ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ

ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ

ಬರಹ

ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ
=======================

ಮುರಾರಜೀ ದೇಸಾಯಿಯವರು ಹುಟ್ಟಿದ್ದು ಫೆಬ್ರುವರಿ 29 ರಂದು. ಆ ದಿನಾಂಕದಂತೆಯೇ ಅವರೂ ಅಪರೂಪದವರೇ. ಸುಧಾರಣಾವಾದಿಯಾದರೂ, ಸಮರ್ಥ ಆಡಳಿತಗಾರರಾದರೂ, ಗಾಂಧೀವಾದಿಯಾಗಿದ್ದರೂ, ಶಿಸ್ತು - ನಿಷ್ಠುರತೆಗಳಿಗೆ ಪ್ರಖ್ಯಾತಿ ಪಡೆದಿದ್ದರೂ, ಸ್ವಲ್ಪ ಮಟ್ಟಿನ ವಿಲಕ್ಷಣತೆ ಅವರಲ್ಲಿತ್ತು. ಇಡೀ ಭಾರತದ ರಾಜಕಾರಣದಲ್ಲಿ ಅಂತಹ ಇನ್ನೋರ್ವ ರಾಜಕಾರಣಿ ಸಿಕ್ಕುವುದಿಲ್ಲ.

ಮೂಲತಃ ಅವರು ಗುಜರಾತ್ ನವರು. ಸಿವಿಲ್ ಸರ್ವಿಸ್ ಪರೀಕ್ಷೆ ಮಾಡಿ ಕೆಲಸಕ್ಕೆ ಸೇರಿದರೂ,
ಗಾಂಧೀ ವಿಚಾರಗಳಿಂದ ಪ್ರಭಾವಿತರಾಗಿ, ನೌಕರಿಗೆ ರಾಜೀನಾಮೆ ನೀಡಿ, ಅಸಹಕಾರ ಚಳವಳಿಗೆ - ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ತಮ್ಮ ಕಠಿಣ ಪರಿಶ್ರಮ - ನಾಯಕತ್ವದ ಗುಣಗಳಿಂದಾಗಿ ಹಂತಹಂತವಾಗಿ ರಾಜಕೀಯದಲ್ಲಿ ಮೇಲೇರಿದರು. ಅವರು 1930ರ ದಶಕದಲ್ಲಿಯೇ ಮಂತ್ರಿಯಾಗಿದ್ದರು, ಸ್ವಾತಂತ್ರ್ಯಾನಂತರ ನೆಹರೂ ಅವರ ಮಂತ್ರಿಮಂಡಲದಲ್ಲಿಯೂ ಪ್ರಮುಖವಾದ ಹಣಕಾಸು ಖಾತೆಯನ್ನು ನಿರ್ವಹಿಸಿದರು. 1950ರ ದಶಕದಲ್ಲಿಯೇ ಅವರು ಹಿರಿಯ ನಾಯಕರಾದರು, ಪ್ರಭಾವಿಗಳೆನಿಸಿದರು.

ಮೇರುನಾಯಕ ನೆಹರೂ ಅವರ ನಂತರ ಪ್ರಧಾನಿಯಾಗುವವರು ಯಾರು ಎಂಬ ಪ್ರಶ್ನೆ ಬಂದಾಗ, ಮುರಾರಜೀ ಅವರ ಹೆಸರೂ ಕೇಳಿ ಬರುತ್ತಿತ್ತು. ನೆಹರೂ ಅವರಿಗೇನೋ, ಮನಸ್ಸಿನಲ್ಲಿ ತಮ್ಮ ನಂತರ ತಮ್ಮ ಮಗಳು ಇಂದಿರಾ ಅವರೇ ಪ್ರಧಾನಿ ಆಗಬೇಕೆಂದು ಇತ್ತು. ಆದರೆ ಬಾಯಿಬಿಟ್ಟು ಹೇಳಿರಲಿಲ್ಲ. 1964ರಲ್ಲಿ, ನೆಹರೂ ಅವರು ನಿಧನರಾದಾಗ, ಪತ್ರಕರ್ತ ಕುಲದೀಪ ನಯ್ಯಾರ್ ಅವರ ಬಳಿ, ಅಕಸ್ಮಾತ್ತಾಗಿ, ಮುರಾರಜೀ ಅವರು, ತಾವೂ ಪ್ರಧಾನಮಂತ್ರಿ ಸ್ಥಾನಕ್ಕೆ ಅಭ್ಯರ್ಥಿ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದು, ಅವರ ರಾಜಕೀಯ ಹಿನ್ನಡೆಗೆ ಕಾರಣವಾಗಿಹೋಯಿತು. ಪತ್ರಕರ್ತರು ಸುಮ್ಮನಿರುತ್ತಾರೆಯೇ? ಕುಲದೀಪ ನಯ್ಯಾರ್ ಇದನ್ನೊಂದು ರೋಚಕ ಸುದ್ದಿ ಮಾಡಿ ಪ್ರಕಟಿಸಿಬಿಟ್ಟರು. ನೆಹರೂ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯೇ ಇನ್ನೂ ಆಗಿರಲಿಲ್ಲ. ಇಡೀ ದೇಶ ಇನ್ನೂ ದಿಗ್ಭ್ರಾಂತ ಸ್ಥಿತಿಯಲ್ಲಿತ್ತು, ಇನ್ನೂ ಚೇತರಿಸಿಕೊಂಡಿರಲಿಲ್ಲ. ಮುರಾರಜೀ ಅವರ ರಾಜಕೀಯ ವಿರೋಧಿಗಳು ಇದನ್ನೇ ದೊಡ್ಡದು ಮಾಡಿ ಅಪಪ್ರಚಾರ ಮಾಡಿಬಿಟ್ಟರು. ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಮುರಾರಜೀ ಅವರು ಸೋತು, ಲಾಲ್ ಬಹದ್ದೂರ್ ಶಾಸ್ತ್ರಿಯವರು (ನೆಹರೂ ನಂತರ) ಪ್ರಧಾನಿಯಾದರು. ನಂತರದ್ದು ಇತಿಹಾಸ.

