ಅನುರಾಯ ಶಾಲ್ಮಲೆ
ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನವಾದ 'ಅನುರಾಯ ಶಾಲ್ಮಲೆ' ಇದರ ಲೇಖಕರು ಖ್ಯಾತ ಇತಿಹಾಸಕಾರರೂ, ವಾಗ್ಮಿಗಳೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಇವರು. ಇವರು ಕಳೆದ ೧೫ ವರ್ಷಗಳಿಂದ ಇತಿಹಾಸ ಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿದ್ದಾರೆ.
"'ಅನುರಾಯ ಶಾಲ್ಮಲೆ' ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು ಕ್ರಿ ಶ ೧೬೭೮ರಿಂದ ೧೭೧೮ರವರೆಗೆ ಆಳ್ವಿಕೆ ಮಾಡಿದ ಪರಾಕ್ರಮಿ, ಸಾಹಿತಿ, ಸಂಗೀತ ಪ್ರೇಮಿ ಅರಸ. ಈತನ ಶ್ರೇಷ್ಟ ಸಾಧನೆಯೆಂದರೆ ಕ್ರಿ ಶ.೧೬೮೦ರಲ್ಲೇ ದೇಶದಲ್ಲಿ ಮೊದಲ ಬಾರಿಗೆ ಬ್ರಿಟೀಷರನ್ನು ಸೋಲಿಸಿದ ಅತ್ಯುನ್ನತ ಶ್ರೇಯ. ಈತನನ್ನೆ ಕಥಾವಸ್ತುವನ್ನಾಗಿಸಿಕೊಂಡು ಲೇಖಕರು ಈ ಕಾದಂಬರಿಯನ್ನು ರಚಿಸಿದ್ದಾರೆ." ಎಂದಿದ್ದಾರೆ ಪ್ರಕಾಶಕರು.
ಲೇಖಕರು ತಮ್ಮ ಮಾತಿನಲ್ಲಿ ಈ ಕಾದಂಬರಿಯ ಸೃಷ್ಟಿಯ ಬಗ್ಗೆ ಹೇಳುವುದು ಹೀಗೆ "ಹಿಂದಿನ ಕನಸು. ನಾನೊಂದು ಐತಿಹಾಸಿಕ ಕಾದಂಬರಿ ಬರೆಯಬೇಕೆಂದು ಕೊಂಡೆ. ಜೊತೆಗೊಂದಿಷ್ಟು ಆತಂಕ... ಮೂಲತಃ ನಾನೊಬ್ಬ ಇತಿಹಾಸಕಾರನಾಗಿದ್ದು ಕಾದಂಬರಿ ಬರೆಯುವುದು ಸಾಧ್ಯವೇ? ಏಕೆಂದರೆ ಇತಿಹಾಸದ ಬರವಣಿಗೆಗೂ ಕಾದಂಬರಿಯ ರಚನೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಐತಿಹಾಸಿಕ ಬರವಣಿಗೆ ಎಂದರೆ ಅಪ್ಪಟ ಸತ್ಯದ ಅನಾವರಣ. ಅಲ್ಲಿ ಕಲ್ಪನೆಗೆ ಅವಕಾಶವಿಲ್ಲ. ೨೦೨೦ ಮಾರ್ಚ್ ೨೩ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕೋವಿಡ್ ಕಾರಣದಿಂದ ಸಂಪೂರ್ಣವಾಗಿ ಬಂದ್ ಘೋಷಣೆಯಾದ ದಿನ ನಾನು ಒಂದು ನಿರ್ಧಾರ ಮಾಡಿಬಿಟ್ಟೆ ! ಇಂದಿನಿಂದ ಒಂದು ಐತಿಹಾಸಿಕ ಕಾದಂಬರಿ ರಚಿಸಲು