ಅನ್ನದಾತರ ಆಕ್ರೋಶ: ಕೈ ಕೆಸರಾದರೆ ಬಾಯಿ ಮೊಸರಾಗಲ್ಲ
ಇತಿಹಾಸಕ್ಕೆ ಸೇರಿದ ೨೦೧೮ನೇ ಇಸವಿಯತ್ತ ಒಮ್ಮೆ ತಿರುಗಿ ನೋಡಿದಾಗ ಎದ್ದು ಕಾಣಿಸುವುದು ರೈತರ ಪ್ರತಿಭಟನೆ. ಫೆಬ್ರವರಿ ೨೦೧೮ರಲ್ಲಿ ಶುರುವಾದ ಈ ಪ್ರತಿಭಟನೆ ವರುಷದುದ್ದಕ್ಕೂ ಮುಂದುವರಿಯಿತು.
ಈರುಳ್ಳಿ, ಟೊಮೆಟೋ ಇತ್ಯಾದಿ ತರಕಾರಿಗಳನ್ನು ಟ್ರಾಕ್ಟರಿನಲ್ಲಿ ತಂದ ರೈತರು ಅವನ್ನು ರಸ್ತೆಗೆ ಚೆಲ್ಲಿದ್ದು; ಕ್ಯಾನುಗಟ್ಟಲೆ ಹಾಲನ್ನು ರಸ್ತೆಗೆ ಸುರಿದದ್ದು – ಇಂತಹ ಪ್ರತಿಭಟನೆಗಳು ಪತ್ರಿಕೆಗಳಲ್ಲಿ ಮತ್ತೆಮತ್ತೆ ವರದಿಯಾದವು. ಮಾರ್ಚ್ ೨೦೧೮ರಲ್ಲಿ ನಾಸಿಕದಿಂದ ಹೊರಟು, ಏಳು ದಿನಗಳಲ್ಲಿ ೧೮೦ ಕಿಮೀ ನಡೆದು ಬಂದ ೪೦,೦೦೦ ರೈತರ ಜಾಥಾ ಮುಂಬೈಯ ಅಜಾದ್ ಮೈದಾನಿನಲ್ಲಿ ಜಮಾಯಿಸಿದ್ದು; ದೇಶದ ವಿವಿಧ ದಿಕ್ಕುಗಳಿಂದ ರಾಜಧಾನಿ ಢೆಲ್ಲಿಗೇ ಸಾಗಿ ಬಂದು, ನವಂಬರ್ ೨೦೧೮ರಲ್ಲಿ ಸಂಸತ್ ರಸ್ತೆಯಲ್ಲಿ ಒಟ್ಟಾದ ೫೦,೦೦೦ ರೈತರು ಸಂಸತ್ತಿಗೇ ತಮ್ಮ ಆಕ್ರೋಶದ ಬಿಸಿ ಮುಟ್ಟಿಸಿದ್ದು – ಈ ಎರಡು ಚಾರಿತ್ರಿಕ ಪ್ರತಿಭಟನೆಗಳ ಬಗ್ಗೆ ಇದೇ ಅಂಕಣದಲ್ಲಿ ಬರೆದಿದ್ದೆ.
ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಕೃಷಿರಂಗ ಈ ಶೋಚನೀಯ ಪರಿಸ್ಥಿತಿಗೆ ತಲಪಿದ್ದು ಹೇಗೆ? ಆಹಾರವಸ್ತುಗಳ ಬೇಡಿಕೆ ನಿರಂತರವಾಗಿ ಏರುತ್ತಿದ್ದರೂ, ಅವನ್ನು ಬೆಳೆಸುವ ರೈತನ ಆದಾಯ ಸತತವಾಗಿ ಕುಸಿಯಲು ಕಾರಣಗಳೇನು?