1966ರಲ್ಲಿ ಶಾಸ್ತ್ರೀಜಿಯವರ ಅಕಾಲಿಕ ಮೃತ್ಯುವಿನಿಂದ, ಮತ್ತೊಮ್ಮೆ "ಮಹಾಶೂನ್ಯ" ಉಂಟಾಯಿತು. ಮತ್ತೆ ಮುರಾರಜೀ ಅವರು ಸುದ್ದಿಯ ಕೇಂದ್ರವಾದರು. ಮುರಾರಜೀ ಅವರು ಯಾರಿಗೂ ಬಗ್ಗುವವರಲ್ಲ, ಅವರನ್ನು ನೇಪಥ್ಯದ ಹಿಂದೆ ಇದ್ದು ನಿಯಂತ್ರಿಸುವುದು ಅಸಾಧ್ಯವಾದ ವಿಷಯವಾಗಿತ್ತು. ಅವರ ವಿರೋಧಿಗಳು ಮತ್ತೊಮ್ಮೆ ವ್ಯೂಹ ರಚಿಸಿದರು. ನೆಹರೂ ಅವರ ಹಿಂದೆ ಹಿಂದೆ ನೆರಳಿನಂತೆ ಸುತ್ತುತ್ತಿದ್ದ ಇಂದಿರಾ ಅವರನ್ನು, ಸರಿಯಾಗಿ ಅಳೆಯದೇ - ಅಂದಾಜು ಮಾಡದೇ, ಸೂತ್ರದ ಗೊಂಬೆಯಂತೆ ನಿಯಂತ್ರಿಸಬಹುದೆಂದು ಪರಿಭಾವಿಸಿದ, (ಮುರಾರಜೀ ಅವರ ವಿರೋಧಿಗಳಾಗಿದ್ದ) ಕೆಲವು ಪಟ್ಟಭದ್ರರು, ಇಂದಿರಾ ಅವರನ್ನು ಬೆಂಬಲಿಸಿದರು. ನಾಯಕತ್ವದ ಮಹತ್ವದ ಚುನಾವಣೆಯಲ್ಲಿ ಮತ್ತೆ ಮುರಾರಜೀ ಸೋತು, ಇಂದಿರಾ ಪ್ರಧಾನಿಯಾಗಿಬಿಟ್ಟರು. ಆಗ ಮುರಾರಜೀ ಅವರಿಗೆ 70 ವರ್ಷ ವಯಸ್ಸು. ಆಗ ಖ್ಯಾತ ಪತ್ರಕರ್ತ ಇಂದರ್ ಮಲ್ಹೋತ್ರಾ ಅವರು ತಮ್ಮ ಅಂಕಣದಲ್ಲಿ, "ಮುರಾರಜೀ ಅವರು ಪ್ರಧಾನಿಯಾಗುವ ತಮ್ಮ ಅಂತಿಮ ಅವಕಾಶ ಕಳೆದುಕೊಂಡರು", ಎಂದು ಬರೆದರು.

