ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ. ನನ್ನ ಜಿಲ್ಲೆಯ ಕೆನ್ನೆ, ಬೆಟ್ಟಗಳ ಎದೆಗೆ ಮೊದಲ ಹಾರೆ ಹಾಕಿದ್ದೂ ಕಾಂಗ್ರೆಸಿಗರೇ. ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿಯ ತನಕ ನಿರಂತರವಾಗಿ ಕಾಂಗ್ರೆಸ್ ಅಧಿನಾಯಕರು ಹೇಳಿದ ಸರಣಿ ಸುಳ್ಳುಗಳನ್ನು ನಮ್ಮ ಜನ ಕೇಳಿಸಿಕೊಂಡೇ ಬಂದಿದ್ದಾರೆ. ಬಡತನ ಮತ್ತು ಅಮಾಯಕತೆ ಆವರಿಸಿಕೊಂಡ ಈ ನೆಲದಲ್ಲಿ ಇದ್ದಕ್ಕಿದ್ದಂತೆ ಆರಂಭವಾದದ್ದು ಮೈನಿಂಗ್ ಬೂಮ್! ಆನಂತರ ಇಲ್ಲಿ ಜನರ ನೆತ್ತಿಯ ಮೇಲೆ ಕಾಗೆ ಹಾರಿದಂತೆ ಹೆಲಿಕಾಪ್ಟರು-ವಿಮಾನ ಹಾರಿದವು. ಆಟೋ ಓಡಿಸುತ್ತಿದ್ದವರು ಬೆಂಝ್ ಕಾರುಗಳಲ್ಲಿ ಓಡಾಡತೊಡಗಿದರು. ಒಬ್ಬ ಮುಖ್ಯಮಂತ್ರಿ ಇದೇ ನೆಲದ ಗಣಿಧಣಿಯ ಅತಿಥಿಯಾಗಿ ಬಂದು, ನಟಿಯೊಬ್ಬಳನ್ನು ಸಂಧಿಸಿ, ಕಡೆಗೆ ಆಕೆಯನ್ನೇ ಮದುವೆಯಾಗಿ ಸಂತಾನ ಭಾಗ್ಯವನ್ನೂ ಹೊಂದಿದ. ಬಹುತೇಕ ಗಣಿ ದೊರೆಗಳ ಮಕ್ಕಳು ಈಗ ವಿದೇಶಗಳಲ್ಲಿ ಓದುತ್ತಿದ್ದಾರೆ. ಕೇವಲ ಜಿಲ್ಲೆಯ ಅರ್ಥ ವ್ಯವಸ್ಥೆಯನ್ನಷ್ಟೇ ಅಲ್ಲ, ಕರ್ನಾಟಕದ ರಾಜಕಾರಣದ ನಕಾಶೆಯನ್ನೇ ಬದಲಾಯಿಸಿದ ಗಣಿಗಾರಿಕೆ ಮತ್ತು ಅದರ ಅಕ್ರಮಗಳ ವಿರುದ್ಧ ಕಾಂಗ್ರೆಸ್ ನವರು ಮುನ್ನೂರ ಇಪ್ಪತ್ತು ಕಿಲೋಮೀಟರು ನಡೆದರು. ಕುಪ್ಪಳಿಸಿದರು. ಕುಣಿದರು. ಅಬ್ಬರಿಸಿ ಭಾಷಣ ಮಾಡಿದರು. ಆದರೆ ಅವರ ಅಷ್ಟೂ ಖರ್ಚು ನೋಡಿಕೊಂಡ ಗಣಿ ಮಾಫಿಯಾ ಅವರೊಂದಿಗೇ ಹೆಜ್ಜೆ ಹಾಕುತ್ತಿತ್ತು. ಅದರ ಅಧಿನಾಯಕನೇ ಅನಿಲ್ ಲಾಡ್."
