ಅನುಪಮೆಯ ಪ್ರೇಮ
ಬಂಗಾಲಿ ಭಾಷೆಯ ಕಥಾ ಸಾಮ್ರಾಟರಾದ ಶರಶ್ಚಂದ್ರ ಚಟ್ಟೋಪಾಧ್ಯಯ ಅವರ ಪುಟ್ಟ ಕಾದಂಬರಿಯೇ ‘ಅನುಪಮೆಯ ಪ್ರೇಮ'. ಇದು ಶರಶ್ಚಂದ್ರರ ಮೂರನೆಯ ಕಾದಂಬರಿ. ‘ಬಿರಾಜ್ ಬಹೂ’ (ಕುಲವಧು) ಎಂಬ ಹೆಸರಿನಲ್ಲಿ ಬರೆದ ಈ ಕಾದಂಬರಿಯು ಮೊದಲ ಬಾರಿಗೆ ೧೯೧೪ರಲ್ಲಿ ಪ್ರಕಟವಾಯಿತು. ನಂತರದ ದಿನಗಳಲ್ಲಿ ಹಲವಾರು ಭಾಷೆಗಳಲ್ಲಿ ಅನುವಾದವೂ ಆಗಿದೆ. ಶರಶ್ಚಂದ್ರರ ಕಾದಂಬರಿಗಳನ್ನು ಓದುತ್ತಿದ್ದಂತೆ ನೀವು ಶತಮಾನಗಳಷ್ಟು ಹಳೆಯದಾದ ಬಂಗಾಲಕ್ಕೆ ಹೋಗುತ್ತೀರಿ. ಆಗಿನ ರೀತಿ ರಿವಾಜುಗಳು, ವೈವಾಹಿಕ ಜೀವನದ ಕ್ರಮ, ವಿಧವೆಯರ ಜೀವನ ಶೈಲಿ, ಜನರ ಬದುಕಿನ ಕ್ರಮ ಹೀಗೆ ಹತ್ತು ಹಲವಾರು ವಿಷಯಗಳು ತಿಳಿದು ಬರುತ್ತದೆ.
ಅನುವಾದವೂ ಹಳೆಯ ಕಾಲದ ಕನ್ನಡ ಭಾಷಾ ಪ್ರಯೋಗವನ್ನು ಬಿಂಬಿಸುತ್ತದೆ. ಈ ಪುಸ್ತಕ ಓದುತ್ತಾ ಕಥೆ ಮುಂದೆ ಸಾಗಿದಂತೆ, ಆಗ ಬಳಕೆಯಾಗುತ್ತಿದ್ದ ಪದಗಳ ಬಗ್ಗೆಯೂ ಮಾಹಿತಿ ದೊರೆಯುತ್ತಾ ಹೋಗುತ್ತದೆ. ಈ ಕಾದಂಬರಿಯ ಕಥೆ ಬಹಳ ಸರಳ, ಆದರೆ ಹಲವಾರು ತಿರುವುಗಳಿವೆ. ಇದು ಅನುಪಮೆ ಎಂಬ ಹುಡುಗಿಯ ಪ್ರೇಮ ಕಥೆ. ಈಕೆಯು ದೊಡ್ಡ ಮನೆತನದ ಹೆಣ್ಣು. ಈಕೆಯ ತಂದೆ ಜಗಬಂಧುಬಾಬೂರವರು ಬಹಳ ಶ್ರೀಮಂತ ವ್ಯಕ್ತಿ. ಜಗಬಂಧುಬಾಬೂರವರ ಎರಡನೇ ಪತ್ನಿಯ ಮಗಳೇ ಅನುಪಮೆ. ಮೊದಲ ಪತ್ನಿಯಿಂದ ಜಗಬಂಧುಗಳಿಗೆ ಚಂದ್ರಬಾಬೂ ಎಂಬ ಮಗನಿದ್ದಾನೆ. ಅನುಪಮೆಯ ಮದುವೆಯ ಪ್ರಸ್ತಾಪ ಮನೆಯಲ್ಲಿ ಬರುವಾಗ ಆಕೆ ಅನಾರೋಗ್ಯದ ನೆಪ ಮಾಡುತ್ತಾಳೆ. ಬಹಳ ಸಲ ವಿಚಾರಿಸಿದ ಬಳಿಕ ಆಕೆ ತನಗೆ ಸುರೇಶ ಎಂಬ ಯುವಕನ ಮೇಲೆ ಪ್ರೇಮಾಂಕುರವಾಗಿದೆ ಎನ್ನುತ್ತಾಳೆ.
