ಅಪರಾಧ ಮತ್ತು ದಂಡನೆ
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.
ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)
ವಿಕ್ಟರ್ ಹ್ಯುಗೋ ಬರೆದ ‘ಲೇ ಮಿಸರಾಬಲ್ಸ್’ ಕಾದಂಬರಿಯನ್ನು ಇಂದಿನ ಯುವಪೀಳಿಗೆಯವರಲ್ಲಿ ಎಷ್ಟು ಜನ ಓದಿರುವರೋ ನಾನರಿಯೆ!
ಸುಮಾರು ಐದು ದಶಕಗಳ ಹಿಂದೆ ಒಬ್ಬ ಒಳ್ಳೆಯ ಗಣಿ ಕೆಲಸಗಾರನಿದ್ದ. ಡೈನಮೈಟ್ ಸ್ಫೋಟದ ಸಮಯದಲ್ಲಿ ಅವನು ತನ್ನ ಎಡತೋಳು ಕಳೆದುಕೊಂಡ. ಅದಾದ ನಂತರ ಅವನಿಗೆ ತನ್ನ ಜೀವನನಿರ್ವಹಣೆಗಾಗಿ ಗಳಿಸುವುದು ಕಷ್ಟವಾಯಿತು. ಒಂದು ಸಲ ಮರದ ಪೆಟ್ಟಿಗೆ ಅಂಗಡಿಗೆ ಹಾಕಿದ್ದ ಬೀಗ ಒಡೆದು ಕಳ್ಳತನ ಮಾಡಿದ.
ಅವನಿಗೆ ಅಲ್ಪಾವಧಿಯ ಸಜೆ ವಿಧಿಸಲಾಯಿತು. ಅವನು ಸೆರೆಮನೆಯಿಂದ ಈಚೆ ಬಂದ ಮೇಲೆ ಸಂಪಾದನೆಗಾಗಿ ಯಾವುದೇ ಕೆಲಸ ಸಿಗುವುದು ಮತ್ತೂ ಕಷ್ಟಕರವಾಯೆತು. ಅದಾದ ಮೇಲೆ ಮತ್ತೊಂದು ಮನೆ ಕನ್ನಗಳತನ ಮಾಡಿದ.
ಈ ಸಲ ಅವನಿಗೆ ದೀರ್ಘಾವಧಿಯ ಕಠಿಣ ಸಜೆ ವಿಧಿಸಲಾಯಿತು. ಆದರೂ, ಅವನು ಸೆರೆಮನೆಗೆ ಮರಳಿ ಬಂದಾಗ ಸೆರೆಮನೆವಾಸಿಗಳು ಅವನನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಸೆರೆಮನೆವಾಸಿಗಳಲ್ಲಿನ ಅವನ ವರಿಷ್ಠತೆಯನ್ನು ನೀಡಲಾಯಿತು. ಅದಾದನಂತರ ಅವನು ನಿಯಮಿತವಾದ ಜೈಲುಹಕ್ಕಿ (ಚಾಳಿಬಿದ್ದ ಅಪರಾಧಿ)ಯಾದ.
ಸೆರೆಮನೆಯಿಂದ ಬಿಡುಗಡೆಯಾದ ನಂತರ, ತನ್ನನ್ನು ಬಂಧಿಸಿ ಮತ್ತೆ ಸೆರೆಮನೆಗೆ ಕಳುಹಿಸುತ್ತಾರೆ ಎಂಬುದು ಚೆನ್ನಾಗಿ ತಿಳಿದಿದ್ದರೂ ಹಲವಾರು ಕನ್ನಗಳ್ಳತನ ಮತ್ತು ಕಳುವು ಮಾಡಿದ. ಆದಾಗ್ಯೂ, ಅವನನ್ನು ಬಂಧಿಸಿದ ತಕ್ಷಣ ತುಂಬ ಸಹಕರಿಸುತ್ತಿದ್ದ ಮತ್ತು ತಾನು ಮಾಡಿರುವ ಎಲ್ಲ ಅಪರಾಧಗಳ ಬಗ್ಗೆ ನೇರವಾಗಿ ಒಪ್ಪಿಕೊಂಡುಬಿಡುತ್ತಿದ್ದ. ಇವುಗಳ ಪೈಕಿ ಕೆಲವು ಪೊಲೀಸರಿಗೇ ವರದಿಯಾಗಿರುತ್ತಿರಲಿಲ್ಲ.
ಅನಂತರದಲ್ಲಿ, ಯಾವ ವ್ಯಕ್ತಿಗಳು ಪೊಲೀಸಿನವರಿಗೆ ಕಳುವಿನ ಬಗ್ಗೆ ದೂರು ನೀಡಿಲ್ಲವೋ ಅವರ ಬಳಿಗೆ ಹೋಗಿ ದೂರುಗಳನ್ನು ಸ್ವೀಕರಿಸಿದ ತರುವಾಯ ಮತ್ತಷ್ಟು ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಇದು ತೀವ್ರ ಅಪರಾಧಗಳ ಪತ್ತೆ ಹಚ್ಚುವಿಕೆ ಶೇಕಡಾವಾರು ಪ್ರಮಾಣ ಹೆಚ್ಚಿಸಿಕೊಳ್ಳಲು ಪೊಲೀಸರಿಗೆ ನೆರವಾಗುತ್ತಿತ್ತು!
