ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?

ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?

ಬರಹ

ನಮ್ಮ ಅಕ್ಕ ಪಕ್ಕದಲ್ಲಿರುವ ಅನ್ಯ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ತಮ್ಮ ಉದ್ಯೋಗ, ವಹಿವಾಟು, ಲೇವಾದೇವಿ ಮಾಡುತ್ತಾರೆ. ಆದರೆ ಅವರು ಮಾತನಾಡುವುದು ಅವರ ಭಾಷೆ. ಹಲವಾರು ತಮಿಳರು ಬಟ್ಟೆಯ ವ್ಯಾಪಾರ, ಹಣದ ಲೇವಾದೇವಿ ಮಾಡುತ್ತಾರೆ. ಮನೆಮನೆಗೆ ಹೋಗಿ ಕಂತಿನಲ್ಲಿ ಬಟ್ಟೆ ಕೊಡುತ್ತಾರೆ. ಪ್ರತಿ ತಿಂಗಳು ಹಣ ವಸೂಲಿಗೆ ಹೋಗುತ್ತಾರೆ. ಆದರೆ ಮಾತನಾಡುವುದು ತಮಿಳು. ನಮ್ಮವರು ಅವರ ಭಾಷೆ ಕಲಿತು ಅವರ ಹತ್ತಿರ ತಮಿಳೇ ಮಾತನಾಡುತ್ತಾರೆ. ಇದೇ ವಿಷಯದಲ್ಲಿ ಒಂದು ಸಲ ನನಗೂ ಒಬ್ಬ ತಮಿಳು ಹುಡುಗನಿಗೂ ಚರ್ಚೆಯಾಯಿತು. ಅವನಿಗೆ ಕನ್ನಡ ಅರ್ಥವಾಗುತ್ತದೆ, ಮಾತನಾಡಲೂ ಬರುತ್ತದೆ. ನನಗೆ ಕನ್ನಡಮಾತ್ರ ಬರುತ್ತದೆ. ಅವನ ತಮಿಳು ಅರ್ಥವಾಗುತ್ತದೆ. ಅವನು ಭವಿಷ್ಯ ಹೇಳುವವ. ನಾನು "ನೀನು ನಮ್ಮ ಊರಿಗೆ ಬಂದು ನಿಮ್ಮ ಭಾಷೆಯಲ್ಲಿ ನಮಗೆ ಭವಿಷ್ಯ ಹೇಳಿದರೆ ನಮಗೆ ಅರ್ಥವಾಗುವುದಿಲ್ಲಾ. ನಿನಗೆ ಕನ್ನಡ ಭಾಷೆ ಬರುತ್ತದೆ. ನೀನು ಕನ್ನಡದಲ್ಲಿ ಯಾಕೆ ಭವಿಷ್ಯ ಹೇಳಬಾರದು" ಎಂದೆ. ಅದಕ್ಕೆ ಅವನು ಕೊಟ್ಟ ಉತ್ತರ ಮಾತ್ರ ಕನ್ನಡಿಗರಾದ ನಮಗೆ ತಲೆತಗ್ಗಿಸುವಂತಾಯಿತು. "ನಿಮಗೆ ಭವಿಷ್ಯ ಕೇಳಬೇಕೆಂದಿದ್ದರೆ ನನ್ನ ಭಾಷೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾನು ನನ್ನ ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲಾ." ಎಂದ. ಅದಕ್ಕೆ ನಾನು ಕೇಳಿದೆ " ನಿನ್ನ ಜೀವನ ಸಾಗಿಸಲು ಸಂಪಾದನೆಗಾಗಿ ನೀನು ಭವಿಷ್ಯ ಹೇಳುವುದು. ಅದರಿಂದ ನಿನಗೆ ಸಂಪಾದನೆಯಾಗುತ್ತದೆ. ನಮ್ಮ ರಾಜ್ಯಕ್ಕೆ ಬಂದು ನಿಮ್ಮ ಭಾಷೆಯಲ್ಲಿ ಭವಿಷ್ಯ ಹೇಳಿದರೆ ನಮಗೆ ಅರ್ಥವಾಗದಿದ್ದರೆ ಯಾರು ನಿನ್ನ ಹತ್ತಿರ ಭವಿಷ್ಯ ಕೇಳುತ್ತಾರೆ."
ಅವನ ಉತ್ತರ
"ನೀವು ಕೇಳದಿದ್ದರೆ ಬೇಡ.
ಕೇಳುವವರು ಇರುವರೆಂದು ನಾನು ಬಂದಿದ್ದೇನೆ.
ನಿಮ್ಮಂತಹವರು ಇರುವುದು ಸ್ವಲ್ಪ ಮಂದಿ.
ನನ್ನ ಹೊಟ್ಟೆ ಹೊರೆಯಲು ಸಾಕಾಗುವಷ್ಟು ನನಗೆ ಸಂಪಾದನೆಯಾಗುತ್ತದೆ.
ಅವರಿಗೆ ಅರ್ಥ ಆಗದಿದ್ದರೂ ನನಗಿಲ್ಲಾ ಚಿಂತೆ."

