ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೩)
ಎಲ್ಲರೂ ಬ್ಯಾಂಕು ಹಣಕಾಸಿನ ಫಲಾನುಭವಿಗಳಾಗಿಲ್ಲ: ಕೆಲವು ರೈತರಲ್ಲಿ ಆಸ್ತಿ ಇದೆ ಆದರೆ ಅದರ ಸ್ಥಿತಿ ಮನೆ ನಿಮ್ಮದು ಆದರೆ ತಂಬಿಗೆ ಮುಟ್ಟಬಾರದು ಎಂಬಂತಿದೆ. ನಮ್ಮಲ್ಲಿನ ಭೂಮಿ ಹಂಚಿಕೆ, ಭೂ ಒಡೆತನ ಹಾಗೂ ಅದರ ನಿಯಮ ನಿಬಂಧನೆಗಳು ತುಂಬಾ ಜಠಿಲವಾದದ್ದು, ಸಾಕಷ್ಟು ಕೃಷಿ ಜಮೀನುಗಳ ದಾಖಲೆಗಳು ಸಮರ್ಪಕವಾಗಿಲ್ಲ. ಕೌಟುಂಬಿಕ ಆಸ್ತಿ, ಪಾಲುಪಟ್ಟಿಗಳ ನ್ಯೂನ್ಯತೆಗಳು ರೈತರನ್ನು ಇನ್ನೂ ಬ್ಯಾಂಕು ಮುಂತಾದ ಸರಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಂದ ಸಾಲ ಗಿಟ್ಟಿಸಿಕೊಳ್ಳಲು ಸಾಧ್ಯವಾಗದಂತಿವೆ. ವಾರೀಸುದಾರರು ಯಾರೋ ಆಗಿದ್ದು, ಕೌಟುಂಬಿಕ ಭೂಮಿಯಲ್ಲಿ ವಾಸ್ತವ್ಯ ಮಾಡಿಕೊಂಡು ದಾಖಲೆ ಇಲ್ಲದೆ ಇರುವ ಹಲವು ಕೃಷಿ ಕುಟುಂಬಗಳನ್ನು ಕಾಣಬಹುದು. ಇವರ ಕಷ್ಟಗಳಿಗೆ ಕಂದಾಯ ಇಲಾಖೆ ಸಮರ್ಪಕವಾಗಿ ಸ್ಪಂದಿಸದ ಕಾರಣ ಅವರು ಅತಂತ್ರವಾಗಿ ಖಾಸಗಿ ಲೇವಾ ದೇವಿದಾರನ್ನು ಆಶ್ರಯಿಸುತ್ತಾರೆ. ಸಮರ್ಪಕವಾದ ದಾಖಲೆ ಇಲ್ಲದ ಯಾವುದೇ ರೈತನಿಗೂ ಬ್ಯಾಂಕುಗಳು ಸಹಕಾರೀ ಸಂಸ್ಥೆಗಳು ಸಾಲ ಕೊಡುವುದು ಅಸಾಧ್ಯ. ದಾಖಲೆಗಳನ್ನು ಸರಿಮಾಡಿಕೊಳ್ಳುವುದೂ ನಮ್ಮ ಭೂ ಕಾಯಿದೆಯ ಪ್ರಕಾರ ಕಷ್ಟ ಎಂಬಂತಿದೆ. ಸರಕಾರ ಕೆಲವು ಪ್ರಾಧಿಕಾರಗಳನ್ನು ರಚನೆ ಮಾಡಿ ಇಂಥ ದಾಖಲೆ ರಹಿತ ಭೂ ಹಿಡುವಳಿದಾರರ ಸಮಸ್ಯೆಗಳನ್ನು ಆಲಿಸಿ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದರಿಂದ ರೈತರ ಕಷ್ಟ ನಿವಾರಣೆ ಸಾಧ್ಯ. ಸಿವಿಲ್ ಮೊಕದ್ದಮೆಗಳು ಕಡಿಮೆ ಕಾಲ ಮಿತಿಯಲ್ಲಿ ಇತ್ಯರ್ಥಗೊಳ್ಳುವಂತಿರಬೇಕು.