ಆರಂಭಿಸುತ್ತಿದ್ದೇನೆ ಎಂಬುದಾಗಿ! ಸರಿ ಬರೆಯಲು ಪ್ರಾರಂಭಿಸಿದೆ. ಯಾಕೆ ಏನೋ ನನ್ನ ಈ ೧೭ ವರ್ಷಗಳ ಬರವಣಿಗೆಯ ಅನುಭವದಲ್ಲಿ ಇಷ್ಟು ವಿಳಂಬ ಯಾವಾಗಲೂ ಆಗಿರಲಿಲ್ಲ... ಅಷ್ಟು ಸುದೀರ್ಘ ಸಮಯವನ್ನು ಈ ಕಾದಂಬರಿ ತೆಗೆದುಕೊಂಡಿತಾ, ಇದೊಂದು ಕಿರು ಕಾದಂಬರಿ. ವಿನಾ ಕಾರಣ ವಿಷಯವನ್ನು ಹಿಗ್ಗಿಸುತ್ತಾ ಕಾದಂಬರಿಯ ಗಾತ್ರವನ್ನು ಹೆಚ್ಚಿಸುವ ಸಾಹಸಕ್ಕೆ ಮುಂದಾಗದೆ ನೇರವಾಗಿ, ಸರಳವಾಗಿ ನಿರೂಪಿಸಿದ್ದೇನೆ. ಆರಂಭದಲ್ಲಿ ಹೇಳಿದ ಹಾಗೆ ನಾನೊಬ್ಬ ಇತಿಹಾಸಕಾರನಾಗಿ ಕಾದಂಬರಿಯನ್ನು ಬರೆಯಲು ತೊಡಗಿದಾಗ ನನ್ನೆದುರಿಗೆ ಇದ್ದದ್ದು ಕಲ್ಪನೆ. ಅದೂ ಕೂಡ ವಾಸ್ತವಕ್ಕೆ ಹತ್ತಿರವಾದದ್ದು. ಇತಿಹಾಸದ ಮೂಲಾಧಾರಕ್ಕೆ ಧಕ್ಕೆ ತರುವಂತಿರಬಾರದು ಎಂದು. ".
ಸೋದೆ ಸದಾಶಿವರಾಯರ ಆತ್ಮಕಥೆ ನಿಜಕ್ಕೂ ಬಹಳ ನಿಗೂಢ ಕಥಾವಸ್ತು. ಈ ಕಥಾವಸ್ತುವನ್ನು ಸರಾಗವಾಗಿ ನಿರೂಪಿಸುವುದು ಬಹಳ ಕಷ್ಟದ ಕೆಲಸವೇ ಸರಿ. ಲೇಖಕರು ಈ ನಿಟ್ಟಿನಲ್ಲಿ ಬಹಳ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ಸೋದೆ ಸದಾಶಿವರಾಯರ ವಂಶಸ್ಥರಾದ ಅರಸಪ್ಪನವರ ಕಥೆಯನ್ನು ಕಾದಂಬರಿಯಲ್ಲಿ ವಿವರಿಸುತ್ತಾ ಶತ್ರುಗಳು ಅರಸಪ್ಪನ ಸಾಮ್ರಾಜ್ಯವಾದ ಸುಧಾಪುರ ಕ್ಷೇತ್ರದ ಮೇಲೆ ಹಠಾತ್ ದಾಳಿ ಮಾಡಿದಾಗ ಆತ ಸೋತು, ಹತಾಶನಾಗಿ ರಾತೋರಾತ್ರಿ ಊರು ಬಿಟ್ಟು ತಲೆಮರೆಸಿಕೊಳ್ಳಲು ಬಯಸುತ್ತಾನೆ. ಅದೇ ಸಮಯದಲ್ಲಿ ತಪೋವನ ಎಂಬ ಸ್ಥಳದಲ್ಲಿ ಜಪನಿರತರಾದ ವಾದಿರಾಜರು ಇವರನ್ನು ನೋಡಿ ಕರೆದು ಆತನ ಮನದ ವ್ಯಥೆಯನ್ನು ಕೇಳುತ್ತಾರೆ. ಅದಕ್ಕೆ ಅರಸಪ್ಪನು ಸದಾ ಗೆಲುವನ್ನೇ ಕಾಣುತ್ತಿದ್ದ ನನಗಿಂದು ಸೋಲಾಗಿದೆ. ಈ ಸೋಲನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕೇ ರಾಜ್ಯವನ್ನು ಬಿಟ್ಟು ಹೋಗುತ್ತಿರುವೆ ಎನ್ನುತ್ತಾರೆ.
