ಅನ್ ಬಾಕ್ಸಿಂಗ್ ಬೆಂಗಳೂರು
ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಲೇಖಕಿ ಪ್ರತಿಭಾ ನಂದಕುಮಾರ್. ಬೆಂಗಳೂರು ನಗರವನ್ನು ಹೊಸ ಆರಂಭಗಳ ನಗರ ಎಂದು ಹೆಸರಿಸಿದ್ದಾರೆ. ಪ್ರತಿಭಾ ನಂದಕುಮಾರ್ ಅವರು ತಮ್ಮ ಅನುವಾದಕಿಯ ಮಾತುಗಳಲ್ಲಿ ಹೇಳಿದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್ ಅವರ ಬೆಂಗಳೂರಿನ ಕುರಿತ ಈ ಪುಸ್ತಕ ಬೆಂಗಳೂರಿನ ಬಗ್ಗೆ ಇದುವರೆಗೆ ಬಂದ ಎಲ್ಲಾ ಪುಸ್ತಕಗಳಿಗಿಂತ ಭಿನ್ನವಾದುದು. ಇದು ಇತಿಹಾಸವನ್ನು ಹೇಳುವುದಿಲ್ಲ, ಬದಲಿಗೆ ಇದು ಭವಿಷ್ಯದ ಕಡೆಗೆ ದೃಷ್ಟಿಯಿಟ್ಟು ವರ್ತಮಾನವನ್ನು ದಾಖಲಿಸುವ ಮತ್ತು ಅರ್ಥೈಸುವ ಯತ್ನ. ಇಲ್ಲಿ ಬೆಂಗಳೂರಿನ ಟೆಕ್ ಜಗತ್ತಿನ ಕುರಿತ ವಿಶ್ಲೇಷಣೆ ಇದೆ. ಭಾರತದ ಟೆಕ್ ರಾಜಧಾನಿ ಬೆಂಗಳೂರು, ತಂತ್ರಜ್ಞಾನದಲ್ಲಿ ಎಂದಿನಿಂದಲೂ ಮುಂದು. ಬೆಂಗಳೂರಿನ ವರ್ತಮಾನದ ಸಂಗತಿಗಳನ್ನು ಭವಿಷ್ಯದ ನೋಟದಿಂದ ದಾಖಲಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ವಿಶೇಷ ಸಾಮರ್ಥ್ಯ, ಚಿಂತನೆಯ ಅಗತ್ಯವಿದೆ. ಈ ಕೃತಿಯ ಕರ್ತೃಗಳಿಗೆ ಆ ಸಾಮರ್ಥ್ಯ ಮತ್ತು ಅರ್ಹತೆ ಇದೆ ಎನ್ನುವುದು ಪ್ರಶ್ನಾತೀತ. ಇದನ್ನು ಕನ್ನಡಕ್ಕೆ ತರುವಲ್ಲಿ ನನ್ನ ಸಾಮರ್ಥ್ಯ ಕುರಿತು ನಾನೇ ಪರೀಕ್ಷಿಸಿಕೊಂಡಂತಾಯಿತು.
ತಾಂತ್ರಿಕ ವಿಷಯಗಳನ್ನು ಕನ್ನಡಕ್ಕೆ ತರುವಲ್ಲಿ ನನಗೆ ಸಾಕಷ್ಟು ಪರಿಶ್ರಮವಿದೆ. ಆದರೆ ಅವು ಹಳೆಯ ಪಠ್ಯಗಳು. ಇಲ್ಲಿ ಪ್ರತಿದಿನ ನವನವೀನವಾಗುವ, ಆರು ತಿಂಗಳಲ್ಲಿ ಹೊಸ ಅಲೆ ಬಂದು ಹಿಂದಿನದನ್ನು ಪಕ್ಕಕ್ಕೆ ತಳ್ಳುವ ತಾಂತ್ರಿಕ ಜಗತ್ತಿನ ಬಗ್ಗೆ ಹೇಳಲಾಗಿದೆ. 'ದ ಸಿಟಿ ಆಫ್ ನ್ಯೂ ಬಿಗಿನಿಂಗ್ಸ್' ಅನ್ನುವ ಟ್ಯಾಗ್ ಲೈನ್ ಇರುವಾಗ ಹೊಸ ಭಾಷೆ, ಹೊಸ ಅರ್ಥ, ಹೊಸ ಪರಿಕಲ್ಪನೆಗಳು ಇದರಲ್ಲಿವೆ ಎನ್ನುವುದು ನಿಶ್ಚಯ. ಹಳೆಯ ಭಾಷೆಯಲ್ಲಿ ಹೊಸತನ್ನು ಹಿಡಿದಿಡುವುದು ಹೇಗೆ ಎನ್ನುವ ಆತಂಕ ನಿರ್ವಿವಾದ. ಇಂಗ್ಲಿಷಿನಲ್ಲಿ ಹಳೆಯ ಪದಕ್ಕೆ ಹೊಸ ಅರ್ಥವನ್ನು ಲೀಲಾಜಾಲವಾಗಿ ಆರೋಪಿಸಿ ಅನ್ವರ್ಥವಾಗಿಸಲಾಗುತ್ತದೆ. ಒಂದು ಸಣ್ಣ ಉದಾಹರಣೆ ಕಂಪ್ಯೂಟರ್ನ 'ಮೌಸ್'. ಮೌಸ್ಗೆ ಹಳೆಯ ಅರ್ಥವಿದೆ, ಜನ ಗೊಂದಲಕ್ಕೊಳಗಾಗುತ್ತಾರೆ ಎಂದು ಇಂಗ್ಲಿಷ್ ಬಳಕೆದಾರರು ಯಾರೂ ಯಾವತ್ತೂ ಪ್ರಶ್ನಿಸಲಿಲ್ಲ. ಇದಕ್ಕೆ ನಾವು ಮೌಸ್ ಎಂದು ಹೆಸರಿಟ್ಟಿದ್ದೀವಿ ಅಂದ ಕೂಡಲೇ ಇಡೀ ಪ್ರಪಂಚ ಒಪ್ಪಿಕೊಂಡುಬಿಟ್ಟಿತು. ಅದನ್ನು ಜಗತ್ತಿನ ಬೇರೆ ಬೇರೆ ಭಾಷೆಗೆ ಭಾಷಾಂತರಿಸುವ ಗೋಜಿಗೂ ಯಾರೂ ಹೋಗಲಿಲ್ಲ. ಕನ್ನಡಕ್ಕೆ ತಾಂತ್ರಿಕ ಪರಿಭಾಷೆಯನ್ನು ತರುವ ಹುಮ್ಮಸ್ಸಿನಲ್ಲಿ ನಾವು 'ಮೌಸ್'ನ 'ಇಲಿ' ಎಂದು ಭಾಷಾಂತರಿಸಿದರೆ ಅದು ಹಾಸ್ಯಾಸ್ಪದ ಮತ್ತು ಅನರ್ಥ. ಮೌಸ್ನ ಕನ್ನಡಕ್ಕೆ ತಂದುಕೊಳ್ಳಬೇಕು ಅಷ್ಟೇ. ತಾಂತ್ರಿಕ, ವೈಜ್ಞಾನಿಕ ಇತ್ಯಾದಿ ವಿಷಯಗಳನ್ನು ಕನ್ನಡದಲ್ಲಿ ತರುವಾಗ ಪಾರಿಭಾಷಿಕ ಪದಗಳ ಸಮಸ್ಯೆ ಬಂದಾಗ ಸಂಸ್ಕೃತಕ್ಕೆ ಮೊರೆಹೊಕ್ಕು ಕ್ಲಿಷ್ಟ ಸಂಕೀರ್ಣ ಪದಪುಂಜಗಳನ್ನು ಹುಟ್ಟುಹಾಕುವುದು ಹಳೆಯ ಅಭ್ಯಾಸ. ಹಿಂದೆ 'ಪೊಲೀಸ್' ಪದಕ್ಕೆ 'ಆರಕ್ಷಕ' ಎಂದು ಭಾಷಾಂತರಿಸಿ ನಂತರ ಅದನ್ನು ಕೈಬಿಟ್ಟು ಕನ್ನಡದಲ್ಲೂ ಪೊಲೀಸ್ ಎಂದೇ ಸ್ವೀಕರಿಸಲಾಯಿತು. ಅದೇ ರೀತಿ ಈ ಸ್ಟಾರ್ಸ್ ಅಪ್ ಜಗತ್ತಿನ ಬಗ್ಗೆ ಬರೆಯುವಾಗ ಇಂಗ್ಲಿಷಿನಲ್ಲಿ ಹಳೆಯ ಪದಗಳನ್ನು ಹೊಸ ಅರ್ಥದಲ್ಲಿ ಬಳಸುವ ಹಾಗೆಯೇ ಇಂಗ್ಲಿಷಿನ ಪದಗಳನ್ನು ಕನ್ನಡಕ್ಕೆ ಅನಾಮತ್ತಾಗಿ ಆಮದು ಮಾಡಿಕೊಂಡು ವಿಷಯ ತಲುಪಿಸುವುದೇ ಮುಖ್ಯ ಹೊರತು ಯಾರಿಗೂ ಅರ್ಥವಾಗದಂತೆ ಪಾರಿಭಾಷಿಕ ಪದಗಳನ್ನು ಭಾಷಾಂತರಿಸುವ ಗೊಂದಲ ಬೇಡಾ ಎನ್ನುವುದು ಇತ್ತೀಚಿಗೆ ಭಾಷಾಂತರ ಕಾರರು ಮಾಡಿಕೊಂಡಿರುವ ನಿರ್ಧಾರ. ಉದಾಹರಣೆಗೆ 'ಫಾಲ್ಟ್ ಲೈನ್' ಎನ್ನುವ ಪದದ ಇಂಗ್ಲಿಷ್ ಮೂಲಾರ್ಥ "ಎರಡು ಬಂಡೆಗಳ ನಡುವಿನ ಸೀಳು ಅಥವಾ ಸೀಳಿನ ವಲಯ". ಅದರ ಹೊಸ ಅರ್ಥ 'ಗಂಭೀರ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿರುವ ವಿಭಜಕ ಸಮಸ್ಯೆ ಅಥವಾ ಅಭಿಪ್ರಾಯ ವ್ಯತ್ಯಾಸ" ಮತ್ತು "ಸಮಸ್ಯೆಯು ಸ್ಪಷ್ಟವಾಗಿಲ್ಲದಿರಬಹುದು ಆದರೆ ಮುಂದೆ ವಿಫಲಗೊಳ್ಳಲು ಕಾರಣವಾಗಬಹುದು".
