ಅನರ್ಥಕೋಶ ೫

ಅನರ್ಥಕೋಶ ೫

ಬರಹ


ಕುಮಾರ-ಕೆಟ್ಟ ಮನ್ಮಥ ಕು+ಮಾರ
ಕುಮಾರಿ-ಕೆಟ್ಟ ರತಿ ಕು+ಮಾರಿ
ಕುರುಕುಲ-ಕುರುವಿಗೆ ಸಂಬಂಧಿಸಿದ ಕಾಯಿಲೆ ಉದಾ: ಮೊಡವೆ, ಹುಣ್ಣು ಇತ್ಯಾದಿ
ಕುರುಕ್ಷೇತ್ರ-ಕುರು ಹುಟ್ಟಿದ ಸ್ಥಳ
ಕುರುನಾಯಕ-ಕುರು ಆದವರು
ಕುರೂಪ-ಕನ್ನಡಿಯಲ್ಲಿ ಕಾಣುವ ಮುಖ
ಕುಲತಿಲಕ-ಜಾತಿಯ ಚಿನ್ಹೆ
ಕುವರ-ಕೆಟ್ಟ ವರ
ಕುಸುಮ-ಕೆಟ್ಟ ಹೂವು
ಕೇಶರ-ಪುರುಷ ಸಿಂಹಗಳು ತಲೆಗೂದಲನ್ನು ಭುಜದವರೆಗೆ ಬಿಡುವ ಆಧುನಿಕ ಶೈಲಿ. ಇತ್ತೀಚೆಗೆ ಸಿಂಹಿಣಿಗಳೂ ಈ ರೀತಿ ಬಿಡತೊಡಗಿವೆ.
ಕ್ರಾಂತಿ-ಗಂಡಹೆಂಡಿರ ಕೆಲಸ ಅದಲುಬದಲಾಗುವುದು
ಕ್ರಾಂತಿಕಾರ-ಹೆಂಡತಿಯ ಮಾತು ಕೇಳದವನು
ಕ್ರಾಂತಿವೃತ್ತ-ಅಡುಗೆ ಮನೆಯ ಬಾಗಿಲು
ಕ್ರಿಯಾಪದ-ಯಾವುದೇ ಕೆಲಸ ಹೇಳಿ ’ಪ್ಲೀಸ್’ ಎನ್ನುವುದು.
ಕ್ರಿಯಾಲೋಪ-’ಪ್ಲೀಸ್’ ಎಂದು ಹೇಳಿದ ಕೆಲಸಕ್ಕೆ ಸಾರಿ ಎನ್ನುವದು.
ಕ್ರಿಯಾವಂತ-ಕ್ರಿಯೆಯನ್ನು ಕೊರಳಲ್ಲಿ ಧರಿಸಿದವ
ಕ್ಲೇಶ-ಕೇಶ ಉದುರಿದರೆ ಕ್ಲೇಶ
ಕ್ಷಮಾಪಣೆ-ಕ್ಷಮೆಯೆಂದು ಬರೆದುಕೊಂಡ ಪಣೆ. ಉದಾ: ಪಣೆಗಣ್ಣ
ಕ್ಷಾಮ-ಹೆಂಡತಿ ತವರುಮನೆಗೆ ಹೋದಾಗಿನ ಪರಿಸ್ಥಿತಿ.


ಗಂಡಾಂತರ-ಗಂಡನಿಗೂ ಹೆಂಡತಿಗೂ ಮಧ್ಯೆ ಇರುವ ಅಂತರ
ರಂಧರ್ವರು-ಗಂಧವನ್ನು ಪೂಸಿಕೊಂಡವರು
ಗುಟ್ಟು-ಯಾರಿಗೂ ಹೇಳದ ವಿಷಯವನ್ನು ಮತ್ತೊಬ್ಬರಿಗೆ ತಿಳಿಸುವುದು.
ಗುಲಾಬಿ-ಲಾಬಿಗಳಲ್ಲೊಂದು
ಗೂಗೆ-ಕಚೇರಿಗಳಲ್ಲಿ ಪ್ರಾಮಾಣಿಕವಾಗಿ, ನಿಷ್ಠಾವಂತನಾಗಿರುವವ.
ಗೃಹಕೃತ್ಯ-ಆತ್ಮಹತ್ಯೆಗಿಂತ ಕಠಿಣವಾದದ್ದು.
ಗೃಹಸ್ಠ-ವಾನಪ್ರಸ್ಥಕ್ಕೆ ಸಿದ್ಧನಾದವ
ಗೃಹಿಣಿ-ಸಿಂಹಿಣಿಯ ಮತ್ತೊಂದು ರೂಪ
ಗೋಪುರ-ಗೋವುಗಳಿರುವ ಊರು ಗೋ+ಪುರ
ಗ್ರಹಚಾರ-ಗ್ರಹಗಳ ಸೇವಕ
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