ಅನಾಮಿಕಾ..

ಅನಾಮಿಕಾ..


 

ನಾನು ಆಗಿನ್ನು ಸೆಕೆಂಡ್ ಪಿಯುಸಿ. . . ಚಿಗುರು ಮೀಸೆ ಮುಖದ ಮೇಲೆ ರಾರಾಜಿಸ್ತಾ ಇತ್ತು. ಮನಸಿನಲ್ಲಿ ದಿನನಿತ್ಯ ಹೊಸಹೊಸ ಆಲೋಚನೆಗಳು ಬಂದು ಮೈಮನಗಳಿಗೆ ಮುದ ನೀಡ್ತಾ ಇತ್ತು. ಅಪ್ಪ ಮಾತ್ರ, ದಿನವೂ,  ಏ . . ಚೆನ್ನಾಗಿ ಓದೋ..ಒಳ್ಳೆ ಮಾರ್ಕ್ಸ್ ತೆಗೆಯೋ ಮುಟ್ಟಾಳಾ. ಇಲ್ಲಾಂದ್ರೆ ನಿಂಗೆ ಇಂಜಿನಿಯರಿಂಗ್ ಸೀಟ್ ಸಿಕ್ಕಲ್ಲ ..ನಾನ್ ಮಾತ್ರ ಒಂದ್ ಪೈಸೆ ಖರ್ಚು ಮಾಡಲ್ಲ ಅಂತಾ, ಫ಼ೈನಲ್ ವರ್ಡಿಕ್ಟ್ ಕೊಟ್ಟಿದ್ರು.. ಹೊಸ ಗೆಳೆಯರ ಸಂಗ, ಟ್ಯುಷನ್ , ಕಾಲೇಜು , ನನ್ನ ಹೊಸ ಹೊಸ ಆಲೋಚನೆಗಳಲ್ಲಿ ನಾನ್ ಮಾತ್ರಾ ಆರಾಮಾಗಿದ್ದೆ..

 

ಎಲ್ಲಿತ್ತೋ ಆ ಕಣ್ಣುಗಳು ನನ್ನ ಕಣ್ಣಿಗೆ ಆ ದಿನ ಬಿದ್ದೇ ಬಿಟ್ಟಿತು. ನಿಂತಲ್ಲೇ ಭೂಮಿಯಿಂದ ನನ್ನ ಮೈ ಗುರುತ್ವಾಕರ್ಷಣ ಬಲವನ್ನೇ ಕಳೆದುಕೊಂಡಿದೆ ಅನ್ನೋ ಭಾವ! ಕಣ್ಣೆರೆಪ್ಪೆ ಮುಚ್ಚೋಣ ಅಂದ್ರೆ , ಅವು ನನ್ನ ಮಾತು ಕೇಳ್ತಿಲ್ಲ.. ಹೃದಯ , ಒಂಥರ ನಮ್ಮ ಹಳ್ಳಿಲಿರೋ ಸರ್ಕಾರಿ ಶಾಲೆ ಘಂಟೆ ಹಾಗೆ ಜೋರಾಗಿ ಬಡ್‌ಕೊಳ್ತಾನೇ ಇತ್ತು.. ನಮ್ಮ ಪಕ್ಕದ ಮನೆಗೆ ಬಂದಿದ್ಲು ಆ ರೂಪಸಿ. ಸುಮಾರು ಇಪ್ಪತ್ತಮೂರು- ಇಪ್ಪತ್ತ್ನಾಲ್ಕು ಇರಬೇಕು ಅವಳ ವಯಸ್ಸು. ನನಗಿಂತ ಏಳೇಂಟು ವರ್ಷ ದೊಡ್ಡವಳು..!

ಆದ್ರೆ ನಾನ್ ಮಾತ್ರ ಯಾವುದರ ಪರಿವೆಯೇ ಇಲ್ಲದೇ ಅವಳಲ್ಲಿ ಪೂರ್ಣವಾಗಿ ಮಗ್ನನಾದೆ.

