ಅನ್ನದ ನೆಲ..ಅರಿವಿನ ಮುಗಿಲು..ನಡುವೆ ಪುನುಗು ಬೆಕ್ಕು!

ಅನ್ನದ ನೆಲ..ಅರಿವಿನ ಮುಗಿಲು..ನಡುವೆ ಪುನುಗು ಬೆಕ್ಕು!

ಬರಹ

೨೧ನೇಯ ಶತಮಾನದ ಮಾಹಿತಿ ತಂತ್ರಜ್ನಾನದ ಈ ಯಾಂತ್ರಿಕ ಯುಗದಲ್ಲಿ ಇಂದು..
ಮನುಷ್ಯ ಸಮುದ್ರದಲ್ಲಿ ಮೀನಿನಂತೆ ಈಜಬಲ್ಲ;
ಬಾನಿನಲ್ಲಿ ಹಕ್ಕಿಯಂತೆ ಹಾರಬಲ್ಲ!
ಆದರೆ ಭೂಮಿಯ ಮೇಲೆ ಆತ ಮನುಷ್ಯನಂತೆ ಬದುಕುವುದು ಇನ್ನು ಕಷ್ಟಸಾಧ್ಯ!

ಸಕಲ ಜೀವರಾಶಿಗಳಿಗೆ ಅನ್ನ ಕೊಡುವ ನೆಲ ಒಂದು ಕಡೆ. ಚಾಚಿದ ಅರಿವಿನ ಮುಗಿಲು (ಮಾನವ ಪ್ರಾಣಿಗೆ) ಮತ್ತೊಂದೆಡೆಗೆ. ಈ ನೆಲ-ಮುಗಿಲುಗಳ ಮಧ್ಯೆ ಏನೂ ತಿಳಿಯದ ಮೂಕ ಪ್ರಾಣಿ-ಪಕ್ಷಿಗಳು! ಈ ಮಾತನ್ನು ಸಾಕ್ಷೀಕರಿಸುವಂತೆ ಶುಕ್ರವಾರ ಧಾರವಾಡಕ್ಕೆ ಸುವಾಸನೆ ಬೀರುವ ‘ಪುನುಗು ಬೆಕ್ಕು’ ಭೇಟಿ ಕೊಟ್ಟು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

ಮಲೆನಾಡು, ಅರೆ ಮಲೆನಾಡು ಹಾಗು ಬಯಲು ಸೀಮೆಯ ಮಧ್ಯೆ ಚಾಚಿಕೊಂಡಿರುವ ೭ ಗುಡ್ಡಗಳು ಹಾಗು ೭ ಕೆರೆಗಳ, ಶಾಲ್ಮಲಾ ತಟದ ನಾಡು ‘ಛೋಟಾ ಮಹಾಬಳೇಶ್ವರ’ ಧಾರವಾಡ. ಇಲ್ಲಿ ಆಗೊಮ್ಮೆ-ಈಗೊಮ್ಮೆ ಅಪರೂಪಕ್ಕೊಮ್ಮೆ ಭೇಟಿ ಕೊಡುತ್ತಿದ್ದ ಕಾಡು ಪ್ರಾಣಿಗಳು ಇತ್ತೀಚೆಗೆ ತಮ್ಮ ನಿರಂತರ ಕಾಯಕ ಮಾಡಿಕೊಂಡಂತಿದೆ. ನಿತ್ಯ ಭೇಟಿಯನ್ನು ಖಾಯಂಗೊಳಿಸುವ ನಿರ್ಧಾರ ಕೈಗೊಂಡಂತಿದೆ!

