ಅನರ್ಥಕೋಶ ೬

ಅನರ್ಥಕೋಶ ೬

ಬರಹ


ಚಕ್ರಧರ-ದೇವೇಗೌಡರು
ಚರಮಗೀತೆ-ಅಧ್ಯಕ್ಷೀಯ ಭಾಷಣ
ಚಲುವು-ಪ್ರತಿಯೊಬ್ಬರಿಗೂ ಹುಟ್ಟಿದ ೧೫ ವರ್ಷಗಳಲ್ಲಿ ಮಾತ್ರ ಇದು ಕಾಣುವುದು(ಕನ್ನಡಿಯಲ್ಲ್ಲಿ)
ಚಲ್ಲಾಟ-ಚಲ್ಲುವ+ಆಟ = ಇಸ್ಪೀಟ್ ಆಟ
ಚಹಾ-ಎಲ್ಲರೆದುರೇ ಕುಡಿಯಬಹುದಾದ ಸುರೆ
ಚಂಡು-ಕೋಪದಿಂದ ಒದೆಯುವ, ಒಗೆಯುವ ವಸ್ತು
ಚಂದುಟಿ-ಎಲೆ ಅಡಿಕೆ ಹಾಕಿದ ತುಟಿ
ಚಿತ್ತಭ್ರಮೆ-ಹುಚ್ಚಾಸ್ಪತ್ರೆಯಲ್ಲಿರುವವರೆಲ್ಲ ಹುಚ್ಚರೆಂದು ತಿಳಿದವರು
ಚಿತ್ರಗುಪ್ತ-ರಹಸ್ಯವಾಗಿ ಚಿತ್ರಬಿಡಿಸುವವ
ಚಿತ್ರವಧೆ-ಮಾಡರ್ನ್ ಆರ್ಟ್
ಚಿತ್ರವಿಚಿತ್ರ-ಚಿತ್ರಕಲಾ ಪ್ರದರ್ಶನ
ಚಿತ್ರಹಿಂಸೆ-ತಿಳಿಯಲಾಗದ ಚಿತ್ರ
ಚಿರಾಯು-ಪಾಪಿ
ಚಿಲ್ಲರೆ-ನೋಟಿನ ಮರಿ
ಚಿಂತನ-ತಲೆ ಇದ್ದವರ ಯೋಚನೆ, ಇಲ್ಲದವರಿಗೆ ಇದು ಸಂಬಂಧಿಸುವುದಿಲ್ಲ
ಚಟ್ಟ-ಉಸಿರು ನಿಂತಾಗ ಇದನ್ನು ಏರಬಹುದು
ಚತುರ್ಭುಜ- ಕತ್ತಲಲ್ಲಿ ಮಾತ್ರ ಕಾಣಸಿಗುವರು. ಚಿತ್ರಮಂದಿರ, ಪಾರ್ಕಿನಲ್ಲಿ ಮುಂ. ಸ್ಥಳಗಳಲ್ಲಿ ಇವರ ಬೆನ್ನಹಿಂದೆ ಬಳೆಗಳು ಹಾಕಿದ ಮತ್ತೆರಡು ಕೈಗಳು ಇರುವುದರಿಂದ ಇವರನ್ನು ಚತುರ್ಭುಜರು ಎನ್ನುತ್ತಾರೆ.
ಚಪ್ಪಲಿ-ಹುಡುಗಿಯರಿಗೆ ಸೀಟಿ ಹೊಡದಾಗ ಇದನ್ನು ನೋಡಬಹುದು
ಚಪ್ಪಾಳೆ-ಕಾರ್ಯಕ್ರಮಗಳು ಬೇಸರವೆನಿಸಿದಾಗ ಕೇಳಿಬರುವ ಶಬ್ದ
ಚಮತ್ಕಾರ-ಬೆಲೆ ಪಾತಾಳಕ್ಕಿಳಿಯುವುದು, ರಾಜಕಾರಣಿಗಳು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿ ಕೇಳಿದ ಕೆಲಸ ಮಾಡಿಕೊಡುವುದು, ನೌಕರರು ಕಚೇರಿಗಳಲ್ಲಿ ಮುಗುಳ್ನಗುತ್ತ ಕೆಲಸ ಮಾಡಿಕೊಡುವುದು ಮುಂ.
ಚಮತ್ಕೃತಿ-ಚಮತ್+ಕೃತಿ=ಟೇಬಲ್ಲಿನ ಕೆಳಗೆ ಕೊಟ್ಟ ಹಣ ಕ್ಷಣಾರ್ಧದಲ್ಲಿ ಮಾಯವಾಗುವುದು.
ಚಮಚ-ಹೆಂಗಸರ ಆಯುಧಗಳಲ್ಲೊಂದು
ಚಿಣ್ಣ-ಚಣ್ಣ ಹಾಕಲೂ ಬರದ ಸಣ್ಣ ಹುಡುಗ
ಚಿತ್ - ಬೆನ್ನು ಕೆಳಗಾಗಿ ಬೀಳುವುದು-ಹಾಸಿಗೆ ಹಿಡಿಯುವುದು
ಚಿನ್ನ-ಗಂಡಂದಿರ ಬಾಯಿ ಮುಚ್ಚಿಸುವ ಲೋಹ. ಉದಾ: ಮಾತು ಬೆಳ್ಳಿ ಮೌನ ಬಂಗಾರ
ಚೊಕ್ಕಟ-ಅಳಿಯ ಬಂದು ಹೋದ ಮನೆ
ಚೌರ-ಕ್ಷೌರ ಇದನ್ನು ಮಾಡಿಸಿಕೊಳ್ಳಲು ಕ್ಷೌರದಂಗಡಿಗೇ ಹೋಗಬೇಕೆಂದೇನಿಲ್ಲ, ಹೆಂದಿರ ಜೊತೆ ಯಾವುದೇ ಅಂಗಡಿಗೆ ಹೋದರೂ ಸಾಕು
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