ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೨)

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೨)

ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಅದರ ಬಳಕೆ: ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ ನಿಜವಾಗಿಯೂ ರೈತನಿಗೆ ವರ. ಆದರೆ ಅದರ ಬಗ್ಗೆ ರೈತರಿಗೆ ಇನ್ನು ಹೆಚ್ಚಿನ ಮಾಹಿತಿ ಇಲ್ಲ. ವಾಸ್ತವವಾಗಿ ಈ ಸಾಲವು ಒಂದು ಓವರ್ ಡ್ರಾಪ್ಟ್ ತರಹದ್ದಾಗಿದ್ದು ರೈತರು ತಮ್ಮ ಅವಶ್ಯಕತೆಗೆ ಬೇಕಾದಷ್ಟೇ ಹಣವನ್ನು ತೆಗೆಯಬಹುದು. ಒಮ್ಮೆಲೇ ಹಣವನ್ನು ತೆಗೆಯುವುದರಿಂದ ಮತ್ತೆ ವಾರ್ಷಿಕ ಅಷ್ಟೇ ಮೊತ್ತವನ್ನು ಕಟ್ಟಲು ಕಷ್ಟವಾಗುತ್ತದೆ. ಆಗ ಖಾಸಗಿ ಲೇವಾದೇವಿದಾರರ ಬಳಿಗೆ ಹೋಗುತ್ತಾನೆ. ಈ ಸಾಲವನ್ನು ವರ್ಷ ವರ್ಷವೂ ಒಂದೇ ಬಾರಿ ಕಟ್ಟಿ ಸೂನ್ನೆ ಮೊತ್ತ ಮಾಡಬೇಕಾಗಿಲ್ಲ. ಈ ದಿನದ ಅಗತ್ಯಕ್ಕೆ ೫೦,೦೦೦ ನಗದೀಕರಣ ಮಾಡಿದರೆ ೧ ತಿಂಗಳು ಬಿಟ್ಟು ಯಾವುದಾದರೂ ಉತ್ಪನ್ನ ಮಾರಾಟ ಮಾಡಿ ೫೦,೦೦೦ ಪಡೆದರೆ ಅದನ್ನು ಒಮ್ಮೆ ಬ್ಯಾಂಕಿಗೆ ಸಂದಾಯ ಮಾಡಿ ನಂತರ ಮರುದಿನ ಬೇಕಾದರೂ ನಗದೀಕರಣ ಮಾಡಬಹುದು. ಹೀಗೆ ೬ ಬಾರಿ ಹಾಕಿ ಆರು ಬಾರಿ ತೆಗೆಯುತ್ತಾ ಇದ್ದಾಗ ನಿಮ್ಮ ಖಾತೆಯಲ್ಲಿ ತೆಗೆದಷ್ಟೇ ಮೊತ್ತ ಜಮೆಯಾಗಿರುತ್ತದೆ. ಆಗ ವಾರ್ಷಿಕವಾಗಿ ಅದರ ನವೀಕರಣ ಸಮಯದಲ್ಲಿ ಕೇವಲ ಬಡ್ಡಿ ಮಾತ್ರ ಕಟ್ಟುವ ಅನುಕೂಲ ಇದೆ. ಇದನ್ನು ಹೆಚ್ಚಿನ ರೈತರು ಅರ್ಥ ಮಾಡಿಕೊಂಡಿಲ್ಲ. ಇದನ್ನು  ಮನದಟ್ಟಾಗಿ ಹೇಳುವ ಗೋಜಿಗೆ ಯಾವ ಬ್ಯಾಂಕು ಮ್ಯಾನೇಜರರೂ ಹೋದಂತಿಲ್ಲ. ಪ್ರತೀಯೊಬ್ಬ ರೈತರೂ ಏನಾದರೂ ಕೃಷಿ ಉತ್ಪನ್ನ ಉತ್ಪಾದಿಸುವವರು. ಅದನ್ನು ಮಾರಾಟ ಮಾಡಲೇ ಬೇಕು. ಆಗ ಬರುವ ಹಣವನ್ನು ಜಮ ಮಾಡಿ ಮತ್ತೆ ಬೇಕಾದಾಗ ನಗದೀಕರಣಗೊಳಿಸಲೋಸ್ಕರವೇ ಈ ಕಿಸಾನ್ ಕಾರ್ಡ್ ಯೋಜನೆ ಇರುವುದು. ಒಂದು ವೇಳೆ ರೈತನಿಗೆ ಎಕ್ರೆವಾರು ಬ್ಯಾಂಕು ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವು ಕಿಸಾನ್ ಕಾರ್ಡ್ ಯೋಜನೆಯಂತೆ ಬೇಕಾಗಿದ್ದರೂ ಸಹ ಬ್ಯಾಂಕುಗಳು ಅದನ್ನೂ ನೀಡುತ್ತವೆ. ಆದರೆ ಸರಕಾರ ಈ ಯೋಜನೆಗಾಗಿ ನಿಗದಿಪಡಿಸಿದ ೭ % ಬಡ್ಡಿ ಅದಕ್ಕೆ ಅನ್ವಯವಾಗುವುದಿಲ್ಲ. ನಿರ್ಧರಿತ ಮೊತ್ತಕ್ಕೆ ಆ ಬಡ್ಡಿ ದರವೂ ಹೆಚ್ಚುವರಿ ಸಾಲಕ್ಕೆ ಹೆಚ್ಚಿನ ೧೨% ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ. ಒಂದು ವೇಳೆ ವಾರ್ಷಿಕ ನವೀಕರಣದ ಸಮಯದಲ್ಲಿ ಸಾಲವನ್ನು  ಕಟ್ಟುವುದು ಅಸಾಧ್ಯವಾದರೆ ರೈತರಿಗೆ ಆಗುವ ನಷ್ಟ ಕೇವಲ ೩% ಬಡ್ಡಿ ಮಾತ್ರ. ಅದ ಕಾರಣ ಖಾಸಗಿ ಲೇವಾದೇವಿದಾರರ ಮೂಲಕ ಮೀಟರು ಬಡ್ಡಿಯ ಸಾಲ ಪಡೆದು ಸಾಲವನ್ನು ನವೀಕರಿಸಬೇಕಾಗಿಲ್ಲ. ಮುಂದಿನ ವರ್ಷದ ಬೆಳೆ ಮಾರಾಟ ಮಾಡಿ ಕಟ್ಟಿದರೆ ಅಂತಹ ತೊಂದರೆ ಉಂಟಾಗುವುದಿಲ್ಲ. ಒಂದು ವೇಳೆ ಮೂರು ವರ್ಷದ ತನಕವೂ ಕಟ್ಟಲಾಗದಿದ್ದರೆ ಬಡ್ಡಿ ಸೇರುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ.

ಸಹಕಾರೀ ಸಂಘಗಳ ಸಾಲ ವಿಧಾನ ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಕ್ರಮಕ್ಕಿಂತ ಭಿನ್ನ. ಇಲ್ಲಿ ವರ್ಷಕ್ಕೊಮ್ಮೆ  ಮಾರ್ಚ್ ತಿಂಗಳಲ್ಲಿ ಪಡೆದ ಸಾಲವನ್ನು ಚುಕ್ತಾ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಚುಕ್ತಾ ಮಾಡದಿದ್ದಲ್ಲಿ  ಅವನು ಸುಸ್ತೀದಾರನಾಗುತ್ತಾನೆ. ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಮಾತ್ರ ಬಡ್ಡಿ ರಿಯಾಯಿತಿ ಮತ್ತು ಮರು ಸಾಲ ಎಂಬ ನಿಬಂಧನೆ ಇರುವ ಕಾರಣ ಈ ಸಮಯದಲ್ಲಿ ಸಾಲ ಚುಕ್ತಾ ಮಾಡಲು ರೈತರು ಖಾಸಗಿ ಲೇವೀದಾರಾರರ ಮೊರೆ ಹೋಗುತ್ತಾರೆ.