ಆ ದೇವ್ರಿಗೆ ನನ್ ಮೇಲೆ ಅದೆಲ್ಲಿಯ ಪ್ರೀತಿಯೋ ಏನೋ.. ನನ್ನ ರೂಮಿನ ಕಿಟಕಿಗೆ ಎದುರಾಗಿಯೇ ಅವಳ ರೂಮ್ ಇತ್ತು! ಓದುವ ನೆಪದಲ್ಲಿ ದಿನನಿತ್ಯ ಕಿಟಕಿಯ ಬಳಿಯೇ ಟೇಬಲ್ ಹಾಕಿಕೊಂಡು ಕೂತುಕೊಳ್ಳುವೆ. ನೋಟ ಯಾವಾಗ್ಲೂ ಅತ್ತಲೇ..

ಆದ್ರೆ ಆಕೆ ಮಾತ್ರ ಇತ್ತ ಒಮ್ಮೆಯೂ ನೋಡುತಿರಲಿಲ್ಲ.. ಅವಳ ಕಣ್ಣಲ್ಲಿ ಅದೇನೋ ಹುಡುಕಾಟ.. ಯಾವುದೇ ಅಲಂಕಾರ ಇಲ್ಲದೇ , ಶೃಂಗಾರವಿಲ್ಲದೇ ಇದ್ರೂ ಅದ್ಭುತ ಸುಂದರಿಯಾಗಿದ್ದಳು ಅವಳು.. ಮಾತಾಡೋಣ ಅಂದ್ರೆ ಆಕೆ ಮನೆಯಿಂದ ಹೊರಗೆ ಬೀಳುತ್ತಿದ್ದುದೇ ನೋಡಿಲ್ಲ. ಅವಳ ದರ್ಶನಕ್ಕಾಗಿ ಟ್ಯೂಷನ್‌ಗೂ ಚಕ್ಕರ್.. ಕಾಲೇಜು ಬಂಕ್ ಮಾಡೋಕೆ ಶುರು ಮಾಡಿದೆ..

 

ಅದೊಂದು ದಿನ ಸಂಜೆ, ಆಕೆ ಅದೆಲ್ಲಿಗೋ ಹೊರಟೇ ಬಿಟ್ಟಳು.. ನಾನು ಇನ್ನೇನು ಇದೇ ಚ್ಯಾನ್ಸ್ ಅಂತ , ಮುಖಕ್ಕೆ ಇದ್ದಬಿದ್ದ ಕ್ರೀ ಮೆತ್ತಿಕೊಂಡು, ತಲೆ ಬಾಚಿಕೊಂಡು ಹಿಂಬಾಲಿಸಿಯೇ ಬಿಟ್ಟೆ!

 