ಸುರೇಶಚಂದ್ರ ಮಜೂಮದಾರನು ರಾಖಾಲ ಮಜೂಮದಾರರ ಮಗ. ಅನುಪಮೆಯ ತಾಯಿ ತನ್ನ ಮಗಳ ಮದುವೆಯ ಪ್ರಸ್ತಾಪವನ್ನು ಸುರೇಶನ ತಾಯಿಯ ಜೊತೆ ಮಾಡುತ್ತಾಳೆ. ಅವರು ತಮ್ಮ ಮಗನಿಗೆ ಅನುಪಮೆಯನ್ನು ಮದುವೆ ಮಾಡಿಕೊಳ್ಳಲು ಅಭ್ಯಂತರವಿಲ್ಲ ಅಂದರೂ ಸುರೇಶ ಮಾತ್ರ ಮದುವೆಗೆ ಒಪ್ಪುವುದಿಲ್ಲ. ತಾನಿನ್ನೂ ಕಲಿಯಬೇಕಿದೆ ಎನ್ನುತ್ತಾನೆ ಆತ. ತನ್ನ ಹಾಗೂ ತನ್ನನ್ನು ಮದುವೆಯಾಗುವ ಹುಡುಗಿಯ ಮನೆ ಒಂದೇ ಊರಿನಲ್ಲಿರುವುದು ನನಗೆ ಇಷ್ಟವಿಲ್ಲ ಎಂದು ಸುರೇಶ ಈ ಮದುವೆ ಪ್ರಸ್ತಾಪವನ್ನು ತಳ್ಳಿ ಹಾಕುತ್ತಾನೆ.
ಮತ್ತೆ ಮತ್ತೆ ತಾಯಿಯ ಒತ್ತಾಯ ಮತ್ತು ರಾಖಲ ಮಜೂಮದಾರರ ಅಪ್ಪಣೆಯಂತೆ ಸುರೇಶ ಮದುವೆಯಾಗಲು ಅರೆಮನಸ್ಸಿನಿಂದ ಒಪ್ಪಿಗೆ ಕೊಡುತ್ತಾನೆ. ಇದರಿಂದ ಅನುಪಮೆಯು ಬಹಳ ಸಂತೋಷ ಪಡುತ್ತಾಳೆ. ಅದೇ ಸಮಯ ಆಕೆಯನ್ನು ಮನಸ್ಸಿನಲ್ಲೇ ಪ್ರೀತಿಸುತ್ತಿದ್ದ ಮತ್ತೊಬ್ಬ ಯುವಕ ಲಲಿತಮೋಹನ ಶ್ರೀಮಂತ ವ್ಯಕ್ತಿಯಾದ ದರ್ಲಭ ಬಸು ಅವರ ಏಕಮಾತ್ರ ಪುತ್ರ. ಅವರ ನಿಧನದ ಬಳಿಕ ಉಂಡಾಡಿ ಗುಂಡನಂತೆ ತಿರುಗಾಡಿ, ತಂದೆ ಕೂಡಿಟ್ಟ ಹಣವನ್ನು ಹಾಳು ಮಾಡುತ್ತಿದ್ದ. ಗೆಳೆಯರ ಜೊತೆ ಸೇರಿಕೊಂಡು ಮದ್ಯಪಾನ ಮಾಡುವುದು, ತಂಬಾಕು ಸೇವನೆ ಮಾಡುವುದು ಅವನ ಕೆಲಸವಾಗಿತ್ತು. ಇದರ ಜೊತೆಗೆ ನೃತ್ಯಗಾತಿಯರ ಸಹವಾಸ. ಅವನನ್ನು ಊರಲ್ಲಿ ಯಾರೂ ಆದರದಿಂದ ನೋಡುತ್ತಿರಲಿಲ್ಲ. ತಾಯಿಯ ಮಾತುಗಳನ್ನೂ ಕೇಳಿಸಿಕೊಳ್ಳದ ಈತ ಒಮ್ಮೆ ರಾತ್ರಿಯಲ್ಲಿ ಸುತ್ತಾಡುವಾಗ ಅನುಪಮೆಯನ್ನು ನೋಡಿ ಮೋಹಿತನಾಗುತ್ತಾನೆ. ಅನುಪಮೆ ಈ ಸಂಗತಿಯನ್ನು ತನ್ನ ಅಣ್ಣನಿಗೆ ತಿಳಿಸಿದಾಗ ಆತ ಪೋಲೀಸ್ ರಿಗೆ ದೂರು ನೀಡಿ ಆತನನ್ನು ದಸ್ತಗಿರಿ ಮಾಡಿಸುತ್ತಾನೆ. ಆತನಿಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತದೆ.
