ಅನಾಥ ಹಕ್ಕಿಯ ಕೂಗು
‘ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ ಕಥನಗಳಾದರೆ ‘ಅನಾಥ ಹಕ್ಕಿಯ ಕೂಗು’ ಎಂಬ ಕೃತಿ ಪತಿ, ಪತ್ನಿ ಮತ್ತು ಮಕ್ಕಳ ಮನಸ್ಸಿನ ತೊಳಲಾಟದ ಬಗ್ಗೆ ಬರೆದಿರುವ ಮನೋವೈಜ್ಞಾನಿಕ ಕಾದಂಬರಿ.
ಗಿರಿಮನೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಿರುವಂತೆ “ ‘ಅನಾಥ ಹಕ್ಕಿಯ ಕೂಗು' ಒಂದು ಮನೋವೈಜ್ಞಾನಿಕ ಕಾದಂಬರಿ. ಹೆತ್ತವರಿದ್ದೂ ತಬ್ಬಲಿಯಾದ ಮಗುವಿನ ಬದುಕು ಸಂಕಟಕ್ಕೆ ಬಿದ್ದರೆ ಅದರ ನೋವು ತಟ್ಟುವುದು ಕೊನೆಗೂ ಹೆತ್ತವರಿಗೇ. ಅದರಲ್ಲೂ ಅಮ್ಮನಿಗೆ ! ಏಕೆಂದರೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಬೆಳೆಸಿದ ಅವಳದೇ ಒಂದು ಭಾಗ ಅದು. ನಂತರದ್ದು ಅದರ ರಕ್ಷಣೆಗೆ ನಿಲ್ಲಬೇಕಾದ ಅಪ್ಪನಿಗೆ ! ಇಬ್ಬರ ಪ್ರೀತಿಯೂ ಸಿಗದೆ ಹೋದರೆ ಮಗುವಿನ ಗತಿ? ‘ಹೆತ್ತವರ ಪ್ರೀತಿ ಇಲ್ಲದೆ ಬೆಳೆದ ಮಗು ಸಮಾಜಘಾತಕರಾಗಬಹುದು' ಎಂದು ಎಚ್ಚರಿಸುತ್ತಾರೆ ಮನಃಶಾಸ್ತ್ರಜ್ಞರು. ’ಬೇರೇನೂ ದಾರಿಯಿಲ್ಲ ; ಬದುಕೇ ಘೋರವಾಗುತ್ತದೆ' ನಾನು ಹೊಡೆಯುತ್ತಲೇ ಇರುತ್ತೇನೆ ; ನೀನು ತಿನ್ನುತ್ತಲೇ ಇರು' ಎನ್ನುವ ಸಂದರ್ಭಗಳ ಹೊರತಾಗಿ ಡಿವೋರ್ಸ್ ಪಡೆದುಕೊಳ್ಳಬೇಕಾದರೆ ನೂರು ಸಲ ಯೋಚಿಸಬೇಕು. ಹಾಗಿಲ್ಲವಾದರೆ ಆಗುವ ಪರಿಣಾಮಗಳ ಬಗ್ಗೆ ಒಂದು ಚಿತ್ರಣ ಇದರಲ್ಲಿ ಸಿಗಬಹುದು. ಎಲ್ಲರಿಗೂ ಹೀಗೇ ಆಗುತ್ತದೆ ಎಂದಲ್ಲ ; ಹೀಗಾಗುವ ಸಾಧ್ಯತೆ ಹೆಚ್ಚು” ಎಂದಿದ್ದಾರೆ.
