ಅನಾಮಿಕ ಸಾಧಕರಿಗೆ ಪ್ರಶಸ್ತಿಯ ಗರಿ ! (ಭಾಗ ೨)

ಅನಾಮಿಕ ಸಾಧಕರಿಗೆ ಪ್ರಶಸ್ತಿಯ ಗರಿ ! (ಭಾಗ ೨)

೨೦೨೩ರ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತಷ್ಟು ಎಲೆಮರೆಯ ಕಾಯಿಗಳಂತಿರುವ ಸಾಧಕರ ಪುಟ್ಟ ಪರಿಚಯ ಇಲ್ಲಿದೆ. 

ರತನ್ ಚಂದ್ರ ಕಾರ್ (ಅಂಡಮಾನ್): ಅಂಡಮಾನ್ ನಿವಾಸಿ ೬೬ ವರ್ಷದ ನಿವೃತ್ತ ಸರಕಾರಿ ವೈದ್ಯರಾದ ರತನ್ ಚಂದ್ರ ಕಾರ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮಶ್ರೀ ದೊರೆತಿದೆ. ಉತ್ತರ ಸೆಂಟಿನೆಂಟಿಲ್ ನಿಂದ ಸುಮಾರು ೪೫ ಕಿ. ಮೀ. ನಷ್ಟು ದೂರವಿರುವ ದ್ವೀಪದಲ್ಲಿ ವಾಸಿಸುವ ‘ಜಾರವ’ ಎಂಬ ಬುಡಕಟ್ಟು ಜನಾಂಗದ ಕ್ಷೇಮಾಭಿವೃದ್ಧಿಗಾಗಿ ಅಹೋರಾತ್ರಿ ದುಡಿಯುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಈ ಸಮುದಾಯವನ್ನು ಮುನ್ನೆಲೆಗೆ ತರಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ಜಾರವ ಜನಾಂಗದ ಜನಸಂಖ್ಯೆ ಕೇವಲ ೭೫ ಕ್ಕೆ ಕುಸಿದಿದ್ದಾಗ ರತನ್ ಅವರು ತಮ್ಮ ವೈದ್ಯಕೀಯ ಸಹಾಯದಿಂದ ಈಗ ೨೭೦ಕ್ಕೆ ಏರಿಸಿದ್ದಾರೆ. ೧೯೯೯ರಲ್ಲಿ ದಡಾರ ಸಾಂಕ್ರಾಮಿಕ ಸಮಯದಲ್ಲಿ ಇವರು ಜಾರವಗಳಿಗೆ ವೈದ್ಯಕೀಯ ಸಹಕಾರ ನೀಡಿದ್ದರು. ಈ ಎಲ್ಲಾ ಕಾರಣದಿಂದ ಇವರನ್ನು ‘ಜಾರವಾ ಕೆ ಜೀವನ್ ದಾತಾ’ ಎಂದು ಕರೆಯುತ್ತಾರೆ. ಇವರು ‘ಅಂಡಮಾನೆರ್ ಆದಿಮ್ ಜನಜಾತಿ ಜಾರವ್' ಎಂಬ ಪುಸ್ತಕದಲ್ಲಿ ಆ ಬುಡಕಟ್ಟು ಜನಾಂಗದವರ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಮಾಹಿತಿಯನ್ನು ದಾಖಲು ಮಾಡಿದ್ದಾರೆ. (ಚಿತ್ರ ೧)