ಬಡ್ಡಿ ಹೊರೆ: ಖಾಸಗಿ ಲೇವದೇವಿದಾರರಿಗೆ ಮೀಟರು ಬಡ್ಡಿಯನ್ನು ತೆರೆಲು ಸಿದ್ದರಿರುವಾಗ ಬ್ಯಾಂಕುಗಳ ೧೨% ಬಡ್ಡಿ ಹೊರೆಯಾಗುವುದು ಸಾಧ್ಯವೇ? ಖಂಡಿತವಾಗಿಯೂ ಹೊರೆಯೇ. ರೈತನು ಅನಿವಾರ್ಯ ಪ್ರಸಂಗಗಳಿಗಾಗಿ ಮಾತ್ರ ಖಾಸಗಿ ಲೇವಾದೇವಿಯವರನ್ನು ಆಶ್ರಯಿಸುತ್ತಾನೆ. ಅಂಥಃ ಅನಿವಾರ್ಯತೆಯನ್ನು ಸೃಷ್ಠಿಸಿದದ್ದು ನಮ್ಮ ವ್ಯವಸ್ಥೆ. ಕೃಷಿಕನು ಬ್ಯಾಂಕುಗಳಿಂದ ಕೇಳುವ ಸಾಲ ಅವನ ಆಸ್ತಿಯ ಮೇಲೆಯೇ ಹೊರತು ವೈಯಕ್ತಿಕ ನೆಲೆಯಲ್ಲಿ ಅಲ್ಲ. ಕೃಷಿಕನ ಆಸ್ತಿಗೆ ಅದರದ್ದೇ ಆದ ಮೌಲ್ಯವಿದೆ. ಅದರ ೨೦% ದಷ್ಟನ್ನಾದರೂ ಬ್ಯಾಂಕುಗಳು ರೈತನಿಗೆ ಸಾಲರೂಪದಲ್ಲಿ ಮುಂಗಡ ಕೊಡುವ ಮನಸ್ಸು ಮಾಡಬೇಕು. ಬ್ಯಾಂಕುಗಳು ಯಾರದೇ ಖಾಸಗಿ ಸಂಸ್ಥೆ ಅಲ್ಲ. ಅದು ಸರಕಾರದ ಅಧೀನಕ್ಕೊಳಪಟ್ಟ ಸಂಸ್ಥೆ. ಸರಕಾರ ಅಂದರೆ ಸಾರ್ವಜನಿಕರು. ಸಾರ್ವಜನಿಕರ ಠೇವಣಿ ಹಾಗೂ ಸಾಲದ ಬಡ್ಡಿಗಳಿಂದ ಈ ಹಣಕಾಸು ಸಂಸ್ಥೆಗಳು ನಡೆಸಲ್ಪಡುತ್ತಿವೆಯೇ ಹೊರತು ಯಾರದೇ ವೈಯಕ್ತಿಕ ಹಣದಿಂದ ಅಲ್ಲ. ಆದ ಕಾರಣ ದೇಶದ ಆರ್ಥಿಕ ಶಕ್ತಿಯಾದ ಕೃಷಿಕನ ಹಣಕಾಸಿನ ಅವಶ್ಯಕತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕಾದುದು ನ್ಯಾಯಸಮ್ಮತ. ಕೃಷಿ ಎಂಬುದು ಉಳಿದ  ಉದ್ಯಮಗಳಂತೆ ಅಲ್ಲ. ಇಲ್ಲಿ ರೈತನ ಶ್ರಮದ ಜೊತೆಗೆ ಪ್ರಾಕೃತಿಕ ಅನುಕೂಲತೆಗಳ ಪಾಲೂ ೫೦ % ಇರುತ್ತದೆ. ಇದನ್ನು ಜಯಿಸಿ ಕೃಷಿಯಲ್ಲಿ ಲಾಭ ಮಾಡಿಕೊಳ್ಳಲು ಕೃಷಿಕ ಅದಕ್ಕೆ ಬಂಡವಾಳದ ಹೊಳೆಯನ್ನೇ ಹರಿಸಬೇಕಾಗುತ್ತದೆ. ಬಂದರೆ ಬಂತು, ಸೋತರೆ ಹೋಯಿತು ಎನ್ನುವ ಈ ಕ್ಷೇತ್ರಕ್ಕೆ ಆದ್ಯತಾ ನೆಲೆಯನ್ನು  ಕಲ್ಪಿಸಲಾಗಿದೆಯಾದರೂ ಅದಕ್ಕೆ ಬ್ಯಾಂಕುಗಳು ನೀಡುವ ಸಾಲ ಸೌಲಭ್ಯಕ್ಕೆ ಹೆಚ್ಚಿನ ಬಡ್ಡಿ ಹೇರುವುದು ಯುಕ್ತವಲ್ಲ. ಗರಿಷ್ಟ ೩ % ಬಡ್ಡಿಗಿಂತ ಹೆಚ್ಚಿನ ಬಡ್ಡಿಯ ಸಾಲ ಪೂರ್ಣಾವಧಿ ಕೃಷಿಕನಿಗೆ ಹೊರೆಯಾಗುತ್ತದೆ.  

ರೈತರು ಯಾವಾಗಲೂ ಪ್ರಾಮಾಣಿಕರು -ಬದ್ಧರು: ಬ್ಯಾಂಕುಗಳು ರೈತರೊಡನೆ ಹೆಚ್ಚು ಬೆರೆಯಬೇಕು. ಅವರಿಗೆ ಸಾಲವನ್ನು  ಕೊಡುವುದರಲ್ಲಿ ಹಿಂದೆ ಮುಂದೆ ಮಾಡದೆ ಅವನ ಮನಸ್ಸನ್ನು ಗೆಲ್ಲುವಂತಹ ರೀತಿಯಲ್ಲಿ ಸಾಲ ಮಂಜೂರಾತಿಯನ್ನು  ಮಾಡಬೇಕು. ಬಹುತೇಕ ರೈತರು ಮಾತಿಗೆ, ಋಣಕ್ಕೆ ಬದ್ದರಿರುತ್ತಾರೆ. ಇದಕ್ಕೆ ನಿದರ್ಶನ ಅವರು ಖಾಸಗಿ ಲೇವಾದೇವಿದಾರರಲ್ಲಿ ವ್ಯವಹರಿಸುವ ಕ್ರಮ. ಬ್ಯಾಂಕುಗಳ ಆಡಳಿತ ವ್ಯವಸ್ಥೆಗೂ ಗ್ರಾಹಕರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಸ್ಥಳೀಯ ಬ್ಯಾಂಕುಗಳ ಮ್ಯಾನೇಜರ್ ಹಾಗೂ ಸಿಬ್ಬಂದಿಗಳ ಮೇಲಿನ ಪ್ರೀತಿ, ಗೌರವ ಮತ್ತು ಅವರ ಸಾರ್ವಜನಿಕ ಸಂಪರ್ಕದಿಂದ ಬ್ಯಾಂಕಿನ ಮೇಲೆ ಗ್ರಾಹಕರಿಗೆ ವಿಶ್ವಾಸ ಉಂಟಾಗಬೇಕು. ವಿಶ್ವಾಸಕ್ಕೆ ಬದ್ಧರೆನಿಸಿದ ಕೃಷಿಕ ವರ್ಗ ಸಾಲ ಮರು ಪಾವತಿಯಲ್ಲಿ ಯಾವಾಗಲೂ ಬ್ಯಾಂಕುಗಳಿಗೆ ಹೊರೆಯಾಗಲಾರರು.

