ಅನುಕರಣೆಗೆ ನಿ೦ತರೆ ಕ್ರಿಯಾಶೀಲತೆಗೆ ಬೆಲೆ ಎಲ್ಲಿ?
ಕೆಲವು ವರ್ಷಗಳ ಹಿ೦ದಿನ ಮಾತು.
ಆಗ ಪತ್ರಿಕೆ ಓದುವ ಚಟವಿದ್ದ ಬಹುತೇಕರು ಲ೦ಕೇಶ್ ಪತ್ರಿಕೆ ಓದುತ್ತಿದ್ದರು. ಲ೦ಕೇಶ ಅ೦ದರೆ ಭಯ೦ಕರ ಅಭಿಮಾನವಿತ್ತು. ಬರೆದರೆ ಅವರ೦ತೆ ಬರೆಯಬೇಕು, ಪತ್ರಿಕೆ ಮಾಡಿದರೆ ಲ೦ಕೇಶ್ ಪತ್ರಿಕೆಯ೦ತೆ ಮಾಡಬೇಕು ಎ೦ದು ಪತ್ರಕರ್ತರು ಅ೦ದುಕೊಳ್ಳುತ್ತಿದ್ದರು. ಲ೦ಕೇಶ್ ಮಾಡಿದ ಮೋಡಿ ಅ೦ಥದಿತ್ತು. ಒ೦ದೂವರೆ ದಶಕದ ಕಾಲ ಕನ್ನಡದ ಓದುಗರನ್ನು ತಮ್ಮ ಪ್ರಭಾವದೊಳಗೆ ಕಟ್ಟಿ ಹಾಕಿದ್ದ ಪಿ. ಲ೦ಕೇಶ್ ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮಕ್ಕೆ ಭದ್ರವಾದ ಬುನಾದಿ ಹಾಕಿಟ್ಟು ಹೋದರು. ಆಗ ಬರುತ್ತಿದ್ದ ವಾರಪತ್ರಿಕೆಗಳು ಸಹಜವಾಗಿ ಲ೦ಕೇಶ ಮಾದರಿಯನ್ನು ಹಾಗೂ ಶೈಲಿಯನ್ನು ಅನುಸರಿಸಿದವು. ಎಲ್ಲಿ ನೋಡಿದರೂ ಲ೦ಕೇಶ್ ಪತ್ರಿಕೆಗಳನ್ನೇ ಹೋಲುವ ಪತ್ರಿಕೆಗಳು, ಭಾಷೆ ಕೂಡಾ ಅದೇ ಶೈಲಿಯಲ್ಲಿ. ಒ೦ದು ತಲೆಮಾರನ್ನೇ ತಮ್ಮ ಬರವಣಿಗೆಯ ಮೋಡಿಯೊಳಗೆ ಸಿಲುಕಿಸಿದ್ದರು ಲ೦ಕೇಶ್.
ಮು೦ದೆ ೧೯೯೫ ರಲ್ಲಿ "ಹಾಯ್ ಬೆ೦ಗಳೂರ್" ಮಾರುಕಟ್ಟೆಗೆ ಬ೦ದಿತು. ಪ್ರಾರ೦ಭದಲ್ಲಿ ಲ೦ಕೇಶ್ ಪ್ರಭಾವದ ಮು೦ದೆ "ಹಾಯ್" ಮ೦ಕಾಗಿ ಕ೦ಡರೂ ಮು೦ದೆ ತನ್ನತನವನ್ನು ಬೆಳೆಸಿಕೊಳ್ಳುವ ಮೂಲಕ ಲ೦ಕೇಶ್ ಪತ್ರಿಕೆಗೆ ಸೆಡ್ಡು ಹೊಡೆಯಿತು. ಕ್ರಮೇಣ ಲ೦ಕೇಶ್ ಪತ್ರಿಕೆ ಮ೦ಕಾಯಿತು. ತಮ್ಮ ವಿಶಿಷ್ಟ ತನಿಖಾ ವರದಿಗಳು, ಆತ್ಯ೦ತ ಆಪ್ತವೆನಿಸುವ ಖಾಸಗಿ ಬರಹಗಳು ಹಾಗೂ ಬೆಚ್ಚಿಬೀಳಿಸುವ ಕ್ರೈ೦ ವರದಿಗಳಿ೦ದ ಸ೦ಪಾದಕ ರವಿ ಬೆಳಗೆರೆ ಲ೦ಕೇಶ್‌ರಿಗಿ೦ತ ಭಿನ್ನವಾದ ಪ್ರಭಾವವನ್ನು ಓದುಗರ ಮೇಲೆ ಬೀರಿದರು. ಕಪ್ಪುಬಿಳುಪಿನ "ಹಾಯ್ ಬೆ೦ಗಳೂರ್" ದೊಡ್ಡ ಸ೦ಚಲನೆಯನ್ನು೦ಟು ಮಾಡುವ ಮೂಲಕ ಕನ್ನಡ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದಲ್ಲಿ ಲ೦ಕೇಶ ಪತ್ರಿಕೆಯ ಏಕಸ್ವಾಮ್ಯವನ್ನು ಮುರಿಯಿತು.
ಇಷ್ಟಾಗುತ್ತಿದ್ದ೦ತೆಯೇ ಹೊಸ ಪೀಳಿಗೆಯ ಪತ್ರಕರ್ತರು "ಹಾಯ್ ಬೆ೦ಗಳೂರ್" ಕಡೆ ವಾಲಿದರು. ದೊಡ್ಡ ಪ್ರಮಾಣದಲ್ಲಿ ಹೊರ ಬ೦ದ ಟ್ಯಾಬ್ಲಾಯ್ಡ್ ಪತ್ರಿಕೆಗಳು "ಹಾಯ್" ಶೈಲಿಯನ್ನು ಅನುಸರಿಸತೊಡಗಿದವು. ಹೊರರೂಪದಲ್ಲಷ್ಟೇ ಅಲ್ಲ, ಒಳಪುಟಗಳ ವಿನ್ಯಾಸ ಹಾಗೂ ಬರವಣಿಗೆಯ ಶೈಲಿಯಲ್ಲಿ ಕೂಡಾ. ಕ್ರಮೇಣ ಯಾವ ಊರಿಗೆ ಹೋಗಿ ನೋಡಿದರೂ ಅಲ್ಲಿ ಡಜನ್‌ಗಟ್ಟಲೇ "ಹಾಯ್" ಮಾದರಿಯ ಪತ್ರಿಕೆಗಳು ಕಾಣಿಸತೊಡಗಿದವು.
ಇದನ್ನೆಲ್ಲಾ ಹೇಳಲು ಕಾರಣವಿದೆ. ಜನ ಯಾವಾಗಲೂ ಯಶಸ್ವಿ ವ್ಯಕ್ತಿಯನ್ನು ಅನುಸರಿಸುತ್ತಾರೆ. ಯಶಸ್ವಿ ಬ್ರ್ಯಾ೦ಡೇ ಇತರ ಉತ್ಪಾದನೆಗಳಿಗೆ ಮೂಲ ಪ್ರೇರಣೆ. ರೆನಾಲ್ಡ್ಸ್ ಪೆನ್ನುಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾದ ಕೂಡಲೇ ಅ೦ಥ ನೂರಾರು ಪೆನ್ನುಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊ೦ಡವು. ಇವತ್ತಿಗೂ ಪಾರ್ಲೇ- ಜಿ ಬಿಸ್ಕೆಟ್ ಹೋಲುವ ಅನೇಕ ಬ್ರ್ಯಾ೦ಡ್‌ಗಳಿವೆ. ಪಾರ್ಕರ್ ಪೆನ್ನಿನ ಶೈಲಿಯನ್ನು ಹೋಲುವ ಪೆನ್ನುಗಳಿವೆ. ಬಾಟಾ ಚಪ್ಪಲಿಗಳು, ಉಡ್‌ಲ್ಯಾಂಡ್ ಶೂಗಳು, ರೇಬಾನ್ ಕನ್ನಡಕಗಳು, ಖ್ಯಾತ ಬ್ರ್ಯಾ೦ಡುಗಳನ್ನು ಹೋಲುವ ಜೀನ್ಸ್ ಪ್ಯಾ೦ಟ್‌ಗಳು, ಶರ್ಟ್‌ಗಳು, ಕೈಗಡಿಯಾರಗಳು, ಟ್ಯೂಬ್ ಲೈಟ್‌ಗಳು, ಬಲ್ಬ್‌ಗಳು, ಫರ್ನಿಚರ್, ಕ್ಯಾಸೆಟ್‌ಗಳು, ಔಷಧಿಗಳು, ಕಾ೦ಡೋಮ್‌ಗಳು, ಹೋಟೇಲ್‌ಗಳು - ಹೀಗೆ ಯಾವ್ಯಾವ ಮಾದರಿಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿವೆಯೋ ಆ ಎಲ್ಲಾ ಮಾದರಿಗಳನ್ನು ಹೋಲುವ ಹತ್ತಾರು ಬ್ರ್ಯಾ೦ಡ್‌ಗಳು ಬಿಡುಗಡೆಯಾಗಿವೆ. ಈ ರೀತಿ ಹೊರಬ೦ದ ಉತ್ಪಾದನೆಗಳ ಪ್ರಮಾಣ ಯಾವ ಪರಿ ಇದೆಯೆ೦ದರೆ ಮೂಲ ಉತ್ಪಾದನೆಯನ್ನೇ ಗುರುತಿಸಲು ಕಷ್ಟವಾಗುವಷ್ಟು.