1970ರ ದಶಕವು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದ ಕಪ್ಪು ಅವಧಿ. ಬಡತನ, ನಿರುದ್ಯೋಗ, ಅರಾಜಕತೆಗಳು ತಾಂಡವವಾಡಿದ ಕಾಲಘಟ್ಟವದು. ಇಂದಿರಾ ಅವರು ಎಲ್ಲ ಸಮಸ್ಯೆಗಳಿಗೆ ತಮ್ಮ ನಿರಂಕುಶ ಸರ್ವಾಧಿಕಾರವೊಂದೇ ಪರಿಹಾರವೆಂದು ಭಾವಿಸಿ, ಭಟ್ಟಂಗಿಗಳ ಆಸ್ಥಾನದಲ್ಲಿ ವಿರಾಜಮಾನರಾಗಿದ್ದರು. ಭ್ರಷ್ಟಾಚಾರ - ಲಂಚಗುಳಿತನಗಳು ಮೇರೆಮೀರಿದವು. ರಾಜಕೀಯವನ್ನು ಬಿಟ್ಟು, ಸರ್ವೋದಯ ಚಳವಳಿಯಲ್ಲಿದ್ದ ಲೋಕನಾಯಕ ಜಯಪ್ರಕಾಶ ನಾರಾಯಣರು ಅನಿವಾರ್ಯವಾಗಿ ಇಂದಿರಾ ವಿರೋಧಿ ಆಂದೋಲನದ ನಾಯಕತ್ವ ಕೈಗೆತ್ತಿಕೊಳ್ಳಬೇಕಾಯಿತು. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು, ಇಂದಿರಾ ಅವರಿಂದ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ತುರ್ತುಪರಿಸ್ಥಿತಿ ಹೇರಿಕೆ, ಎಲ್ಲ ವಿರೋಧಪಕ್ಷಗಳ ನಾಯಕರ ಬಂಧನ, 1977ರ ಮಹಾಚುನಾವಣೆಗಳಲ್ಲಿ ಇಂದಿರಾ ಅವರ ಕಾಂಗ್ರೆಸ್ಸಿಗೆ ಐತಿಹಾಸಿಕ ಸೋಲು....ಹೀಗೆ ಭಾರತದ ರಾಜಕೀಯವು ಸಂಕ್ರಮಣ ಕಾಲವೊಂದರಲ್ಲಿ ಬಂದು ನಿಂತಿತ್ತು.

ಬಹುಮಂದಿ ಸಂಸತ್ ಸದಸ್ಯರ ಅಭಿಪ್ರಾಯದ ಆಧಾರದ ಮೇಲೆ, ಜಯಪ್ರಕಾಶರು ಮುರಾರಜೀ ಅವರನ್ನೇ ಪ್ರಧಾನಿಯನ್ನಾಗಿ ಆರಿಸಿದರು. ಮುರಾರಜೀ ಅವರು ಪ್ರಧಾನಮಂತ್ರಿಯಾದಾಗ ಅವರಿಗೆ ಎಂಬತ್ತೆರಡನೆಯ ವರ್ಷ. (ವಿಚಿತ್ರವೆಂದರೆ ಮುರಾರಜೀ ಅವರು ಜೆ.ಪಿ.ಅವರಿಗಿಂತ ಹಿರಿಯರಾಗಿದ್ದರು.) ವಿಶ್ವದ ಇತಿಹಾಸದಲ್ಲೇ ಅಷ್ಟೊಂದು ವಯಸ್ಸಿನ ಹಿರಿಯರು, ದೇಶವೊಂದರ ಆಡಳಿತದ ಚುಕ್ಕಾಣಿ ಹಿಡಿದದ್ದು ಅಪರೂಪದ ದಾಖಲೆಯಾಯಿತು.

