ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ !
ಹಸಿವಿನಿಂದ ಪ್ರತಿ ದಿನ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಅಕ್ಟೋಬರ್ 16 " ವಿಶ್ವ ಆಹಾರ ದಿನ "
1945 ರಲ್ಲಿ ವಿಶ್ವಸಂಸ್ಥೆಯ " Food and agriculture organization ( FAO ) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಸುಮಾರು 80 ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ ಕುಸಿದಿದೆ. 16% ಮಕ್ಕಳಲ್ಲಿ ಅಪೌಷ್ಟಿಕತೆ, 3% ಐದು ವರ್ಷದ ಮಕ್ಕಳ ಮರಣ ಪ್ರಮಾಣ, 58% ಯುವತಿಯರಲ್ಲಿ ರಕ್ತ ಹೀನತೆ ಇದೆ.
ಭಾರತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟದ ಎಲೆಗಳಲ್ಲಿ ವ್ಯರ್ಥವಾಗುವ ಆಹಾರ ಪ್ರಮಾಣ ಶೇಕಡಾ 25%.. ಈಗ ಬಹುಶಃ ನಿಜವಾದ ಸಮಸ್ಯೆ ಅರ್ಥವಾಗಿರಬಹುದು. ಇದಕ್ಕೆ ವಿವಿಧ ಆಯಾಮಗಳು ಇವೆ. ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಅಥವಾ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು ಅಥವಾ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿರುವುದು ಅಥವಾ ಭೂ ಪ್ರದೇಶಗಳ ಅಸಮಾನತೆ ಅಥವಾ ಉಳಿತಾಯ ಮತ್ತು ಹಂಚಿಕೆಯ ಲೋಪದೋಷಗಳು ಅಥವಾ ಆಹಾರದ ದುರುಪಯೋಗ. ಇವುಗಳಲ್ಲಿ ಯಾವುದು ಹೆಚ್ಚು ಕಾರಣ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.
ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಜನಸಂಖ್ಯೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ, ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಫಲವತ್ತತೆ ಕಾಪಾಡುವುದು, ಉಳಿತಾಯ ಮತ್ತು ಹಂಚಿಕೆ ಎಲ್ಲವೂ ಆಯಾ ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಆದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವ ಕರ್ತವ್ಯ, ಜವಾಬ್ದಾರಿ ಮತ್ತು ಮಾನವೀಯತೆ ನಮ್ಮಂತ ಪ್ರತಿ ನಾಗರಿಕರಿಗು ಸಾಧ್ಯವಿದೆ. ಆ ನಿಟ್ಟಿನಲ್ಲಿ ಯೋಚಿಸಿದಾಗ..
ಭಾರತ ದೇಶದ ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಆಹಾರ ವ್ಯರ್ಥವಾಗುವುದು ಸ್ವಲ್ಪ ಕಡಿಮೆ. ಕಾರಣ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ಆಹಾರವನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಳ್ಳದೆ ಬಡಿಸಿದ ಸಂಪೂರ್ಣ ಆಹಾರ ತಿನ್ನುವ ಪ್ರಯತ್ನ ಮಾಡುವುದನ್ನು ಪಾದಯಾತ್ರೆಯ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದಕ್ಕೆ ಕಾರಣ ಏನೇ ಇರಲಿ ಆ ಮನೋಭಾವ ಮಾತ್ರ ಸ್ವಾಗತಾರ್ಹ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತರ ಕರ್ನಾಟಕದಷ್ಟು ಅಲ್ಲದಿದ್ದರೂ ಆಹಾರವನ್ನು ಸ್ವಲ್ಪ ಮಟ್ಟಿಗೆ ಗೌರವಿಸಿ ಹೆಚ್ಚು ವ್ಯರ್ಥ ಮಾಡುವುದಿಲ್ಲ.
ಮುಖ್ಯವಾಗಿ ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಯಥೇಚ್ಛವಾಗಿ ವ್ಯರ್ಥವಾಗುವುದು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಅತಿಹೆಚ್ಚು ಆಹಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸ್ವತಃ ಅನುಭವದಿಂದ ಗಮನಿಸಿದ್ದೇನೆ. ಒಂದು ಕಾಲಕ್ಕೆ ಆಹಾರ ಅತ್ಯಮೂಲ್ಯವಾಗಿತ್ತು. ಆದರೆ ಜನರ ಹಣದ ಶಕ್ತಿ ಹೆಚ್ಚಾದಂತೆ ಆಹಾರದ ಪೋಲಾಗುವುದು ಹೆಚ್ಚಾಯಿತು. ಕೆಲವೊಮ್ಮೆ ನಿರ್ಲಕ್ಷ್ಯ ಮತ್ತೆ ಹಲವು ಕಡೆ ದುರಹಂಕಾರ ಇದಕ್ಕೆ ಕಾರಣ ಇರಬಹುದು.
ರೈತರು ಬಿತ್ತನೆ ಮಾಡಿ ಅದು ಬೆಳೆದು ಫಸಲಾಗಿ ಕಟಾವು ಮಾಡಿ ಸಂಗ್ರಹಿಸಿ ಸಾಗಾಣಿಕೆ ಮಾಡಿ ಮಾರಾಟ ಮಾಡಿ ಅದು ಮನೆ ಮನೆಗೆ ಸೇರಿ ಆಹಾರವಾಗಿ ನಮ್ಮ ಎಲೆ ಅಥವಾ ತಟ್ಟೆಗೆ ಸೇರುವ ವೇಳೆಗೆ ಸಾಕಷ್ಟು ಸಹಜವಾಗಿ ಮತ್ತು ಅನಿವಾರ್ಯವಾಗಿ ನಷ್ಟವಾಗಿರುತ್ತದೆ. ಮತ್ತೆ ಆಹಾರವನ್ನು ನಾವು ಬಡಿಸಿಕೊಂಡು ತಟ್ಟೆಯಲ್ಲಿ ಶೇಕಡಾ 25% ವ್ಯರ್ಥ ಮಾಡಿದರೆ ಒಟ್ಟು ಆಹಾರ ಬೆಳೆಗಳ ದುರುಪಯೋಗ ಎಷ್ಟಾಗಬಹುದು ಊಹಿಸಿ. ಭಾರತದಲ್ಲಿ 25% ವ್ಯರ್ಥ ಎಂದರೆ ಸುಮಾರು 35 ಕೋಟಿ ಜನಸಂಖ್ಯೆಯ ಆಹಾರವನ್ನು ನಾವು ಕಬಳಿಸಿದಂತೆ ಆಗುತ್ತದೆ ಮತ್ತು ಆಹಾರ ಬೆಳೆಯಲು ಉಪಯೋಗಿಸಿದ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸಾಯದ ಮೇಲೆ ಅವಶ್ಯಕವಾಗಿ ಒತ್ತಡ ಏರಿದಂತೆ ಆಗುತ್ತದೆ ಹಾಗು ನಮ್ಮ ರೈತರ ಶ್ರಮಕ್ಕೆ ಅಗೌರವ ತೋರಿಸಿದಂತೆ ಆಗುತ್ತದೆ.
ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಠ ಈಗಲಾದರೂ ನಾವೆಲ್ಲರೂ ಜಾಗೃತರಾಗಿ ಈ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ - ವೈಯಕ್ತಿಕ ಆಸಕ್ತಿಯಿಂದ ಸಾಧ್ಯವಾದಷ್ಟು ಆಹಾರದ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸೋಣ. ಇದು ಅತ್ಯಂತ ಸರಳ ಮತ್ತು ಆತ್ಮ ತೃಪ್ತಿಯ ಕೆಲಸ. ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ - ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ… ನಿರಂತರ ಸಂಘರ್ಷಮಯ ರಾಜಕೀಯ ವಾತಾವರಣದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದ ಆಹಾರದ ಸದುಪಯೋಗದ ಬಗ್ಗೆ ಸಮಾಜ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.
ಧರ್ಮಗಳ ಆಧ್ಯಾತ್ಮಿಕ ಗುರುಗಳು ವಕ್ಫ್ ಆಸ್ತಿ ಬೆಳೆಸುವಲ್ಲಿ, ಚರ್ಚ್ಗಳನ್ನು ನಿರ್ಮಿಸುವಲ್ಲಿ, ಶಿವ - ನಾಗ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಆಹಾರವನ್ನು ಮರೆತಿದ್ದಾರೆ. ಕೃಷಿಯನ್ನು, ರೈತರನ್ನು ನಿರ್ಲಕ್ಷಿಸಿದ್ದಾರೆ. ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮೈ ಮರೆತಿದ್ದಾರೆ. ಯುವ ಪೀಳಿಗೆಗೆ ಆಹಾರದ ಮಹತ್ವವೇ ಅರ್ಥವಾಗುತ್ತಿಲ್ಲ. ಸ್ವಿಗ್ಗಿ ಜೊಮೊಟೊಗಳೆಂಬ ಮೊಬೈಲ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್ಗಳಲ್ಲಿ ಪೇಟಿಎಮ್, ಫೋನ್ಪೇ, ಗೂಗಲ್ ಪೇ ಮುಂತಾದ ಬ್ಯಾಂಕಿಂಗ್ ತಂತ್ರಜ್ಞಾನದ ಮುಖಾಂತರ ಹಣ ವರ್ಗಾಯಿಸಿ ಮನೆಯ ಬಾಗಿಲಿಗೆ ಇಷ್ಟ ಪಟ್ಟ ಊಟ ತಿಂಡಿಗಳನ್ನು ಸುಲಭವಾಗಿ ತರಿಸಿಕೊಂಡು ತಿಂದು ಆಹಾರದ ಪಾವಿತ್ರ್ಯವನ್ನೇ ಮರೆತಿದ್ದಾರೆ.
ಅದರ ಉತ್ಪಾದನೆ, ಹಂಚಿಕೆ, ಸಂಗ್ರಹ, ಭವಿಷ್ಯದ ಬಗ್ಗೆ ಅವರಿಗೆ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಅದಕ್ಕೆ ಸಂಬಂಧಿಸಿದ ಇತರರು ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಒಮ್ಮೆ ಆಹಾರದ ಕೊರತೆ ಉಂಟಾದರೆ ಇಡೀ ದೇಶದಲ್ಲೇ ಆಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು.
ಆಹಾರ ಪೋಲು - ರಾಷ್ಟ್ರೀಯ ನಷ್ಟ, ತಿನ್ನುವ ಹಕ್ಕಿದೆ - ಬಿಸಾಡುವ ಹಕ್ಕಿಲ್ಲ, ನಮ್ಮ ನೆಲೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮತ್ತು ಜಾಗೃತಿಗಾಗಿ ಪ್ರಬುದ್ಧ ಮನಸ್ಸುಗಳ ಒಂದು ಸ್ಪಂದನೆ. ಆಹಾರದ ಉಳಿತಾಯ ಎಷ್ಟು ಅವಶ್ಯಕ ಎಂದು ನಿಮಗೆ ಹೇಳುವ ಅಗತ್ಯವಿಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಕರ್ನಾಟಕದಲ್ಲಿ ಆಹಾರ ನೀತಿ ಸಂಹಿತೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ವಿಷಯಗಳನ್ನು ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