ಅಪಘಾತಗಳು ಮತ್ತು ಚಾಲನೆ ಎಂಬ ವೈಜ್ಞಾನಿಕ ಪ್ರಜ್ಞೆ

ಅಪಘಾತಗಳು ಮತ್ತು ಚಾಲನೆ ಎಂಬ ವೈಜ್ಞಾನಿಕ ಪ್ರಜ್ಞೆ

ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಘಾತಗಳದು. ಪ್ರತಿದಿನ ಅದೇ ಸುದ್ದಿ.‌ ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ. ಭಾರತದಲ್ಲಿ ಅಪಘಾತಗಳಿಂದಲೇ ನಿಮಿಷಗಳ ಲೆಕ್ಕದಲ್ಲಿ ಜನ ಸಾಯುತ್ತಿದ್ದಾರೆ ಮತ್ತು ಅಂಗವಿಕಲರಾಗುತ್ತಿದ್ದಾರೆ. ಹಿರಿಯರನ್ನು ನೋಡಿದಾಗ ಇಷ್ಟೊಂದು ಅವ್ಯವಸ್ಥೆಯ ವಾಹನಗಳ ಭರಾಟೆಯಲ್ಲಿ ಇವರು ಹೇಗೆ ಇನ್ನೂ ಜೀವಂತವಿದ್ದಾರೆ ಎಂದು ಆಶ್ಚರ್ಯವಾಗುತ್ತದೆ !

ಏಕೆ ಹೀಗೆ ? ರಸ್ತೆಗಳೇ ಎದ್ದು ಬಂದು ಜನರನ್ನು ಕೊಲ್ಲುತ್ತವೆಯೇ ? ಅಥವಾ ವಾಹನಗಳು ಬೇಕಂತಲೇ ಜನರನ್ನು ಬೀಳಿಸುತ್ತವೆಯೇ ? ಅಥವಾ ಜನಸಂಖ್ಯೆ ಕಡಿಮೆ ಮಾಡಲು ಪ್ರಕೃತಿಯ ಆಟ ಇರಬಹುದೇ ? ಎಂದು‌ ಯೋಚಿಸಬೇಕಾಗಿದೆ.  ನಮ್ಮಲ್ಲಿ ರಸ್ತೆಗಳ ಗುಣಮಟ್ಟ ಸರಿ ಇಲ್ಲ ನಿಜ. ಆದರೆ ಅದರ ಮೇಲೆ ಓಡಾಡುವ ಜನರಿಗೆ ಕಣ್ಣು ಕಿವಿ ಬುದ್ದಿ ಇದೆಯಲ್ಲವೇ !

ನಮ್ಮಲ್ಲಿ ವಾಹನಗಳು ಅತ್ಯಧಿಕ. ನಿಜ. ಆದರೆ ಅದನ್ನು ಚಲಾಯಿಸುವುದು ನಾಗರಿಕ ಮನುಷ್ಯನಲ್ಲವೇ ! ವಾಹನಗಳು ಜಾಸ್ತಿಯಾಗಿರುವುದರಿಂದ ಅವೇ ತಮ್ಮ ತಮ್ಮಲ್ಲಿ ಗುದ್ದಾಡುವುದಿಲ್ಲವಲ್ಲವೇ  ! ನಮ್ಮಲ್ಲಿ ಸಂಚಾರಿ ನಿಯಮಗಳು ಸರಿ ಇಲ್ಲ ಹಾಗೂ ಚಾಲನಾ ತರಬೇತಿ ಮತ್ತು ಲೈಸೆನ್ಸ್ ವ್ಯವಸ್ಥೆ ಭ್ರಷ್ಟಗೊಂಡಿದೆ. ನಿಜ. ಅದರಲ್ಲಿ ವಿಶೇಷವೇನಿಲ್ಲ. ಎಲ್ಲಾ ವ್ಯವಸ್ಥೆಗಳಂತೆ ಅದೂ ಇದೆ. ಸದ್ಯಕ್ಕೆ ಬದಲಾಗುವ ಸಾಧ್ಯತೆಯು ಇಲ್ಲ. ಹಾಗಾದರೆ ವಾಸ್ತವ ಮತ್ತು ಸತ್ಯಕ್ಕೆ ಹತ್ತಿರದ ಕಾರಣ ಏನಿರಬಹುದು?