ನಾನು ಕುಂದಾಪುರದಲ್ಲಿ ಮ್ಯಾಜಿಸ್ಟ್ರೇಟಾಗಿ ಕಾರ್ಯಭಾರ ವಹಿಸಿಕೊಂಡ ಆರು ತಿಂಗಳ ತರುವಾಯ ಸದರಿ ಆಪಾದಿತನನ್ನು ನನ್ನ ಮುಂದೆ ಹಾಜರುಪಡಿಸಲಾಯಿತು. ಅವನ ವಿರುದ್ಧ ದಾಖಲಿಸಲಾಗಿದ್ದ ಎಲ್ಲ ಹತ್ತು ಪ್ರಕರಣಗಳಲ್ಲಿ ತನ್ನ ವಿರುದ್ಧ ಹೊರಿಸಲಾಗಿದ್ದ ಆಪಾದನೆಗಳಲ್ಲಿ ತಾನು ತಪ್ಪಿತಸ್ಥನೆಂದು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ತಾನು ತಪ್ಪಿತಸ್ಥನಲ್ಲನೆಂದು ಹೇಳುವುದರ ಮೂಲಕ, ಯಾವುದೇ ಕಠಿಣ ಶ್ರಮವಿಲ್ಲದೆ, ವಿಚಾರಣಾಧೀನ ಖೈದಿಯಾಗಿ ಸ್ವಲ್ಪಸಮಯ ದೂಡಬಹುದಿತ್ತು. ಆರೋಪಗಳ ತಪ್ಪನ್ನು ಒಪ್ಪಿಕೊಂಡುಬಿಟ್ಟಿದ್ದರೆ, ಕಠಿಣಶ್ರಮಪಡಬೇಕಾದ ಅಪರಾಧಿಯೆಂದು ತೀರ್ಮಾನಿಸಲಾದ ಬಂಧಿಯಾಗಿಬಿಡುತ್ತಿದ್ದ.
ಅಂಥ ಪ್ರಕರಣಗಳ ಪೈಕಿ ಒಂದು ವಿಚಾರಣೆಗೆ ಬಂದಾಗ, ಸ್ವಲ್ಪ ನಗದು ಮತ್ತು ರೇಷ್ಮೆಸೀರೆಗಳು ಕಳುವಾಗಿದ್ದ ಮನೆಯೊಡತಿಯನ್ನು ಸಾಕ್ಷಿಕಟ್ಟೆಗೆ ಕರಯಲಾಯಿತು. ಆಪಾದಿತನು ಮಾಡಿದ ಎಂದು ಹೇಳಲಾದ ತಪ್ಪೊಪ್ಪಿಗೆಯ ಪ್ರಕಾರ ಒಂದು ಸೀರೆಯನ್ನು ಅವನು ತನ್ನ ಮಡದಿಗೆ ನೀಡಿದ್ದ ಮತ್ತು ಉಳಿದ ಸೀರೆಗಳನ್ನು ಅವನಿಂದ ವಶಪಡಿಸಿಕೊಳ್ಳಲಾಗಿತ್ತು.
ಹಾಗಿದ್ದರೂ, ಸೀರೆಯನ್ನು ಆ ಮನೆಯೊಡತಿಗೆ ತೋರಿಸಿದಾಗ ಅದು ತನ್ನ ಮನೆಯಿಂದ ಕಳುವಾದ ಸೀರೆಗಳಲ್ಲಿ ಒಂದಲ್ಲವೆಂದೂ, ಆ ಬಣ್ಣದ ಸೀರೆಯನ್ನು ಎಂದೂ ತಾನು ಉಡುವುದಿಲ್ಲವೆಂದೂ ಹೇಳಿದರು.
ಅದಕ್ಕಿಂತ ಹೆಚ್ಚಿನ ಆಸಕ್ತಿಯ ವಿಷಯವೆಂದರೆ ಆಪಾದಿತನು ಹೇಳಿದ ಮಾತುಗಳು, “ಸ್ವಾಮಿ, ಇದರಿಂದ ಮನದಟ್ಟಾಗುವುದೇನೆಂದರೆ ನಾವು ಮಾಡದ ಕೆಲವು ಅಪರಾಧಗಳನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಹಿಂದೆ ಪತ್ತೆಯಾಗದ ಪ್ರಕರಣಗಳನ್ನು ಈಗ ಪತ್ತೆ ಹಚ್ಚಿದೆವೆಂದು ಅವರು ಹೇಳಿಕೊಳ್ಳಬೇಕಾಗುತ್ತದೆ. ಅದರಿಂದ ಹೆಚ್ಚಿನ ವ್ಯತ್ಯಾಸವೇನೂ ನಮಗೆ ಆಗದಿರುವುದರಿಂದ ನಾವು ಅವರು ಹೇಳಿದುದಕ್ಕೆ ಒಪ್ಪಿಕೊಂಡು ಬಿಡುತ್ತೇವೆ.
ವಿಕ್ಟರ್ ಹ್ಯೂಗೋ ತನ್ನ ಸುಪ್ರಸಿದ್ಧ ಕಾದಂಬರಿಯಲ್ಲಿ ಹೇಳಿರುವಂತೆ, ಅಪರಾಧಿಗಳನ್ನು ಸೃಷ್ಟಿಸಲು ಸಮಾಜವೂ ಸ್ವಲ್ಪಮಟ್ಟಿಗೆ ಕಾರಣವಾಗಿರುತ್ತದೆ.