ಅನಾಥನಿಗೊಬ್ಬ ನಾಥ!

ಅನಾಥನಿಗೊಬ್ಬ ನಾಥ!

ಬರಹ

ನನಗೆ ಯಾರಿಲ್ಲ...!? ಯಾರಿಲ್ಲ..!?
ನನ್ನವರು ಎಂಬುವರು ಯಾರಿಲ್ಲ.

ನಾನು ನಾನೇ. ನನಗೆ ನಾನೇ...
ನನಗಾಗಿ ನಾನೇ...ನನ್ನವರು ಎಂಬುವರು ಯಾರಿಲ್ಲ!

ಹಗಲು ನಡೆದಷ್ಟು ಕಾಲ ನನ್ನೊಂದಿಗೇ
ನನ್ನ ಹಿಂದೆ, ಮುಂದೆ, ಕಾಲ ಅಡಿಗೆ ಬಿದ್ದು
ನನ್ನನ್ನೆ ಅನುಸರಿಸಿ ಕಾಲು ಕಾಲಿಗೆ ಸಿಗುತ್ತಾ
ಬರುತ್ತಿರುತ್ತದೆ ನನ್ನದೇ ನೆರಳು!

ಯಾರಿಲ್ಲವೆಂದು ಕೊರಗಬೇಡಾ ನಾನಿದ್ದೇನೆ
ನಿನ್ನ ಜೊತೆಗಾರ ಎಂದು!
ಸಂಜೆಯಾದಲ್ಲಿ..
ನನ್ನ ಹಾಗೆ ಮುದುಡಿ, ಮುದುರಿ ನನ್ನ ಹಿಂದೆ ಕುಳಿತುಬಿಡುತ್ತೆ
ರಾತ್ರಿ ಖಾಲಿ ಹೊಟ್ಟೆಯಲ್ಲಿ ಸುತ್ತಿ ಸುತ್ತಿ ಮಲಗಿದರೆ
ಅದೂ ನನ್ನೊಂದಿಗೆ ತೆಪ್ಪಗೆ ಬಿದ್ದುಕೊಂಡು ಬಿಡುತ್ತೆ
ನನ್ನ ಕೆಳಗೇ ಹಾಸು ಚಾಪೆಯಾಗಿ!
ಹಸಿವು ಬಾಯಾರಿಕೆ ಎನ್ನದೆ ನನಗೆ ಯಾವುದೆ ನೋವು-ತೊಂದರೆ ಕೊಡದೇ!

ನನಗೆ ಯಾರಿಲ್ಲ...!? ಯಾರಿಲ್ಲ..!?

ನನ್ನ ದನಿಗೆ ಮಾರ್ದನಿ ಕೊಡಲು ಯಾರಿಲ್ಲ.
ಇದೆ ಬಿಡಿ, ನನಗೆ ಪ್ರಕೃತಿ, ನನ್ನದೇ ಪ್ರತಿಕೃತಿ!
ನಾ ಎಷ್ಟು ಕಿರುಚಿದರೂ, ಅರಚಿದರೂ
ಅದು ಮಾತ್ರ ಶಾಂತವಾಗಿ, ಮೆದುವಾಗಿ ಮಾರು ನುಡಿಯುತ್ತೆ.

ನನಗೆ ಯಾರಿಲ್ಲ...!? ಯಾರಿಲ್ಲ..!?

ನಾ ಗಹಗಹಿಸಿ ನಕ್ಕರೆ ಅದೂ ನನ್ನ ಹಾಗೆ ನಕ್ಕ ಹಾಗೆ ನಟಿಸುತ್ತೆ!
ನಗುವುದ ಕಲಿಸೋಣ ಎಂದರೆ ನನಗೆ ಬಂದರೆ ಅಲ್ಲವೇ?
ನನ್ನಂಥವರು ಜೀವನವೆಲ್ಲ ನಗಲು ಪ್ರಯತ್ನಿಸಬೇಕು ಅಷ್ಟೆ!
ನಗುವುದರಲ್ಲಿ ‘ಮಾಸ್ಟರ್’ ಆಗಲು ಸಾಧ್ಯವಿಲ್ಲ.

ನನಗೆ ಯಾರಿಲ್ಲ...!? ಯಾರಿಲ್ಲ..!?

ಸಂಕೇತ್ ಗುರುದತ್ತ, ನೇಗಲಾಲ.