ಜೀವನ ಭದ್ರತೆ ಒದಗಿಸಿ: ಕೃಷಿಕರಾದವರಿಗೆ ಸಮಾಜದಲ್ಲಿ ಜೀವನ ಭದ್ರತೆ ಇಲ್ಲದಿರುವುದು ಅತೀ ದೊಡ್ಡ ದುರಂತ. ಕೃಷಿಕ ಸಮಾಜಕ್ಕೆ ಕೊಡುವ ಕೊಡುಗೆ ಅಪಾರ. ಆದ ಕಾರಣ ಕೃಷಿಕನನ್ನು ಅತಂತ್ರವಾಗಿ ಇಡುವುದು ಸರಿ ಎನಿಸಲಾರದು. ಅವನ ಜೀವನ ಯಾವಾಗಲೂ ಅತಂತ್ರವಾಗಿಯೇ ಮುಂದುವರಿಯುತ್ತದೆ. ಅದನ್ನು ಸರಕಾರ ಮನಗಾಣಬೇಕು. ಕೃಷಿಕನಿಗೆ ಜೀವನ ಬಧ್ರತೆಯಾಗು ೫೫ ವರ್ಷದ ತರುವಾಯ ಮಾಸಿಕ ಪಿಂಚಣಿ ಯೋಜನೆ, ಮುಂತಾದವುಗಳನ್ನು ಜಾರಿಗೆ ತರಬೇಕು. ಆಗ ಕೃಷಿಕನು ಆತ್ಮಹತ್ಯೆಯಂಥ ಸಾಹಸಕ್ಕೆ ಇಳಿಯುವುದು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು. ಆತ್ಮಹತ್ಯೆ ಮಾಡಿಕೊಂಡ ರೈತರ ಯಾದಿಯನ್ನು ನೋಡಿದರೆ ಬಹುತೇಕ ೫೦ ವರ್ಷ ದಾಟಿದವರೇ ಕಾಣುತ್ತಾರೆ. ಈ ಸಮಯಕ್ಕೆ ಅವರಲ್ಲಿ ಜವಾಬ್ಧಾರಿ ಹೆಚ್ಚುತ್ತದೆ. ಮಕ್ಕಳಿದ್ದರೆ ಆಸ್ತಿ ಪಾಲು ಮಾಡಿ ಹಂಚಿಕೆ ಮಾಡಬೇಕಾಗುತ್ತದೆ. ಆಸ್ತಿ ಹಂಚಿಕೆ ಮಾಡುವಾಗ ಇರುವ ಸಾಲವನ್ನು ಯಾರೂ ಒಪ್ಪಿಕೊಳ್ಳಲು ಸಿದ್ದರಿರುವುದಿಲ್ಲ. ಮಕ್ಕಳ ವಿಧ್ಯಾಭ್ಯಾಸ, ಅನಾರೋಗ್ಯ ಸಮಸ್ಯೆ, ಮದುವೆ ಇತ್ಯಾದಿಗಳಾದ ಕೌಟುಂಬಿಕ ಅವಶ್ಯಕತೆಗಳಿಗಾಗಿ ಯಜಮಾನನ ಸ್ಥಾನದಲ್ಲಿ ನಿಂತು ಸಾಲ ಸೋಲ - ಸೋಲ ಮಾಡಿ ಖರ್ಚು ಮಾಡಿರುತ್ತಾರೆ. ಅದು ಯಜಮಾನನ ಪಾಲಿನ ಹೊರೆಯಾಗಿಯೇ ಉಳಿದಿರುತ್ತದೆ. ದಿನದಿಂದ ದಿನಕ್ಕೆ ಖರ್ಚುಗಳು ಬೆಳೆಯುತ್ತಲೇ ಇರುತ್ತದೆ. ಇದನ್ನು ಹೊಂದಿಸುವುದು ಕೃಷಿ ಮೂಲದ ಉತ್ಪಾದನೆಯಲ್ಲಿ ಕಷ್ಟ ಸಾಧ್ಯವಾಗಿ ಅಸಹಾಯಕತೆಯಿಂದ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಇದನ್ನು ತಡೆಯಲು ೫೦ -೫೫ ವರ್ಷದ ತರುವಾಯ ಅವನ ಜೀವನ ನಿರಾತಂಕವಾಗಿ ಸಾಗುವ ರೀತಿಯಲ್ಲಿ ಸರಕಾರೀ ನೌಕರರ ತರಹ ಅದೇ ಪ್ರಮಾಣದಲ್ಲಿ ಪಿಂಚಣಿ ವ್ಯವಸ್ಥೆಯನ್ನು ಸರಕಾರ ಜ್ಯಾರಿಗೆ ತರಬೇಕು.