ಈ ಕಾದಂಬರಿಯಲ್ಲಿ ಅಪ್ಪ ಅಮ್ಮ ಇಬ್ಬರು ಬದುಕಿದ್ದೂ ಅನಾಥ ಹಕ್ಕಿಯಾದದ್ದು ಆಕಾಶ್ ಎಂಬ ಒಂದನೇ ತರಗತಿಯಲ್ಲಿ ಓದುತ್ತಿರುವ ಪುಟ್ಟ ಬಾಲಕ. ಆ ಪುಟ್ಟ ಹುಡುಗನ ಮನಸ್ಸಿನ ವೇದನೆಯನ್ನು ಆತನ ಮೂಲಕವೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಲೇಖಕರು ಮತ್ತು ಈ ಪ್ರಯತ್ನದಲ್ಲಿ ಅವರು ಸಫಲತೆಯನ್ನೂ ಕಂಡಿದ್ದಾರೆ. ‘ಸ್ಟೇಟಸ್'ಗಳೆಂಬ ಕ್ಷುಲ್ಲಕ ಕಾರಣಗಳಿಗಾಗಿ ಡೈವೋರ್ಸ್ ತೆಗೆದುಕೊಳ್ಳುವ ಆಕಾಶ್ ನ ಅಪ್ಪ ಮತ್ತು ಅಮ್ಮ ಇಬ್ಬರೂ ಒಂಟಿಯಾಗಿ ಬಿಡುವ, ಇಬ್ಬರ ಪ್ರೀತಿಯನ್ನೂ ಬಯಸುವ ಆತನ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಅಷ್ಟು ಪುಟ್ಟ ವಯಸ್ಸಿನಲ್ಲಿ ಡೈವೊರ್ಸ್ ಎಂಬ ಪದದ ಬಗ್ಗೆ ತಿಳಿಯದೇ ಇರುವ ಮುಗ್ಧ ಮನಸ್ಸು ಆಕಾಶ್ ನದ್ದು. ಡೈವೊರ್ಸ್ ಆದ ಪ್ರಾರಂಭದ ದಿನಗಳಲ್ಲಿ ಅಮ್ಮನ ಜೊತೆ ಇದ್ದು ಬಿಡುವ ಆಕಾಶ್ ನಂತರದ ದಿನಗಳಲ್ಲಿ ತನ್ನ ಅಪ್ಪ ಹಾಗೂ ಅಮ್ಮ ಮಾಡಿಕೊಳ್ಳುವ ಮರು ಮದುವೆಗಳಿಂದ ಬಹಳ ನೊಂದುಕೊಳ್ಳುತ್ತಾನೆ. ರಾತ್ರಿ ಮಲಗುವಾಗ ಅಮ್ಮ ಬೇಕು ಎಂದು ಬಯಸುವ ಆತನಿಗೆ ಕ್ರಮೇಣ ಒಂಟಿತನವೇ ಬದುಕಾಗುತ್ತದೆ. ಅಪ್ಪ ಹಾಗೂ ಅಮ್ಮನವರು ಅವರ ಎರಡನೇ ಸಂಬಂಧದಲ್ಲಿ ಹುಟ್ಟಿದ ಮಕ್ಕಳನ್ನೇ ಪ್ರೀತಿಸುವ ವಿಚಾರ ಆತನ ಮನಸ್ಸಿಗೆ ಬಹಳ ಘಾಸಿ ಮಾಡುತ್ತದೆ. ಪ್ರತೀ ವರ್ಷ ತರಗತಿಗೆ ಮೊದಲಿಗನಾಗಿರುತ್ತಿದ್ದ ಆಕಾಶ್ ಕ್ರಮೇಣ ಪರೀಕ್ಷೆಯಲ್ಲಿ ಅನುತ್ತೀರ್ಣನಾಗುತ್ತಾನೆ, ಕೆಲವು ಬಾರಿ ಪರೀಕ್ಷೆಯನ್ನೇ ಬರೆಯಲು ಹೋಗುವುದಿಲ್ಲ. ಶಾಲಾ ಮಕ್ಕಳ ಜೊತೆ ಗಲಾಟೆ ಮಾಡುತ್ತಾನೆ.
