ಅನಾಮಿಕ ಸಾಧಕರಿಗೆ ಪ್ರಶಸ್ತಿಯ ಗರಿ ! (ಭಾಗ ೧)

ಅನಾಮಿಕ ಸಾಧಕರಿಗೆ ಪ್ರಶಸ್ತಿಯ ಗರಿ ! (ಭಾಗ ೧)

೨೦೧೪ಕ್ಕೂ ಹಿಂದೆ ಪದ್ಮ ಪ್ರಶಸ್ತಿಗಳ ಘೋಷಣೆಯಾಗುತ್ತಿದ್ದಂತೆ ಆ ಪಟ್ಟಿಯಲ್ಲಿರುವ ಹೆಸರುಗಳ ಪೈಕಿ ೯೫% ಎಲ್ಲರಿಗೂ ಪರಿಚಯವಿರುವ ಹೆಸರುಗಳೇ ಆಗಿರುತ್ತಿದ್ದವು. ಖ್ಯಾತ ಉದ್ಯೋಗಪತಿಗಳು, ಆಟಗಾರರು, ಚಲನ ಚಿತ್ರ ನಟ/ನಟಿಯರು, ರಾಜಕಾರಣಿಗಳು, ಸಮಾಜಸೇವಕರು ಇವರುಗಳದ್ದೇ ಹೆಸರು ಇರುತ್ತಿತ್ತು. ಇವರೆಲ್ಲಾ ತಮ್ಮ ತಮ್ಮ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆದಿರುತ್ತಿದ್ದರು, ಈ ಕಾರಣದಿಂದ ಜನರಿಗೆ ಚಿರಪರಿಚಿತರಾಗಿರುತ್ತಿದ್ದರು. ಪ್ರಶಸ್ತಿ ಘೋಷಣೆಯಾದ ಬಳಿಕ ಸಣ್ಣ ಪ್ರಮಾಣದ ವಿರೋಧಗಳೂ ಕಂಡು ಬರುತ್ತಿದ್ದವು. ಎಲೆ ಮರೆಯ ಕಾಯಿಗಳು, ಪ್ರಚಾರದ ತೆವಲು ಇಲ್ಲದೇ ಸೇವೆ ಮಾಡಿದವರು, ತಮ್ಮ ಕ್ಷೇತ್ರದಲ್ಲಿ ಮೌನ ಕ್ರಾಂತಿ ಮಾಡಿದವರಿಗೆ ಪದ್ಮ ಪ್ರಶಸ್ತಿಗಳು ಮರೀಚಿಕೆಯಾಗಿಯೇ ಇರುತ್ತಿತ್ತು. 

೨೦೧೪ರಲ್ಲಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಲಾಗುತ್ತಿದೆ ಎನ್ನುವುದು ಕಳೆದ ೮ ವರ್ಷಗಳಿಂದ ಘೋಷಣೆಯಾದ ಪಟ್ಟಿಗಳನ್ನು ಗಮನಿಸುವಾಗ ಅರಿವಾಗುತ್ತದೆ. ಈ ಪಟ್ಟಿಯಲ್ಲಿ ಇರುತ್ತಿದ್ದ ಹೆಸರುಗಳು ನಾವು ಕಂಡು ಕೇಳರಿಯದ್ದೇ ಆಗಿರುತ್ತಿದ್ದವು (ಶೇ ೬೦ರಷ್ಟಾದರೂ). ಕರ್ನಾಟಕದವರೇ ಆದ ‘ಭಾವೈಕ್ಯತೆಯ ಸಂತ' ಇಬ್ರಾಹಿಂ ಸುತಾರ್, ಶಿಕ್ಷಣಕ್ಕಾಗಿ ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ, ವೃಕ್ಷ ಮಾತೆ ತುಳಸೀ ಗೌಡ, ಸಾವಿರಾರು ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ, ನೀರಿಗಾಗಿ ಸುರಂಗ ಕೊರೆದ ಮಹಾಲಿಂಗ ನಾಯ್ಕ ಹೀಗೆ ಅನಾಮಿಕ ಸಾಧಕರ ಪಟ್ಟಿ ಮುಂದುವರಿಯುತ್ತಲೇ ಇದೆ. ಪದ್ಮಶ್ರೀ ಪ್ರಶಸ್ತಿ ದೊರೆತ ಬಳಿಕವೂ ಇವರ ಜೀವನ ಶೈಲಿ ಏನೂ ಬದಲಾಗಿಲ್ಲ. 