ಕೃಷಿ ಭೂಮಿ ತುಂಡಾಗುವುದನ್ನು ತಡೆಯಬೇಕು: ನಮ್ಮ ದೇಶದ ಕೃಷಿ ಭೂಮಿ ಹರಿದು ಹಂಚಿ ಹೋದ ಪರಿಣಾಮ, ಹೆಚ್ಚಿನ ಸಂಖ್ಯೆಯ ಜನರಿಗೆ ಕೃಷಿಕ - ಅನ್ನದಾತ ಎಂಬ ಪದನಾಮ ದೊರೆಯಿತಾದರೂ ಇದರಿಂದ ಯಾರಿಗೂ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ಭೂ ಸುಧಾರಣಾ ಕಾಯಿದೆಯ ಉಳುವವನೇ ಹೊಲದೊಡೆಯನಾದ ಪರಿಣಾಮ ಒಂದಷ್ಟು ಜನ ಭೂರಹಿತರಾಗಿ ಹೊರ ಹೋದರು. ಅವರು ಬೇರೆ ಕ್ಷೇತ್ರ ಅರಸಿ ಹೋಗಿ ಜೀವನದಲ್ಲಿ ಹೊಸ ದಾರಿ ಕಂಡರು. ಅವರಲ್ಲಿ ಬಹುತೇಕರು ಮತ್ತೆ ಬೀದಿಗೆ ಬರಲಿಲ್ಲ. ಬದಲಿಗೆ ಊರು ಬಿಟ್ಟು ಹೋಗಿಯಾದರೂ ಜೀವನವನ್ನು ಭದ್ರಪಡಿಸಿಕೊಂಡರು. ಅಲ್ಲಿ ಹೊಲದೊಡೆಯನಾದವರು ಹೊಲವನ್ನು ತನ್ನ ಮಕ್ಕಳಿಗೆ ಮರಿ ಮಕ್ಕಳಿಗೆ ಪಾಲು ಮಾಡಿದ. ಭೂಮಿಯನ್ನು ಮಾರಾಟ ಮಾಡಿ ಕೃಷಿಯಲ್ಲಿ ಏನೂ ಸಾಧಿಸಲಾಗದೇ ಹೋದ. ಕೆಲವರು ಮಾತ್ರ ಇದನ್ನು ಉಳಿಕೊಂಡಿದ್ದರೂ ಅವರ ಸ್ಥಿತಿ ಚಿಂತಾಜನಕವಾಗಿಯೇ ಇದೆ. ಆದ ಕಾರಣ ಇನ್ನು ಮುಂದಕ್ಕೆ ಆದರೂ ಕೃಷಿ ಭೂಮಿ ಪಾಲು ಮಾಡುವುದನ್ನು ನಿಲ್ಲಿಸಬೇಕು. ಭೂಮಿ ಎಷ್ಟು ಸಣ್ಣದಾಗುತ್ತದೆಯೋ ಅಷ್ಟು ಅದರ ಉತ್ಪಾದಕತೆ ಕಡಿಮೆಯಾಗುತ್ತದೆ. ಒಂದು ಕುಟುಂಬ ಕೃಷಿಯಲ್ಲೇ ಬದುಕಲು ಕನಿಷ್ಟ ೫ ಎಕ್ರೆಯಷ್ಟಾದರೂ ಹೊಲ ಬೇಕಾಗುತ್ತದೆ. ಆಗ ವೈವಿಧ್ಯಮಯ ಬೆಳೆಗಳನ್ನು ಬೆಳೆಸಿ ಹೆಚ್ಚು ಉತ್ಪಾದನೆ ಮಾಡಲು ಸಾಧ್ಯ. ಕೃಷಿ ಭೂಮಿಯ ಹಕ್ಕುದಾರಿಕೆ ಕುಟುಂಬದ ಓರ್ವ ಸದಸ್ಯನಿಗೇ ಸಲ್ಲುವಂತಾಗಬೇಕು. ತುಂಡು ತುಂಡಾಗಿ ಅದನ್ನೇ ನಂಬಿ ಕಟ್ಟಿ ಬೆಳೆಸಿದವನಿಗೆ ನಿರಾಶೆಯಾಗಿ ಅವನೇ ಆತ್ಮಹತ್ಯೆಗೆ ಶರಣಾಗುವುದು ಸ್ವಾಭಾವಿಕ. ಇಂದು ನಮ್ಮಲ್ಲಿ ತುಂಡು ಭೂಮಿಯಲ್ಲಿ ಕೃಷಿ ಮಾಡಿ ಲಾಭವಾಗುತ್ತದೆ ಎಂದು ಹೇಳುವ ಜನರೂ ಇದ್ದಾರೆ. ಆದರೆ ಅದೆಲ್ಲವೂ ಅವನ ಶಾರೀರಿಕ ಶಕ್ತಿ ಇರುವಾಗ ಮಾತ್ರ. ಧೀರ್ಘಾವಧಿಗೆ ಇದು ಪ್ರಸ್ತುತವಲ್ಲ.