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ೨೦೧೮ರಲ್ಲಿ ಪ್ರಕಟಿಸಿದ ಅಖಿಲ ಭಾರತ ಆರ್ಥಿಕ ಒಳಗೊಳ್ಳುವಿಕೆ ಸರ್ವೆ ವರದಿಯಲ್ಲಿ ಈ ಪ್ರಶ್ನೆಗೆ ಕೆಲವು ಉತ್ತರಗಳಿವೆ. ಅದರ ಅನುಸಾರ, ಕಳೆದ ನಾಲ್ಕು ವರುಷಗಳಲ್ಲಿ ಗ್ರಾಮೀಣ ಕುಟುಂಬಗಳ ಸರಾಸರಿ ತಿಂಗಳ ಆದಾಯ ಕೇವಲ ರೂ.೬೨೬. ಒಟ್ಟಾರೆಯಾಗಿ, ಪ್ರತಿಯೊಂದು ಕುಟುಂಬದ ಆದಾಯದಲ್ಲಿ ಈ ನಾಲ್ಕು ವರುಷಗಳಲ್ಲಿ ಆಗಿರುವ ಆದಾಯದ ಹೆಚ್ಚಳ ರೂ.೨,೫೦೫. ಹಾಗಿರುವಾಗ, ಭಾರತದ ಒಟ್ಟು ಸಾಲಗಾರ ಕುಟುಂಬಗಳಲ್ಲಿ ಶೇ.೪೩ ಕೃಷಿ ಕುಟುಂಬಗಳು ಎಂದು ಆ ವರದಿ ಬಹಿರಂಗ ಪಡಿಸಿರುವುದು ಅಚ್ಚರಿಯ ಸಂಗತಿಯಲ್ಲ.
ನಾವು ಗಮನಿಸಬೇಕಾದ ೨೦೧೭-೧೮ರಲ್ಲಿ ಪ್ರಕಟವಾದ ಇನ್ನೊಂದು ವರದಿ: “ರೈತರ ಆದಾಯ ಇಮ್ಮಡಿ ಯೋಜನಾ ಸಮಿತಿ”ಯ ೧೩ ಸಂಪುಟಗಳ ವರದಿ. ಈ ಅಧ್ಯಯನದ ಅನುಸಾರ, ೨೦೦೧–೨೦೧೧ ದಶಕದ ರಾಷ್ಟ್ರೀಯ ಸರಾಸರಿ ಕೃಷಿ ಆದಾಯಕ್ಕೆ ಹೋಲಿಸಿದಾಗ, ಅನಂತರದ ವರುಷಗಳಲ್ಲಿ ಈ ಆದಾಯದಲ್ಲಿ ಆಗಿರುವ ಹೆಚ್ಚಳ ಕೇವಲ ಶೇ.೩.೮. ಮಾತ್ರವಲ್ಲ, ೨೦೦೧–೨೦೧೧ ಅವಧಿಯಲ್ಲಿ ದೇಶದ ರೈತರ ಸಂಖ್ಯೆ ೮೫ ಲಕ್ಷ ಕಡಿಮೆಯಾಯಿತು. ಅದೇ ಅವಧಿಯಲ್ಲಿ ಕೃಷಿ ಕೂಲಿಕಾರರ ಸಂಖ್ಯೆಯಲ್ಲಾದ ಹೆಚ್ಚಳ ೩ ಕೋಟಿ ೭೫ ಲಕ್ಷ. ಹದಿನಾರು ರಾಜ್ಯಗಳ ರೈತರ ಆದಾಯವನ್ನು ಹಣದುಬ್ಬರಕ್ಕೆ ಹೊಂದಾಣಿಕೆ ಮಾಡಿದಾಗ ಅದು ಕಡಿಮೆಯಾಗಿತ್ತು!