ಇದರ ಜೊತೆಗೇ ಇನ್ನಷ್ಟು ವಿಸ್ತ್ರತ ಅರ್ಥಗಳಲ್ಲಿ ಈ ಪದವನ್ನು ಬಳಸಲಾಗುತ್ತದೆ. ಕನ್ನಡದಲ್ಲಿ ಸ್ಟಾರ್ಸ್ ಅಪ್ ಸಂದರ್ಭದಲ್ಲಿ ಇದಕ್ಕೆ ಸೂಕ್ತ ಪದವನ್ನು ಇನ್ನೂ ಸೃಷ್ಟಿಸಲು ಆಗಿಲ್ಲದ ಕಾರಣ "ದೋಷಗಳು" (ಫಾಲ್ಸ್ಲೈನ್) ಎಂದು ಬಳಸಲಾಗಿದೆ.
ಅನ್ಬಾಕ್ಸಿಂಗ್ ಎನ್ನುವ ಪದವನ್ನೇ ತೆಗೆದುಕೊಂಡರೆ ಬಾಕ್ಸಿನಿಂದ ಹೊರಗೆ ತೆಗೆಯುವುದು ಎನ್ನುವ ಪರಿಕಲ್ಪನೆಗೆ ಹೊಸ ಅರ್ಥ ನೀಡಲಾಗಿದೆ. ಇದಕ್ಕೆ ಇರುವ ನಿರ್ದಿಷ್ಟ ವಿವರಣೆ ಎಂದರೆ "Unboxing is the process of unpacking consumer products, especially high-tech gadgets, which is recorded on video and shared online. It is the visual documentation of the out-of-box experience". ಇದನ್ನು ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್ ಅವರು ಒಂದು ನಗರಕ್ಕೆ ಅನ್ವಯಿಸಿದ್ದಾರೆ. ನಿರ್ದಿಷ್ಟವಾಗಿ ಬೆಂಗಳೂರನ್ನು ಅನಾವರಣಗೊಳಿಸುವ ಪ್ರಕ್ರಿಯೆಯನ್ನು ಕುರಿತು ಹೇಳಿದ್ದಾರೆ. ಆದರೆ "ಬೆಂಗಳೂರು ಅನಾವರಣ" ಎಂದು ಭಾಷಾಂತರಿಸಿದರೆ ಅದು "ಅನ್ಬಾಕ್ಸಿಂಗ್'ನ ತಾಂತ್ರಿಕ ಪರಿಕಲ್ಪನೆಯನ್ನು ಒಳಗೊಳ್ಳುವುದಿಲ್ಲ. ಅಷ್ಟೇ ಅಲ್ಲದೇ ಅನ್ಬಾಕ್ಸಿಂಗ್ ಎನ್ನುವುದನ್ನು ಒಂದು ಟ್ರೇಡ್ ಮಾರ್ಕ್ ಆಗಿಯೂ ನೋಂದಾಯಿಸಲಾಗಿದೆ. ಟ್ರೇಡ್ ಮಾರ್ಕನ್ನು ಭಾಷಾಂತರಿಸುವಂತಿಲ್ಲ. ಹಾಗಾಗಿ ಕನ್ನಡದಲ್ಲಿಯೂ ಅನ್ಬಾಕ್ಸಿಂಗ್ ಎಂದೇ ಇಟ್ಟುಕೊಳ್ಳಲಾಗಿದೆ. ಅದೇ ರೀತಿ ಸ್ಟಾರ್ ಅಪ್, ಯೂನಿಕಾರ್ನ್, ಬಿ ಟು ಬಿ, ಎಫ್ & ಬಿ, ಸಿಈಓ ಇತ್ಯಾದಿ. ಈ ಭಾಷಾಂತರದ ಉದ್ದೇಶ ಹೊಸ ಪರಿಭಾಷೆಗಳನ್ನು ಕನ್ನಡಕ್ಕೆ ಪರಿಚಯಿಸುವುದಾಗಿದೆ. "ಸಾಫ್ಟ್ವೇರ್ನಲ್ಲಿ ಕಂಡ ಬಗ್". ಸಂಭಾಷಣೆಗಳನ್ನು ಆದಷ್ಟೂ ಕನ್ನಡಕ್ಕೆ ಸಹಜವಾಗಿ ಭಾಷಾಂತರಿಸಿದ್ದರೂ ಕೆಲವು ಕಡೆ ಅವರು ಬಳಸಿದ ಇಂಗ್ಲಿಷ್ ಪದವನ್ನು ಹಾಗೆಯೇ ಇಟ್ಟುಕೊಳ್ಳಲಾಗಿದೆ.