ಕೃಷಿಕನಿಗೆ ಮೀಸಲಾತಿ-ಉದ್ಯೋಗ ಭರವಸೆ: ಕೃಷಿ ಭೂಮಿ ತುಂಡಾಗಬಾರದು, ಕೃಷಿಕ ಕುಟುಂಬದ ಇತರ ಸದಸ್ಯನಿಗೆ ಜೀವನಕ್ಕೆ ಏನು ಈ ಪ್ರಶ್ನೆ ಸ್ವಾಭಾವಿಕ. ಅದಕ್ಕೆ ಸರಕಾರ ಕೃಷಿಕರ ಮಕ್ಕಳಿಗೆ ವ್ಯಾಸಂಗ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕಲ್ಪಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಇದರ ಅಗತ್ಯ ತುಂಬಾ ಇದೆ. ಬರೇ ಶಿಕ್ಷಣ ಮೀಸಲಾತಿಯಲ್ಲದೆ ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರಬೇಕು. ಕೃಷಿ ಭೂಮಿಗೆ ಧಾರಣಾ ಶಕ್ತಿ ಎಷ್ಟು ಎಂದು ಅಧ್ಯಯನ ನಡೆಸಿ, ಕೃಷಿಕುಟುಂಬದ ಹೆಚ್ಚುವರಿ ಅವಲಂಭಿತರು ಸಾಧ್ಯವಾದಷ್ಟು ಕೃಷಿ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಉದ್ಯೋಗ ಪಡೆದು ಜೀವನ ನಿರ್ವಹಣೆ ಮಾಡುವಂತಾದರೆ ಇರುವ ಅವಲಂಬಿತರಿಗೆ ಅನುಕೂಲವಾಗುತ್ತದೆ.
ಕೃಷಿಕ ಮಾನದಂಡ ಇರಲಿ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪೋಲೀಸರಿಗೆ ೫೦೦-೧೦೦೦ ಕೊಟ್ಟು ರೈತ ಎಂದು ದಾಖಲೆ ಸೃಷ್ಟಿಸಿ ರೈತ ಸಮುದಾಯಕ್ಕೆ ಅಪಖ್ಯಾತಿ ತರುವುದು ಯುಕ್ತವಲ್ಲ. ನಮ್ಮ ದೇಶದಲ್ಲಿ ಸಣ್ಣ ಅತೀ ಸಣ್ಣ ಎಂಬ ಕೃಷಿಕ ವರ್ಗ ಇದ್ದು, ಮನೆ ಹಿತ್ತಲಲ್ಲಿ ಎರಡು ತೆಂಗಿನ ಮರ ಇದ್ದರೂ ಅವನು ಕೃಷಿಕ ಎನಿಸಿಕೊಳ್ಳುತ್ತಾನೆ. ಉದ್ಯೋಗಕ್ಕಾಗಿ ಅವನು ಕೂಲಿ ಕೆಲಸವನ್ನು ಆಶ್ರಯಿಸಿಯೂ ಇರುತ್ತಾನೆ. ಕೃಷಿಕ- ಅವನ ಕೃಷಿ ಉತ್ಪಾದನೆ, ಸಾಮಾಜಿಕ ಕೊಡುಗೆಗಳ ನಿಬಂಧನೆ ಇರುವುದಿಲ್ಲ. ಇದು ಈ ಕ್ಷೇತ್ರವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಕೃಷಿಕ ಎಂದರೆ ಅವನ ಹಿಡುವಳಿ, ಉತ್ಪಾದಕತೆ, ಬೇರೆ ಆದಾಯ ಮೂಲಗಳು ಪರಿಗಣನೆಗೆ ಬರುವಂತಿರಬೇಕು.