ಲೇಖಕರು ತಮ್ಮದೇ ಆದ ಮುನ್ನುಡಿ ‘ಅಕ್ಷತ ನೆಲಕ್ಕೆ ಮೊದಲ ಹಾರೆ ಇಟ್ಟವರು' ಇಲ್ಲಿ ಬರೆಯುತ್ತಾರೆ “ಇದು ಊರಿನ ಋಣವಾ? ಇರಬಹುದೇನೋ. ಆದರೆ ತೀರಿಸಿಯೇನೆಂದರೂ ನನ್ನ ಊರಿನ ಋಣ ತೀರುವುದಲ್ಲ. ಅಲ್ಲಿ ಅಕ್ಷರ ಕಲಿತ್ತಿದ್ದೇನೆ. ಅನ್ನ ಉಂಡಿದ್ದೇನೆ. ಅಕ್ಕರೆ ಕಂಡಿದ್ದೇನೆ. ಅವಮಾನವನ್ನೂ ಉಂಡಿದ್ದೇನೆ. ನನ್ನ ಊರಿನ ಬೀದಿಗಳಿಗಾಗಿ, ದೀಪಗಳಿಗಾಗಿ, ಶಾಲೆಗಳಿಗಾಗಿ, ಕಾರ್ಮಿಕರಿಗಾಗಿ, ಸೈಕಲ್ ರಿಕ್ಷಾ ತುಳಿಯುವ ದೀನರಿಗಾಗಿ, ದಲಿತರಿಗಾಗಿ, ಹೊಟೇಲು ನೌಕರರಿಗಾಗಿ ವರ್ಷಗಟ್ಟಲೆ ಬಡಿದಾಡಿದ್ದೇನೆ. ಸಾವಿರಾರು ಹೆಣ್ಣುಮಕ್ಕಳಿಗೆ ಪಾಠ ಹೇಳಿದ್ದೇನೆ. ನನ್ನ ತಾಯಿ ಅದೇ ಊರಿನ ಶಾಲೆಯಲ್ಲಿ ಸುಮಾರು ಮೂವತ್ತೈದು ವರ್ಷ ಪಾಠ ಹೇಳಿದಳು. ಆ ತಲೆಮಾರಿನ ಬಗ್ಗೆ ಹೇಳುವುದಾದರೆ, ಅರ್ಧ ಬಳ್ಳಾರಿಯ ಹುಡುಗ -ಹುಡುಗಿಯರು ನನ್ನ ಅಮ್ಮನ ವಿದ್ಯಾರ್ಥಿಗಳು. ಅಂಥ ಊರಿನಲ್ಲಿ ನಾನು ‘ಪತ್ರಿಕೆ' ನಡೆಸಿದ್ದೇನೆ. ಬೀದಿ ಬದಿಯಲ್ಲಿ ನಿಂತು ಭಾಷಣ ಮಾಡಿದ್ದೇನೆ. ಅದು ನನ್ನ ತವರ ನೆಲ. ನನಗೆ ಬದುಕು ನೀಡಿದ ಪುಣ್ಯ ಭೂಮಿ. ಆ ನೆಲಕ್ಕೆ ನನ್ನ ನಮಸ್ಕಾರಗಳು.”
ಬಳ್ಳಾರಿಯ ಮೈನಿಂಗ್ ಮಾಫಿಯಾ ಬಗ್ಗೆ ಲೇಖಕರು ಸವಿಸ್ತಾರವಾಗಿ ಬರೆದಿದ್ದಾರೆ. ಪೂರಕ ಚಿತ್ರಗಳನ್ನೂ ಪ್ರಕಟಿಸಿದ್ದಾರೆ. ಸುಮಾರು ೯೫ ಪುಟಗಳ ಈ ಪುಟ್ಟ ಪುಸ್ತಕವನ್ನು ಅನ್ನ, ಅನುಭವ, ವಿದ್ಯೆ ಮತ್ತು ಕನಸು ಕಟ್ಟಿಕೊಟ್ಟ ಬಳ್ಳಾರಿಯ ನೆಲಕ್ಕೆ ಅರ್ಪಣೆ ಮಾಡಿದ್ದಾರೆ.