ಅನ್ನದಾತ ಅನಾಥನಾಗುವ ಮುನ್ನ...

ಅನ್ನದಾತ ಅನಾಥನಾಗುವ ಮುನ್ನ...

ರಾಷ್ಟ್ರೀಯ ರೈತ ದಿನ (ಕಿಸಾನ್ ದಿವಸ್) ಡಿಸೆಂಬರ್ 23, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಮತ್ತು ರೈತ ಹುತಾತ್ಮ ದಿನ ಜೂನ್ 21 (ಕರ್ನಾಟಕದಲ್ಲಿ ಮಾತ್ರ) ನರಗುಂದ - ನವಲಗುಂದ ಹೋರಾಟದಲ್ಲಿ ಹುತಾತ್ಮರಾದ ರೈತರ ನೆನಪಿಗಾಗಿ...

ಅನ್ನದಾತ ಅನಾಥನಾಗುವ ಮುನ್ನ… ಅನ್ನಕ್ಕಾಗಿ ನಾವು ಪರದಾಡುವ ಮುನ್ನ… ರೈತರಿಗೆ ಕೊಡಲು ನಮ್ಮ ಬಳಿ ಹಣವಿಲ್ಲ, ರೈತರ ಸಂಕಷ್ಟ ಪರಿಹರಿಸಲು ನಮ್ಮ ಬಳಿ ಅಧಿಕಾರವೂ ಇಲ್ಲ, ಸಣ್ಣ ಪುಟ್ಟ ಹೋರಾಟಗಳಿಗೆ ಕೈ ಜೋಡಿಸಿದರು ಉತ್ತಮ ಫಲಿತಾಂಶ ಕಾಣುತ್ತಿಲ್ಲ. ಏಕೆಂದರೆ ಪ್ರಾಮುಖ್ಯತೆ ಕೊಡಬೇಕಾದ ವಿಷಯಗಳನ್ನು ಮರೆಸಿ ಭಾವನಾತ್ಮಕ ಅಂಶಗಳನ್ನು ಮುನ್ನಲೆಗೆ ತಂದು ಇಡೀ ರೈತ ಸಮೂಹವನ್ನು ವಂಚಿಸಲಾಗುತ್ತಿದೆ.

ಮನರಂಜನೆಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ, ರಾಜಕಾರಣಕ್ಕಾಗಿ ಸಾಕಷ್ಟು ಹಿಂಬಾಲಕರಿದ್ದಾರೆ, ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಭಕ್ತರಿದ್ದಾರೆ, ಆದರೆ ರೈತರ ಕಷ್ಟಗಳಿಗೆ ಧ್ವನಿಯಾಗಲು ಮಾತ್ರ ಕೆಲವೇ ಜನರಿದ್ದಾರೆ. ಅದಕ್ಕೆ ಕಾರಣ ಜನರಿಗೆ ತಿನ್ನುವ ಅನ್ನ ಬೆಳೆಯುವ ಕೃಷಿ ಎಂಬುದು ಏನು ಎಂದೇ ಸರಿಯಾದ ತಿಳಿವಳಿಕೆ ಇಲ್ಲ.