‘ಸಂಪದಿಗರಿಗೆ’ ಪ್ಯಾಂಗೋಲಿನ್ ಪೇಟೆಗೆ ಭೇಟಿ ನೀಡಿ ದುರಂತ ಸಾವು ಕಂಡ ಸುದ್ದಿ ತಿಳಿದಿದೆ. ವಿಷಾದದ ಛಾಯೆ ಆವರಿಸಿದೆ. ಆದರೆ ಧಾರವಾಡದ ಕೋಟೆ ಆವರಣದಲ್ಲಿರುವ ಧಾರವಾಡ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಸುವಾಸನೆ ಬೀರುವ ಪುನುಗು ಬೆಕ್ಕು ಭೇಟಿ ನೀಡಿ, ಜನರ ಕೈಗೆ ಸಿಗದೇ..ಸುದ್ದಿ ವೀರರ ಕೈಗೆ, ಕ್ಯಾಮರಾ ಯೋಧರ ಕೆಮೆರಾಗಳಿಗೆ ಸಿಕ್ಕು.. ಅವರ ಸಮಯೋಚಿತ ಕ್ರಮಗಳಿಂದಾಗಿ ಬದುಕಿ ಉಳಿದು, ಅರಣ್ಯ ಇಲಾಖೆಯವರ ಸೂಕ್ತ ನಿರ್ಧಾರದಿಂದಾಗಿ ಮೊದಲು ಗೋಣಿ ಚೀಲ ಸೇರಿತು! ನಂತರ ಸಮೀಪದ ದಾಂಡೇಲಿ ಅರಣ್ಯಕ್ಕೆ ತೆರಳಿ ಬಿಡುಗಡೆಗೊಂಡ ಸಂತಸದ ಸಂಗತಿ ಇಲ್ಲಿದೆ. ನಮಗೆಲ್ಲ ಇದು ಖುಷಿ ಕೊಟ್ಟ ವಿಚಾರ.

ಸುದ್ದಿ ಮನೆಯ ಬಾಣಸಿಗರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಅಲ್ಲಿ ನೂರಾರು ಜನರ ಜಮಾವಣೆ. ರೋಗಿಗಳು ಅವರ ತಳಮಳ, ಬಾಧೆ, ಅನುಭವಿಸಲಾಗದ ನೋವು ಎಲ್ಲವನ್ನು ಕ್ಷಣ ಕಾಲ ಮರೆತರು. ಸಿವಿಲ್ ಆಸ್ಪತ್ರೆಯ ಸಿಬ್ಬಂದಿಗಳ ಅಮಾನವೀಯ ವರ್ತನೆಯ ಬೇಜಾರು ಸಹ ಮನಸ್ಸಿನಿಂದ ದೂರಾಯಿತು. ಇನ್ನು ರೋಗಿಗಳ ಸಂಬಂಧಿಕರು ಆನಂದ ತುಂದಿಲರಾದರು. ವೈದ್ಯರು, ಶುಶ್ರೂಷಕರು, ಸ್ಥಳದಲ್ಲಿದ್ದ ಆರಕ್ಷಕರು ಎಲ್ಲರ ಕಣ್ಣು ಕ್ಷಿತಿಜದತ್ತ..ಗಿಡದಲ್ಲಿದ್ದ ವಿಶೇಷ ಅತಿಥಿ ಪುನುಗು ಬೆಕ್ಕಿನತ್ತ!

‘ಕಾಡು ಬೆಕ್ಕು’ ಅದು. ಅಲ್ಲಲ್ಲ.. ಅದು ‘ಗುರ್ಜಿ ಬೆಕ್ಕು’. ಹೀಗೆಯೇ ಸಾಗಿತ್ತು ಅವರ ವಿಚಾರ ವಿನಿಮಯ. ಆದರೆ ವಾಸ್ತವದಲ್ಲಿ ಏನಿದು? ಅರಣ್ಯ ಇಲಾಖೆಯವರು..ಪ್ರಾಣಿ ತಜ್ನರು..ಪರಿಸರವಾದಿಗಳು ಯಾರ ಬಳಿ ಮಾಹಿತಿ ಇದೆ? ತಲೆ ಕೆಡಿಸಿ ಕೊಂಡದ್ದಾಯಿತು. ಆ ಧಾವಂತದ ಸಾರ ಇಲ್ಲಿದೆ.

ಪುನುಗು ಇಲಿ: ಬೆಕ್ಕಲ್ಲ! -ವಾಸ್ತವದಲ್ಲಿ ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಠ ಪ್ರಾಣಿ ಬೆಕ್ಕಿನ ಕುಟುಂಬಕ್ಕೆ ಸೇರಿದ್ದಲ್ಲ. ಇಲಿಯ ಜಾತಿಗೆ ಸೇರಿದ ಪುನುಗು ಇಲಿ. ರಾತ್ರಿಯ ವೇಳೆ ಮಾತ್ರ ಆಹಾರ ಹೆಕ್ಕಲು ಹೊರಡುವ ಈ ಪುನುಗು ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ. ಮಳೆ ಕಾಡುಗಳಲ್ಲಿ ಕುರುಚಲು ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡಿದೆ. ಹಿಂದಿ ಭಾಷೆಯಲ್ಲಿ ‘ಸ್ಮಶಾನ ಚೇಳು’ ಎಂದು ಸಹ ಕರೆಯಲಾಗುತ್ತದೆ.