ತೀರಾ ಆಳಕ್ಕೆ ಇಳಿಯದೆ ಸಹಜವಾಗಿ ಹೇಳಬೇಕೆಂದರೆ, ನಾವು ನಮ್ಮ ವಿವೇಚನೆಯನ್ನು ಸರಿಯಾಗಿ ಬಳಸಿ ಸಂದರ್ಭಕ್ಕೆ ಸರಿಯಾಗಿ ಪರಿಸ್ಥಿತಿ ಅವಲೋಕಿಸಿ ಒಂದಷ್ಟು ಪ್ರಜ್ಞೆಯಿಂದ, ಭಯ ಭಕ್ತಿ ವಿನಯದಿಂದ ವಾಹನ ಚಲಾಯಿಸಿದ್ದೇ ಆದರೆ ಈ ಕ್ಷಣದಿಂದಲೇ ಶೇಕಡ 80% ರಷ್ಟು ಅಪಘಾತಗಳು  ನಿಲ್ಲುತ್ತವೆ. ಇದಕ್ಕೆ ಯಾವ ನೀತಿ ನಿಯಮಗಳು ಗೊಣಗಾಟಗಳು ವ್ಯವಸ್ಥೆಯ ಬದಲಾವಣೆಗಳು ಬೇಕಾಗಿಲ್ಲ. ಇನ್ನುಳಿದ ಶೇಕಡ 20% ರಷ್ಟು ತಾಂತ್ರಿಕ ತೊಂದರೆ, ನಿಯಂತ್ರಿಸಲಾಗದ ಅನೀರೀಕ್ಷಿತ  ಆಕಸ್ಮಿಕ ಇತ್ಯಾದಿ ಕಾರಣಗಳು ಇರಬಹುದು.

ಬೇಜವಾಬ್ದಾರಿ, ಆತುರ, ಹುಡುಗಾಟಿಕೆ, ಮಾನಸಿಕ ಕ್ಷೋಬೆ ಕಡಿಮೆ ಮಾಡಿಕೊಂಡು, ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತಂದುಕೊಂಡು ನಮ್ಮ ಪ್ರಾಣಕ್ಕೆ ನಾವೇ ಜವಾಬ್ದಾರರು ಎಂದು ಅರ್ಥ ಮಾಡಿಕೊಂಡು, ವಾಸ್ತವವಾಗಿ ವ್ಯವಸ್ಥೆ ಸರಿಯಿಲ್ಲ ರಸ್ತೆಗಳಲ್ಲಿ ಎಲ್ಲಿ ಬೇಕಾದರೂ ಅಪಾಯಕಾರಿ ಸ್ಥಿತಿ ಇರಬಹುದು ಜನ ಅನಿರೀಕ್ಷಿತವಾಗಿ ಹುಚ್ಚರಂತೆ ಹೇಗೆ ಬೇಕಾದರೂ ಅಡ್ಡ ಬರಬಹುದು ಅವರಿಗೆ ರಸ್ತೆಯ ಜ್ಞಾನ ಇಲ್ಲವೇ ಇಲ್ಲ ಎಂದು ಭಾವಿಸಿ ವೇಗವನ್ನು 60-90 ರ ಮಿತಿಯಲ್ಲಿ ಓಡಿಸಿದ್ದೇ ಆದರೆ ನಿಮಗೆ ವಾಹನದ ಮೇಲೆ ನಿಯಂತ್ರಣ ಇದ್ದು ಅಪಘಾತದ ಸಾಧ್ಯತೆ ಖಂಡಿತ ಕಡಿಮೆಯಾಗುತ್ತದೆ.                           