ಇತ್ತ ಸುರೇಶನು ಬಿ ಎ ಪದವಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾನೆ. ಮದುವೆಯ ದಿನಾಂಕ ನಿರ್ಧಾರವಾಗುತ್ತದೆ. ಸುರೇಶನಿಗೆ ಮುಂದಕ್ಕೆ ಓದಲು ಸ್ಕಾಲರ್ ಶಿಪ್ ಸಿಕ್ಕಿರುತ್ತದೆ. ಆತ ಇಂಗ್ಲೆಂಡ್ ಹೋಗಲು ಬಯಸುತ್ತಾನೆ. ವಿವಾಹದ ದಿನ ಬಂದೇ ಬರುತ್ತದೆ. ಜಗಬಂಧು ಬಾಬುಗಳು ಮದುವೆಗಾಗಿ ಬಹಳ ಸಿದ್ಧತೆಯನ್ನು ಮಾಡಿರುತ್ತಾರೆ. ಆದರೆ ವಿವಾಹದ ದಿನ ಮುಹೂರ್ತ ಹತ್ತಿರ ಬಂದರೂ ವರನಾದ ಸುರೇಶನ ಪತ್ತೆ ಇರುವುದಿಲ್ಲ. ಎಲ್ಲರಿಗೂ ಗಾಭರಿಯಾಗುತ್ತದೆ. ಆಗಿನ ಸಂಪ್ರದಾಯದಂತೆ ಒಮ್ಮೆ ನಿರ್ಧಾರ ಮಾಡಿದ ಮುಹೂರ್ತದಂದು ಹುಡುಗಿಯ ಮದುವೆ ನಡೆಯದೇ ಹೋದರೆ ಆಕೆಯ ತಂದೆ ತಾಯಿಯನ್ನು ಸಮಾಜ ಬಹಿಷ್ಕಾರ ಮಾಡುತ್ತದೆ. ಅದಕ್ಕಾಗಿ ಕೆಲವು ಮಂದಿ ಹಿತೈಷಿಗಳು (?) ಸೇರಿ ಅವಳ ಮದುವೆಯನ್ನು ಅದೇ ಮುಹೂರ್ತದಲ್ಲಿ ಐವತ್ತು ವರ್ಷದ ಮುದುಕ, ಅಸ್ತಮಾ ರೋಗಿಯಾದ ರಾಮದುಲಾಲ ದತ್ತನೊಂದಿಗೆ ಮಾಡುವ ವ್ಯವಸ್ಥೆ ಮಾಡುತ್ತಾರೆ.