ಅನ್ನದಾನದ ಹೆಸರಿಗೆ ಹುಟ್ಟುವ ಬೆಲೆ ಅನ್ನದಾತನಿಗಿಲ್ಲ: ಅನ್ನದಾನ ನಡೆಯಬೇಕಾದರೆ ಅಲ್ಲಿ ಕೃಷಿಕನ ಶ್ರಮ ಇದೆ. ಅನ್ನದಾನವನ್ನು ಮಾಡಲು ಜಗತ್ತಿನಲ್ಲಿ ಯಾರು ಬೇಕಾದರೂ ದಾನ ನೀಡುತ್ತಾರೆ. ಅನ್ನದಾನದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುವುದಾರರೆ ಸಾಕಷ್ಟು ನಿಧಿ ಹುಟ್ಟುತ್ತದೆ. ಆದರೆ ಅನ್ನದಾತನ ಸಂಕಷ್ಟಕ್ಕೆ ಅದರ ಒಂದು ಪಾಲೂ ಕಿಮ್ಮತ್ತು ಹುಟ್ಟಲಾರದು. ಅನ್ನದ ಮೌಲ್ಯ ಸಮರ್ಪಕವಾಗಿ ಅರಿತು ಅದನ್ನು ದಾನ ಮಾಡುವುದು ಎಲ್ಲರ ದೃಷ್ಟಿಯಲ್ಲೂ ಉತ್ತಮ. ರೈತರ ಹಿತಕ್ಕಾಗಿ ಕಲ್ಯಾಣ ನಿಧಿಯನ್ನು ಸರಕಾರ ಸ್ಥಾಪಿಸಬೇಕು. ಈಗ ಹೊರ ಜಗತ್ತಿಗೆ ಕೃಷಿಕ ವೆಲ್ಆಫ್ ಆಗಿ ಕಾಣಬಹುದು. ಕೃಷಿಕನ ಅಂತರಾತ್ಮ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಮುಂದೇನು ಎಂಬ ಚಿಂತೆ ಅವನ ಆರೋಗ್ಯವನ್ನುಹಾಳು ಮಾಡುತ್ತಿದೆ. ಮುಂದೆ ಕೆಲವೇ ಸಮಯದಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯೋಗದ ಖನಿ ಸೃಷ್ಟಿಯಾಗಲಿದೆ. ಆದರೆ ಅದನ್ನು ಪಡೆಯಲು ಉದ್ಯೋಗಾಕಾಂಕ್ಷಿಗಳೇ ಇಲ್ಲ ಎಂದಾಗುವ ಎಲ್ಲಾ ಸೂಚನೆಗಳೂ ಕಂಡು ಬರುತ್ತಿದೆ. ಈಗ ಕೃಷಿ ಕೂಲಿ ಕಾರ್ಮಿಕರ ದಿನ ವೇತನ ೩೦೦-೪೦೦ ತನಕ ಪ್ರದೇಶವಾರು ಇದೆ. ವಾರ್ಷಿಕ ೧೫ % ಪ್ರಮಾಣದಲ್ಲಿ ಇದು ಏರಿಕೆಯಾಗುತ್ತಿದೆ. ಇದು ಘೋಷಿತ ಸಂಘಟಿತ ಕ್ಷೇತ್ರವಾಗದಿದ್ದರೂ, ಕೆಲಸದವರಿಗೆ ಮಧ್ಯಾಹ್ನದ ಊಟ, ಸಂಜೆ, ಬೆಳಗ್ಗಿನ ಉಪಹಾರ, ಅವನ ಆಗಮನದ ಖಾತ್ರಿಗಾಗಿ ೧೫ ಇಲ್ಲವೇ ೧ ತಿಂಗಳ ಮುಂಗಡ, ಜೊತೆಗೆ ಅನಾರೋಗ್ಯ ಪರಿಸ್ಥಿತಿಯಲ್ಲಿ ಚಿಕಿತ್ಸಾ ಸಹಾಯವನ್ನು ಕೃಷಿ ಕ್ಷೇತ್ರ ಸಾಮಾಜಿಕ ಜಬ್ಧಾರಿಯಾಗಿ ಹಿಂದಿನಿಂದಲೂ ಮಾಡುತ್ತಾ ಬಂದಿದೆ, ಇಂದಿಗೂ ಮುಂದುವರಿಸಿದೆ.