ಅವಳಂತೆ ಅವಳ ನಡಿಗೆಯೂ ತುಂಬಾ ಸರಳ, ಸುಂದರವಾಗಿತ್ತು.. ಅವಳು ದೇವಸ್ಥಾನಕ್ಕೆ ಹೋದಾಗ ನಾನು ಹೊರಗೆ ಕುಳಿತು ಅವಳ ಚಪ್ಪಲಿ ಹಾಕಿಕೊಂಡು ಅದರೊಂದಿಗೆ ಮಾತಾಡುತ್ತಾ, ಕೀಟಲೆ ಮಾಡುತ್ತಾ ಕುಳಿತೆ.. !ಆಕೆ ದೇವಸ್ಥಾನದಿಂದ ಹೊರಬಿದ್ದಾಗ ಅವಳ ಮುಖದಲ್ಲಿದ್ದ ಪ್ರಶಾಂತತೆ ನನಗೆ ಇನ್ನು ಹುಚ್ಚನನ್ನಾಗಿಸಿತು. ಅವಳು ಮತ್ತದೆಲ್ಲೋ ಹೊರಟಳು. ಮತ್ತೆ ಆಕೇನ ಹಿಂಬಾಲಿಸಿದೆ.. ಅವಳು ಯಾವುದೋ ಮೂಲೆಲಿ ಇದ್ದ ಪಾರ್ಲರ್‌ಗೆ ಹೋದಳು.. ನಾನು ಇರೋ ಜೋಶ್‌ಗೆ ಒಳಗೇ ಹೋಗೆ ಬಿಡ್ತಾ ಇದ್ದೆ.. ಆದ್ರೆ ಮೇಲೆ ಬರೆದ ಬೋರ್ಡ್ ನೋಡಿ ಅಲ್ಲೆ ನಿಂತೆ.. ಲೇಡಿಜ಼್ ಪಾರ್ಲರ್ , ನಾನಿನ್ನು ಒಳಗೆ ಹೋದ್ರೆ ಚಪ್ಪಲಿ ಏಟೇ ಗತಿ ಅಂತ ಅವಳ ದರ್ಶನಕ್ಕಾಗಿ ಅಲ್ಲೇ ದೂರದಲ್ಲಿದ್ದ ಕಟ್ಟೆ ಮೇಲೆ ಕುಳಿತೆ. ಅರ್ಧ, ಮುಕ್ಕಾಲು ಗಂಟೆ ಆದ್ರೂ ಅವಳು ಮಾತ್ರ ಹೊರ ಬರಲಿಲ್ಲ. ನನಗೋ ಏನೋ ತಳಮಳ.. ಕತ್ತಲು ಬೇರೆ ಆವರಿಸ್ತಾ ಇತ್ತು..ಮನೆಗೆ ಲೇಟಾಗಿ ಹೋದ್ರೆ ಇನ್ನು ಅಪ್ಪ ಪ್ರವಚನ ಶುರು ಮಾಡ್ತಾರೆ.. ಒಂದು ಘಳಿಗೆ ಭಯನೂ ಆಯಿತು.

 

