ಅನುಮಾನ ಬಂದ ದಿನ....

ಅನುಮಾನ ಬಂದ ದಿನ....

ಬರಹ

ಅನುಮಾನ ಬಂದ ದಿನ.... ಏನು?

ಎಲ್ಲವೂ ಮುಗಿದಿರುತ್ತದೆ. ಅತಂಕದ ಶಕೆ ಆರಂಭವಾಗಿರುತ್ತದೆ. ಹುಣಸೆಹಣ್ಣು, ಬೆಲ್ಲ, ಜೀರಿಗೆ, ಮೆಣಸಿನಕಾಯಿ ಹಾಕಿ ಕುಟ್ಟಿ ಕುಟ್ಟುಂಡಿ ಮಾಡಿದ ಬಾಲ್ಯದ ಗೆಳೆಯ ಮುದುಡಿ ಮೂಲೆ ಸೇರಿರುತ್ತಾನೆ. ಕಟ್ಟಿಕೊಂಡ ಹೆಂಡತಿಗೆ ಮೌನವಲ್ಲದೇ ಬೇರೆನೂ ಉಳಿದಿರುವುದಿಲ್ಲ. ಅತ್ತ ಹೆತ್ತ ಮಕ್ಕಳು ಅಪ್ಪ ಅಮ್ಮನಿಗೆ ನೀವ್ಯಾಕೆ ನಮ್ಮನ್ನು ಹೆರಬೇಕಿತ್ತು, ನಾವೇನು ಕೇಳಿಕೊಂಡು ಬಂದಿದ್ವಾ ಎಂದು ಕೇಳುವ ಭಂಡ ಧೈರ್ಯಕ್ಕೆ ಬಂದಿರುತ್ತಾರೆ.

ಅನುಮಾನಕ್ಕಿರುವ ಮನೆ ಮುರುಕ ಶಕ್ತಿಯೇ ಅಂತಹದು. ಎಂತಹ ಫೆವಿಕಾಲ್ ಜೋಡಿಗಳನ್ನು ಮುಖ ನೋಡದ ಹಾಗೆ ಮುರಿದು ಮುಕ್ಕಿಬಿಡಬಲ್ಲುದು. ಕರ್ಣನು ಭಾನುಮತಿಯ ಜತೆ ಪಗಡೆಯಾಡಿ ಗೆದ್ದ ಪ್ರಸಂಗ ನೆನಪಿರಬಹುದು. ಮೊದಲೇ ಆದ ಒಪ್ಪಂದದಂತೆ ದುರ್ಯೋಧನನ ಹೆಂಡತಿ ಭಾನುಮತಿ ಸೋತ ತಪ್ಪಿಗೆ ಆಕೆಯ ಮುತ್ತಿನ ಹಾರವನ್ನು ಕೊಡಬೇಕಾಗಿರುತ್ತದೆ. ಆದರೆ ಆಟದ ಕಡೆಗೆ ಆಕೆ ನೀಡದೆ ಸತಾಯಿಸುತ್ತಾಳೆ. ಸೋಲೊಪ್ಪದ ಕರ್ಣ ತಾನೇ ಆಕೆಯ ಕುತ್ತಿಗೆಯಲ್ಲಿರುವ ಮುತ್ತಿನ ಹಾರಕ್ಕೆ ಕೈ ಹಾಕಿ ಎಳೆಯುದಕ್ಕೂ, ದುರ್ಯೋಧನನು ಬರುವುದಕ್ಕೂ ಸೇರಿಹೋಗುತ್ತದೆ. ದುರ್ಯೋಧನ, ಕರ್ಣ, ಭಾನುಮತಿ ಮತ್ತು ಹರಿದ ಹಾರದಿಂದ ನೆಲದ ಮೇಲೆಲ್ಲಾ ಹರಡಿದ ಮುತ್ತುಗಳು... ಈ ಸಂದರ್ಭದಲ್ಲಿ ದುರ್ಯೋಧನನ ಸ್ಥಾನದಲ್ಲಿ ನಾವಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರಬಹುದು? ಅದರೆ ಮಹಾಭಾರತದ ಮಹಾನ್ ಖಳನಾದ ದುರ್ಯೋಧನ (ದುರ್ಯೋಧನ = ಕೆಟ್ಟ ಯೋಧ ಎಂದು ಅವರ ತಂದೆ ತಾಯಿ ಯಾಕೆ ಹೆಸರಿಟ್ಟರೆಂದು ನನಗೆ ತಿಳಿಯದು) ಆಡಿದ ಮಾತೇನು ಗೊತ್ತೇ? 'ಗೆಳೆಯ ನಾನು ನಿನಗೆ ಮುತ್ತುಗಳನ್ನು ಹೆಕ್ಕಿಕೊಡಲು ಸಹಾಯ ಮಾಡಲೇ?' .....

ಒಂದು ಕ್ಷಣ ಇಂಥ ಖಳನಿಗಿರಬಹುದಾದ ಗುಣವು ನಮಗಿರುವುದಿಲ್ಲ. ನೋಡಿದ ಮೇಲೆ ಆಡಿ ಮುಗಿಸಲೇ ಬೇಕು. ಅಲ್ಲಿಯವರಗೆ ನಮ್ಮೊಳಗಿನ ಅನುಮಾನದ ದಾವಾಗ್ನಿ ಆರುವುದಿಲ್ಲ. ಒಮ್ಮೆ ಅನುಮಾನವೆಂಬ ವಿಷವನ್ನು ಕಾರಿದ ಮೇಲೆ ಕಕ್ಕಿದ ವ್ಯಕ್ತಿ ನಿರುಮ್ಮಳನಾಗುತ್ತಾನೆ. ಎದುರುಗಿದ್ದ ವ್ಯಕ್ತಿಯಲ್ಲಿ ಈತನ ಮೇಲಿದ್ದ ಪ್ರೀತಿ ಸತ್ತಿರುತ್ತದೆ. ಒಮ್ಮೆ ಆಡಿದ ಮೇಲೆ ನಾವೆಷ್ಟು ಕಷ್ಟಪಟ್ಟರೂ ಜೋಡಿಸಲಾಗದ ಒಡೆದ ಕನ್ನಡಿಯಂತಾಗಿರುತ್ತದೆ ಮನಸ್ಸು.

ಒಂದೇ ಒಂದು ಕ್ಷಣ ಬಾಯಿ ಬಿಗಿ ಹಿಡಿದ್ದಿದರೆ ಸತ್ಯ ಸಹಾಯಕ್ಕೆ ಬರುತ್ತಿತ್ತು. ಅಷ್ಟು ಸುಮ್ಮನಿರಲು ಈ ಅನುಮಾನವೆಂಬ ರೋಗ ಬಿಡುವುದಿಲ್ಲ. ಅನಂತರ ಮುರಿದ ಮನಸ್ಸುಗಳ ನಡುವೆ ಅಸಹಜ ನಗುವಿನ ನಾಟಕವಾಡುತ್ತ ಬದುಕುವ ಪರಿ ಕಾಗದದ ಹೂವಲ್ಲಿ ಸುಗಂಧ ಅರಸಿದ ರೀತಿ.

ಹೊಸ ವರ್ಷದ ಹೊಸ್ತಿಲಲ್ಲಿ ಕಳೆದ ವರ್ಷದಲ್ಲಿ 'ಕಾಡಿದ' ಗೆಳೆಯರು ನೆನಪಾಗಬಹುದೇನೊ... ನಿಮಗೂ ಕೂಡ....