ಡಿಸೆಂಬರ್ ೨೦೧೮ರಲ್ಲಿ ಮಹಾರಾಷ್ಟ್ರದ ನಾಸಿಕದ ಈರುಳ್ಳಿ ಬೆಳೆಗಾರ ಸಂಜಯ ಸಾಥೆ, ತನ್ನ ೭೫೦ ಕಿಗ್ರಾ ಈರುಳ್ಳಿ ಫಸಲು ಮಾರಿದಾಗ ಅವರ ಕೈಗೆ ಬಂದದ್ದು ಕೇವಲ ೧,೦೬೪ ರೂಪಾಯಿ! ಹತಾಶರಾದ ಸಾಥೆ ಅದನ್ನು ಪ್ರಧಾನ ಮಂತ್ರಿಯವರಿಗೆ ರವಾನಿಸಿದ್ದು ದೊಡ್ಡ ಸುದ್ದಿಯಾಯಿತು. ಗಮನಿಸಿ: ೨೦೧೦ರಲ್ಲಿ ಯುಎಸ್ಎ ದೇಶದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಭಾರತಕ್ಕೆ ಭೇಟಿಯಿತ್ತಿದ್ದರು; ಆಗ, ಅವರೊಂದಿಗೆ ಸಂವಾದಕ್ಕಾಗಿ ಢೆಲ್ಲಿಯ ಕೃಷಿ ಮಂತ್ರಾಲಯ ಆಯ್ಕೆ ಮಾಡಿದ ಪ್ರಗತಿಶೀಲ ರೈತರಲ್ಲಿ ಸಂಜಯ ಸಾಥೆ ಒಬ್ಬರು. ತನ್ನ ಪ್ರತಿಭಟನೆಯ ಬಗ್ಗೆ ಅವರ ಒಡಲಾಳದ ಮಾತು: “ನಾಲ್ಕು ತಿಂಗಳ ನನ್ನ ದುಡಿತಕ್ಕೆ ಸಿಕ್ಕಿದ ಅತ್ಯಲ್ಪ ಪ್ರತಿಫಲ ಕಂಡು ಸಂಕಟವಾಯಿತು. ಅದಕ್ಕಾಗಿ ೧,೦೬೪ ರೂಪಾಯಿಗಳನ್ನು ಪ್ರಧಾನ ಮಂತ್ರಿಗಳ “ವಿಕೋಪ ಪರಿಹಾರ ನಿಧಿ”ಗೆ ಕಳಿಸಿದೆ – ಇದು “ನನ್ನ ಪ್ರತಿಭಟನೆಯ ಪಾವತಿ” ಎಂದು. ಆ ಹಣವನ್ನು ಮನಿಆರ್ಡರ್ ಮಾಡಲಿಕ್ಕಾಗಿ ನನಗೆ ಇನ್ನೂ ೫೪ ರೂಪಾಯಿ ಖರ್ಚಾಯಿತು.” ಅವರೊಬ್ಬರೇ ಅಲ್ಲ, ನವಂಬರ್ – ಡಿಸೆಂಬರ್ ೨೦೧೮ರಲ್ಲಿ ಮಿಜೋರಾಂನಿಂದ ಕರ್ನಾಟಕದ ವರೆಗೆ ಸಾವಿರಾರು ರೈತರು ತಮ್ಮ ಫಸಲಿನ ಬೆಲೆ ಕುಸಿತದ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಿದರು. ತಾವು ಬೆಳೆಸಿದ್ದಕ್ಕೆ ಸೂಕ್ತ ಬೆಲೆ ಬೇಕೆಂಬುದು ಸರಕಾರಕ್ಕೆ ಅವರ ಅಹವಾಲು.
ಆ ಬೆಳೆಗಾರನಿಗೆ ದಕ್ಕಿದ ಈರುಳ್ಳಿಯ ಬೆಲೆಯನ್ನು ಗ್ರಾಹಕ ಪಾವತಿಸುವ ಬೆಲೆಯೊಂದಿಗೆ ಹೋಲಿಸಿರಿ. ೨ ಡಿಸೆಂಬರ್ ೨೦೧೮ರಂದು ದಾಖಲಾಗಿರುವ ಈರುಳ್ಳಿಯ ಚಿಲ್ಲರೆ ಮಾರಾಟದ ಬೆಲೆ ಕಿಲೋಗ್ರಾಮಿಗೆ ರೂ.೨೫. ಅಂದರೆ, ಸಂಜಯ ಸಾಥೆಗೆ ದಕ್ಕಿದ ಬೆಲೆಯ ಇಪ್ಪತ್ತು ಪಟ್ಟು! ಕೃಷಿ ಉತ್ಪನ್ನಗಳು ಗ್ರಾಹಕನ ಕೈಸೇರುವ ಮುನ್ನ, ಹಲವು ಮಧ್ಯವರ್ತಿಗಳ ಮೂಲಕ ಹಾದು ಹೋಗುತ್ತವೆ ಮತ್ತು ಪ್ರತಿಯೊಬ್ಬ ಮಧ್ಯವರ್ತಿಯೂ ಕೂತಲ್ಲೇ ಲಾಭದ ಕೊಳ್ಳೆ ಹೊಡೆಯುತ್ತಾನೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ.