ಅಷ್ಟ್ರಲ್ಲಿ ಬ್ಯೂಟಿ ಪಾರ್ಲರ್ ಬಾಗಿಲು ತೆರೆದೇ ಬಿಡ್ತು. ಯುವತಿ ಒಬ್ಬಳು ಹೊರ ಬಂದಳು.. ಊಹುಂ..ಅವಳಲ್ಲ..ನನ್ನ ಕಣ್ಣು ಇನ್ನೂ ತೀಕ್ಷ್ಣವಾದವು..ಅವಳೇ..ಹದು ಅವಳೇ... ಅವಳ ಬಟ್ಟೆ, ಮುಖ ಎಲ್ಲವೂ ಬದಲಾಗಿತ್ತು! ಒಳ ಹೋಗುವಾಗ ಚೂಡಿದಾರ್ ಹಾಕಿದ್ದ ಅವಳು , ಹೊರ ಬರುವಾಗ ಸ್ಲೀವ್‌ಲೆಸ್ ಬ್ಲೌಸ್ ಹಾಕಿ, ಸೀರೆ ಉಟ್ಟಿದ್ದಳು.. ಭಯಂಕರವಾದ ಮೇಕಪ್ ಮಾಡಿಕೊಂಡು ವಿಚಿತ್ರವಾಗಿ ತೋರುತ್ತಿದ್ದಳು.. ನಾನು ಅವಳನ್ನ ಹಿಂಬಾಲಿಸಿದೆ.. ಅವಳು ಟ್ಯಾಕ್ಸಿಯೊಂದನ್ನ ಕರೆದಳು.. ನಾನೂ ಜೇಬಲ್ಲಿ ಚೆಕ್ ಮಾಡಿದೆ.. ಅಲ್ಪ ಸ್ವಲ್ಪ ಉಳಿಸಿದ್ದ ಪಾಕೇಟ್ ಮನಿ ೩೦ ರೂಪಾಯಿ ಇತ್ತು..ನಾನೂ ಆಟೋ ಕರೆದು ಕುಳಿತು ಅವಳನ್ನ ಹಿಂಬಾಲಿಸಿಯೇ ಬಿಟ್ಟೆ.. ಆಟೋ ನಮ್ಮೂರಿನ ದೊಡ್ಡ ಪಂಚತಾರ ಹೋಟೆಲ್ ಮುಂದೆ ನಿಂತಿತು. ಅವಳು ಇಳಿದು ಒಳಗೆ ಹೋದಳು. ನಾನೂ ಒಳಗೆ ಹೋಗೋಣ ಅಂದ್ರೆ ದಡೂತಿ  ಸೆಕ್ಯುರಿಟಿ ಗಾರ್ಡ್ ನನ್ನನ್ನೇ ಗುರಾಯಿಸುತ್ತಿದ್ದ.  ನಾನು ಭಯದಿಂದ ಅಲ್ಲೇ ನಿಂತೆ.. ಅವಳು ಬರೋದನ್ನೇ ಕಾದೆ.. ಟೈಮ್ ನೋಡ್ದೆ.. ಸರಿಯಾಗಿ ೮.೩೦. ಮನೇಲಿ ಏನಂತಾರೆ ಅನ್ನೋ ಭಯವೂ ನನಗೆ ಆಗ ಅವರಿಸಲಿಲ್ಲ.  ಸರಿಯಾಗಿ ೯.೩೦ ಕ್ಕೆ ಆಕೆ ಹೋರಗೆ ಬಂದಳು. ಆಕೆ ನಿಲ್ಲಿಸಿದ ಟ್ಯಾಕ್ಸಿ ಇನ್ನೂ ಅಲ್ಲೇ ಇತ್ತು.. ಅದನ್ನ ಹತ್ತಿದ ತಕ್ಷಣ, ಒಬ್ಬ ಸೂಟ್ ಹಾಕಿದ್ದ ವ್ಯಕ್ತಿ, ಮ್ಯಾಡಮ್ . .  ಮ್ಯಾಡಮ್. .  ಎಂದು ಅವಳನ್ನ ಹಿಂಬಾಲಿಸಿದ.. ಬಂದವನೇ ಬಿಳಿ ಲಕೋಟೆ ಇಂದ ದುಡ್ಡಿನ ಕಂತೆಯನ್ನ ತೆಗೆದು ಇದನ್ನ ನೀವು ಅಲ್ಲೇ ಮರೆತು ಬಂದಿದ್ರಿ, ಬಾಸ್ ಕೋಡೊಕೆ ತಿಳಿಸಿದ್ರು. ಆಕೆ ಏನೂ ಮಾತಾಡದೇ ಅದನ್ನ ಪಡೆದು ತನ್ನ ಪರ್ಸ್‌ನಲ್ಲಿಟ್ಟು ಕೊಂಡಳು. ನನಗೆ ಅಷ್ಟ್ರಲ್ಲಿ ಇದೆಲ್ಲ ಏನು ನಡೀತಾ ಇದೆ, ಯಾಕೆ, ಹೇಗೆ ಅನೇಕ ಪ್ರಶ್ನೆಗಳು ಮನದಲ್ಲಿ ಸುಳಿಯಿತು. ಟ್ಯಾಕ್ಸಿ ಇನ್ನೇನು ಹೊರಟೇ ಬಿಟ್ಟಿತು. ನಾನು ಏನು ಮಾಡಬೇಕು ಅಂತ ತಿಳಿಯದೇ ಒಂದೊಂದೇ ಹೆಜ್ಜೆ ಇಟ್ಟೆ. ನಾಲ್ಕು ಹೆಜ್ಜೆ ನಡೆದ ಮೇಲೆ, ಗಮನಿಸಿದೆ.. ಟ್ಯಾಕ್ಸಿ ಅಲ್ಲೇ ನಿಂತಿತು. ನನಗೆ ಸ್ವಲ್ಪ ಭಯ ಆಯ್ತು. ಟ್ಯಾಕ್ಸಿ ಬಾಗಿಲು ತೆರೆಯಿತು.. ಆಕೆ ಬಾ ಎಂದಳು.. ನಾನು ಅವಳನ್ನೆ ದಿಟ್ಟಿಸಿದೆ.

ಬಾ, ಕುತ್ಕೋ..ಅಂದಳು..ನಾನು ಏನೂ ಮಾತಾಡದೇ ಕುಳಿತೆ. ಅವಳು ನಿಧಾನಕ್ಕೆ ಮಾತು ಪ್ರಾರಂಭಿಸಿದಳು.