ಒಂದೆರಡು ವಾರಗಳ ಹಿಂದೆ ‘ಅಕ್ಷರ ಸಂತ' ಹರೇಕಳ ಹಾಜಬ್ಬನವರನ್ನು ಮಂಗಳೂರು ಪೇಟೆಯಲ್ಲಿ ಬಸ್ ಗಾಗಿ ಕಾಯುತ್ತಿರುವುದನ್ನು ನೋಡಿದಾಗ ನನಗನಿಸಿದ್ದು “ನಿಜಕ್ಕೂ ಪ್ರಶಸ್ತಿ ಸರಿಯಾದ ವ್ಯಕ್ತಿಗೇ ಕೊಟ್ಟಿದ್ದಾರೆ" ಎಂದು. ದಶಕದ ಹಿಂದೆ ಕಿತ್ತಳೆ ಮಾರುತ್ತಿದ್ದಾಗ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಅದೇ ಸರಳ ಉಡುಪು, ಚಪ್ಪಲಿ ಇಲ್ಲದ ಬರಿಗಾಲು, ಮುಖದಲ್ಲಿ ಮುಗ್ಧ ನಗು ಎಲ್ಲವೂ ಹಾಗೇ ಇದೆ. ಇಂತಹ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಆ ಪ್ರಶಸ್ತಿಯ ಗೌರವ ಹೆಚ್ಚಾಗುವಂತೆ ಮಾಡಿದೆ ಕೇಂದ್ರ ಸರಕಾರ. 

೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಯು ಕಳೆದ ಜನವರಿ ೨೫ರಂದು ಘೋಷಣೆಯಾಗಿದೆ. ಈ ಪಟ್ಟಿಯನ್ನು ಗಮನಿಸುವಾಗಲೂ ನನಗೆ ಅನಿಸಿದ್ದು ಈ ವರ್ಷವೂ ಸರಿಯಾದ ಆಯ್ಕೆ ನಡೆದಿದೆ ಎಂದು. ಆದರೆ ಪಟ್ಟಿಯಲ್ಲಿರುವ ಸುಮಾರು ೩೦-೪೦ ಹೆಸರುಗಳನ್ನು ಗಮನಿಸಿದಾಗ ಇವರ ಬಗ್ಗೆ ನಮಗೆ ಎಳ್ಳಷ್ಟೂ ಮಾಹಿತಿ ಇಲ್ಲವಲ್ಲ ಎಂದು. ನಮ್ಮದೇ ರಾಜ್ಯದ ರಾಣಿ ಮಾಚಯ್ಯ, ಮುನಿ ವೆಂಕಟಪ್ಪ, ಎಸ್ ಸುಬ್ಬರಾಮನ್ ಬಗ್ಗೆ ನಮಗೆಷ್ಟು ತಿಳಿದಿತ್ತು? ಜನವರಿ ೨೫ಕ್ಕೆ ಮೊದಲು ‘ಗೂಗಲ್ ಬಾಬಾ’ ನಿಗೂ ಮಾಹಿತಿ ತಿಳಿಯದೇ ಇದ್ದ ಹಲವಾರು ಸಾಧಕರು ಈಗ ಬೆಳಕಿಗೆ ಬಂದಿದ್ದಾರೆ. ಅವರಲ್ಲಿ ಕೆಲವರ ಪುಟ್ಟ ಪರಿಚಯ ಇಲ್ಲಿದೆ.

