ಅನಾಥೆ

ಅನಾಥೆ

ದಿನವೂ ಹಾಡುವ ಅವಳ
ಮಧುರ ಗಾನದ
ಪರದೆಯನು ಸರಿಸಿ
ಒಳಗೆ ಇಣುಕಿ ನೋಡಿದೆ,

ಅಲ್ಲಿಯೇ ನೋಡುತ್ತಿರುವ
ಧೈರ್ಯ ನನ್ನಲ್ಲಿರಲಿಲ್ಲ,
ದೃಷ್ಟಿ ಹೊರತೆಗೆದು 
ದಿಗಂತ ದಿಟ್ಟಿಸಿದೆ,
ಅದರಿಂದಾಚೆಗೆ ಏನು?
ಪ್ರಶ್ನೆ ಕಾಡಿತು,,

ಅವಳ ಹಾಡು
ತನ್ಮಯತೆಯಿಂದ ಕೂಡಿರುತ್ತಿತ್ತು,
ರಾಗದ ಏರಿಳಿತಗಳು 
ಭಾವಕ್ಕೆ ಬೆಸೆದು ಹೊರ ಹೊಮ್ಮುತ್ತಿತ್ತು,
ಅವಳ ಗಾನಕ್ಕೆ 
ಮನಸೋಲದವರು ಯಾರು ಇರಲಿಲ್ಲ,

ಅವಳಿಗೆ ಆ ರಾಗಗಳು ದಕ್ಕಿದ್ದು ಹೇಗೆ?
ಉತ್ತರ ಬೇಕಾದವರು 
ಅವಳ ಗುಡಿಸಿಲನ್ನೊಮ್ಮೆ ಇಣುಕಿ ನೋಡಿ

ರೋಗಬಡಿದ ಅವಳ ತಾಯಿ,
ಕಣ್ಣು ಕಾಣದ ಅವಳ ಮಗು,
ಸರಾಯಿಯಲಿ ಮುಳುಗಿ  
ಕರುಳಿಲ್ಲದೆ ನರಳುವ ಗಂಡ,
ಇನ್ನು ಏನೇನೋ,,,,,,,,,

ಅದೇ,,,, ಅದಕ್ಕಾಗಿಯೇ 

ಅವಳ ಹಾಡಿನ ಪ್ರತಿ 
ದಾಟಿಯಲಿ ಅನ್ನದ ಅಗುಳಿನ 
ಆಸೆಯಿತ್ತು,,,,,,,
ಒಂದು ಅಪಸ್ವರವೂ ಬರುವ ಹಾಗಿಲ್ಲ,
ಒಂದೊಂದು ಅಪಸ್ವರಕ್ಕೆ 
ಒಂದೊಂದು ತುತ್ತು ಕಮ್ಮಿಯಾಗುವುದು,

ದಾರಿಬದಿಯ ಆ ಸ್ವರ, 
ಕೇಳಿಸಿಕೊಂಡು ಮುಂದೆ ಹೋಗುವ ಮುನ್ನ
ಒಂದೆರಡು ಪಾವಲಿ ಹಾಕಿ 
ಹೋಗಬೇಕು,,,,

ಆಕೆ ಆನಾಥೆಯಾಗಬಾರದು,
ನಾವೆಲ್ಲರೂ ಗಟ್ಟಿಯಾಗಿರುವಾಗ.

--ಜೀ ಕೇ ನ 

Comments

Submitted by ಗಣೇಶ Thu, 10/30/2014 - 00:15

ತನ್ಮಯತೆಯಿಂದ ಕೂಡಿದ ಅವಳ ಹಾಡಿನ ಹಿಂದಿನ ನೋವು ಮನ ತಟ್ಟಿತು. ಕವನ ಚೆನ್ನಾಗಿದೆ ನವೀನರೆ.