ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ

ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ

ಬರಹ

ಯೇಸುಕ್ರಿಸ್ತ ಶಿಲುಬೆಗೇರುವ ಮುನ್ನ ಆತನ ವಿರೋಧಿಗಳು ಅವನನ್ನು ಬಂಧಿಸುವ ಪರಿ, ಆತನ ನ್ಯಾಯವಿಚಾರಣೆ, ಅವನಿಗೆ ನೀಡಿದ ಹಿಂಸೆ, ನಂತರ ಶಿಲುಬೆ ಹೊರಿಸಿ ಮೆರವಣಿಗೆ ಮಾಡಿದ್ದು ಇವೆಲ್ಲವನ್ನೂ ಶುಭಶುಕ್ರವಾರಕ್ಕೆ ಮುಂಚಿನ ೪೦ ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಕ್ರೈಸ್ತರಲ್ಲಿ ವಾಡಿಕೆ. ಈ ಸರಣೆಯು ಗಾಢವಾಗಿರುವಂತೆ ಮಾಡಲು ಅವರು ಯೇಸುಕ್ರಿಸ್ತನ ಆ ಅಂತಿಮ ಕ್ಷಣಗಳ ವೃತ್ತಾಂತವನ್ನು ಪಾರಾಯಣ ಮಾಡುವ ಇಲ್ಲವೇ ಅಭಿನಯಿಸುವ ಪರಿಪಾಠವೂ ಇದೆ. ಶಿಲುಬೆಯಾತ್ರೆಯ ವಿವಿಧ ಹಂತಗಳನ್ನು ಸೂಚಿಸುವ ಹದಿನಾಲ್ಕು ಚಿತ್ರಪಟಗಳ ಮುಂದೆ ಮೊಣಕಾಲೂರಿ ಪಾರಾಯಣ ಮಾಡುವ ಸಂಪ್ರದಾಯ, ಕ್ರೈಸ್ತಭಕ್ತರು ತಾವೇ ವಿಧಿಸಿಕೊಂಡ ಒಂದು ಕಡ್ಡಾಯ ಪದ್ಧತಿ. ಚರ್ಚಿನ ನಿಯಮವಿಲ್ಲದೆಯೂ ಈ ಶಿಲುಬೆಯಾತ್ರೆ (Stations of the Cross) ದೇಶ ಕಾಲಗಳನ್ನು ಮೀರಿ ನಡೆದುಕೊಂಡು ಬಂದಿದೆ. ಆ ಹದಿನಾಲ್ಕು ಚಿತ್ರಪಟಗಳ ದೃಶ್ಯ ಹಾಗೂ ಶೀರ್ಷಿಕೆಗಳಲ್ಲಿ ಏಕರೂಪತೆ ಇದ್ದರೂ ಪಾರಾಯಣ ಮಾಡುವ ಪಠ್ಯ ಹಾಗೂ ವ್ಯಾಖ್ಯಾನಗಳಲ್ಲಿ ಭಿನ್ನತೆ ಇದೆ. ದೇವಾಲಯಗಳಲ್ಲಿ, ಮನೆಗಳಲ್ಲಿ, ಗುಡ್ಡಗಳಲ್ಲಿ, ರಂಗದಲ್ಲಿ, ಏಕಾಂತದಲ್ಲಿ, ಮೌನದಲ್ಲಿ ಯೇಸುಕ್ರಿಸ್ತನ ಶಿಲುಬೆಯಾತ್ರೆಯನ್ನು ಧ್ಯಾನಿಸುತ್ತಾ ಕ್ರಿಸ್ತನ ನೋವು ಸಂಕಟ (Passion of Christ) ಗಳಲ್ಲಿ ತಾವೂ ಭಾಗಿಯಾಗುವ ಮತ್ತು ತನ್ಮೂಲಕ ಆತ್ಮಶೋಧನೆಗೂ ಆತ್ಮೋನ್ನತಿಗೂ ಕಾರಣವಾಗುವ ಈ ಪ್ರಕ್ರಿಯೆ ಕ್ರೈಸ್ತ ಜೀವನದ ಅವಿಭಾಜ್ಯ ಅಂಗ.