ನಗೋಂತು ನೀನು ದಿನವೂ ನನ್ನನ್ನ ಗಮನಿಸ್ತಾ ಇದ್ದೀಯಾ. ಇವತ್ತು ನನ್ನ ಫ಼ಾಲೋ ಮಾಡಿಕೊಂಡು ಬಂದೆ, ದೇವಸ್ಥಾನನ ಬಳಿ ನನ್ನ ಚಪ್ಪಲಿಗಳೊಂದಿದೆ ಮಾತಾಡುತ್ತಾ ಆಟವಾಡ್ತಾ ಇದ್ದೆ.. ಬ್ಯುಟಿ ಪಾರ್ಲರ್ ಬಳಿ ಬಂದೆ.. ನೋಡು ಅಮಿತ್..!!

ನಾನು ತಕ್ಷಣ..ನಿಮಗೆ ನನ್ನ ಹೆಸರು ಹೇಗೆ ಗೊತ್ತು???

ನನ್ಗೆ ಎಲ್ಲವೂ ಗೊತ್ತು ಅಮೀತ್. ನೀನು ನಿಮ್ಮಪ್ಪ ಅಮ್ಮಂಗೆ ಒಬ್ಬನೇ ಮಗ. ನಿನ್ನನ್ನ ಇಂಜಿನಿಯರ್ ಮಾಡಿಸ್‌ಬೇಕು ಅಂತ ನಿಮ್ಮಪ್ಪ ತುಂಬಾ ಕನಸು ಕಾಣ್ತಿದಾರೆ. ನೀನು ಚೆನ್ನಾಗಿಯೇ ಓದ್ತಿಯಾ.. ಆದ್ರೆ ಇತ್ತೀಚಿಗೆ ಕಾಲೇಜು , ಟ್ಯುಷನ್ ಎಲ್ಲವನ್ನೂ ಮರೆತಿದ್ದಿಯಾ.

ನಾನು ಅವಳನ್ನೇ ಆಶ್ಚರ್ಯದಿಂದ ನೋಡ್ತಿದ್ದೆ. ಅವಳಂತೆ ಅವಳ ಮಾತು , ದ್ವನಿ ತುಂಬಾ ಸುಂದರವಾಗಿತ್ತು.

 

ನೋಡು ಅಮೀತ್, ನನಗೆ ನಿನ್ನ ಭಾವನೆಗಳು ಅರ್ಥ ಆಗುತ್ತೆ. ನೀನಿನ್ನು ತುಂಬಾ ಚಿಕ್ಕವನು. ನೀನು ಚೆನ್ನಾಗಿ ಒದ್ಬೇಕು. ಬೆಳಿಬೇಕು. ಜೀವನದಲ್ಲಿ ಸಾಧನೆ ಮಾಡಬೇಕು. ನನ್ನ ಬಗ್ಗೆ ಯೋಚಿಸೋದನ್ನ ನಿಲ್ಲಿಸು. ಇದ್ರಲ್ಲಿ ನಿನ್ನ ತಪ್ಪೇನೂ ಇಲ್ಲ. ನಿನ್ನ ವಯಸ್ಸೆ ಅಂಥದ್ದು. ಆದ್ರೆ ನಿನಗೆ ಈ ಪ್ರೀತಿ, ಪ್ರೇಮ ಬಗ್ಗೆ ಯೋಚಿಸೊಕೆ ಇನ್ನೂ ತುಂಬಾ ಟೈಮ್ ಇದೆ. ನಾನೂ ನಿನ್ನಷ್ಟು ವಯಸ್ಸಿನಲ್ಲಿರುವಾಗ ಈ ಪ್ರೀತಿ, ಪ್ರೇಮದ ಗುಂಗಿನಲ್ಲಿ ಬಿದ್ದು ಮನೆ ಬಿಟ್ಟು ಬಂದು , ಕಟುಕರ ಕೈಗೆ ಸಿಕ್ಕು ವೇಷ್ಯಾವಾಟಿಕೆಯಲ್ಲಿ ಇಳಿಯಬೇಕಾಯಿತು. ಚಿಕ್ಕ ವಯಸ್ಸಿನಲ್ಲೇ ಅವಳಿಜವಳಿಗೆ ಜನ್ಮ ಕೊಟ್ಟೆ. ಅವರ ಭವಿಷ್ಯ ನನ್ನಂತೆ ಕರಾಳವಾಗಿರಬಾರದು ಅಂತ, ಮತ್ತೆ ನನ್ನ ಜೀವನ ಹಾಳು ಮಾಡಿದ ವೃತ್ತಿಗೆ  ಕಾಲಿಟ್ಟಿದ್ದೀನಿ. ಯಾಕೆ ಗೊತ್ತಾ, ನನಗೆ ವಿದ್ಯಾಭ್ಯಾಸ ಇಲ್ಲ. ನಾನು ಮತ್ತೆ ವಾಪಸ್ ನನ್ನ ಮನೆಗೂ ಹೋಗೊಕೆ ಆಗಲ್ಲ..ನಮ್ಮಪ್ಪ ಅಮ್ಮ ಈಗಾಗ್ಲೇ ನನ್ನಿಂದ ತುಂಬಾ ನೋವು ಅನುಭವಿಸಿದ್ದಾರೆ. ನಾನೂ ಹೋದರೂ ಅವರು ನನ್ನನ್ನ ಮತ್ತೆ ಮನೆ ಸೇರಿಸಲ್ಲ ಅಂತನೂ ನನಗೆ ಗೊತ್ತು.

