ಅಪರೂಪದ ಕೆಂಪು ಮೂತಿಯ ಮಂಗ- ಉಕಾರಿ

Submitted by Ashwin Rao K P on Fri, 09/11/2020 - 10:00

ಮಾನವನ ಹತ್ತಿರದ ಪ್ರತಿರೂಪ ಮಂಗ. ಮಂಗನಿಂದ ಮಾನವ ಎಂಬುದು ಎಲ್ಲರೂ ಬಳಸುವ ಮಾತು. ಮಂಗಗಳಲ್ಲಿ ಎಷ್ಟೊಂದು ವಿಧಗಳಿವೆ. ಸಾಮಾನ್ಯ ಮಂಗ, ಉದ್ದ ಬಾಲದ ಮಂಗ, ಸಿಂಗಳೀಕ, ಗೋರಿಲ್ಲ, ಚಿಂಪಾಂಜಿ, ಒರಂಗುಟಾನ್, ಸಣ್ಣದಾದ ಮಂಗಗಳು. ದೊಡ್ಡದಾದ ಮುಜ್ಜಗಳು... ಹೀಗೆ ವೈವಿಧ್ಯಮಯ ಮಂಗಳನ್ನು ನೋಡ ಬಹುದು. ಇದೇ ಸಾಲಿಗೆ ಸೇರುವ ಸೃಷ್ಟಿಯಲ್ಲಿನ ಇನ್ನೊಂದು ಅದ್ಭುತ ಉಕಾರಿ ಅಥವಾ ಉವಾಕಾರಿ (Uakari) ಮಂಗಗಳು. 

ಮಂಗಗಳ ಉಪವರ್ಗಕ್ಕೆ ಸೇರಿರುವ ಇವುಗಳು ಅಧಿಕವಾಗಿ ದಕ್ಷಿಣ ಅಮೇರಿಕಾದ ಮಳೆಕಾಡುಗಳಲ್ಲಿ ಕಂಡು ಬರುತ್ತವೆ. ಇವುಗಳ ವೈಜ್ಞಾನಿಕ ಹೆಸರು ಕಾಕಜಾವೊ (Cacajao). ಈ ಮಂಗಗಳ ಮುಖ ಗುಲಾಬಿ-ಕೆಂಪು ಬಣ್ಣದಲ್ಲಿರುತ್ತದೆ. ತಲೆಯ ಮೇಲೆ ಕೂದಲುಗಳು ಇರುವುದಿಲ್ಲ. ಆ ಕಾರಣದಿಂದ ಇವುಗಳನ್ನು ಬಾಲ್ಡ್ (ಬೋಳು ತಲೆಯ) ಉಕಾರಿ ಎಂದು ಕರೆಯುತ್ತಾರೆ. ಮೈ ಮೇಲೆ ತುಪ್ಪಳದಂತಹ ರಚನೆ ಇರುತ್ತದೆ. ಬೇರೆ ಮಂಗಗಳಿಗಿರುವಂತೆ ಉದ್ದ ಬಾಲ ಇವುಗಳಿಗೆ ಇರುವುದಿಲ್ಲ. ಉಕಾರಿ ಮಂಗಗಳ ಬಾಲ ಕೇವಲ ೧೫-೧೮ ಸೆಂ. ಮೀ. ಉದ್ದವಿರುತ್ತದೆ. ಉಕಾರಿಗಳ ಬಹುತೇಕ ಪ್ರಭೇಧಗಳು ಕೊಲಂಬಿಯಾ, ಪೆರು, ಬ್ರೆಜಿಲ್ ಹಾಗೂ ಅಮೆಜಾನ್ ಕಾಡುಗಳಲ್ಲಿ ಕಂಡು ಬರುತ್ತವೆ. 

ಮಳೆ ಕಾಡುಗಳಲ್ಲಿ ಇದರ ವಾಸಸ್ಥಳವಾಗಿರುವುದರಿಂದ ಅಲ್ಲಿ ಅಧಿಕ ಮಳೆಯಾಗಿ, ಸದಾ ಕಾಲ ಪ್ರವಾಹದ ಭೀತಿ ಎದುರಾಗುತ್ತದೆ. ಆ ಕಾರಣದಿಂದ ಉಕಾರಿಗಳು ಮರದಲ್ಲೇ ಹೆಚ್ಚಾಗಿ ಇರಲು ಇಷ್ಟ ಪಡುತ್ತವೆ. ಮಳೆ ಇಲ್ಲದ ಸಮಯದಲ್ಲಿ ಆಹಾರವನ್ನು ಅರಸಲು ನೆಲಕ್ಕೆ ಬರುತ್ತವೆ. ಬಹುತೇಕ ಹಣ್ಣುಗಳನ್ನು ಇವು ಇಷ್ಟ ಪಟ್ಟು ತಿನ್ನುತ್ತವೆ. ಹಣ್ಣುಗಳಲ್ಲದೆ ಕೆಲವು ಬೀಜಗಳು, ಎಳೆಯ ಚಿಗುರುಗಳು, ಹೂವುಗಳನ್ನೂ ತಿನ್ನುತ್ತವೆ. ಮನಸಾದರೆ ಸಣ್ಣ ಸಣ್ಣ ಕೀಟಗಳನ್ನೂ ತಿನ್ನದೇ ಬಿಡುವುದಿಲ್ಲ.