ಆದರೆ, ಈ ಹಿನ್ನೆಲೆಯಲ್ಲಿ ಕೇಳಲೇ ಬೇಕಾದ ಪ್ರಶ್ನೆ: ತಾವು ಬೆಳೆಸಿದ್ದನ್ನು ಮಾರಾಟ ಮಾಡಿ, ರಖಂ (ಸಗಟು) ಬೆಲೆ ಪಡೆಯುವಾಗ ರೈತರು ಲಾಭ ಗಳಿಸುತ್ತಿದ್ದಾರೆಯೇ? ಲಾಭದ ಮಾತು ಹಾಗಿರಲಿ; ಬೆಳೆ ಬೆಳೆಸಲು ಮಾಡಿದ ಖರ್ಚನ್ನೂ ಫಸಲಿನ ಮಾರಾಟದಿಂದ ರೈತರು ಹಲವಾರು ವರುಷಗಳಿಂದ ಹಿಂಪಡೆಯುತ್ತಿಲ್ಲ ಎನ್ನುತ್ತದೆ ಅದೇ ಸಮಿತಿಯ ವರದಿ. ಇದಕ್ಕೆ ಮುಖ್ಯ ಕಾರಣ, ಕೃಷಿಯ ಒಳಸುರಿಗಳಾದ ನೀರಾವರಿ, ವಿದ್ಯುತ್, ಗೊಬ್ಬರಗಳು ಮತ್ತು ಪೀಡೆನಾಶಕಗಳ ವೆಚ್ಚದಲ್ಲಿ ಆಗಿರುವ ಏರಿಕೆ.
ಅದೇನಿದ್ದರೂ, ೨೦೦೮-೨೦೦೯ರಿಂದ ಆಹಾರ ವಸ್ತುಗಳ ಬೆಲೆಗಳಲ್ಲಿ ಆಗಿರುವ ಹೆಚ್ಚಳ ನಿಚ್ಚಳವಾಗಿದೆ. ಅಂದರೆ, ಗ್ರಾಹಕರಾಗಿ ನಾವು ಹೆಚ್ಚೆಚ್ಚು ಬೆಲೆ ಪಾವತಿಸುತ್ತಿದ್ದರೂ ರೈತರಿಗೆ ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆ ಸಮಿತಿಯ ವರದಿಯ ಅನುಸಾರ, ೨೦೦೨–೨೦೦೩ರಿಂದ ೨೦೧೨–೧೩ ಅವಧಿಯಲ್ಲಿ, ಕೃಷಿ ಕುಟುಂಬಗಳ ಆದಾಯದ ವಾರ್ಷಿಕ ಹೆಚ್ಚಳ ಕೇವಲ ಶೇ.೩.೬.
ಕೃಷಿಕುಟುಂಬಗಳ ಶೋಚನೀಯ ಆದಾಯದ ಕಾರಣ ಈ ಅಂಕೆಸಂಖ್ಯೆಗಳಲ್ಲಿ ಅಡಗಿದೆ. ಸರಕಾರದ ಲೆಕ್ಕಾಚಾರದಲ್ಲಿ, ೨೦೧೫-೧೬ರಲ್ಲಿ ಕೃಷಿಕುಟುಂಬದ ವಾರ್ಷಿಕ ಆದಾಯ ರೂ.೯೬,೭೦೩. (ಪ್ರತಿಯೊಂದು ಕುಟುಂಬದ ಸದಸ್ಯರ ಸಂಖ್ಯೆ ಐದು ಎಂಬುದು ಲೆಕ್ಕಾಚಾರಗಳಿಗೆ ಆಧಾರ). ಆದರೆ, ಎರಡು ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳ ಆದಾಯ ಇನ್ನೂ ಕಡಿಮೆ. ಅದು ವರುಷಕ್ಕೆ ರೂ.೭೯,೭೭೯ ಅಥವಾ ಐದು ಸದಸ್ಯರ ಕುಟುಂಬಕ್ಕೆ ದಿನಕ್ಕೆ ರೂ.೨೨೧. ಇಂತಹ ಕುಟುಂಬಗಳೇ ನಮ್ಮ ದೇಶದ ಒಟ್ಟು ಜಮೀನಿನ ಶೇ.೮೨ ಹೊಂದಿವೆ. ಈ ಕುಟುಂಬಗಳ ಅಲ್ಪ ಆದಾಯದಲ್ಲಿ, ಕೃಷಿ ಆದಾಯ ಸರಾಸರಿ ಶೇ.೪೧ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ, ಈ ಬಡ ಕುಟುಂಬಗಳು ಕೃಷಿಯಿಂದ ಪಡೆಯುವ ಆದಾಯ ದಿನಕ್ಕೆ ರೂ.೯೦.