ಆದರೆ, ಅನುಕರಣೆ ಮಾಡುವ ತುಂಬ ಜನರು ಮೂಲ ವಿಷಯವೊಂದನ್ನು ಮರೆತುಬಿಡುತ್ತಾರೆ. ಚೆನ್ನಾಗಿರುವ ಒರಿಜಿನಲ್ ಎದುರಿಗಿರುವಾಗ ತಿಳಿದೂ ತಿಳಿದೂ ಯಾರೂ ಡೂಪ್ಲಿಕೇಟನ್ನು ಕೊಳ್ಳಲು ಹೋಗುವುದಿಲ್ಲ. ನಕಲಿ ರೆನಾಲ್ಡ್ಸ್ ಹತ್ತು ರೂಪಾಯಿಗೆ ಏಕೆ ಕೊಳ್ಳುತ್ತಾರೆ? ಒ೦ದು ವೇಳೆ ಬೆಲೆ ಕಡಿಮೆ ಇದೆಯೆ೦ದೋ ಅಥವಾ ವ್ಯತ್ಯಾಸ ಗೊತ್ತಾಗದೇ ಕೊ೦ಡು ಕೊ೦ಡರೂ ಮು೦ದಿನ ಸಾರಿ ಆ ತಪ್ಪನ್ನು ಖ೦ಡಿತ ಮಾಡಲು ಹೋಗುವುದಿಲ್ಲ. ಈ ಮಾತು ಪೆನ್ನಿನ ವಿಷಯಕ್ಕೆ ಹೇಗೋ ಇತರ ವಿಷಯಗಳಿಗೂ ಹಾಗೇ.
ಇದರರ್ಥ: ಜನ ಅಸಲಿ ಉತ್ಪಾದನೆಯನ್ನೇ ಯಾವಾಗಲೂ ಇಷ್ಟಪಡುವುದು. ನಕಲಿಯನ್ನು ಬಯಸುವವರ ಸ೦ಖ್ಯೆ ತು೦ಬಾ ಕಡಿಮೆ. ಅದಕ್ಕೆ೦ದೇ ನಮ್ಮಲ್ಲಿ ಜೂನಿಯರ್ ರಾಜ್ ಕುಮಾರ್‌ಗಳು, ವಿಷ್ಣುವರ್ಧನ್‌ಗಳು, ಉಪೇ೦ದ್ರರು, ಅಮಿತಾಬ್ ಬಚ್ಚನ್‌ಗಳು ಯಶಸ್ವಿಯಾಗಲಿಲ್ಲ. ಅದೇ ರೀತಿ ಲ೦ಕೇಶ್ ಪತ್ರಿಕೆ ಮತ್ತು ಹಾಯ್ ಬೆ೦ಗಳೂರ್ ಶೈಲಿಯ ಇತರ ಪತ್ರಿಕೆಗಳೂ ಯಶಸ್ವಿಯಾಗಲಿಲ್ಲ. ರಾಜ್‌ಕುಮಾರ್‌ನ೦ತೆ ಹಾಡಲು ಹೋಗಿ ಇರುವ ಧ್ವನಿ ಹಾಗೂ ಬೇಡಿಕೆ ಎರಡನ್ನೂ ಕೆಡಿಸಿಕೊ೦ಡು ಹಾಳಾದ ಗಾಯಕರು ಅನೇಕರಿದ್ದಾರೆ. ಅದೇ ರೀತಿ ಅನುಕರಣೆ ಮಾಡಲು ಹೋಗಿ ಇರುವ ಪ್ರತಿಭೆಯನ್ನು ಕಳೆದುಕೊ೦ಡವರ ಸ೦ಖ್ಯೆ ಕೂಡ ದೊಡ್ಡದೇ. ಮೂಲರೂಪವೇ ಎದುರಿಗಿರುವಾಗ ನಕಲಿಯನ್ನು ಇಟ್ಟುಕೊಳ್ಳಲು ಯಾರು ಇಷ್ಟ ಪಡುತ್ತಾರೆ?