ಇಂಥಃ ಸಾಮಾಜಿಕ ಬದ್ಧತೆ ಉಳ್ಳ ರೈತ ಸಮುದಾಯದ ಮುಂಬರುವ ಸಂಕಷ್ಟ ಘನ ಘೋರವಾದುದು. ಅದನ್ನು ಸಮಾಜದ ಇತರ ವರ್ಗ ಮನಗಾಣಬೇಕು.
ಪರಿಸ್ಥಿತಿಯನ್ನು ಅವಲೋಕಿಸಿದಾಗ ಈಗ ಕೇಳಿ ಬರುತ್ತಿರುವ ಅನ್ನದಾತನ ಆತ್ಮಹತ್ಯೆ ಪ್ರಾರಂಭ ಅಷ್ಟೆ. ಮುಂದೆ ಇದು ಇನ್ನೂ ಹೆಚ್ಚಳವಾದರೂ ಅಚ್ಚರಿ ಇಲ್ಲ. ಸರಕಾರದ ದಿವ್ಯ ನಿರ್ಲಕ್ಷ್ಯ, ಮತ್ತು ಕೃಷಿಕ ವರ್ಗದ ಅಸಂಘಟನೆ ಇದಕ್ಕೆಲ್ಲಾ ಕಾರಣ. ಇದನ್ನು ಬರೇ ಕಾಟಾಚಾರಕ್ಕೆ ಜ್ವಲಂತ ವಿಷಯವೆಂದು ಕಾಣಬಾರದು. ಮುಂದೆ ಕೃಷಿ ಕ್ಷೇತ್ರಕ್ಕೆ ಎದುರಾಗಬದುದಾದ ಕಷ್ಟದ ದಿನಗಳನ್ನು ಸಂಭಂಧಿಸಿದ ಯೋಜನಾ ನಿರೂಪಕರಿಗೆ ಮನದಟ್ಟು ಮಾಡುವ ಕೆಲಸವನ್ನು ಕೃಷಿಕ ಸಮುದಾಯದಲ್ಲಿ ವಿಧ್ಯಾವಂತರೆನಿಸಿಕೊಂಡವರು ತುರ್ತಾಗಿ ಮಾಡಬೇಕು. ಯಾವುದನ್ನೂ ಉತ್ಪ್ರೇಕ್ಷೆ ಮಾಡದೆ, ಬಹುಜನ ಹಿತಕ್ಕನುಗುಣವಾಗಿ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ತುರ್ತಾಗಿ ಮಾಡಬೇಕು.
(ಮುಗಿಯಿತು)
ಸೂಚನೆ: ಈ ಲೇಖನದಲ್ಲಿ ಪ್ರಕಟವಾದ ವಿಚಾರಗಳ ಬಗ್ಗೆ ಮತ್ತು ಅದಕ್ಕೆ ಇನ್ನೂ ಸೇರ್ಪಡೆಯಾಗಬೇಕಾದ ವಿಚಾರಗಳ ಬಗ್ಗೆ ರೈತರು, ಕೃಷಿ ಆಸಕ್ತರು ಪ್ರತಿಕ್ರಿಯೆಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು.
ಮಾಹಿತಿ-ಸಹಕಾರ: ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಅಂತರ್ಜಾಲ ತಾಣ