ಅನುಪಮೆಯ ನಿರಾಕರಣೆಯ ನಡುವೆಯೂ ಅವಳ ಮದುವೆ ಮುದುಕ ರಾಮದುಲಾಲ ದತ್ತನ ಜೊತೆ ಆಗಿ ಬಿಡುತ್ತದೆ. ರಾಮದುಲಾಲ ದತ್ತನಿಗೆ ತನ್ನದೇ ಆದ ಮನೆ, ಕೆಲಸ ಎಂಬುವುದಿರಲಿಲ್ಲ. ಅವನು ತನ್ನ ಮಾವನ ಮನೆಗೆ ಬಂದು ವಾಸ ಮಾಡುತ್ತಾನೆ. ಎರಡು ವರ್ಷಗಳ ನಂತರ ಅಸ್ತಮಾ ಕಾಯಿಲೆ ಜೋರಾಗಿ ನಿಧನ ಹೊಂದುತ್ತಾರೆ. ತನ್ನ ಪತಿಯ ನಿಧನದ ನಂತರ ಅನುಪಮೆ ಕಠೋರ ವಿಧವಾ ವೃತಗಳನ್ನು ಕೈಗೊಳ್ಳುತ್ತಾಳೆ. ಬಿಳಿ ಸೀರೆ ಉಡುತ್ತಾಳೆ, ಆಭರಣಗಳನ್ನು ಕಳಚುತ್ತಾಳೆ. ರಾತ್ರಿಯ ಊಟ ಬಿಡುತ್ತಾಳೆ. ಅಮವಾಸ್ಯೆ, ಶಿವರಾತ್ರಿ, ಏಕಾದಶಿ ಹೀಗೆ ವಿಶೇಷ ದಿನಗಳಂದು ಉಪವಾಸ ಮಾಡುತ್ತಾಳೆ. ದಿನದಿಂದ ದಿನಕ್ಕೆ ಕಳಾಹೀನಳಾಗುತ್ತಾಳೆ. ಅವಳನ್ನು ನೋಡಿ ತಂದೆಗೆ ಬಹಳ ನೋವಾಗುತ್ತದೆ. ಮತ್ತೊಂದು ಮದುವೆ ಮಾಡಿಸುವ ಮನಸ್ಸು ಮಾಡುತ್ತಾರೆ. ಆದರೆ ಅನುಪಮೆ ಒಪ್ಪುವುದಿಲ್ಲ. ತಾನು ಹಾಗೂ ಅನುಪಮೆಯ ತಾಯಿಯವರ ನಿಧನದ ನಂತರ ಆಕೆಯನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ತಂದೆ ಕೇಳುತ್ತಾರೆ. ಅಣ್ಣ ನೋಡುತ್ತಾನೆ ಎನ್ನುತ್ತಾಳೆ ಅನುಪಮೆ. ಆದರೆ ತಂದೆ ತಾಯಿಯರ ನಿಧನದ ಬಳಿಕ ಅನುಪಮೆಯ ಬಾಳು ಕೆಲಸದಾಳುಗಿಂತಲೂ ಕಡೆಯಾಗುತ್ತದೆ. ತಂದೆ ಬರೆದ ಮರಣಾಪತ್ರವನ್ನು ಬದಲಾಯಿಸಿ ಅನುಪಮೆಗೆ ಕೇವಲ ಐದು ನೂರು ರೂಪಾಯಿ ನೀಡುತ್ತಾನೆ ಅವಳ ಮಲ ಅಣ್ಣ. ಮನೆಯಲ್ಲಿ ಅವಳ ಬಾಳು ಕೆಲಸದಾಳುವಿಗಿಂತಲೂ ಕಡೆಯಾಗಿ ಹೋಗುತ್ತದೆ. ತನ್ನ ಅಣ್ಣ ಹಾಗೂ ಅತ್ತಿಗೆ ನೀಡುತ್ತಿದ್ದ ಕಿರುಕುಳವನ್ನು ಸಹಿಸಿ ಅಲ್ಲೇ ಬಾಳುತ್ತಾಳೆ. ಆದರೆ ಒಂದು ದಿನ ಅವಳ ಮೇಲೆ ಕ್ಷುಲ್ಲುಕ ಕಾರಣದ ಅಪವಾದ ಹೊರಿಸಿ ಮನೆಯಿಂದ ಹೊರಗೆ ಹಾಕುತ್ತಾನೆ ಅವಳ ಅಣ್ಣ. ಹೀಗೆ ಮನೆಯಿಂದ ಹೊರಬಿದ್ದ ಅನುಪಮೆ ಆತ್ಮಹತ್ಯೆ ಮಾಡಲು ಕೆರೆಯತ್ತ ಹೋಗುತ್ತಾಳೆ. ಈ ಮೊದಲು ಒಮ್ಮೆ ಸಾಯಲು ವಿಫಲ ಪ್ರಯತ್ನ ಮಾಡಿರುತ್ತಾಳೆ. ಕೆರೆಯಲ್ಲಿ ನೀರಿಲ್ಲದ ಕಾರಣ ಅವಳ ಆತ್ಮಹತ್ಯಾ ಪ್ರಯತ್ನ ವಿಫಲವಾಗಿರುತ್ತದೆ. ಅವಳು ಈ ಬಾರಿ ಕುತ್ತಿಗೆಗೆ ಕಲ್ಲು ಕಟ್ಟಿ ನೀರಿಗೆ ಧುಮುಕಲು ಹೋಗುವಾಗ ಅವಳನ್ನು ಒಂದು ಧ್ವನಿ ಕರೆಯುತ್ತದೆ.
ಧ್ವನಿ ಬಂದ ಕಡೆ ನೋಡಿದಾಗ ಲಲಿತಮೋಹನ ಅಲ್ಲಿರುತ್ತಾನೆ. ಆತ ಆಗಷ್ಟೇ ಜೈಲು ಶಿಕ್ಷೆ ಮುಗಿಸಿ ಹೊರ ಬಂದಿರುತ್ತಾನೆ. ಜೈಲು ವಾಸ ಅವನನ್ನು ಪರಿವರ್ತನೆ ಮಾಡಿತ್ತು. ಆತನೀಗ ಎಲ್ಲಾ ದುಶ್ಚಟಗಳನ್ನು ತ್ಯಜಿಸಿರುತ್ತಾನೆ. ಆತ ಅನುಪಮೆಗೆ ಬಾಳು ನೀಡಲು ಬಯಸುತ್ತಾನೆ. ಆತ್ಮಹತ್ಯಾ ಯೋಚನೆಯನ್ನು ಕೈಬಿಡು ಎನ್ನುತ್ತಾನೆ. ಪರಿಪರಿಯಾಗಿ ಕೇಳಿಕೊಂಡರೂ ಅನುಪಮೆಯು ತನ್ನ ಆತ್ಮಹತ್ಯೆಯ ಯೋಜನೆಯಿಂದ ಹಿಂದೆ ಸರಿಯದೆ, ಕೆರೆಗೆ ಹಾರಿ ಬಿಡುತ್ತಾಳೆ. ಮುಂದೇನಾಯಿತು? ತಿಳಿಯಬೇಕಾದರೆ ನೀವು ಈ ಕಾದಂಬರಿಯನ್ನು ಓದಲೇ ಬೇಕು.
ಹಳೆಯ ಕಾದಂಬರಿಯಾದರೂ ನಿಮಗೆ ಪುಸ್ತಕ ಸಂಗ್ರಹಕಾರರಲ್ಲಿ ಅಥವಾ ಗ್ರಂಥಾಲಯದಲ್ಲಿ ಸಿಗುವ ಸಾಧ್ಯತೆ ಇದ್ದೇ ಇದೆ. ೪೩ ಪುಟಗಳ ಪುಟಾಣಿ ಪುಸ್ತಕವನ್ನು ಒಂದೇ ಸಲಕ್ಕೆ ಓದಿ ಮುಗಿಸಬಹುದಾಗಿದೆ. ಶರಶ್ಚಂದ್ರ ಚಟ್ಟೋಪಾಧ್ಯಯರ ಸೊಗಸಾದ ಕಾದಂಬರಿಯನ್ನು ಓದಲು ತಪ್ಪಿಸಬೇಡಿ.