ಈ ಕಿರಿಕಿರಿಗಳನ್ನು ಗಮನಿಸಿ ಆತನ ಅಪ್ಪ ಕೈಬಿಟ್ಟು, ನೋಡಲೂ ಬಾರದೇ ಇದ್ದರೂ ಆತನ ಅಮ್ಮನದ್ದು ಮಾತೃ ಹೃದಯ. ಆಕೆ ತನ್ನ ಎರಡನೇ ಗಂಡನ ಆಕ್ಷೇಪದ ನಡುವೆಯೂ ಆಕಾಶ್ ನನ್ನು ತನ್ನ ಜೊತೆ ಇರಿಸಿಕೊಳ್ಳುತ್ತಾಳೆ. ಈ ನಡುವೆ ಆಕಾಶ್ ಬಹುವಾಗಿ ಇಷ್ಟ ಪಡುವ, ನಂಬುವ ಆತನ ಶಾಲೆಯ ಹತ್ತಿರದ ಅಂಗಡಿಯ ಅಂಕಲ್ ಆತನಿಗೆ ನೀಡುವ ಡ್ರಗ್ಸ್ ಭರಿತ ಚಾಕಲೇಟ್ ಆತನ ಜೀವನವನ್ನೇ ಬದಲಾಯಿಸುತ್ತದೆ. ಡ್ರಗ್ಸ್ ಸೇವಿಸಿ ರಾತ್ರಿಯಿಡೀ ಚೆನ್ನಾಗಿ ನಿದ್ರೆ ಮಾಡಿ ಕನಸಿನ ಲೋಕದಲ್ಲಿ ತೇಲಾಡುವ ಆಕಾಶ್ ಅದಿಲ್ಲದೇ ಹೋದರೆ ಚಡಪಡಿಸುತ್ತಾನೆ. ಅದನ್ನು ಖರೀದಿಸಲು ಬೇಕಾದ ಹಣಕ್ಕಾಗಿ ಮನೆಯಲ್ಲಿ ಕಳ್ಳತನ ಮಾಡುತ್ತಾನೆ ಮತ್ತು ಸಿಕ್ಕಿ ಬೀಳುತ್ತಾನೆ. ಇದರಿಂದಾಗಿ ಆತ ತನ್ನ ಅಮ್ಮನ ವಿಶ್ವಾಸವನ್ನೂ ಕಳೆದುಕೊಳ್ಳುತ್ತಾನೆ.
ಶಾಲೆಯಲ್ಲಿ ಉಳಿದ ಮಕ್ಕಳ ಹಾಗೂ ತನ್ನ ಮಲ ತಂಗಿಯ ಜೊತೆ ಜಗಳ ಮಾಡಿಕೊಳ್ಳುವ ಆಕಾಶ್ ಅಲ್ಲಿಂದಲೂ ಹೊರ ಹಾಕಿಸಿಕೊಂಡು ಬೇರೆ ಶಾಲೆ, ಹಾಸ್ಟೆಲ್ ಸೇರಿಕೊಳ್ಳುತ್ತಾನೆ. ಅಲ್ಲೂ ಡ್ರಗ್ಸ್ ಹೊಂದಿರುವ ಮಾತ್ರೆ ಸೇವಿಸಲು, ಅದಕ್ಕೆ ಬೇಕಾದ ಹಣ ಹೊಂದಿಸಲು ಪ್ರಯತ್ನಿಸುತ್ತಾನೆ. ಇದಕ್ಕಾಗಿ ತನ್ನ ಮಲ ತಮ್ಮನ ಚಿನ್ನದ ಸರವನ್ನು ಕದಿಯುತ್ತಾನೆ. ಮುಂದೇನಾಗುತ್ತದೆ ಗೊತ್ತೇ? ತಿಳಿಯಲು ನೀವು ಅವಶ್ಯವಾಗಿ ಈ ಕಾದಂಬರಿಯನ್ನು ಓದಲೇ ಬೇಕು. ಆಕಾಶ್ ತನ್ನ ಡ್ರಗ್ಸ್ ಸೇವನೆಯ ಚಟದಿಂದ ಮುಕ್ತನಾಗುತ್ತಾನೆಯೇ? ಶಾಲೆಯಲ್ಲಿ ಕಳೆದುಕೊಂಡಿದ್ದ ಗೌರವನ್ನು ಮತ್ತೆ ಸಂಪಾದಿಸುತ್ತಾನೆಯೇ? ಆತನ ಅಪ್ಪ, ಅಮ್ಮ ಮತ್ತೆ ಒಂದಾಗುತ್ತಾರೆಯೇ? ಅವರ ಪ್ರೀತಿ ಆತನಿಗೆ ಮತ್ತೆ ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಈ ಕಾದಂಬರಿಯಲ್ಲಿ ಒಂದು ಬಹು ಮುಖ್ಯವಾದ ಪಾತ್ರ ‘ಅಂಕಲ್' ಬರುತ್ತಾರೆ. ಅವರು ಯಾರು? ಇವೆಲ್ಲಾ ಪ್ರಶ್ನೆಗಳಿಗೆ ನಿಮಗೆ ಉತ್ತರ ಬೇಕಾದರೆ ಖಂಡಿತವಾಗಿಯೂ ನೀವು ಈ ಕಾದಂಬರಿಯನ್ನು ಓದಲೇ ಬೇಕು.