ಇಲ್ಲ ಇದೆಲ್ಲ ಹಳೆಯ ಕಾಲದ ಹೇಳಿಕೆಗಳು. ಈಗೇನಿದ್ದರೂ ವೇಗಕ್ಕೆ ಪ್ರಾಮುಖ್ಯತೆ ಎಂದು ನೀವು ಭಾವಿಸುವುದಾದರೆ ಆ ವೇಗದ ಲಾಭ ನಷ್ಟಗಳು ನಿಮ್ಮವೇ. ಸತ್ತ ನಂತರದ Police - Hospital - Insurance ಮತ್ತು ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ನಂಬಿದವರ ಮತ್ತು ಪ್ರೀತಿ ಪಾತ್ರರ ನೋವು ಕಷ್ಟ ನರಕಯಾತನೆಗೆ ನಿಮ್ಮದೇ ಕೊಡುಗೆ ಬಹಳಷ್ಟಿರುತ್ತದೆ  ನೆನಪಿರಲಿ, " SPEED THRILLS BUT IT KILLS " ಪ್ರತಿ ಅಪಘಾತದ ನನ್ನವರ ಸಾವು ಅನಾವಶ್ಯಕ. ದಯವಿಟ್ಡು  ಒಂದಷ್ಟು ಸ್ಪಂದಿಸಿ. ಕಳೆದುಕೊಳ್ಳುವುದೇನೂ ಇಲ್ಲ. ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ವೈಜ್ಞಾನಿಕ ಪ್ರಜ್ಞೆ. ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ

ಬೆಂಗಳೂರು - ಚೆನ್ನೈ,

ಬೆಂಗಳೂರು - ಮುಂಬಯಿ,

ಬೆಂಗಳೂರು - ಹೈದರಾಬಾದ್,

ಬೆಂಗಳೂರು - ಮೈಸೂರು,

ಬೆಂಗಳೂರು - ಮಂಗಳೂರು,

ಬೆಂಗಳೂರು - ತಿರುಪತಿ

ಸೇರಿ ಯಾವುದೇ ಮುಖ್ಯ ರಸ್ತೆಯಲ್ಲಿ ನೀವು ಪ್ರಯಾಣಿಸಿದರೆ 8೦/1೦೦ ಕಿಲೋಮೀಟರ್ ಒಳಗೆ ಕನಿಷ್ಠ ಒಂದಾದರೂ ಸಣ್ಣ ಪ್ರಮಾಣದ ಅಪಘಾತವಾಗಿರುವ ದೃಶ್ಯಗಳನ್ನು ದಿನನಿತ್ಯ ಕಾಣಬಹುದು. ಹಾಗೆಯೇ ನಗರ ಪ್ರದೇಶದಲ್ಲಿ ಓಡಾಡುವ ಎಲ್ಲಾ ವರ್ಗದ ಬಹುತೇಕ ವಾಹನಗಳು ಸ್ವಲ್ಪವಾದರೂ ಏಟು ತಿಂದಿರುವ ಲಕ್ಷಣಗಳನ್ನು ಗಮನಿಸಬಹುದು ಮತ್ತು ಅಲ್ಲಿನ ಜನರ ಅಪಘಾತಗಳ ನೆನಪುಗಳನ್ನು ಕೇಳಬಹುದು. ಇಷ್ಟೊಂದು ವ್ಯಾಪಕವಾದ ಅಪಘಾತಗಳಿಗೆ ಅಪರೂಪದ ತಾಂತ್ರಿಕ ಮತ್ತು ಆಕಸ್ಮಿಕ ಅಂಶಗಳನ್ನು ಹೊರತುಪಡಿಸಿ ನಮ್ಮ ಜನಗಳ ಒಟ್ಟು ವ್ಯಕ್ತಿತ್ವವೇ ಬಹುಮುಖ್ಯ ಕಾರಣವಾಗಿದೆ.