ಕೃಷಿಕರು ತಮ್ಮ ಫಸಲಿನಿಂದ ಲಾಭ ಗಳಿಸುತ್ತಿಲ್ಲ ಎಂಬುದು ಕಠೋರ ಸತ್ಯ. ೨೦೦೪-೧೪ರ ಅವಧಿಯಲ್ಲಿ ೨೩ ಬೆಳೆಗಳ ಕೃಷಿ ವೆಚ್ಚ ಮತ್ತು ಫಸಲಿನ ಆದಾಯದ ಸರ್ವೆ ನಡೆಸಲಾಯಿತು. ಅದರ ಪ್ರಕಾರ, ಕೆಲವೇ ಬೆಳೆಗಳ ಕೃಷಿಯಿಂದ ರೈತರಿಗೆ ಲಾಭ; ಉಳಿದೆಲ್ಲ ಬೆಳೆಗಳ ಕೃಷಿಯಿಂದ ನಷ್ಟ! ಉದಾಹರಣೆಗೆ, ಮುಖ್ಯ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿ. ಇವೆರಡರ ಬೇಸಾಯದಿಂದಲೂ ತಮಗೆ ನಷ್ಟ ಎನ್ನುತ್ತಾರೆ ಹಲವು ರಾಜ್ಯಗಳ ರೈತರು.
ಇವೆಲ್ಲದರ ಜೊತೆಗೆ, ರೈತರಿಗೆ ತಾವು ಬೆಳೆದ ಫಸಲನ್ನೆಲ್ಲ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನೂ ಅದೇ ಸಮಿತಿಯ ವರದಿ ದಾಖಲಿಸಿದೆ. ಈ “ಮಾರಲಾಗದ ಫಸಲಿ”ನ ಬೆಲೆಯೇ ವರುಷಕ್ಕೆ ರೂ.೬೩,೦೦೦ ಕೋಟಿ ಎಂದು ಆ ಸಮಿತಿ ಅಂದಾಜಿಸಿದೆ. ಇಷ್ಟು ಬೃಹತ್ ಮೊತ್ತದ ಫಸಲು ಉತ್ಪಾದಿಸಲು ರೈತರು ಮಾಡಿದ ವೆಚ್ಚವೂ ಅವರಿಗೆ ದಕ್ಕುತ್ತಿಲ್ಲ.
ಇವೆಲ್ಲವನ್ನೂ ಪರಿಶೀಲಿಸಿದಾಗ, ಅನ್ನದಾತರ ಹತಾಶೆ ಮತ್ತು ಅಸಹಾಯಕತೆ ಯಾಕೆ ಆಕ್ರೋಶಕ್ಕೆ ಕಾರಣವಾಗಿದೆ ಎಂಬುದು ಮನದಟ್ಟಾಗುತ್ತದೆ. ಅನ್ನದಾತರ ಕೈ ಕೆಸರಾದರೆ ಬಾಯಿ ಮೊಸರಾಗುತ್ತಿಲ್ಲ!
ಫೋಟೋ ಕೃಪೆ: ದ ಹಿಂದೂ ದಿನಪತ್ರಿಕೆ