ಬಹು ಮುಖ್ಯವಾಗಿ ಸಂಸಾರದಲ್ಲಿನ ಸಣ್ಣ ಪುಟ್ಟ ಘಟನೆ, ಕಿರಿಕಿರಿ, ಸಮಸ್ಯೆಗಳಿಗೆ ಡೈವೋರ್ಸ್ ತೆಗೆದುಕೊಳ್ಳಲು ಹೊರಡುವ ದಂಪತಿಗಳು ತಮ್ಮ ಮಕ್ಕಳ ಬಗ್ಗೆ ಆಲೋಚನೆ ಮಾಡುವುದಿಲ್ಲ, ಮಕ್ಕಳು ಸಣ್ಣವರಿರುವಾಗ ಅವರಿಗೆ ತಮ್ಮ ಅಪ್ಪ ಅಮ್ಮಂದಿರೇ ಸೂಪರ್ ವ್ಯಕ್ತಿಗಳಾಗಿರುತ್ತಾರೆ. ಈ ಕಾರಣದಿಂದ ಅವರನ್ನು ಬಹುವಾಗಿ ಹಚ್ಚಿಕೊಂಡಿರುತ್ತಾರೆ. ಅವರಿಬ್ಬರೂ ಪರಸ್ಪರ ದೂರವಾಗುವಾಗ ಈ ಮಗುವಿನ ಮನಸ್ಸಿನ ಮೇಲೆ ಪ್ರತಿಕೂಲವಾದ ಪರಿಣಾಮವುಂಟಾಗುತ್ತದೆ. ಅದಕ್ಕಾಗಿ ಡೈವೋರ್ಸ್ ತೆಗೆದುಕೊಳ್ಳುವ ಮೊದಲು ನೂರು ಸಲ ಆಲೋಚನೆ ಮಾಡಬೇಕು ಎಂದ ಸ್ಪಷ್ಟ ಸಂದೇಶವನ್ನು ಈ ಕಾದಂಬರಿ ನೀಡುತ್ತದೆ.
ವಿವೇಚನೆ ಇಲ್ಲದೆ ಒಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದ ದಂಪತಿಯ ಮಗು ಈ ಸಮಾಜದಲ್ಲಿ ಏನೆಲ್ಲಾ ಕಷ್ಟ ಅನುಭವಿಸಬೇಕಾಗಿ ಬರುತ್ತದೆ ಎಂಬ ಚಿತ್ರಣವನ್ನು ಈ ೧೫೨ ಪುಟಗಳ ಪುಟ್ಟ ಕಾದಂಬರಿ ನೀಡುತ್ತದೆ. ಈ ಕಾದಂಬರಿಯಲ್ಲಿ ಪುಟ್ಟ ಹುಡುಗ ಆಕಾಶ್ ನ ಮನಸ್ಸಿನ ಮಾತುಗಳನ್ನು ಬಹಳ ಸ್ಪಷ್ಟವಾಗಿ ಓದುಗರ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಗಿರಿಮನೆಯವರು. ಈ ಕಾರಣದಿಂದ ಅವರು ಅಭಿನಂದನಾರ್ಹರು.