ಎಷ್ಟೇ ಗೊಂದಲಗಳಿದ್ದರೂ ಈ ಭಾಷಾಂತರ ಕಾರ್ಯವನ್ನು ನಾನು ಬಹಳ ಆಸ್ಥೆಯಿಂದ, ಉತ್ಸಾಹದಿಂದ ಸವಾಲಿನಂತೆ ಪರಿಗಣಿಸಿ ನಿರ್ವಹಿಸಿದ್ದೇನೆ. ಮತ್ತೊಂದು ಬಾರಿ ನೋಡಿದಾಗ ಇನ್ನಷ್ಟು ತಿದ್ದುವ ಸಾಧ್ಯತೆಗಳಿವೆ. ಕೆಲವು ಪರಿಕಲ್ಪನೆಗಳು ಸರಿಯಾಗಿ ದಾಟಿಲ್ಲವೋ ಎನ್ನುವ ಸಂದೇಹ, ಅತೃಪ್ತಿ ಕಾಡಿದೆ. ಆದರೆ ನನ್ನ ಗುರು ಭಾಷಾಂತರ ಬ್ರಹ್ಮ ಎ ಕೆ ರಾಮಾನುಜನ್ ಅವರು ಒಂದು ಕಡೆ ಹೇಳಿದಂತೆ "a translation is never completed, it is abandoned' ಅಂದರೆ ಒಂದು ಹಂತದಲ್ಲಿ ಕೈಚೆಲ್ಲಿ ಬಿಡಲಾಗುತ್ತದೆ. ಹಾಗೆಂದು ಭಾಷಾಂತರ ಅಪೂರ್ಣವೆಂದರ್ಥವಲ್ಲ. ಭಾಷಾಂತರವನ್ನು ತಿದ್ದುತ್ತಲೇ ಹೋಗಬಹುದು ಎಂದರ್ಥ. ಯಾವುದೇ ಭಾಷಾಂತರ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಮಾಡದಿದ್ದರೆ ಓದುಗರಿಗೆ ಅನ್ನದಲ್ಲಿ ಕಲ್ಲು ಸಿಕ್ಕ ಹಾಗೆ ಆಗುತ್ತದೆ. ಹಾಗಾಗಿ ಕೆಲವು ಇಂಗ್ಲಿಷಿಗೇ ವಿಶಿಷ್ಟವಾದ ಪ್ರಯೋಗಗಳಿಗೆ ಕನ್ನಡದ ಸಂವಾದೀ ಪ್ರಯೋಗಗಳನ್ನು ಬಳಸಲಾಗಿದೆ. ಓದುವಾಗ ಯಾರಿಗಾದರೂ ಅದು ತಿಳಿಯುತ್ತದೆ. ಕನ್ನಡಕ್ಕೆ ಇಂತಹ ಪಠ್ಯ ಬೇಕಿತ್ತು.”
ಸುಮಾರು ೪೬೦ ಪುಟಗಳ ಈ ಸುದೀರ್ಘ ಕೃತಿ ಭಾರತವನ್ನು ಮತ್ತು ತಾಂತ್ರಿಕ ಜಗತ್ತಿನಲ್ಲಿ ಅದರ ಸ್ಥಾನವನ್ನು ಅರಿಯಲು ಬಯಸುವ ಯಾರಾದರೂ ಖಂಡಿತವಾಗಿಯೂ ಓದಬೇಕಾದ ಪುಸ್ತಕ.