ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ
“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತೆನೆಗಳನ್ನು ತಂದು ನಮ್ಮ ಮನೆಯನ್ನು ತುಂಬಿಸಿಕೊಳ್ಳುತ್ತೇವೆ. ಖುಷಿ ಪಡುತ್ತೇವೆ. ಯೋಚಿಸಿ ನೋಡಿ, ಇದರಲ್ಲಿ ನಿಜವಾಗಿಯೂ ಖುಷಿ ಇದೆಯಾ? ಬದಲಿಗೆ ಮನೆ ತುಂಬಿಸಲೆಂದೇ ಅಂಗಳದ ಬದಿಯಲ್ಲಿ ಸ್ವಲ್ಪ ಭತ್ತ ಬೆಳೆಯಿರಿ,” ಎನ್ನುವ ಕಿವಿಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ ಅಮೈ ದೇವರಾವ್ ಹೇಳುತ್ತಾರೆ.
ಇವರಲ್ಲಿ ನೂರೈವತ್ತು ಭತ್ತದ ತಳಿಗಳು ಸಂರಕ್ಷಣೆಯಾಗತ್ತಿವೆ.ದೇವರಾಯರಿಗೆ ಹಿರಿಯರಿಂದಲೇ ಭತ್ತದ ಕೃಷಿಯು ಪಾರಂಪರಿಕವಾಗಿ ಹರಿದು ಬಂದಿದೆ. ಏನಿಲ್ಲವೆಂದರೂ ಶತಮಾನದಿಂದ ಹಿಂದಿನಿಂದಲೇ ಇವರ ಗದ್ದೆಗಳಲ್ಲಿ ಭತ್ತದ ಬೇಸಾಯ ನಡೆಯುತ್ತಿದೆ. “ನಾವು ಬೆಳೆದ ಅಕ್ಕಿಯನ್ನು ಉಣ್ಣುವುದು ನಮ್ಮ ಶ್ರೀಮಂತಿಕೆ. ಕೃಷಿಕ ಅಕ್ಕಿಗಾಗಿ ಅಂಗಡಿ ಮುಂದೆ ಕ್ಯೂ ನಿಲ್ಲುವುದು ನಾಚಿಕೆ,” ಆಗಾಗ್ಗೆ ಹೇಳುವ ಮಾತು.
ಒಂದು ಕಾಲಘಟ್ಟದಲ್ಲಿ ಕರಾವಳಿಯಲ್ಲಿ ಭತ್ತದ ಬೇಸಾಯಕ್ಕೆ ಮೊದಲ ಸ್ಥಾನವಿತ್ತು. ಹಲವು ಕಾರಣಗಳಿಂದಾಗಿ ವಾಣಿಜ್ಯ ಬೆಳೆಗಳು ಭತ್ತದ ಕೃಷಿಯನ್ನು ಹಿಂದಿಕ್ಕಿದುವು. ಉಣ್ಣುವುದಕ್ಕಾಗಿಯೇ ಬೆಳೆಸಬೇಕೆಂಬ ಮನಃಸ್ಥಿತಿ ಬದಲಾಯಿತು. “ಯಾವಾಗ ನಮ್ಮ ಕೈಗೆ ಕ್ಯಾಲಿಕ್ಯುಲೇಟರ್ ಬಂತೋ ಅಂದಿನಿಂದ ಭತ್ತದ ಕೃಷಿಗೆ ಹಿನ್ನಡೆಯಾಯಿತು. ಭತ್ತದ ಬೇಸಾಯ ಲೆಕ್ಕವಿಟ್ಟುಮಾಡುವಂತಹುದಲ್ಲ. ಅದು ಹೊಟ್ಟೆ ತುಂಬುವ ಪ್ರಶ್ನೆ,” ಹಿರಿಯರಾದ ದೇವರಾಯರ ಅನುಭವ.
ಕರಾವಳಿಯ ಹೆದ್ದಾರಿಯ ಇಕ್ಕೆಲಗಳಲ್ಲಿ ಭತ್ತದ ಬೇಸಾಯ ನಡೆಯುತ್ತಿದ್ದ ಕಾಲಮಾನಕ್ಕೆ ಹಿರಿಯರು ಮಾತಿಗೆ ಸಿಗುತ್ತಾರೆ. ವಿವಿಧ ವೆರೈಟಿಗಳು ಬೆಳೆಯುತ್ತಿದ್ದ ಸಮೃದ್ಧತೆಯಿತ್ತು. ಈಗ ಬಹುತೇಕ ಗದ್ದೆಗಳು ದೊಡ್ಡ ದೊಡ್ಡ ಕಟ್ಟಡಗಳ ಅಡಿಪಾಯಗಳಾಗಿವೆ. ಬುದ್ಧಿಪೂರ್ವಕವಾಗಿ ಭತ್ತವನ್ನು ಮರೆಗೆ ತಳ್ಳಿದೆವು. “ದುಡ್ಡು ಕೊಟ್ರೆ ಅಂಗಡಿಯಲ್ಲಿ ಸಿಗೋದಿಲ್ವಾ,” ಎಂದು ಉಡಾಫೆ ಮಾತನಾಡುವ ಹಲವು ಮಂದಿಯನ್ನು ನೋಡಿದ್ದೇನೆ.
ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಘೋರತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ನಿರ್ವಿಷವಾದ ಆಹಾರ ಸೇವೆನೆಯ ಅಗತ್ಯಗಳು ಬದುಕಿನಲ್ಲಿ ಮಾರ್ದನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಭತ್ತದ ಬೇಸಾಯಕ್ಕೆ ಒಲವು ಮೂಡುತ್ತಿರುವ ಲಕ್ಷಣಗಳು ಅಲ್ಲಿಲ್ಲಿ ಕಾಣುತ್ತಿವೆ. ಶಾಲಾ ಮಕ್ಕಳಿಗೆ ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅರಿವನ್ನು ಮೂಡಿಸುವ ಯತ್ನಗಳಾಗುತ್ತಿವೆ. ಕೃಷಿ ಮಾಡದೆ ಹಡಿಲು ಬಿಟ್ಟ ಗದ್ದೆಗಳಿಗೆ ಮರು ಜೀವ ಕೊಡುವ ವೈಯಕ್ತಿಕ, ಸಾಂಘಿಕ ಕೆಲಸಗಳಾಗುತ್ತಿವೆ.
ಬಂಟ್ವಾಳ (ದ.ಕ.) ತಾಲೂಕಿನ ನರಿಕೊಂಬು ‘ವಿವೇಕ ಜಾಗೃತ ಬಳಗ’ದವರು ಈ ಬಾರಿ ಎರಡೆಕ್ರೆ ಗದ್ದೆಯಲ್ಲಿ ಭತ್ತದ ಕೃಷಿಗೆ ಶ್ರೀಕಾರ ಬರೆದಿದ್ದಾರೆ. ಶಿರಸಿ ಬಾಳೇಸರದ ಗಿರೀಶ ಗಣಪತಿ ಹೆಗಡೆಯವರ ನೇತೃತ್ವ. ಇವರು ಮಂಗಳೂರು ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕ. ಸ್ಥಳೀಯ ಕೃಷಿಕ ಚಂದ್ರಶೇಖರರ ಗದ್ದೆಯಲ್ಲಿ ಅನುಭವಿಗಳ ನಿರ್ದೇಶನದಂತೆ ಕೃಷಿ ಮಾಡಿದ್ದಾರೆ.
ಬಳಗದ ಬಹುತೇಕ ಸದಸ್ಯರು ಕೃಷಿ ಮೂಲದವರಾಗಿದ್ದು ವಿವಿಧ ಉದ್ಯೋಗದಲ್ಲಿರುವವರು. ಹೇಳುವಂತಹ ಕೃಷಿ ಜ್ಞಾನವಿಲ್ಲ. “ಲಾಭ-ನಷ್ಟದ ಪ್ರಶ್ನೆಯಲ್ಲ. ಕೃಷಿ ಜ್ಞಾನವು ಮತ್ತೊಮ್ಮೆ ಮನೆಯಲ್ಲಿ, ಮನದಲ್ಲಿ ಮೂಡಬೇಕು,” ಉದ್ದೇಶವನ್ನು ಗಿರೀಶ್ ಹೆಗಡೆ ಹೇಳುತ್ತಾರೆ.
ಬಳಗದ ಐವತ್ತಕ್ಕೂ ಮಿಕ್ಕಿ ಸದಸ್ಯರು ಅನಭವಿಗಳ ನಿರ್ದೇಶನದಲ್ಲಿ ಗದ್ದೆಗಳಿದು ನೇಜಿ ನೆಟ್ಟರು. ಆ ದಿವಸ ಊರಿಗೆ ಸಂಭ್ರಮ. ಒಂದು ಕೃಷಿಗೆ ಜಾತ್ರೆಯ ಸ್ಪರ್ಶ ನೀಡಿ ಮನಸ್ಸಿಗೆ ಗ್ರಾಸ ನೀಡಿದ ಕಾರ್ಯಕ್ರಮ. ಮೂರು ದಿವಸದಲ್ಲಿ ಎರಡೆಕ್ರೆ ಗದ್ದೆಯ ನಾಟಿ ಮುಗಿದಿತ್ತು. ಊರಿನ ಹಿರಿಯ ಕೃಷಿಕರು ಯುವಕರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷ. ಗಿರೀಶ್ ಹೆಗಡೆ ಜ್ಞಾಪಿಸಿಕೊಳ್ಳುತ್ತಾರೆ – ಯಾರಿಗೂ ನೇಜಿ ಹಿಡಿದು ಅಭ್ಯಾಸವಿಲ್ಲ. ಕೆಸರು ಮೆತ್ತಿಸಿಕೊಂಡು ಗೊತ್ತಿಲ್ಲ. ನೇಜಿಗಳನ್ನು ಕೈಯಲ್ಲಿ ಹಿಡಿಯುವ ಕ್ರಮ. ನಾಟಿ ಮಾಡುವ ವಿಧಾನ, ನೇಜಿಯ ಬೇರುಗಳು ಎಷ್ಟು ಆಳದಲ್ಲಿರಬೇಕು – ಮೊದಲಾದ ಮಾಹಿತಿಗಳನ್ನು ಪ್ರಾಕ್ಟಿಕಲ್ ರೂಪದಲ್ಲಿ ತೋರಿಸಿಕೊಟ್ಟು ನೆರವಾಗಿದ್ದಾರೆ. ಬೇಸಾಯಕ್ಕೆ ಬೇಕಾದ ಆರಂಭಿಕ ಮೊತ್ತವನ್ನು ಗಿರೀಶ್ ಭರಿಸಿದ್ದಾರೆ.
