವ ವ್ಯವಸ್ಥೆಯಿದೆ.ಅಂತರ್ಜಾಲ ತಾಣದಲ್ಲಿನ ಅವಕಾಶದಲ್ಲಿ ನಿಮ್ಮ ಅನಿಸಿಕೆಯನ್ನು ಟೈಪಿಸಿ,ನೀವು ಪತ್ರ ಕಳುಹಿಸಬೇಕಾದ ಪತ್ರಿಕೆ ಪ್ರಕಟವಾಗುವ ದೇಶವನ್ನು ಆಯ್ಕೆ ಮಾಡಿ,ಪತ್ರಿಕೆಯ ಹೆಸರನ್ನೂ ಆಯ್ದುಕೊಡಿ. "ಸೆಂಡ್" ಗುಂಡಿಯನ್ನು ಕ್ಲಿಕ್ಕಿಸಿ. ಪತ್ರ ರವಾನೆ ಆಗುತ್ತದೆ. ನಿಮ್ಮ ಪತ್ರ ಪತ್ರಿಕೆಯಲ್ಲಿ ಪ್ರಕಟವಾಗಲಿಲ್ಲವೇ?ಚಿಂತಿಲ್ಲ- ಈ ತಾಣವೇ ನಿಮ್ಮ ಪತ್ರವನ್ನು ಜನರಿಗೆ ತಲುಪಿಸುತ್ತದೆ.ನಿಮ್ಮ ಪತ್ರವನ್ನು ತಕ್ಷಣ ಈ ತಾಣದಲ್ಲಿ ಪ್ರಕಟಿಸಬಹುದು-ಇಲ್ಲವೇ ವಾರ ಬಿಟ್ಟು ಪ್ರಕಟಿವಾಗುವಂತೆ ಮಾಡಬಹುದು.ಆಯ್ಕೆ ನಿಮ್ಮದು.ಹಾಗೆಯೇ ಇತರರ ಅನಿಸಿಕೆಗಳನ್ನು ನೀವು ಓದಬಹುದು.ಅವುಗಳಿಗೆ ಪ್ರತಿಕ್ರಿಯಿಸಬಹುದು.
ಬಿಲ್ ಗೇಟ್ಸ್ ನಿವೃತ್ತಿ
    ಮೈಕ್ರೋಸಾಫ್ಟ್ ಕಂಪೆನಿಯ ಸಹಸಂಸ್ಥಾಪಕ ಬಿಲ್ ಗೇಟ್ಸ್ ಹಾವರ್ಡ್ ಕಾಲೇಜಿನ ವಿದ್ಯಾಭ್ಯಾಸಕ್ಕೆ ಬೈ ಹೇಳಿ,ಕಂಪೆನಿಯನ್ನು ಸ್ಥಾಪಿಸಿದ್ದು ಮೂವತ್ತಮೂರು ವರ್ಷ ಹಿಂದೆ.ಈ ಅವಧಿಯಲ್ಲಿ ಕಂಪೆನಿಯನ್ನು ಅಗ್ರಗಣ್ಯ ಕಂಪ್ಯೂಟರ್ ಕಂಪೆನಿಯಾಗಿ ರೂಪಿಸಲು ಬಿಲ್ ಗೇಟ್ಸ್‌ಗೆ ಸಾಧ್ಯವಾಯಿತು.ಜತೆಗೆ ವೈಯುಕ್ತಿಕವಾಗಿ ಐವತ್ತು ಬಿಲಿಯನ್ ಡಾಲರು ಸಂಪತ್ತನ್ನು ಗಳಿಸಿ,ವಿಶ್ವದ ಧನಿಕರಲ್ಲಿ ಓರ್ವನೆಂದು ಪರಿಗಣಿಸಪಟ್ಟ ಬಿಲ್ ಗೇಟ್ಸ್‌ಗೆ ಈಗ ಐವತ್ತೆರಡು ವರ್ಷ.ಮುಂದಿನ ತಿಂಗಳಿಂದ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್‌ ಜತೆ ಸಂಬಂಧ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಸೀಮಿತ.ಇದುವರೆಗೆ ಕಂಪೆನಿಯ ಮುಖ್ಯ ತಂತ್ರಾಂಶ ಕರ್ತೃವೂ ಬಿಲ್ ಗೇಟ್ಸ್ ಆಗಿದ್ದರು.ವಾರಕ್ಕೊಮ್ಮೆ ಅವರು ತಮ್ಮ ಹಳೆಯ ಕಚೇರಿಗೆ ಭೇಟಿ ನೀಡಬಹುದು.ಆದರೆ ಅವರು ಹೆಚ್ಚಾಗಿ ತಮ್ಮ ಗೇಟ್ಸ್ ಫೌಂಡೇಶನ್ ಕಚೇರಿಯಲ್ಲಿ,ವಿಶ್ವದಲ್ಲಿ ಮಲೇರಿಯಾ-ಏಡ್ಸ್ ಪೀಡೆ ನಿವಾರಿಸುವುದು ಹೇಗೆ ಎಂದು ತಲೆ ಕೆಡಿಸಿಕೊಳ್ಳಲಿದ್ದಾರೆ.ಬಯೋಕೆಮಿಸ್ಟ್ರಿಯ ಬಗ್ಗೆಯೂ ಅವರು ಗಮನಹರಿಸಲಿದ್ದಾರೆ.ಆದರೆ ಕಂಪ್ಯೂಟರ್ ತಂತ್ರಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು,ಬಡತನ ನಿರ್ಮೂಲನೆ ಮಾಡುವ ತಂತ್ರಗಳ ಬಗ್ಗೆ ಆದ್ಯತೆ ನೀಡಲು ಬಿಲ್ ಗೇಟ್ಸ್ ನಿರ್ಧರಿಸಿದ್ದಾರೆ.

ashokworld

udayavani

(ಇ-ಲೋಕ-81)(30/6/2008)

*ಅಶೋಕ್‌ಕುಮಾರ್ ಎ