ಅನ್ವೇಷಣೆ
ಕೆ.ಶ್ರೀನಿವಾಸ ರೆಡ್ಡಿ ಇವರು ಬರೆದ ವ್ಯಕ್ತಿತ್ವ ವಿಕಸನ ಸಂಬಂಧಿ ಲೇಖನಗಳ ಗುಚ್ಛ ‘ಅನ್ವೇಷಣೆ'. ಆಕರ್ಷಣೀಯ ಮುಖಪುಟವನ್ನು ಹೊಂದಿರುವ ಈ ಕೃತಿಯನ್ನು ಓದಿದ ಬಳಿಕ ಹಲವರ ಬದುಕಿನಲ್ಲಿ ಮಂದಹಾಸ ಮೂಡುವ ಸಾಧ್ಯತೆ ಇದೆ. ಸುಮಾರು ೧೫೦ ಪುಟಗಳ ಈ ಕೃತಿಯ ಬಗ್ಗೆ ಲೇಖಕರಾದ ಕೆ.ಶ್ರೀನಿವಾಸ ರೆಡ್ಡಿಯವರು ತಮ್ಮ ಮಾತಿನಲ್ಲಿ ಬರೆದಿರುವುದು ಹೀಗೆ...
“ಕೆಲವರು ಅಂದುಕೊಂಡಿದ್ದನ್ನು ಮಾಡುತ್ತಾರೆ. ಅವರು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆ ದಾರಿಯಲ್ಲಿ ಅವರು ಬಹುದೂರಕ್ಕೆ ಸಾಗಿಯೇ ಬಿಡುತ್ತಾರೆ. ಯಶಸ್ಸನ್ನು ಸಾಧಿಸಿಯೇ ಬಿಡುತ್ತಾರೆ. ಅದು ಹೇಗೆಂದು ಆಲೋಚಿಸಿದರೆ ನಮಗೆ ಸ್ಟಷ್ಟವಾಗದು. ಅವರು ನಮ್ಮ ನಡುವೆಯೇ ಇದ್ದವರು ನಮ್ಮಂತೆಯೇ ಕಂಡವರು. ಆದರೆ ಅವರ ಆಲೋಚನೆಗಳು, ಅವರ ತೀರ್ಮಾನಗಳು ಅವರ ಸ್ಫೂರ್ತಿ, ಅವರ ಎನರ್ಜಿ, ಅವರ ಆವೊಂದು ಚೈತನ್ಯ, ಅವರ ನಂಬಿಕೆಗಳು. ಅವರ ಕ್ರಿಯಾಶೀಲತೆಗಳು ಯಾವುದಕ್ಕಾದರೂ ಒಮ್ಮೆ ಧುಮುಕಿ ನಡೆದು ಬಿಡುವ ಅವರ ಎದೆಗಾರಿಕೆ, ಯಾವುದನ್ನಾದರೂ ನೇರವಾಗಿ ಎದುರಿಸಿ ನಿಲ್ಲುವ ಅವರ ಧೈರ್ಯ ಸಾಹಸಗಳು, ಇಂಗಲಾರದ ಅವರ ಉತ್ಸಾಹಗಳು ಅವರಿಗೆ ಬಂದಿದ್ದಾರೂ ಎಲ್ಲಿಂದ? ಅವರಿಗೆ ಅಂತಹ ಮಹತ್ವದ ಐಡಿಯಾಗಳು ಹೊಳೆದಿದ್ದಾರೂ ಹೇಗೆ? ನಾವೂ ಇದನ್ನು ಕಲಿಯಬಹುದಾ? ನಾವೂ ಇವರಂತೆಯೇ ಆಗಬಹುದಾ?