ಎಂದ. ಹೇಗಿದೆ ನೋಡಿ ಅವನ ಭಾಷಾ ಪ್ರೇಮ. ನಾವು ಇಲ್ಲಿ ನಮ್ಮ ರಾಜ್ಯಕ್ಕೆ ಯಾವ ರಾಜ್ಯದವರು ಬಂದರೂ ಅವರ ಭಾಷೆಯಲ್ಲಿ ಮಾತನಾಡಿ, ಅವರ ರಾಜ್ಯಕ್ಕೆ ಹೋದರೂ ಅವರದ್ದೇ ಭಾಷೆ ಮಾತನಾಡಿ ನಾವು ಹಲವಾರು ಭಾಷಾ ಪಾಂಡಿತ್ಯರು ಎಂಬುವುದನ್ನು ಪ್ರದರ್ಶಿಸಿ ಹೆಮ್ಮೆ ಪಡುತ್ತೇವೆ. ಇದು ಕರ್ನಾಟಕದವರಲ್ಲಿ ಮಾತ್ರ ಇರುವ ಗುಣವೆಂದು ನಾನು ಗ್ರಹಿಸುತ್ತೇನೆ. ಇದು ಬದಲಾಗಬೇಕಾದರೆ ನಿಮ್ಮಂತಹ ಯುವಪೀಳಿಗೆಯವರಿಂದಲೇ ಸಾಧ್ಯ. ಕನ್ನಡದ ಬಗ್ಗೆ ಆಗುವ ಚರ್ಚೆ ಇನ್ನೂ ಹೆಚ್ಚೆಚ್ಚು ಆಗಬೇಕು. ಎಲ್ಲರಿಗೂ ಕನ್ನಡದ ಬಗ್ಗೆ ಅಭಿಮಾನ ಹುಟ್ಟಬೇಕು. ನಮ್ಮ ರಾಜಕುಮಾರ್ ತಮಗೆ ಹಲವಾರು ಬಾಷೆಗಳ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬಂದರೂ ಕನ್ನಡಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವುದಿಲ್ಲವೆಂಬ ಮಾತನ್ನು ಕಡೆಯ ತನಕ ಉಳಿಸಿಕೊಂಡರು. ಅವರಂತೆ ನಾವು ಕನ್ನಡವನ್ನು ಬಿಟ್ಟು ಬೇರೆ ಮಾತನಾಡುವುದಿಲ್ಲಾ ಎಂದು ಕೊಂಡರೆ ಮಾತ್ರ ಇದು ಸಾಧ್ಯವಾದೀತು. ಆದರೆ ಇದು ಆಗಲು ಸಾಧ್ಯವೇ?