ನಾಟಿ ಮಾಡಿದಲ್ಲಿಗೆ ಮುಗಿಯುವುದಿಲ್ಲ. ವಿವೇಕ ಬಳಗದ ಸದಸ್ಯರು ತಂತಮ್ಮ ಬಿಡುವಿನಲ್ಲಿ ಗದ್ದೆಯ ನಿರ್ವಹಣೆ ಮಾಡುತ್ತಾರೆ. ಊರಲ್ಲಿದ್ದರೆ ದಿನಕ್ಕೊಮ್ಮೆಯಾದರೂ ಭೇಟಿ ನೀಡದ ಸದಸ್ಯರಿಲ್ಲ. ಗದ್ದೆ ಹುಣಿಯಲ್ಲಿ ನಡೆದಾಡುವಾಗ ಚಪ್ಪಲಿ ಧರಿಸುವುದಿಲ್ಲ. ”ಅನ್ನ ಕೊಡುವ ಭೂಮಿ. ಅದು ಪ್ರಕೃತಿಯ ಆರಾಧನೆ ಎನ್ನುವ ಭಾವ. ಭತ್ತದ ಕೃಷಿ ಬೇರೆಡೆಯೂ ನೋಡಲು ಸಿಗುತ್ತದೆ. ನಾವು ಮಾಡಿದ, ಅನುಭವಿಸಿದ ಕೃಷಿಯ ಅನುಭವಕ್ಕೆ ಬೆಲೆ ಕಟ್ಟಲಾಗದು,” ಎನ್ನುತ್ತಾರೆ ಗಿರೀಶ್. ಬಹುಶಃ ಜನವರಿ ತಿಂಗಳಲ್ಲಿ ಕಟಾವ್.
ಇದೊಂದು ಚಿಕ್ಕ ಯತ್ನ. ಕಲಿಕೆಯ ಹೆಜ್ಜೆ. ಸಂಸ್ಕೃತಿಯ ಅರಿವು. ಒಬ್ಬೊಬ್ಬ ಕೃಷಿ ಮಾಡುವುದೆಂದರೆ ವೆಚ್ಚದಾಯಕ. ಸಾಂಘಿಕವಾಗಿ ಕೃಷಿ ಮಾಡಿದರೆ ಸಂಸ್ಕೃತಿಯ ಜತೆಗೆ ಕೃಷಿಯೂ ಉಳಿದಂತಾಗುತ್ತದೆ. ನಮ್ಮ ಮಧ್ಯೆ ಇರುವ ಅನೇಕ ಸಂಘಗಳು ಈ ದಿಸೆಯಲ್ಲಿ ಯತ್ನಿಸಬಹುದು. ಮರೆಯುತ್ತಿರುವ ಕೃಷಿ ಪರಂಪರೆ, ಸಂಸ್ಕøತಿಯನ್ನು ಉಳಿಸಬಹುದು. ಈ ದಿಸೆಯಲ್ಲಿ ವಿವೇಕ ಜಾಗೃತ ಬಳಗದ ಕಾರ್ಯ ಶ್ಲಾಘನೀಯ.
ಹಡಿಲು ಬಿಟ್ಟಂತಹ ಅದೆಷ್ಟೋ ಭತ್ತದ ಗದ್ದೆಗಳಿವೆ. ವೈಯಕ್ತಿಕ ನೆಲೆಯಲ್ಲಿ ಅಲ್ಲೋ ಇಲ್ಲೋ ಕೃಷಿ ನಡೆಯುತ್ತಿದೆ. ಸ್ವ-ಸಹಾಯ ಸಂಘಗಳು, ಯುವಕ ಮಂಡಲಗಳು, ಭಜನಾ ಸಂಘಗಳು.. ಹೀಗೆ ಅನ್ಯಾನ್ಯ ಉದ್ದೇಶದ ಬಳಗಗಳು ಯತ್ನಿಸಬಹುದು. ಭಾರತೀಯ ಸನಾತನ ಸಂಸ್ಕೃತಿಯು ಕೃಷಿ ಪರಂಪರೆಯಿಂದ ಬೆಳೆದು ಬಂದಿದೆ. ಈ ದಿಸೆಯಲ್ಲಿ ಯೋಚನೆ, ಯೋಜನೆ ಅಗತ್ಯ.