 

“ ನೀನು ತುಂಬಾ ಒಳ್ಳೆ ಹುಡುಗ ಅಮೀತ್. ಅದ್ರೆ ಒಂದು ಮಾತು ಅಮೀತ್. ಪ್ಲೀಸ್.. .ನೀನು ನಿಜವಾಗ್ಲೂ ನನ್ನ ಇಷ್ಟ ಪಟ್ಟಿದ್ರೆ , ದಯವಿಟ್ಟು ಚೆನ್ನಾಗಿ ಓದು. ನಿಮ್ಮಪ್ಪ ಅಮ್ಮನ ಕನಸು ಈಡೇರಿಸು. ನನ್ನನ್ನ ಸಂಪೂರ್ಣವಾಗಿ ನಿನ್ನ ಮನಸ್ಸಿನಿಂದ ತೆಗೆದು ಹಾಕು. ನನ್ನ ಬಗ್ಗೆ ಯೋಚಿಸಬೇಡ. ನಾನು ನಿನ್ನಗಿಂತ ತುಂಬಾ ದೊಡ್ಡವಳು. ನಿನ್ನ ಅಕ್ಕನ ಹಾಗೆ.. ನಿನ್ನ ನೋಡಿದ್ರೆ ನನ್ನ ತಮ್ಮನ ನೆನಪಾಗುತ್ತೆ.”

ಅವಳು ಮಾತಾಡ್ತಾ ಇದ್ರೆ, ನಾನು ಎಂಥಾ ದೊಡ್ಡ ಪಾಪ ಮಾಡಿದೆ ಅನ್ನೋ ಅಪರಾಧ ಪ್ರಜ್ಞೆ ನನ್ನ ಕಾಡೊಕೆ ಶುರುವಾಯಿತು. ಇವಳು ನಿಜವಾಗಿಯೂ ತುಂಬಾ ಒಳ್ಳೆಯವಳು.

“ಅಮೀತ್ , ಚೆನ್ನಾಗಿ ಓದು. ನಿಮ್ಮಪ್ಪನ ಕನಸಂತೆ ಒಳ್ಲೆಯ ಇಂಜಿನಿಯರ್ ಆಗು. ಅವರ ಕನಸನ್ನ ಈಡೇರಿಸು..ನನ್ನ ಶುಭ ಹಾರೈಕೆ ಸದಾ ನಿನ್ನ ಮೇಲಿರುತ್ತೆ.”