ಚಾಲನೆ ಎಂಬುದು ಒಂದು ಕಲಿಕೆಯ ಕ್ರಮ. ಶಿಕ್ಷಣ ಸಂಗೀತ ಸಾಹಿತ್ಯ ಕ್ರೀಡೆ ನಟನೆಯಂತೆ, ವೈದ್ಯಕೀಯ ಇಂಜಿನಿಯರಿಂಗ್ ಕಟ್ಟಡ ನಿರ್ಮಾಣ ಮುಂತಾದ ವೃತ್ತಿಗಳಂತೆ ಚಾಲನೆ ಕೂಡ ಅತ್ಯಂತ ಹೆಚ್ಚಿನ ಕುಶಲತೆ ಮತ್ತು ಏಕಾಗ್ರತೆ ಬಯಸುವ ಒಂದು ಕಲೆ ಮತ್ತು ವೃತ್ತಿ. ಕೇವಲ ಒಂದಷ್ಟು ಅಭ್ಯಾಸದ ನಂತರ ಸ್ಟೀರಿಂಗ್ ಹಿಡಿದು ಕ್ಲಚ್ ಮುಖಾಂತರ ಗೇರ್ ಬದಲಾಯಿಸಿ ವಾಹನವನ್ನು ಮುಂದಕ್ಕೆ ಓಡಿಸಿದ ಮಾತ್ರಕ್ಕೆ ಯಾರೂ ಚಾಲಕರಾಗುವುದಿಲ್ಲ. ಏಕೆಂದರೆ ರಸ್ತೆಗಳಲ್ಲಿ ನಾವು ಮಾತ್ರ ಓಡಾಡಲು ಇದು ನಮ್ಮಪ್ಪನ ಆಸ್ತಿಯಲ್ಲ. ಅಲ್ಲಿ ವಾಸಿಸುವ ಪ್ರತಿ ಜೀವಿಗೂ ಅದರಲ್ಲಿ ಪಾಲಿದೆ.  ಚಾಲಕನಾದವನು ಆ ಎಲ್ಲಾ ಸಂಕೀರ್ಣ ವ್ಯವಸ್ಥೆಯನ್ನು ಅರಿತು ಯಾರಿಗೂ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ವಾಹನ ಮುನ್ನಡೆಸಬೇಕು. ಅದೊಂದು ಯೋಜನಾಬದ್ಧ ವೈಜ್ಞಾನಿಕ ಕಲೆಗಾರಿಕೆ.

ಆದರೆ ನಮ್ಮಲ್ಲಿ ಈ ಬಗ್ಗೆ ತುಂಬಾ ಕೆಳಮಟ್ಟದ ಭಾವನೆ ಇದೆ. ಯಾರು ಬೇಕಾದರೂ ವಾಹನವನ್ನು ಸುಲಭವಾಗಿ ಚಲಾಯಿಸಬಹುದು ಎಂಬ ಅಭಿಪ್ರಾಯವಿದೆ. ಅದರ ಫಲವೇ ಇಡೀ ದೇಶದಲ್ಲಿ ಪ್ರತಿ ನಿಮಿಷಕ್ಕೆ ಹಲವಾರು ಪ್ರಾಣಗಳ ಮಾರಣ ಹೋಮ. ಮನೆಯಿಂದ ಹೊರಗೆ ಹೋದ ವ್ಯಕ್ತಿ ಮನೆಗೆ ಬರುವವರೆಗೂ ಅಭದ್ರತೆಯಿಂದ ಕಾಯುವ ಆತಂಕದ ನರಕಯಾತನೆ. ಇದಕ್ಕೆ ಕೆಲವು ಉದಾಹರಣೆ ಗಮನಿಸಿ, ಎಷ್ಟೋ ಜನ ವಾಹನ ಖರೀದಿಸಿದ ನಂತರ ಚಾಲನಾ ಪರವಾನಗಿ ಪಡೆದು ಆಮೇಲೆ ರಸ್ತೆಗಳ ಮೇಲೆ ಪ್ರಯೋಗ ಮಾಡುತ್ತಾರೆ. ವಾಹನವನ್ನು ಮುಂದಕ್ಕೆ ಹಿಂದಕ್ಕೆ ಚಲಿಸುವುದು ಕಲಿತ ಮಾತ್ರಕ್ಕೆ ನಮಗೆ ಚಾಲನೆ ಬರುತ್ತದೆ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ.