ಬೆಂಗಳೂರಿನ ಹೊರವಲಯದ ಉತ್ತರಹಳ್ಳಿ (Uttarahalli) ಯ ಬಳಿ ಇರುವ ಅನ್ನಮ್ಮ ಬೆಟ್ಟದಲ್ಲಿ ಪ್ರತಿ ತಪಸ್ಸುಕಾಲದ ಐದನೇ ಭಾನುವಾರ ಶಿಲುಬೆಯಾತ್ರೆ ನಡೆಯುತ್ತದೆ. ಸುಮಾರು ೨೦೦ ವರ್ಷಗಳಿಗೆ ಮುನ್ನ ಈ ಬೆಟ್ಟದ ತಪ್ಪಲಿನಲ್ಲಿದ್ದ ಸಾಧ್ವಿ ಹೆಣ್ಣುಮಗಳೊಬ್ಬಳು ಕಾಮುಕ ಸೈನಿಕರಿಂದ ತಪ್ಪಸಿಕೊಳ್ಳಲು ಓಡುತ್ತಾ ಸಾಗಿ ಕೊನೆಗೆ ಬೆಟ್ಟದ ಮೇಲಿನಿಂದ ಹಾರಿ ಪ್ರಾಣಾರ್ಪಣೆ ಮಾಡಿದಳೆಂದೂ ಕೊನೆಗೆ ಅದೇ ಸೈನಿಕರು ಆಕೆಯ ಸಚ್ಚಾರಿತ್ರ್ಯವನ್ನು ಮೆಚ್ಚಿ ಮಣ್ಣು ಮಾಡಿದರೆಂದೂ ಐತಿಹ್ಯವಿದೆ. ಬೆಟ್ಟದ ಬುಡದಲ್ಲಿರುವ ಏಕೈಕ ಕ್ರೈಸ್ತ ಸಮಾಧಿಗೆ ಭಕ್ತರು ವಿಶೇಷವಾಗಿ ಹೆಣ್ಣುಮಕ್ಕಳು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಸಮಾಧಿಯ ಮಣ್ಣನ್ನು ಜನ ಪೂಜ್ಯಭಾವದಿಂದ ತಮ್ಮ ನೆತ್ತಿಯ ಮೇಲೆ ಹಾಕಿಕೊಳ್ಳುತ್ತಾರೆ. ತಪಸ್ಸುಕಾಲ (Lenten season) ದ ಐದನೇ ಭಾನುವಾರ ಇಲ್ಲಿ ದೊಡ್ಡ ಜಾತ್ರೆಯೇ ನೆರೆಯುತ್ತದೆ. ಜನ ವಾಹನಗಳಲ್ಲಿ ಕಾಲ್ನಡಿಗೆಯಲ್ಲಿ ಇಲ್ಲಿಗೆ ಧಾವಿಸುತ್ತಾರೆ. ಬೆಂಗಳೂರು ನಗರಸಾರಿಗೆಯು ಅಂದು ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡುತ್ತದೆ.

ಬೆಂಗಳೂರು ಮಹಾನಗರದ ಒಡಲನ್ನು ಸೇರಿಹೋಗಿರುವ ಹಾಗೂ ಹೊರವಲಯದ ಗ್ರಾಮಗಳಲ್ಲಿರುವ ಕನ್ನಡ ಕ್ರೈಸ್ತರ ಜಾನಪದ ದೈವವಾಗಿ ಅನ್ನಮ್ಮನು ಅವರನ್ನೆಲ್ಲ ವರ್ಷಕ್ಕೊಮ್ಮೆ ಸೂಜಿಗಲ್ಲಿನಂತೆ ಸೆಳೆಯುತ್ತಾಳೆ. ಚರ್ಚಿನೊಳಗಡೆಯ ಶಿಷ್ಟ ದೈವದ ಜೊತೆಜೊತೆಗೇ ಮಣ್ಣಿನ ಮಕ್ಕಳ ಸಾಂಸ್ಕೃತಿಕ ಕೊಂಡಿಯಾಗಿ ಜಾನಪದ ದೈವದಂತೆ ಅನ್ನಮ್ಮ ಕಾರ್ಯನಿರ್ವಹಿಸುತ್ತಾಳೆ. ಬೆಟ್ಟದ ತುದಿಯ ಶಿಲುಬೆ ಬಹುದೂರದಿಂದಲೇ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಇತ್ತೀಚೆಗೆ ಯಾರೋ ಈ ಬೆಟ್ಟದ ಮೇಲೆ ಹನುಮಗಿರಿ ಎಂದು ಬರೆದಿದ್ದಾರೆ. ಬೆಟ್ಟದ ಮೇಲೊಂದು ಗುಡಿಯನ್ನೂ ಕಟ್ಟಿ ಅದರ ಪ್ರಾಚೀನತೆಯನ್ನು ಪುರಾಣಕಾಲಕ್ಕೆ ಒಯ್ಯಲೆತ್ನಿಸಿದ್ದಾರೆ. ಆದರೆ ನೂರಾರು ವರ್ಷಗಳಿಂದ ಹೊಂದಿಕೊಂಡು ಬಾಳುತ್ತಿರುವ ಸ್ಥಳೀಯ ಕ್ರೈಸ್ತ ಕ್ರೈಸ್ತೇತರರು ವಲಸಿಗರ ತರಲೆ ಕೆಲಸಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂಬುದೇ ಬೆಂಗಳೂರಿನ ವಿಶೇಷ.