ಬಡ್ಡಿ ತಾರತಮ್ಯ- ಅಕ್ಷಮ್ಯ: ಕೇಂದ್ರ ಸರಕಾರ ರೈತರಿಗೆ ನೀಡುವ ಹಣಕಾಸಿನ ಮೇಲೆ ಸಹಾಯಧನವನ್ನು ನೀಡುವ ಕಾರಣದಿಂದ ಬೆಳೆ ಸಾಲಕ್ಕೆ ೭ % ಬಡ್ಡಿ. ಸರಕಾರವು ಇದನ್ನು  ರಾ. ಬ್ಯಾಂಕುಗಳು, ಸಹಕಾರೀ ಬ್ಯಾಂಕುಗಳಿಗೂ ನೀಡುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳ ಗ್ರಾಹಕರ ಪ್ರಮಾಣಕ್ಕೂ ಸಹಕಾರಿ ಬ್ಯಾಂಕುಗಳ ಗ್ರಾಹಕರ ಪ್ರಮಾಣಕ್ಕೂ ತುಂಬಾ ವ್ಯತ್ಯಾಸವಿದೆ. ರಾ. ಬ್ಯಾಂಕುಗಳು ೧೦೦ ಮಂದಿಗೆ ಸಾಲ ನೀಡುವಾಗ, ಸಹಕಾರೀ ಬ್ಯಾಂಕುಗಳು ೧೦-೨೦ ಮಂದಿಗೆ ಮಾತ್ರ ಸಾಲ ನೀಡಲು ಸಾಧ್ಯ. ಕಾರಣ ಅವುಗಳ ಹಣಕಾಸು ನಿಧಿ ಅಷ್ಟೇ ಇರುತ್ತದೆ. ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಕೃಷಿಕನಿಗೂ ಕೇಂದ್ರ ಸರಕಾರದ ಸಹಾಯಧನದ ೭% ಬಡ್ಡಿಯ ದರ ಮತ್ತು ಸಕಾಲದಲ್ಲಿ ಮರು ಪಾವತಿ ಮಾಡಿದ್ದಕ್ಕೆ ೩ % ಹೆಚ್ಚುವರಿಯೂ ಲಭ್ಯ. ಅಂದರೆ ಸಹಕಾರೀ ಬ್ಯಾಂಕುಗಳಿಗೆ ಕೃಷಿ ಬೆಳೆ ಸಾಲದ ಹಣವು ೪% ಬಡ್ಡಿಯಲ್ಲೇ ಲಭ್ಯ. ಇದಕ್ಕೆ ಮತ್ತೆ ರಾಜ್ಯ ಸರಕಾರ ತನ್ನ ಪಾಲು ೪% ಸೇರಿಸಿ, ಅದನ್ನು ಬಡ್ಡಿ ರಹಿತವಾಗಿ ವಿತರಿಸುತ್ತದೆ. ಈ ರೀತಿಯಲ್ಲಿ ಶೇ.೧೦-೨೦ ರೈತರಿಗೆ ಮಾತ್ರವೇ ತಲುಪುವ ಈ ಬಡ್ಡಿ ರಹಿತ ಸಾಲ ನಿಜವಾಗಿಯೂ ರೈತ ಶೋಷಣೆ. ಸಹಕಾರೀ ಬ್ಯಾಂಕುಗಳೂ, ರಾ. ಬ್ಯಾಂಕುಗಳೂ ಏಕಪಕಾರವಾಗಿ ಸಾಲ ಹಂಚಿಕೆ ಮತ್ತು ಬಡ್ಡಿ ವ್ಯವಸ್ಥೆಯನಿಟ್ಟುಕೊಂಡರೆ ರೈತನಿಗೆ ಅನುಕೂಲ.

(ಮುಂದುವರೆಯುವುದು)

ಸಹಕಾರ, ಮಾಹಿತಿ: ರಾಧಾಕೃಷ್ಣ ಹೊಳ್ಳ