ಕೃಷಿ ಎಂದರೆ… ಕೇವಲ ಬೇಸಾಯದ ನೆಲ ಮಾತ್ರವಲ್ಲ. ಕೇವಲ ಭೂಮಿ ಉಳುಮೆ ಮಾಡುವುದು ಮಾತ್ರವಲ್ಲ. ಕೇವಲ ನೀರು ಹಾಯಿಸುವುದು ಮಾತ್ರವಲ್ಲ. ಕೇವಲ ಬಿತ್ತನೆ ಮಾಡುವುದು ಮಾತ್ರವಲ್ಲ, ಕೇವಲ ಬೆವರು ಸುರಿಸಿ ಶ್ರಮ ಪಡುವುದು ಮಾತ್ರವಲ್ಲ, ಕೇವಲ ಫಸಲು ಬೆಳೆಯುವುದು ಮಾತ್ರವಲ್ಲ, ಕೇವಲ ಕೊಯ್ಲು ಮಾಡುವುದು ಮಾತ್ರವಲ್ಲ, ಕೇವಲ ಅದನ್ನು ಶುಧ್ಧಿ ಮಾಡುವುದು ಮಾತ್ರವಲ್ಲ, ಕೇವಲ ಅಚ್ಚುಕಟ್ಟಾಗಿ ಸಂಗ್ರಹಿಸುವುದು ಮಾತ್ರವಲ್ಲ, ಕೇವಲ ಅದನ್ನು ಉಪಯೋಗಿಸುವುದು ಮಾತ್ರವಲ್ಲ, ಕೇವಲ ಮಾರಾಟ ಮಾಡುವುದು ಮಾತ್ರವಲ್ಲ, ಕೇವಲ ಹಣ ಗಳಿಸುವುದು ಮಾತ್ರವಲ್ಲ, ಕೇವಲ ಗಳಿಸಿದ ಹಣವನ್ನು ಖರ್ಚು ಮಾಡುವುದು ಮಾತ್ರವಲ್ಲ, ಕೃಷಿ ಎಂಬುದು ಒಂದು ಬದುಕು, ಕೃಷಿ ಎಂಬುದು ಒಂದು ಜೀವನ ವಿಧಾನ, ಕೃಷಿ ಎಂಬುದು ಒಂದು ಸಂಸ್ಕೃತಿ, ಕೃಷಿ ಎಂಬುದು ಒಂದು ಸಮಾಜ, ಕೃಷಿ ಎಂಬುದು ಒಂದು ಸೇವೆ, ಕೃಷಿ ಎಂಬುದು ಒಂದು ಪೀಳಿಗೆಯ ಮುಂದುವರಿಕೆಯ ಮಾರ್ಗ. ಕೃಷಿ ಈ ಎಲ್ಲದರ ಒಟ್ಟು ಮೊತ್ತ...

ಅಂದರೆ ಕೃಷಿ ಇಲ್ಲದೆ ವ್ಯಕ್ತಿ, ಸಮುದಾಯ, ಸಮಾಜ, ದೇಶ, ಭಾಷೆ, ಧರ್ಮ, ದೇವರು ಅಸ್ತಿತ್ವವಿರುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ, ಇಂದು ಕೃಷಿ ಮತ್ತು ರೈತ ನಮ್ಮ ಕಣ್ಣ ಮುಂದೆಯೇ ಬಿಕ್ಕಳಿಸುವುದನ್ನು ನೋಡುವ ದೌರ್ಭಾಗ್ಯ ನಮ್ಮದು. ಎಷ್ಟೊಂದು ಅಧಿಕಾರಿಗಳು, ಎಷ್ಟೊಂದು ರಾಜಕಾರಣಿಗಳು, ಎಷ್ಟೊಂದು ಧರ್ಮಾಧಿಕಾರಿಗಳು, ಎಷ್ಟೊಂದು ವಕೀಲರು, ಎಷ್ಟೊಂದು ಪೋಲೀಸರು, ಎಷ್ಟೊಂದು ಶಿಕ್ಷಕರು, ಎಷ್ಟೊಂದು ಎಂಜಿನಿಯರುಗಳು, ಎಷ್ಟೊಂದು ಕಂಟ್ರಾಕ್ಟರುಗಳು, ಎಷ್ಟೊಂದು ಡಾಕ್ಟರುಗಳು, ಎಷ್ಟೊಂದು ಕಲಾವಿದರು, ಎಷ್ಟೊಂದು ವ್ಯಾಪಾರಿಗಳು, ಎಷ್ಟೊಂದು ಎಷ್ಟೊಂದು ಎಷ್ಟೊಂದು ಇತರೆ ಜನ ಇರುವುದರಲ್ಲಿ ಒಂದಷ್ಟು ಆರಾಮವಾಗಿ ಬದುಕುತ್ತಿದ್ದಾರೆ. ಅವರ ಆರಾಮದ ಮೂಲ ಕಾರಣ ಕೃಷಿ ಮತ್ತು ರೈತ.