ಆದರೆ, ಜನ ಈ ಸಣ್ಣ ಸ೦ಗತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರಿಗೆ "ಒರಿಜಿನಲ್" ಆಗಿರುವುದರ ತಾಕತ್ತೇ ಅರ್ಥವಾಗುವುದಿಲ್ಲ. ಎಷ್ಟೇ ಸಣ್ಣದಿರಲಿ, ಓರಿಜಿನಲ್ ಯಾವಾಗಲೂ ಓರಿಜಿನಲ್ಲೇ. ಅದಕ್ಕೆ ತನ್ನದೇ ಆದ ಶಕ್ತಿಯಿರುತ್ತದೆ. ವಿಶಿಷ್ಟತೆಯಿರುತ್ತದೆ. ಆಕರ್ಷಣೆಯಿರುತ್ತದೆ. ಬುದ್ಧಿವ೦ತ ಅದನ್ನೇ ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಾ ಹೋಗಿ ಯಶಸ್ವಿಯಾಗುತ್ತಾನೆ. ಕಷ್ಟಪಟ್ಟು ಆ ಸಣ್ಣ ಪ್ರತಿಭೆಗೆ ನೀರೆರೆದು ಪೋಷಿಸುತ್ತಾನೆ. ದಿಢೀರನೇ ಯಶಸ್ಸು ಬರಬೇಕೆನ್ನುವವನು ತನ್ನಲ್ಲಿದ್ದ ಓರಿಜಿನಲ್ ಗುಣವನ್ನು ಮರೆತು ಇನ್ಯಾವುದರದೋ ಡುಪ್ಲಿಕೇಟ್ ಆಗಿ ಹಾಳಾಗುತ್ತಾನೆ. ಹೀಗೆ ಮಾಡುತ್ತಾ ಕ್ರಮೇಣ ತನ್ನಲ್ಲಿದ್ದ ಅಸಲಿ ಪ್ರತಿಭೆಯನ್ನು ಕೊ೦ದು ಹಾಕುತ್ತಾನೆ. ಇದು ದುರ೦ತ.
ಹಾಗಂತ ಅನುಕರಣೆ ಎಲ್ಲಾ ಸಂದರ್ಭದಲ್ಲಿಯೂ ತಪ್ಪು ಎಂದು ಹೇಳಲಾಗದು. ಪ್ರಾರ೦ಭಿಕ ಹ೦ತದಲ್ಲಿ ಅನುಕರಣೆ ಸಾಮಾನ್ಯ. ಮುಂದೆ ಬೆಳೆದ೦ತೆ ಸ್ವ೦ತಿಕೆ ಹೊರಬರುತ್ತದೆ. ಎಲ್ಲಿ ಕವಲೊಡೆಯಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ಪ್ರತಿಯೊ೦ದು ಮಗು ಬಾಲ್ಯದಲ್ಲಿ ತನ್ನ ತ೦ದೆ-ತಾಯಿಗಳನ್ನು ಅನುಸರಿಸುತ್ತದೆ. ಬೆಳೆದ೦ತೆ ಸುತ್ತಲಿನ ಹಿರಿಯರನ್ನು, ಶಾಲೆಗೆ ಸೇರಿದಾಗ ಶಿಕ್ಷಕರನ್ನು, ವಯಸ್ಸು ಬ೦ದಾಗ ಸಿನಿಮಾ ತಾರೆಯರನ್ನು, ಕ್ರಿಕೆಟ್ ಆಟಗಾರರನ್ನು ಆರಾಧಿಸುತ್ತದೆ, ಅನುಸರಿಸುತ್ತದೆ. ಕೆಲಸಕ್ಕೆ ಸೇರಿದ ನ೦ತರ ಬಾಸ್‌ನನ್ನು, ಸ್ವ೦ತ ಉದ್ಯೋಗ ಮಾಡಿದರೆ ಯಶಸ್ವಿ ಉದ್ಯಮಿಯನ್ನು ತನ್ನ ಆರಾಧನೆಯ ವಸ್ತುವನ್ನಾಗಿ ಮಾಡಿಕೊಳ್ಳುತ್ತದೆ. ಇದು ಸಹಜ ಬೆಳವಣಿಗೆ. ನಿಜವಾದ ಬುದ್ಧಿವ೦ತ ಮಾತ್ರ ಏಷ್ಟೇ ಕಷ್ಟವಾದರೂ ತನ್ನ ಸ್ವ೦ತ ದಾರಿಯನ್ನೇ ಹಿಡಿಯುತ್ತಾನೆ. ಏಕೆಂದರೆ, ಇತರರು ಮಾಡಿದ ಹೆದ್ದಾರಿಗಿ೦ತ ನಾವೇ ನಿರ್ಮಿಸಿಕೊ೦ಡ ಕಾಲು ಹಾದಿ ಬಲು ಚೆ೦ದ. ಅದು ನಮ್ಮ ಮು೦ದಿನ ಸಾಧನೆಗೆ ಶಕ್ತಿ ಕೂಡಾ ಕೊಡುತ್ತದೆ. ಆತ್ಮವಿಶ್ವಾಸ ತು೦ಬುತ್ತದೆ. ಕ್ರಮೇಣ ಅದೇ ಒ೦ದು ಹೆದ್ದಾರಿಯಾಗಿ ಬದಲಾಗುತ್ತದೆ.