ಉಕಾರಿಗಳಲ್ಲಿ ನಾಲ್ಕು ವಿಧಗಳಿವೆ. ಅವುಗಳಲ್ಲಿ ಒಂದು ಬಾಲ್ಡ್ ಉಕಾರಿ, ಗೋಲ್ಡನ್ ಉಕಾರಿ, ಅರ್ಕ ಉಕಾರಿ ಹಾಗೂ ನೆಬಿಲಿನ ಉಕಾರಿ. ಉಕಾರಿಗಳ ದೇಹದ ಗಾತ್ರಕ್ಕಿಂತಲೂ ಅದರ ಮೈಮೇಲಿನ ತುಪ್ಪಳದ ಗಾತ್ರವೇ ಅಧಿಕವಾಗಿರುತ್ತದೆ. ಈ ತುಪ್ಪಳವು ಒರಟಾಗಿರುತ್ತದೆ. ತುಪ್ಪಳವು ಕಂದು, ಕೆಂಪು, ಕಪ್ಪು, ಬಿಳಿಯಾದ ಬಣ್ಣದಲ್ಲಿರುತ್ತದೆ. ಇವುಗಳಲ್ಲಿ ಗಂಡು ಉಕಾರಿಯು ಹೆಣ್ಣು ಉಕಾರಿಗಳಿಗಿಂತ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಮನುಷ್ಯನ ರೀತಿಯಲ್ಲೇ ಹವಾಮಾನ ಬದಲಾವಣೆಗೆ ಇದರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆರೋಗ್ಯ ಸರಿ ಇಲ್ಲದೇ ಇದ್ದರೆ, ಮಲೇರಿಯಾದಂತಹ ಜ್ವರ ಬಂದರೆ ಇದರ ಮುಖದ ಬಣ್ಣವು ಕಳಾಹೀನವಾಗುತ್ತದೆ. ಹೆಣ್ಣು ಉಕಾರಿಗಳು ಸಂತಾನೋತ್ಪತ್ತಿಗಾಗಿ ಗಂಡನ್ನು ಅರಸುವಾಗ ಯಾವ ಗಂಡು ಉಕಾರಿಯ ಮುಖದ ವರ್ಣ ಗಾಢವಾಗಿರುತ್ತದೆಯೋ, ಅಂದರೆ ಹೆಚ್ಚು ಕೆಂಪಾಗಿರುತ್ತದೆಯೋ (ಆರೋಗ್ಯವಂತ) ಅವುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಇದರ ಸಂತಾನೋತ್ಪತ್ತಿಯ ಅವಧಿಯಾಗಿರುತ್ತದೆ. ಸಂಗಾತಿಯನ್ನು ಆಕರ್ಷಿಸಲು ಹೆಣ್ಣು ಒಂದು ರೀತಿಯ ಸುವಾಸನೆಯನ್ನು ಹೊರಹಾಕುತ್ತದೆ. ಇದರಿಂದ ಗಂಡು ಆಕರ್ಷಿತವಾಗುತ್ತದೆ. ಇವುಗಳ ಗರ್ಭದಾರಣೆಯ ಅವಧಿ ಆರು ತಿಂಗಳು. ಒಮ್ಮೆ ಸಂಗಾತಿಯನ್ನು ಆರಿಸಿದರೆ ಅದೇ ಸಂಗಾತಿಯೊಂದಿಗೆ ಜೀವನ ಪೂರ್ತಿ ಬದುಕುತ್ತದೆ. 