ಬದುಕಿನ ರೀತಿಗಳು ಕೆಲವೊಮ್ಮೆ ಸಂರ್ಕಿರ್ಣವಾಗಿವೆ. ನಮಗದರಿಂದ ಹೊರಬರಲು ಸಾಧ್ಯವೇ ಆಗದು. ನಾವು ಅಂದುಕೊಳ್ಳುತ್ತಲೇ ಇರುತ್ತೇವೆ. ಆದರೆ ಏನೊಂದೂ ಬದಲಾಗದು. ಹೀಗೆಯೇ ಬಹುಕಾಲವೂ ಕಳೆದು ಹೋಗುತ್ತದೆ ಎಂದುಕೊಳ್ಳುತ್ತೇವೆ. ಆದರೆ ಗಮನಿಸಿದರೆ ನಮ್ಮ ಬದುಕು ಅತ್ಯಂತ ಸರಳವೂ ಸುಲಭವೂ ಆಗಿದೆ. ನಮ್ಮ ದೈನಂದಿನ ಬದುಕಿನಲ್ಲಿರುವ ಆಲೋಚನೆಗಳು ಯಾವುವು? ವಾಸ್ತವವಾಗಿ ನಾವು ನಿರ್ವಹಿಸುತ್ತಿರುವ ಸಂಗತಿಗಳಾವುವು? ಇದೇಕೆ ಎಲ್ಲವೂ ಹೀಗಿದೆ? ಎಂಬುದನ್ನು ನಾವು ಒಮ್ಮೆ ಸ್ಪಷ್ಟವಾಗಿ ಗಮನಿಸಿದರೂ, ನಮ್ಮ ದೈನಂದಿನ ಬದುಕಿನಲ್ಲಿ ಒಂದು ಸಣ್ಣ ಸರಳವಾದ ಸಂಗತಿಯನ್ನು ಕೈಗೊಂಡರೂ ನಮ್ಮ ಬದುಕು ನಾವಂದುಕೊಂಡಂತೆ ಬದಲಾಗುವುದಿದೆ. ಯಾವುದಕ್ಕೂ ಮೊದಲು ನಾವು ಕ್ರಮ ಕೈಗೊಳ್ಳಬೇಕಿದೆ. ಮೊದಲು ನಾವು ಕ್ರಿಯಾಶೀಲರಾಗಬೇಕಿದೆ. ಕಾರ್ಯ ಚಟುವಟಿಕೆಯನ್ನು ನಿರ್ವಹಿಸುತ್ತಲೇ ಸಾಗಬೇಕಿದೆ. ಅದು ಎಷ್ಟು ಸರಳ ಸಣ್ಣ ಸಂಗತಿಯನ್ನು ನಿಯಮಿತವಾಗಿ ಅಭ್ಯಸಿದಂತೆ ಕೈಗೊಂಡರೂ ನಮಗೆ ಆದರೆ ಪ್ರತಿಫಲ ಲಭಿಸಿಯೇ ತೀರುತ್ತದೆ. ಇದು ಯಶಸ್ಸಿನ ದಾರಿ.
ಕೆಲವರು ಬದುಕಿನಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಅವರು ನಮ್ಮ ಜೊತೆಗೆ ಇರುವವರು. ನಮ್ಮಂತೆಯೇ ಕಾಣುವವರು. ನಾವೂ ಅವರಂತೆಯೇ ಆಗಬಹುದಾಗಿದೆ. ಬದುಕು ಎಲ್ಲರಿಗೂ ಸಮಾನ ಅವಕಾಶಗಳನ್ನೇ ನೀಡಿದೆ ಇದನ್ನು ನಾವು ನಮ್ಮ ಸೀಮಿತ ಚೌಕಟ್ಟಿನಿಂದ ಹೊರಬಂದು ಗಮನಿಸಬೇಕಿದೆ. ಈ ಯಾತ್ರೆಯಲ್ಲಿ `ಅನ್ವೇಷಣೆ' ಪುಸ್ತಕವು ನಮ್ಮ ಜೊತೆಗಿದೆ.
ಬದುಕು ಹುಟ್ಟುವುದು ನಮ್ಮೊಳಗಿನಿಂದಲೇ ನಮ್ಮ ಆಲೋಚನೆಗಳಿಂದಲೇ. ನಮ್ಮ ಕ್ರಿಯೆಗಳಿಂದಲೇ. ಇದು ಹೊರಗಡೆ ಘಟಿಸುವ ಸಂಗತಿ ಸನ್ನಿವೇಶಗಳಿಂದಲ್ಲ. ಬದಲಾಗಿ ಇದಕ್ಕೆ ನಾವು ನೀಡುವ ಅರ್ಥದಿಂದ. ನಾವು ಗ್ರಹಿಸುವ ರೀತಿಯಿಂದ. ಇಲ್ಲಿ ನಮಗೆ ಆಯ್ಕೆಯಿದೆ.ಯಾವುದನ್ನು ಹೇಗೆ ಗ್ರಹಿಸಬೇಕೆಂಬ ಸ್ವಾತಂತ್ರ್ಯವಿದೆ . ಈ ಸ್ವಾತಂತ್ರ್ಯವನ್ನು ನಾನು ಬಳಸಿಕೊಳ್ಳಬೇಕು. ಗಮನಿಸಿದರೆ ನಮ್ಮ ಬದುಕಿನ ಸೂತ್ರಗಳು ನಮ್ಮ ಕೈಯಲ್ಲೇ ಇವೆ. ನಮ್ಮ ಬದುಕಿನ ಸಂಪೂರ್ಣ ಜವಾಬ್ದಾರಿ ನಮ್ಮದೇ ಆಗಿದೆ. ನಮ್ಮ ಬದುಕಿನ ನಿರ್ಮಾತೃಗಳು, ನಿರ್ದೇಶಕರು ನಾವೇ ಆಗಿದ್ದೇವೆ. ನಮಗೆ ಈ ಸೂಕ್ಷ್ಮ ಅರಿವಾದ ಕ್ಷಣ ಬದುಕು ಫಲಿಸುತ್ತದೆ.