ಪ್ರತಿ ತುತ್ತು ತಿನ್ನುವ ಮುನ್ನ ಇದನ್ನು ನೆನಪಿಡಿ. ಆದರೆ ಇಂದು ಏನಾಗಿದೆ ಎಂದರೆ ರೈತರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ರೈತರೆಂದರೆ, ಮೂರು ತಿಂಗಳು ಕಷ್ಟ ಪಟ್ಟು ಬೆಳೆದ ಕೊತ್ತಂಬರಿ ಸೊಪ್ಪನ್ನು ಕಟ್ಟು ಕಟ್ಟಿ ಹತ್ತು ರೂಪಾಯಿಗೆ ಮಾರುವ ಮೂರ್ಖರು. ರೈತರೆಂದರೆ, ಒಂದು ವರ್ಷಕಾಲ ಬೆಳೆದ ಕಬ್ಬನ್ನು ಕಾರ್ಖಾನೆ ಮಾಲಿಕರಿಗೆ ನೀಡಿ ಅವರು ಕೊಡುವ ಕಾಸಿಗಾಗಿ ಕೈಕಟ್ಟಿ ನಿಲ್ಲುವ ಮೂಡರು. ರೈತರೆಂದರೆ, ಪಟಾಪಟಿ ಚಡ್ಡಿಯಲ್ಲಿ ಹರಿದ ಬನಿಯನ್ ನಲ್ಲಿ ಉಪ್ಪುಸಾರು ಮುದ್ದೆ ರೊಟ್ಟಿ ತಿಂದು ಅಕ್ಕಿ ಬೆಳೆದು ಇಲ್ಲಿನ ಎಸಿ ರೂಮಿನ ಕೊಬ್ಬಿದ ಜನರಿಗೆ ಬಿರಿಯಾನಿ ಒದಗಿಸುವ ಬೆಪ್ಪರು. ರೈತರೆಂದರೆ, ಭೂಲೋಕದ ಕಲ್ಪವೃಕ್ಷವೆಂದು ಹೆಸರಾಗಿರುವ ಎಳನೀರನ್ನು ವರ್ಷಾನುಗಟ್ಟಲೆ ಬೆಳೆದು ಅದನ್ನು ಬೀದಿಯಲ್ಲಿ ನಿಂತು 20 ರೂಪಾಯಿಗೆ ಮಾರುವ ಶತ ದಡ್ಡರು. ರೈತರೆಂದರೆ, ಬ್ಯಾಂಕಿನಲ್ಲಿ 5-6 ಲಕ್ಷ ಕೋಟಿ ವಸೂಲಾಗದ ಶ್ರೀಮಂತರ ಸಾಲ ಇದ್ದರೂ ಜುಜುಬಿ 10,000 ರೂಪಾಯಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನತದೃಷ್ಟರು. ರೈತರೆಂದರೆ, ರಾಜಕಾರಣಿಗಳ ಗಾಂಧಿ ನೋಟಿಗೆ ತಮ್ಮ ಓಟನ್ನು ಮಾರಿಕೊಂಡು ಜೈಕಾರ ಹಾಕುತ್ತಾ ಸಾಗುವ ಅಮಾಯಕರು. ರೈತರೆಂದರೆ, ಮಳೆ ಇಲ್ಲದೆ - ಬೆಳೆ ಇಲ್ಲದೆ ಇಡೀ ಬದುಕನ್ನೇ ಗಂಟುಮೂಟೆ ಕಟ್ಟಿಕೊಂಡು ನಗರಗಳಿಗೆ ವಲಸೆ ಹೋಗಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ತಿಳಿಗೇಡಿಗಳು. ರೈತರೆಂದರೆ, ನಾವೇ ಈ ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳ ಮಾತುಗಳಿಗೆ ಮರುಳಾಗಿ ಹಾಗೇ ಭಾವಿಸಿ - ಭ್ರಮಿಸಿ ಜೀವಿಸುತ್ತಿರುವ ಮುಗ್ಧರು.

ಅಯ್ಯಾ ರೈತರೇ, ಏಳಿ ಎದ್ದೇಳಿ ಎಚ್ಚರಗೊಳ್ಳಿ, ಅರ್ಥಮಾಡಿಕೊಳ್ಳಿ ನೀವು ದಡ್ಡರೆಂದು, ಆಗ ನಿಮಗೆ ಅರಿವಾಗುತ್ತದೆ ನೀವು ಯಾರೆಂದು, ಆಗ ನಿಮ್ಮ ಶೋಷಣೆಯ ಕಾರಣಗಳು ಅರ್ಥವಾಗುತ್ತದೆ, ಬೆನ್ನು ಮೂಳೆಗೂ ಎಲುಬಿಲ್ಲದ ನಾಲಿಗೆಗೂ ಇರುವ ವ್ಯತ್ಯಾಸ, ಆಗ ತೋರಿಸಿ ಈ ದುರಹಂಕಾರಿಗಳಿಗೆ ಅನ್ನದ ಮಹತ್ವ, ಆಗ ನೋಡಿ ನಿಮ್ಮ ಕಾಲಿಗೆ ಬೀಳುತ್ತಾರೆ, ನೀವೇ ಅನ್ನದಾತರೆಂದು, ಆಮೇಲೆ ಪ್ರತಿದಿನವೂ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ, ಅಲ್ಲಿಯವರೆಗೂ ನಿಮ್ಮ ದಿನ ನಿಮ್ಮ ತ್ಯಾಗ ಯಾರಿಗೂ ನೆನಪಾಗುವುದಿಲ್ಲ. ಇದನ್ನು ಸಾಧ್ಯವಾಗಿಸಬೇಕಾಗಿರುವುದು ಶೇಕಡ 70% ರಷ್ಟು ಇರುವ ರೈತರ ವಿದ್ಯಾವಂತ ಮಕ್ಕಳು. ಅವರುಗಳು ಜಾಗೃತರಾದರೆ ಯಾರೂ ತಡೆಯಲು ಸಾಧ್ಯವಿಲ್ಲ. ಹಾಗಾಗಲಿ ಎಂದು ಆಶಿಸುತ್ತಾ…