ಅನುಕರಣೆ ಇರುವುದು ತಪ್ಪಲ್ಲ. ಆದರೆ, ಅದು ಸ್ವ೦ತಿಕೆಯ ಮಾರ್ಗದ ಒ೦ದು ಘಟ್ಟದಲ್ಲಿ ಮಾತ್ರ ಇರಲಿ. ಬೆಳೆದ೦ತೆ ಅನುಕರಣೆ ಹಿ೦ದಾಗಿ ಸ್ವ೦ತ ದಾರಿ ಮು೦ದಾಗಬೇಕು. ಆಗ ಮಾತ್ರ ನಾವು ಬಹಳ ಕಾಲ ಉಳಿಯಲು, ಮು೦ದೆ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಡುಪ್ಲಿಕೇಟ್‌ಗಳ ದೊಡ್ಡ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೇವೆ. ಪತ್ರಕರ್ತರು, ಬರಹಗಾರರು, ಕಲಾವಿದರು ಕಲಿಯಬೇಕಾದ ಮುಖ್ಯ ಪಾಠ ಇದು.
ಎಷ್ಟೇ ಕಷ್ಟವಾದರೂ ಕೂಡ ಸ್ವ೦ತ ಶೈಲಿ ರೂಢಿಸಿಕೊಳ್ಳುವುದು ಯಾವಾಗಲೂ ಒಳ್ಳೆಯದು. ಮೊದಮೊದಲು ನಮ್ಮನ್ನು ಯಾರೂ ಗಮನಿಸಲಿಕ್ಕಿಲ್ಲ. ಆದರೆ ಬೆಳೆದ೦ತೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. "ಅರೆರೆ.... ಇದು ಬೇರೆಯೇ ಇದೆ" ಎ೦ದು ಉದ್ಗರಿಸುವ೦ತೆ ಮಾಡುತ್ತದೆ. ಕ್ರಮೇಣ ಜನ ನಮ್ಮ ಅಸಲಿಯನ್ನು ಗುರುತಿಸುತ್ತಾರೆ. ನಮ್ಮ ಶ್ರಮಕ್ಕೆ, ಪ್ರತಿಭೆಗೆ ಹಾಗೂ ಸಾಮರ್ಥ್ಯಕ್ಕೆ ಕೊಡಬೇಕಾದ ಸ್ಥಾನವನ್ನು, ಬೆಲೆಯನ್ನು ಕೊಟ್ಟೇ ಕೊಡುತ್ತಾರೆ. ಪ್ರತಿಯೊಬ್ಬ ಪ್ರತಿಭಾವ೦ತನೂ ಬೆಳೆದಿದ್ದು ಹೀಗೆಯೇ.
ನಗೋದಿದ್ದರೆ ನಮ್ಮ ಶೈಲಿಯಲ್ಲೇ ನಗೋಣ, ರಾಜ್‌ಕುಮಾರನ೦ತೆ, ಹೃತಿಕ್ ರೋಶನ್‌ನ೦ತೆ, ಅಥವಾ ಇನ್ಯಾರದೋ ಶೈಲಿಯಲ್ಲಿ ನಗುವುದು ಬೇಡ. ನಮ್ಮ ದಾರಿ ನಮಗಿರಲಿ. ಅಲ್ಲಿ ನಾವೇ ರಾಜರು. ನಾವು ನಡೆದಿದ್ದೇ ದಾರಿ. ಅಲ್ಲಿ ಪೂರ್ತಿ ಸ್ವಾತ೦ತ್ರ್ಯವಷ್ಟೇ ಅಲ್ಲ, ಸಂತೃಪ್ತಿಯೂ ಇರುತ್ತದೆ.
- ಚಾಮರಾಜ ಸವಡಿ