ಹೀರಾಬಾಯಿ ಲೋಬಿ (ಗುಜರಾತ್) : ೬೨ ವರ್ಷ ಪ್ರಾಯದ ‘ಸಿದ್ಧಿನಿ ಶಕ್ತಿ' ಎಂಬ ಖ್ಯಾತಿಯನ್ನು ಪಡೆದ ಹೀರಾಬಾಯಿ ಲೋಬಿ ಇವರು ತಮ್ಮ ಸಮಾಜಸೇವೆಗಾಗಿ ಪದ್ಮಶ್ರೀಯನ್ನು ಪಡೆದಿದ್ದಾರೆ. ಸಿದ್ಧಿ ಬುಡಕಟ್ಟು ಜನಾಂಗಕ್ಕೆ ಸೇರಿದ ಹೀರಾಬಾಯಿ ಈ ಜನಾಂಗದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರು ಸಿದ್ದಿ ಬುಡಕಟ್ಟಿನ ಮಕ್ಕಳಿಗಾಗಿ ಹಲವಾರು ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದಾರೆ. ಮಹಿಳೆಯರಲ್ಲಿ ಆತ್ಮಾಭಿಮಾನ ಮೂಡಿಸುವ ನಿಟ್ಟಿನಲ್ಲಿ ‘ಮಹಿಳಾ ವಿಕಾಸ್ ಮಂಡಲ್' ಸ್ಥಾಪನೆ ಮಾಡಿದ್ದಾರೆ. ಬಾಲ್ಯದಲ್ಲೇ ತಮ್ಮ ಹೆತ್ತವರನ್ನು ಕಳೆದುಕೊಂಡ ಹೀರಾಬಾಯಿ ಕಷ್ಟಗಳನ್ನು ಮೆಟ್ಟಿನಿಂತು ಎಲ್ಲರಿಗೂ ಸ್ಪೂರ್ತಿಯಾಗುವಂತೆ ಬೆಳೆದಿದ್ದಾರೆ. (ಚಿತ್ರ ೧)       

ಪಿ.ವಿ.ಅಪ್ಪುಕುಟ್ಟನ್ ಪೊದುವಾಲ್ (ಕೇರಳ): ೯೯ ವರ್ಷದ ಅಪ್ಪುಕುಟ್ಟನ್ ಅವರನ್ನು ‘ಕಣ್ಣೂರಿನ ಗಾಂಧಿ' ಎಂದೇ ಕರೆಯುತ್ತಾರೆ. ಕೇರಳದ ಪೈಯನೂರು ನಿವಾಸಿಯಾದ ಇವರು ಅಪ್ಪಟ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರು. ೧೯೪೨ರ ‘ಬ್ರಿಟೀಷರೇ, ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಳೆದ ೮೦ ವರ್ಷಗಳಿಂದ ಸಮಾಜದ ದೀನ ದುರ್ಬಲರ ಏಳಿಗೆಗಾಗಿ ಶ್ರಮವಹಿಸುತ್ತಿದ್ದಾರೆ. ಈಗಲೂ ಖಾದಿ ಬಟ್ಟೆಯನ್ನೇ ಧರಿಸುವ ಇವರು ಉತ್ತಮ ಸಂಗೀತ ವಿದ್ವಂಸರೂ ಹೌದು. (ಚಿತ್ರ ೨)