ಗಂಡುಗಳು ಆರು ವರ್ಷಕ್ಕೆ ಪ್ರೌಢಾವಸ್ಥೆಗೆ ಬಂದರೆ, ಹೆಣ್ಣು ಮೂರೇ ವರ್ಷಕ್ಕೆ ಸಂತಾನೋತ್ಪತ್ತಿಗೆ ತಯಾರಾಗುತ್ತದೆ. ಎರಡು ವರ್ಷಗಳಿಗೆ ಒಂದು ಸಲಕ್ಕೆ ಒಂದು ಮರಿಗೆ ಮಾತ್ರ ಜನ್ಮ ನೀಡುವ ಉಕಾರಿಗಳ ಸಂತತಿ ಬೆಳೆಯುವ ವೇಗ ತುಂಬಾ ಕಡಿಮೆ. ಆದುದರಿಂದ ಇವುಗಳ ಸಂಖ್ಯೆ ಈಗೀಗ ತುಂಬಾ ಕಮ್ಮಿಯಾಗುತ್ತಿದೆ. ಹುಟ್ಟಿದ ಮರಿಯನ್ನು ಹೆಣ್ಣು ಉಕಾರಿ ೪ ರಿಂದ ೬ ತಿಂಗಳವರೆಗೆ ಪಾಲನೆ ಮಾಡುತ್ತದೆ. ಉಕಾರಿಗಳು ಸುಮಾರು ಮೂವತ್ತು ವರ್ಷಗಳ ವರೆಗೆ ಬದುಕುತ್ತವೆ. ಮಂಗಗಳಿಗೂ ಮಾನವರಿಗೂ ಹೋಲಿಕೆಗಳಿರುವುದರಿಂದ ಯಾವುದೇ ವೈಜ್ಞಾನಿಕ ಸಂಶೋಧನೆಗಳಿಗೆ ಇವುಗಳನ್ನು ಬಳಸಿಕೊಳ್ಳುತ್ತಾರೆ. ಇದರಿಂದಲೂ ಇವುಗಳ ಸಂಖ್ಯೆಗಳ ಮೇಲೆ ಪರಿಣಾಮ ಬೀರುತ್ತವೆ. ಮಳೆಯಾಶ್ರಿತ ಕಾಡುಗಳಲ್ಲಿರುವುದರಿಂದ ಮಲೇರಿಯಾ ರೋಗದ ಕಾಟವೂ ಇವುಗಳಿಗೆ ಅಧಿಕ. ಪೆರುವಿನಲ್ಲಿ ಕೆಲವೊಂದು ಬೇಟೆಗಾರರು ಇವುಗಳನ್ನು ಮಾಂಸಕ್ಕಾಗಿ ಕೊಲ್ಲುವುದರಿಂದಲೂ ಇವುಗಳ ಸಂಖ್ಯೆಯು ಕ್ಷೀಣಿಸತೊಡಗಿದೆ. ಉಕಾರಿಗಳು ಪ್ರಾಣಿ ಸಂಗ್ರಹಾಲಯದಲ್ಲಿ ಇರುವಾಗ ಶಾಂತವಾಗಿದ್ದರೂ ಕಾಡುಗಳಲ್ಲಿ ಸ್ವತಂತ್ರವಾಗಿರುವಾಗ ಮಾತ್ರ ತುಂಬಾನೇ ಉದ್ರೇಕಕಾರಿಯಾಗಿ ಗಲಾಟೆ ಮಾಡುತ್ತವೆ. ಹೆಚ್ಚಾಗಿ ಸಣ್ಣ ಸಣ್ಣ ಗುಂಪುಗಳಲ್ಲಿ ವಾಸಿಸುವ ಇವುಗಳು ಕೆಲವೊಮ್ಮೆ ೧೦೦ಕ್ಕೂ ಅಧಿಕ ಸಂಖ್ಯೆಯ ಗುಂಪಿನಲ್ಲಿರುತ್ತವೆ. 

ಈಗಾಗಲೇ ವನ್ಯಜೀವಿ ಸಂಸ್ಥೆಗಳು ಉಕಾರಿಗಳನ್ನು ಕೆಂಪು ಪಟ್ಟಿಗೆ ಸೇರಿಸಿದರೂ ನಾವು ಇವುಗಳ ಸಂರಕ್ಷಣೆಯ ಹೊಣೆ ಹೊತ್ತುಕೊಳ್ಳದಿದ್ದರೆ ಮುಂದೊಂದು ದಿನ ಅಪರೂಪದ ಕೆಂಪು-ಗುಲಾಬಿ ಮುಖದ ಉಕಾರಿ ಮಂಗಗಳನ್ನು ಚಿತ್ರಗಳಲ್ಲೇ ನೋಡಬೇಕಾಗಿ ಬರಬಹುದು. 

ಚಿತ್ರ ಕೃಪೆ: ಅಂತರ್ಜಾಲ ತಾಣ