ವಾಣಿಜ್ಯ ವಾಹನಗಳನ್ನು ತೀರ್ಥ ಯಾತ್ರೆಯ ಅಥವಾ ಪ್ರೇಕ್ಷಣೀಯ ಅಥವಾ ಸಮಾರಂಭಗಳಿಗೆ ತೆಗೆದುಕೊಂಡು ಹೋಗುವವರು ಅವರ ಸಮಯದ ಅನುಕೂಲಕ್ಕೆ ತಕ್ಕಂತೆ ಚಾಲಕನ ನಿದ್ರೆ ಮತ್ತು ಊಟವನ್ನು ನಿಯಂತ್ರಿಸುತ್ತಾರೆ. ರಾತ್ರಿ ವೇಳೆ ಪ್ರಯಾಣ ಮಾಡಿ ದಿನವಿಡೀ ಓಡಾಡಿಸಿ ಏನೋ ಮಹಾ ಉಪಕಾರ ಮಾಡಿದಂತೆ ಚಾಲಕರಿಗೆ ಒಂದೆರೆಡು ಗಂಟೆಗಳ ನಿದ್ರೆಗೆ ಅವಕಾಶ ನೀಡಿ ಮತ್ತೆ ರಾತ್ರಿಯ ವೇಳೆ ವಾಹನ ಚಲಾಯಿಸುವಂತೆ ಮಾಡುತ್ತಾರೆ. ಚಾಲಕ ಏನು ಸೂಪರ್ ಮ್ಯಾನ್ ಅಲ್ಲವಲ್ಲ. ಸಾಮಾನ್ಯವಾಗಿ ಹಗಲಿನಲ್ಲಿ ಎಷ್ಟೇ ನಿದ್ದೆ ಮಾಡಿದರು ರಾತ್ರಿ 12-4 ಗಂಟೆಯ ನಡುವೆ ನಿದ್ರೆ ಎಳೆಯುವುದು ದೇಹದ ಸಹಜ ನಡವಳಿಕೆ. 

ದಿನಕ್ಕೆ 8 ಗಂಟೆಗಳು ಮಾತ್ರ ಚಾಲನೆ, ಒಟ್ಟು ಸಮಾಜದ ಮನೋಭಾವ, ವ್ಯಕ್ತಿಗಳ ಸಂಪೂರ್ಣ ಮಾಗಿದ ವ್ಯಕ್ತಿತ್ವ, ಚಾಲನಾ ವೃತ್ತಿಗೆ ಗೌರವ, ಹದ್ದು ಮೀರಿದ ಚಾಲಕನಿಗೆ ತಕ್ಷಣವೇ ಲೈಸೆನ್ಸ್ ಅಮಾನತು, ಖಾಸಗಿ ವಾಹನಗಳ Fitness ಗೆ ತುಂಬಾ ಮಹತ್ವ ಮುಂತಾದ ಅನೇಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಅಪಘಾತಗಳು ಕಡಿಮೆಯಾಗಬಹುದು. ಕೇವಲ ಘಟನೆ ನಡೆದಾಗ ಯಾವನೋ ಒಬ್ಬ RTO ಅಥವಾ ಡ್ರೈವರ್ ಅಥವಾ ವಾಹನ ಮಾಲೀಕ ಅಥವಾ ‌ರಸ್ತೆ ನಿರ್ಮಿಸಿದವ ಅಥವಾ ವಾಹನ ನಿರ್ಮಿಸಿದವನ ಮೇಲೆ ಕ್ರಮ ಕೈಗೊಂಡರೆ ಅಪಘಾತಗಳು ನಿಲ್ಲುವುದಿಲ್ಲ. ಎಂದಿನಂತೆ ಸಾವು ಗೋಳಾಟ ವಿಧಿಲೀಲೆ ದುರಾದೃಷ್ಟ ಎಂದು ಸಮಾಧಾನ ಮಾಡಿಕೊಳ್ಳಬೇಕಷ್ಟೆ.

ನೀವು ಯಾವುದೇ ರೀತಿಯ ವಾಹನ ಚಾಲಕರಾಗಿದ್ದರೂ ದಯವಿಟ್ಟು ವಾಹನ ಚಾಲನೆ ಒಂದು ಬಹುದೊಡ್ಡ ವೈಜ್ಞಾನಿಕ ಕಲೆ ಮತ್ತು ಅದೇ ಸಮಯದಲ್ಲಿ ಒಂದು ದೊಡ್ಡ ಜವಾಬ್ದಾರಿ ಎಂಬ ಮನೋಭಾವದಿಂದ ವಾಹನ ಚಲಾಯಿಸಿ. ಆಗ ಕನಿಷ್ಠ ಇದರಿಂದಾಗುವ ಅನಾಹುತ ತಪ್ಪಿಸಬಹುದು.

-ವಿವೇಕಾನಂದ ಎಚ್.ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