ರೈಸಿಂಗ್ಟೋರ್ ಕುರ್ಕಲಾಂಗ್ (ಮೇಘಾಲಯ): ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ನ ಕುರ್ಕಲಾಂಗ್ ಎಂಬ ವ್ಯಕ್ತಿ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಇವರು ದುಯಿತಾರಾ ಎಂಬ ಅಪರೂಪದ ವಾದ್ಯ ತಯಾರಕರು. ಇದು ನಾಲ್ಕು ತಂತಿಗಳ ಖಾಸಿ-ಜೈನ್ತಿಯಾ ಸಂಗೀತ ವಾದ್ಯವಾಗಿದ್ದು, ಹಲಸಿನ ಮರ ಮತ್ತು ಮುಗ ರೇಷ್ಮೆ ಬಳಸಿ ನಿರ್ಮಿಸಲಾಗಿದೆ. ಇವರ ಸಂಗೀತವನ್ನು ಕೇಳಿದವರು ಇವರನ್ನು ‘ಮಾಸ್ಟರ್ ಆಫ್ ದುಯಿತಾರಾ’ ಎಂದೇ ಕರೆಯುತ್ತಾರೆ. ಇವರು ಈಗ ಪ್ರಪಂಚದಾದ್ಯಂತ ಸಂಗೀತ ವಾದ್ಯಗಳಾದ ಸೈತಾರ್ ಮತ್ತು ದುಯಿತಾರಾಗಳನ್ನು ಜನಪ್ರಿಯಗೊಳಿಸುವ ಕಾಯಕಕ್ಕೆ ಇಳಿದಿದ್ದಾರೆ. (ಚಿತ್ರ ೩)

ರಾಮ್ಕುಯಿವಾಂಬೆ ಜೇನೆ (ಅಸ್ಸಾಂ) : ಸಮಾಜಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಜೇನೆ ಅವರಿಗೆ ಈಗ ೭೫ರ ಹರೆಯ. ಇವರು ‘ಹರಕ' ಎಂಬ ಧರ್ಮದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇದಕ್ಕಾಗಿ ಜಾಗೃತಿ ಶಿಬಿರಗಳು, ಕಾರ್ಯಕ್ರಮಗಳ ಮುಖಾಂತರ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಈ ಮೂಲಕ ಹರಕ ಧರ್ಮ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದಾರೆ. ಸುಮಾರು ೧೦ಕ್ಕೂ ಅಧಿಕ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಹಲವಾರು ಮಹಿಳೆಯರಿಗೆ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹ ನೀಡಿದ್ದಾರೆ. (ಚಿತ್ರ ೪)

ಡಾ. ಮುನೇಶ್ವರ್ ಚಂದ್ದಾವರ್ (ಮಧ್ಯಪ್ರದೇಶ): ವೈದ್ಯಕೀಯ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದ ಮುನೇಶ್ವರ್ ಚಂದ್ದಾವರ್ (೭೬ ವರ್ಷ) ಇವರು ೨ ರೂ. ವೈದ್ಯರೆಂದೇ ಖ್ಯಾತಿಯನ್ನು ಪಡೆದವರು. ೨೦೧೦ರ ವರೆಗೆ ತಮ್ಮಲ್ಲಿ ಚಿಕಿತ್ಸೆಗೆಂದು ಬರುತ್ತಿದ್ದ ರೋಗಿಗಳ ಬಳಿ ಕೇವಲ ೨ ರೂ. ಅನ್ನು ಪಡೆದುಕೊಳ್ಳುತ್ತಿದ್ದರು. ನಂತರ ಈಗ ೨೦ ರೂ ಪಡೆದುಕೊಳ್ಳುತ್ತಿದ್ದಾರೆ. ಕಳೆದ ೫೦ ವರ್ಷಗಳಿಂದ ದೀನ ದುರ್ಬಲರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದ್ದಾರೆ. ಇವರು ೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದ ಸಮಯದಲ್ಲಿ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ನೂರಾರು ಮಂದಿ ಗಾಯಳುಗಳಿಗೆ ಚಿಕಿತ್ಸೆಯನ್ನು ನೀಡಿ ಗುಣಮುಖರನ್ನಾಗಿಸಿದ್ದಾರೆ. (ಚಿತ್ರ ೫)

(ಇನ್ನುಳಿದ ಕೆಲವು ಸಾಧಕರ ಕಿರು ಪರಿಚಯ ನಾಳೆ)

ಚಿತ್ರ ಕೃಪೆ: ಅಂತರ್ಜಾಲ ತಾಣ