ಜನ ವಸತಿಯಿಂದ ಹಾಗು ಆವಾಸದಿಂದ ತೀರ ದೂರ ಇರಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚದ ಹಾಗು ನಾಚಿಕೆ ಸ್ವಭಾವದ್ದು! ಹಣ್ಣುಗಳೆಂದರೆ ಪುನುಗಿಗೆ ತೀರ ಇಷ್ಟ. ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ತೀರ ಅಚ್ಚುಮಚ್ಚು. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಪುನಗು ಬೆಕ್ಕುಗಳು ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿ ಗೂಡಿನ ತತ್ತಿಗಳು ಮತ್ತು ಕೀಟಗಳನ್ನು ಸಹ ತಿನ್ನುತ್ತವೆ.

ಪುನಗು ಬೆಕ್ಕಿನ ಬೆವರಿನಲ್ಲಿ ಸುವಾಸನೆ ಇದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆಯುಕ್ತ ಬೆವರು ಜೇನುತುಪ್ಪದಂತೆ ಗೋಚರಿಸುತ್ತದೆ. ಇದನ್ನು ಸುವಾಸನೆ (ಸೇಂಟ್) ದ್ರವ್ಯಗಳಲ್ಲಿ ಸುವಾಸನೆಯನ್ನು ಸ್ಥಿರಗೊಳಿಸುವ ಮಾಧ್ಯಮವಾಗಿ ಬಳಸಲಾಗುತ್ತದೆ. ಕಾಮ ಪ್ರಚೋದಕ ಔಷಧಿಯಾಗಿ ಸಹ ಉಪಯೋಗಿಸಲಾಗುತ್ತದೆ. ಹಾಗಾಗಿ ಅದನ್ನು ತೀವ್ರ ಹಿಂಸೆಗೂ ಒಳಪಡಿಸಿ ಬೆವರಿನ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಸಹ ಹೇರಲಾಗುತ್ತದೆ. ಸದ್ಯ ವಿನಾಶದ ಅಂಚಿಗೆ ಪುನುಗು ಬೆಕ್ಕು/ಇಲಿ ಹೋಗಲು ಬಲವಾದ ಕಾರಣ ಇದು.

‘ವಿವಿರಿಡೇ’ ಕುಟುಂಬಕ್ಕೆ ಸೇರಿದ ಪುನುಗಿಗೆ ಆಂಗ್ಲ ಭಾಷೆಯಲ್ಲಿ ‘ಸಿವೆಟ್ ಕ್ಯಾಟ್’ (Civet Cat) ಎಂದು ಕರೆಯಲಾಗುತ್ತದೆ. ಪ್ರಾಯಕ್ಕೆ ಬಂದ ಪುನುಗು ಬೆಕ್ಕು ೧ ರಿಂದ ೩ ಅಡಿ ಉದ್ದವಿರುತ್ತದೆ. ೮ ರಿಂದ ೯ ಪೌಂಡ್ ತೂಗಬಲ್ಲುದು ಎನ್ನುತ್ತಾರೆ ವನ್ಯ ಪ್ರಾಣಿ ತಜ್ನರು. ಧಾರವಾಡ ಮಲೆನಾಡಿಗೆ ಅಂಟಿಕೊಂಡಿರುವುದರಿಂದ ಜೊತೆಗೆ ತನ್ನ ಬಾಹುಗಳನ್ನು ನಾಡಿನಿಂದ ಕಾಡಿಗೂ ಚಾಚುತ್ತಿರುವುದರಿಂದ ತನ್ನ ಅಳಲು ತೋಡಲು ಪುನುಗು ಸಿವಿಲ್ ಆಸ್ಪತ್ರೆಗೆ ಭೇಟಿ ಕೊಟ್ಟಿತ್ತು ಎಂಬುದು ಸ್ಫಟಿಕ ಸ್ಪಷ್ಠ.