ನನ್ನ ಪ್ರೀತಿಯ ಗೆಳೆಯ ಗೆಳತಿಯರೇ, ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡದಿರಿ, ಸೊಪ್ಪಿನ ಅಜ್ಜನ ಬಳಿ ಕೊಸರಾಡದಿರಿ, ಕಡಲೆಕಾಯಿ ಮಾರುವವರ ಹತ್ತಿರ ಜಗಳವಾಡದಿರಿ,ಹಣ್ಣಿನವನ ಹತ್ತಿರ ಪೌರುಷ ತೋರದಿರಿ, ಎಳನೀರಿನವರ ಬಳಿ ಜುಗ್ಗುತನದಿಂದ ವರ್ತಿಸದಿರಿ, ಹೂವಿನವರ ಹತ್ತಿರ ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡದಿರಿ, ಗೊತ್ತೇ ನಿಮಗೆ ಹಣ್ಣು ತರಕಾರಿ ಸೊಪ್ಪು ಬೇಳೆಕಾಳುಗಳು ಭತ್ತ ಬೆಳೆಯುವವರ ಕಷ್ಟ? ಗೊತ್ತೇ ನಿಮಗೆ ಅವು ಬೆಳೆಯಲು ಎಷ್ಟು ದಿನ ಬೇಕೆಂದು? ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆಂದು?  ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು? ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆಂದು. ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು? ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾಂಡ. ಗೊತ್ತೇ ನಿಮಗೆ ಅದರಲ್ಲಿ ಆಗುವ ಸೋರಿಕೆಯ ನಷ್ಟ ಎಷ್ಟೆಂದು? ಗೊತ್ತೇ ನಿಮಗೆ ಇಷ್ಟಾದರೂ ಅದಕ್ಕೆ ಸಿಗುವ ಪ್ರತಿಫಲ ಎಷ್ಟೆಂದು? ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್ ನಲ್ಲಿ ತಯಾರಾದದ್ದಲ್ಲ. ನೀವು ಊಟ ಮಾಡುವ ತರಕಾರಿ ಇಂಟರ್ನೆಟ್ ನಲ್ಲಿ ಬೆಳೆದದ್ದಲ್ಲ. ಅದು ರೈತರ ಬೆವರ ಹನಿಗಳಿಂದ ಬಸಿದದ್ದು...

ತಾಕತಿದ್ದರೆ Pizza - Burger  ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ. ಧೈರ್ಯವಿದ್ದರೆ Shopping mall ಗಳಲ್ಲಿ ಕೊಸರಾಡಿ. ಶಕ್ತಿಯಿದ್ದರೆ Multiplex theater ಟಿಕೆಟ್ ಕೌಂಟರ್ ನಲ್ಲಿ ಜಗಳವಾಡಿ. ಕ್ಷಮಿಸಿ,  ಇದು ಯಾರ ವಿರುದ್ಧದ ದ್ವೇಷವೂ ಅಲ್ಲ, ನಿಮ್ಮ ಮನಸ್ಸಿನ ಜಾಗೃತಿಗಾಗಿ,  ನಿಮ್ಮ ಗಮನ ಸೆಳೆಯಲು, ರೈತರ ಶ್ರಮವನ್ನು ನಿಮಗೆ ನೆನಪಿಸಲು, ಆಹಾರದ ಮಹತ್ವ ಸಾರಲು ಮಾತ್ರ.

-ವಿವೇಕಾನಂದ ಹೆಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