ಈ ಮಾತಿಗೆ ವಾದಿರಾಜರು ಹೇಳುತ್ತಾರೆ "ಮಗೂ, ಗೆಲುವಿನಲ್ಲಿ ತಲೆ ಎತ್ತಿ ನಿಲ್ಲುವುದು ದೊಡ್ಡ ಸಂಗತಿಯಲ್ಲ. ಸೋಲಿನಲ್ಲಿ ತಲೆ ಎತ್ತಿ ನಿಲ್ಲುವುದು ದೊಡ್ಡ ಸಂಗತಿ. ರಾಜನಾದವನಿಗೆ ಸೋಲು ಗೆಲುವು ಅತ್ಯಂತ ಸಾಮಾನ್ಯ ಸಂಗತಿ. ಕೇವಲ ಒಂದು ಸೋಲು ನಿನ್ನನ್ನು ಈ ಮಟ್ಟಕ್ಕೆ ತಂದಿತೆಂದರೆ ಆ ಪದವಿಗೆ ನೀನು ಸಮರ್ಥನಲ್ಲ ಎನಿಸುತ್ತದೆ. ನಿನ್ನಿಂದ ಆಗಬೇಕಾದ ಕಾರ್ಯ ಇನ್ನೂ ತುಂಬಾ ಇದೆ. ಸೋಲನ್ನು ಗೆಲುವನ್ನಾಗಿಸುವತ್ತ ನಿನ್ನ ಸಾಧನೆ ಇರಲಿ. ಹತಾಶೆಯನ್ನು ತ್ಯಜಿಸಿ ಪುನಃ ನಿನ್ನ ರಾಜ್ಯಕ್ಕೆ ಮರಳು ಅಲ್ಲಿ ನಿನಗಾಗಿ ನಿನ್ನ ಸಿಂಹಾಸನ, ಛತ್ರ ಚಾಮರವೆಲ್ಲ ಕಾದು ಕುಳಿತಿವೆ ಹೋಗು" ಎಂದಾಗ ಅರಸಪ್ಪನಿಗೆ ಒಂದು ರೀತಿ ಜ್ಞಾನೋದಯದ ಭಾವ ಆಯಿತು. ಆ ಕ್ಷಣವೇ ವಾದಿರಾಜರಿಗೆ ವಂದಿಸಿ ಮರಳಿ ಸುಧಾಪುರಕ್ಕೆ ಹಿಂದಿರುಗಿ ಅರಸೊತ್ತಿಗೆಯನ್ನು ಮರಳಿ ಪಡೆಯುತ್ತಾನೆ. ಹೀಗೆ ಹಲವಾರು ಕುತೂಹಲಕಾರಿ ಸಂಗತಿಗಳು ಪುಸ್ತಕದಲ್ಲಿವೆ.
ಪುಸ್ತಕದ ಕಥಾ ವಸ್ತು ಬಹಳ ಚೆನ್ನಾಗಿದ್ದರೂ ಹಲವಾರು ಅಕ್ಷರ ತಪ್ಪುಗಳು ಈ ಪುಸ್ತಕದಲ್ಲಿ ಆಗಾಗ ಇಣುಕುತ್ತವೆ. ಕಾದಂಬರಿಯು ಅಧ್ಯಾಯ ರೂಪದಲ್ಲಿರದೇ ಪೂರ್ತಿ ನೂರು ಪುಟಗಳು ತುಂಬಿಕೊಂಡಿರುವುದರಿಂದ ಓದಲು ಕೆಲವೆಡೆ ಗೊಂದಲಗಳಾಗುತ್ತವೆ. ಏನೇ ಆದರೂ ಈ ಐತಿಹಾಸಿಕ ಕಾದಂಬರಿಯ ಓದು ಈಗಿನ ಜನಾಂಗಕ್ಕೆ ಅತ್ಯವಶ್ಯ. ಸೋದೆ ಸದಾಶಿವರಾಯರೇ ಮರುಜನ್ಮ ಪಡೆದಂತೆ ಬಂದು ತಮ್ಮ ಕಥೆಯನ್ನು ಹೇಳುವುದು, ಕಡೆಗೆ ಅದು ವ್ಯಕ್ತಿಯೊಬ್ಬನ ಮನಸ್ಸಿನ ಭ್ರಾಂತಿ ಎಂದು ಅರಿವಾಗುವುದು ಎಲ್ಲವೂ ಬಹಳ ಕುತೂಹಲ ಕೆರಳಿಸುತ್ತವೆ. ಈ ನಿಟ್ಟಿನಲ್ಲಿ ಲೇಖಕರ ಪ್ರಯತ್ನ ಶ್ಲಾಘನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.