ಅವಳ ಒಂದೊಂದು ಮಾತು ನನ್ನ ಮನಸಿಗೆ ನೇರವಾಗಿ ತಾಕಿತು. ಅಷ್ಟರಲ್ಲಿ ಮನೆ ಬಂದೇ ಬಿಟ್ಟಿತು..ಕಾರ್ ನನ್ನ ಡ್ರಾಪ್ ಮಾಡಿ ಮುಂದೆ ಸಾಗಿತು. ನಾನು ಭಾರವಾದ ಹೆಜ್ಜೆಯೊಂದಿಗೆ ಮನೆ ಸೇರಿದೆ. ನನ್ನ ಅದೃಷ್ಟ! ಅಪ್ಪ ಇನ್ನೂ ಮನೆಗೆ ಬಂದಿರಲಿಲ್ಲ.

ರಾತ್ರಿ ಎಲ್ಲ ನಿದ್ದೆ ಬರ್ಲಿಲ್ಲ. ಅವಳ ಮಾತು ಕಿವಿಯಲ್ಲಿ ಪ್ರತಿಧ್ವನಿಸ್ತಾ ಇತ್ತು. ಮಾರನೇ ದಿನ ಎದ್ದು ಅವಳ ಮನೆಯತ್ತ ನೋಡಿದೆ. ಆದ್ರೆ ಮನೆಗೆ ಬೀಗ ಹಾಕಿತ್ತು. ಛೇ.. ಒಬ್ಬ ನೊಂದಿರೋ ಹೆಂಗಸಿಗೆ ನನ್ನ ಕೆಟ್ಟ ದೃಷ್ಟಿಯಿಂದ ನಾನೂ ಇನ್ನೂ ನೋಯಿಸಿಬಿಟ್ಟೆ ಅಂತ ತುಂಬಾ ನೋವಾಯಿತು.

ಆದ್ರೆ, ಇವತ್ತು ಆಕೆಗೆ ನಾನು ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮಿಯೇ. ಅವಳ ಹೆಸರೂ ನಂಗೆ ಗೊತ್ತಿರಲಿಲ್ಲ.. ಆಕೆ ಆಡಿದ ಮಾತು ಮಾತ್ರ ಬಾಣದಂತೆ ನನ್ನ ಮನಸ್ಸಿಗೆ ತಾಗಿ , ನನಗೆ ತುಂಬಾ ಸ್ಪೂರ್ತಿ ನೀಡಿತು.

 “ರೀ.. ನಿಮ್ಮ ಕೆಲಸ ಆಯಿತಾ?? ಪ್ಲೀಸ್ ಲೈಟ್ ಆಫ಼್ ಮಾಡಿ. ನಿದ್ದೆ ಬರ್ತಾ ಇದೆ. ”

ನನ್ನ ಹೆಂಡತಿ ಕರೆದಾಗ ನಾನು ನನ್ನ ಕನಸಿನ ಲೋಕದಿಂದ ಹೊರ ಬಂದೆ.

ನಾನು ಅದನ್ನ ಸ್ಪೂರ್ತಿಯಾಗಿಟ್ಟು ಕೊಂಡು ಚೆನ್ನಾಗಿ ಓದಿ, ಒಬ್ಬ ಒಳ್ಳೆ ಇಂಜಿನಿಯರ್ ಆಗಿ ಹೆತ್ತವರ ಕನಸು ಈಡೇರಿಸಿದೆ. ಇವತ್ತು ನನ್ನ ಬಳಿ ಎಲ್ಲವೂ ಇದೆ.. ಆದ್ರೆ ಇದೆಲ್ಲಕೂ ಕಾರಣವಾದ ಆ ಅನಾಮಿಕಗೆ ಧನ್ಯವಾದ ಹೇಳೋಣ ಅಂದ್ರೆ, ಆಕೆ ಅದೆಲ್ಲಿರುವಳೋ..

 

ಲೈಟ್ ಆಫ಼್ ಮಾಡಿ , ಮನಸ್ಸಿನಲ್ಲೇ ಆ ಅನಾಮಿಕಾಗೆ ಧನ್ಯವಾದ ಹೇಳಿ ಕಣ್ಮುಚ್ಚಿದೆ.

 

 

Comments