ಅಜಯ್ ಕುಮಾರ್ ಮಾಂಡವಿ (ಛತ್ತೀಸ್ ಗಢ): ಛತ್ತೀಸಗಢದ ಗೊಂಡ ಬುಡಕಟ್ಟು ಜನಾಂಗಕ್ಕೆ ಸೇರಿದ ಅಜಯ್ ಕುಮಾರ್ ಮರದ ಕೆತ್ತನೆಯಲ್ಲಿ  ಎತ್ತಿದ ಕೈ. ತನ್ನ ಊರಿನಲ್ಲಿ ಗನ್ ಹಿಡಿದು ನಕ್ಸಲರಾಗಿದ್ದ ಹಲವರ ಮನಃ ಪರಿವರ್ತನೆ ಮಾಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಗನ್ ಹಿಡಿಯುತ್ತಿದ್ದ ಕೈಯಲ್ಲಿ ಈಗ ಮರದ ಕೆತ್ತನೆಯ ಕೆಲಸ ನಡೆಯುತ್ತಿದೆ. ಮರದಿಂದ ಮಾಡುವ ಕ್ಯಾಲಿಗ್ರಫಿ ಎಂಬ ಕಲೆಯನ್ನು ಇವರು ಸುಮಾರು ೩೫೦ಕ್ಕೂ ಅಧಿಕ ಮಂದಿಗೆ ಕಲಿಸಿದ್ದಾರೆ. ಈ ಕಾರಣದಿಂದಲೇ ಇವರನ್ನು ‘ಕಾರ್ವರ್ ಆಫ್ ಕಾಂಕರ್' ಎಂದು ಕರೆಯುತ್ತಾರೆ. ಇವರು ತಮ್ಮ ಸ್ವಸಹಾಯ ಗುಂಪು ‘ಶಾಂತ ಆರ್ಟ್ ಗ್ರೂಪ್' ಮೂಲಕ ಸುಮಾರು ೪೦ ಜನ ಯುವಕರಿಗೆ ಜೀವನೋಪಾಯಕ್ಕಾಗಿ ಕ್ಯಾಲಿಗ್ರಫಿಯನ್ನು ಕಲಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಿದ್ದಾರೆ. ೫೪ ವರ್ಷದ ಅಜಯ್ ಕುಮಾರ್ ಅವರ ಸೇವೆಯನ್ನು ಗಮನಿಸಿ ಭಾರತ ಸರಕಾರ ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. (ಚಿತ್ರ ೨)

ನೆಕ್ರಮ್ ಶರ್ಮಾ (ಹಿಮಾಚಲ ಪ್ರದೇಶ): ೫೯ ವರ್ಷದ ಸಾವಯವ ಕೃಷಿಕ ನೆಕ್ರಂ ಶರ್ಮಾ ಒಂದೇ ಭೂಮಿಯಲ್ಲಿ ೯ ಬಗೆಯ ಆಹಾರ ಧಾನ್ಯಗಳನ್ನು ಬೆಳೆದು ಖ್ಯಾತಿಯನ್ನು ಪಡೆದವರು. ಯಾವುದೇ ರಾಸಾಯನಿಕಗಳನ್ನು ಬಳಸದೇ ಕೇವಲ ಸಾವಯವ ಗೊಬ್ಬರಗಳನ್ನು ಬಳಸಿ ಮಿತ ನೀರಿನ ಪ್ರಮಾಣದಲ್ಲಿ (ಶೇ ೫೦ರಷ್ಟು ಉಳಿತಾಯ) ಬೆಳೆಯನ್ನು ಬೆಳೆಯುತ್ತಾರೆ. ಹಿಮಾಚಲ ಪ್ರದೇಶದ ಮಂಡಿ ಎಂಬ ಪಟ್ಟಣದ ವಾಸಿಯಾದ ಇವರನ್ನು ಜನರು ‘ನೌ ಅನಾಜ್ ಕೆ ನಾಯಕ್' (ಒಂಬತ್ತು ಬೆಳೆಗಳ ನಾಯಕ) ಎಂದೇ ಕರೆಯುತ್ತಾರೆ. ಇವರ ‘ನೌ ಅನಾಜ್’ ಪದ್ಧತಿಯು ಬಹಳ ಹಿಂದೆ ಇದ್ದ ಪದ್ಧತಿಯೇ. ಕಾಲಕ್ರಮೇಣ ಈ ಪದ್ಧತಿ ನಶಿಸಿಹೋಗಿತ್ತು. ಆದರೆ ನೆಕ್ರಮ್ ಶರ್ಮಾ ಇವರು ಈ ಪದ್ಧತಿಯನ್ನು ಪುನರುಜ್ಜೀವನಗೊಳಿಸಿದರು. ಇವರ ಈ ಕ್ರಮವನ್ನು ಈಗ ಬಹಳಷ್ಟು ಜನರು ಅನುಸರಿಸುತ್ತಿದ್ದಾರೆ. ಇವರು ತಾವು ಬೆಳೆದ ಫಸಲಿನಿಂದ ಬೀಜಗಳನ್ನು ಉತ್ಪಾದಿಸಿ ಈಗಾಗಲೇ ೬ ರಾಜ್ಯಗಳ ಸುಮಾರು ಹತ್ತು ಸಾವಿರ ರೈತರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ. ಇವರ ಈ ಸಾಧನೆಯನ್ನು ಗಮನಿಸಿ ಕೃಷಿ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. (ಚಿತ್ರ ೩)