ನಾವು ದೈನಂದಿನವಾಗಿ ಕೈಗೊಳ್ಳುವ ಒಂದು ಸಣ್ಣ ಸರಳ ಸಂಗತಿಯು ಒಂದು ನಿರ್ದಿಷ್ಟ ಕಾಲಮಾನದಲ್ಲಿ ಸಂಚಿತವಾಗಿ ಒಂದು ಪ್ರಬಲ ಶಕ್ತಿಯಾಗಿ ಸಿನರ್ಜಿಯನ್ನು ಪಡೆದುಕೊಳ್ಳುತ್ತದೆ. ಅತ್ಯಂತ ಪ್ರಭಾವಶಾಲಿಯಾಗಿ ಪರಿಣಾಮ ಬೀರುತ್ತದೆ. ನಾವು ರೂಢಿಸಿಕೊಳ್ಳುವ ಒಂದು ಸರಳವಾದ ಅಭ್ಯಾಸವು ನಮ್ಮ ಗಮನಕ್ಕೂ ಬಾರದೆ ಒಂದು ನಿರ್ದಿಷ್ಟ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ರೂಪುಗೊಳ್ಳುತ್ತದೆ. ಎಂದರೆ ನಾವು ನಮ್ಮ ಅದೆಂತಹ ಕಠಿಣವಾದ ಬದುಕನ್ನೂ ಅತ್ಯಂತ ಸುಲಭವಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದು ಎಂದು ನಮಗೆ ಅರ್ಥವಾಗುತ್ತದೆ.
ಗಮನಿಸಿದರೆ ಒಬ್ಬ ಸಾಮಾನ್ಯವಾದ ವ್ಯಕ್ತಿ ಅಸಾಮಾನ್ಯ ಯಶಸ್ವೀ ಶಕ್ತಿಯಾಗಿ ಬೆಳೆಯುವ ದಾರಿಯು ಇಷ್ಟೇ ಸರಳವಾಗಿದೆ. ಇಲ್ಲಿ ನಾವು ದೈನಂದಿನವಾಗಿ ನಿರಂತರವಾಗಿ ಕೈಗೊಳ್ಳುತ್ತಿರುವ ಕಾರ್ಯಚಟುವಟಿಕೆಗಳೇನು, ಆಲೋಚನೆಗಳೇನು? ನಮ್ಮ ಅಭ್ಯಾಸಗಳು ಯಾವುವು? ಇದರಿಂದ ಉಂಟಾಗುತ್ತಿರುವ ಪರಿಣಾಮಗಳೇನು? ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದೇ ನಾವು ನಮ್ಮ ಯಶಸ್ವೀ ಬದುಕಿಗೆ ಇಡಬೇಕಾದ ಮೊದಲ ಹೆಜ್ಜೆ. ಇಲ್ಲಿಂದಲೇ ನಮ್ಮ ಇಚ್ಛೆಯ ಬದುಕು ಶುರುವಾಗುವುದು.
ವ್ಯತ್ಯಾಸಗಳು, ವ್ಯತ್ಯಾಸಗಳನ್ನು ಉಂಟುಮಾಡುತ್ತವೆ. ಆದ್ದರಿಂದ ನಮ್ಮ ಬದುಕು ನಮ್ಮ ಇಚ್ಛೆಯಂತೆ ಬದಲಾಗಲು ನಾವು ನಮ್ಮ ದೈನಂದಿನ ಬದುಕಿನಲ್ಲಿ ಮಾಡಿಕೊಳ್ಳಬೇಕಾದ ಸರಳವಾದ ಸಣ್ಣ ವ್ಯತ್ಯಾಸಗಳೇನು ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕಿದೆ. ಅದರಂತೆ ಕ್ರಮ ಕೈಗೊಳ್ಳಬೇಕಿದೆ. ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಮುಂದೆ ಸಾಗಬೇಕಿದೆ.