ವಡಿವೇಲ್ ಗೋಪಾಲ್ ಮತ್ತು ಮಾಸಿ ಸದೈಯಾನ್ (ತಮಿಳುನಾಡು): ಹೆಚ್ಚಿಗೆ ಶೈಕ್ಷಣಿಕ ಅರ್ಹತೆ ಇಲ್ಲದೇ ಇದ್ದರೂ ತಮ್ಮ ಹಾವು ಹಿಡಿಯುವ ಕಲೆಯ ಮೂಲಕ ಜನಪ್ರಿಯರಾದವರು ತಮಿಳುನಾಡಿನ ಇರುಳಾ ಬುಡಕಟ್ಟು ಜನಾಂಗದ ವಡಿವೇಲ್ ಹಾಗೂ ಮಾಸಿ ಇವರು. ಕಾಡಿನಲ್ಲಿರುವ ಅತ್ಯಂತ ವಿಷಕಾರಿಯಾದ ಹಾವುಗಳನ್ನು ಬಹಳ ಸಲೀಸಾಗಿ ಹಿಡಿಯುವ ಇವರು ಈ ತಮ್ಮ ಕಲೆಯನ್ನು ಬಹಳಷ್ಟು ಮಂದಿಗೆ ಹೇಳಿಕೊಟ್ಟಿದ್ದಾರೆ. ಕೇವಲ ತಮಿಳುನಾಡು ಅಷ್ಟೇ ಅಲ್ಲ ಪ್ರಪಂಚದ ನಾನಾ ಕಡೆಗಳಲ್ಲಿರುವ ಹಾವು ಹಿಡಿಯುವವರಿಗೆ ಇವರು ತರಭೇತಿ ನೀಡುತ್ತಾರೆ. ತಮ್ಮ ಪೂರ್ವಿಕರಿಂದ ಬಂದ ಜ್ಞಾನ ಹಾಗೂ ತಮ್ಮ ಕುಶಲತೆಯಿಂದ ಹಾವು ಹಿಡಿಯಲು ನಾನಾ ತಂತ್ರಗಳನ್ನು ಬಳಸುತ್ತಾರೆ. ಇದೇ ಕಾರಣದಿಂದ ಇವರನ್ನು “ಗ್ಲೋಬಲ್ ಸ್ನೇಕ್ ಎಕ್ಸ್ ಪರ್ಟ್' ಗಳೆಂದು ಕರೆಯುತ್ತಾರೆ. ಸಮಾಜ ಸೇವೆಯ ವಿಭಾಗದಲ್ಲಿ ಇವರಿಗೆ ಪದ್ಮಶ್ರೀ ಒಲಿದಿದೆ. (ಚಿತ್ರ ೪)

ಇಲ್ಲಿರುವುದು ಕೆಲವು ಸಾಧಕರ ಪರಿಚಯ ಮಾತ್ರ. ಇನ್ನೂ ಹಲವಾರು ಅನಾಮಿಕ ಸಾಧಕರಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಒಲಿದಿದೆ. ಕರ್ನಾಟಕದ ರಾಣಿ ಮಾಚಯ್ಯ, ತಮಟೆ ಸಂಗೀತಗಾರ ಮುನಿವೆಂಕಟಪ್ಪ ಇವರೂ ಬಹುತೇಕ ಅನಾಮಿಕರೇ. ಆದರೆ ಇವರ ಬಗ್ಗೆ ಈಗಾಗಲೇ ಕನ್ನಡ ಪತ್ರಿಕೆಗಳಲ್ಲಿ ಸಾಕಷ್ಟು ಮಾಹಿತಿಗಳು ಬಂದಿವೆ. ಈ ಕಾರಣದಿಂದ ನಾನು ಬರೆಯಲು ಹೋಗುತ್ತಿಲ್ಲ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪ್ರತಿಭಾವಂತ ಸಾಧಕರು ಬೆಳಕಿಗೆ ಬರಲಿ ಎಂಬುದೇ ಹಾರೈಕೆ.

ಚಿತ್ರ ಕೃಪೆ: ಅಂತರ್ಜಾಲ ತಾಣ