ದೇಸಾಯಿಯವರು ಇಂದರ್ ಮಲ್ಹೋತ್ರಾ ಅವರು ಬರೆದಿದ್ದನ್ನು ಮರೆತಿರಲಿಲ್ಲ. ತಾವು ಪ್ರಧಾನಿಯಾದನಂತರ ಇಂದರ್ ಮಲ್ಹೋತ್ರಾ ಅವರಿಗೆ ಪತ್ರ ಬರೆದು, ಅವರ ಮಾತುಗಳು ಹುಸಿಯಾದುದನ್ನು ಮನದಟ್ಟು ಮಾಡಿದರು. ಪತ್ರಕರ್ತರೆಂದರೆ ಬೆಚ್ಚಿಬೀಳುವ, ತೊದಲುವ, ತಾವು ಹೇಳಿದ್ದನ್ನೇ ಮತ್ತೆ ಮತ್ತೆ "ಸ್ಪಷ್ಟ"ಪಡಿಸುವ ರಾಜಕಾರಣಿಗಳ ನಡುವೆ, ಮುರಾರಜೀ ದೇಸಾಯಿ ಅವರದು ವಿಶೇಷ ವ್ಯಕ್ತಿತ್ವ. ಅವರಿಗೆ ಪತ್ರಿಕಾ ಸಮ್ಮೇಳನಗಳೆಂದರೆ ಲೀಲಾಜಾಲ. ಪೂರ್ವಸಿದ್ಧತೆಯಿಲ್ಲದೆ ಬರುವ ಪತ್ರಕರ್ತರನ್ನು ಅವರು ಲೇವಡಿ ಮಾಡುತ್ತಿದ್ದರು. ಮುರಾರಜೀ ದೇಸಾಯಿ ಎಂದರೆ, ಪತ್ರಕರ್ತರಿಗೇ ದಿಗಿಲುಂಟಾಗುತ್ತಿತ್ತು.

ಅವರು ಎರಡು ವರ್ಷಗಳಿಗಿಂತ ಹೆಚ್ಚು ಪ್ರಧಾನಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೂ, ನೆರೆಯ ಪಾಕೀಸ್ತಾನ - ಚೀನಾಗಳೊಂದಿಗೆ ಸೌಹಾರ್ದ ಸಂಬಂಧಕ್ಕೆ ನಾಂದಿ ಹಾಡಿದರು. ಪಾಕೀಸ್ತಾನ ಅವರನ್ನು "ನಿಶಾನ್ ಏ ಪಾಕೀಸ್ತಾನ್" ಎಂಬ ಉಚ್ಚ ಪ್ರಶಸ್ತಿಯಿಂದ ಗೌರವಿಸಿತು. "ಭಾರತರತ್ನ" ಮತ್ತು "ನಿಶಾನ್ ಏ ಪಾಕೀಸ್ತಾನ್", ಹೀಗೆ ಎರಡೂ ದೇಶಗಳ ಅತ್ಯುನ್ನತ ಪ್ರಶಸ್ತಿಗಳಿಂದ ಗೌರವಿತರಾಗಿರುವವರು ಮುರಾರಜೀ ದೇಸಾಯಿ ಒಬ್ಬರೇ.

ದೇಸಾಯಿ ಅವರು ಮಹಾತ್ಮಾ ಗಾಂಧೀಜಿ ಅವರಿಂದ ಸ್ಥಾಪಿತವಾದ ಗುಜರಾತ್ ವಿದ್ಯಾಪೀಠದ ಕುಲಾಧಿಪತಿಯಾಗಿದ್ದರು, ಮತ್ತು ವಿದ್ಯಾಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡಿದ್ದರು. ಸಮಾಜವಾದಿ ಚಿಂತನೆಯ ನೆಹರೂ ಮಂತ್ರಿಮಂಡಲದಲ್ಲಿದ್ದೂ ಸುಧಾರಣಾವಾದೀ - ಉದಾರವಾದೀ ಧೋರಣೆಗಳನ್ನು ಅವರು ಆ ಕಾಲದಲ್ಲೇ ಪ್ರತಿಪಾದಿಸುತ್ತಿದ್ದರು.

ಅವರು ಮದ್ಯಪಾನದ ಕಡುವಿರೋಧಿಯಾಗಿದ್ದರು. ನಿಜಕ್ಕೂ ಅವರೊಬ್ಬ ಗಾಂಧೀವಾದಿ. ಎಷ್ಟೆಂದರೆ, "ಅವರು ಗಾಂಧೀಜಿಯವರಿಗಿಂತಲೂ ಹೆಚ್ಚು ಗಾಂಧೀವಾದಿ", ಎಂದು ಕೆಲವರು ಹಾಸ್ಯ ಮಾಡುತ್ತಿದ್ದುದುಂಟು. ಹಿಂದೆ ಯಾರೋ ಒಬ್ಬರು ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದರು. ಅವರಿಗೆ ಉಪಶಮನಕಾರಿ "ಔಷಧಿ"ಯಾಗಿ ಮದ್ಯ ನೀಡಬಹುದೆಂದು ವೈದ್ಯರೇ ಸಲಹೆ ಮಾಡಿದ್ದರು. ಆ ರೋಗಿ, ಗಾಂಧೀಜಿಯವರ ಪ್ರಭಾವದಿಂದ ಮದ್ಯವನ್ನು ನಿರಾಕರಿಸಿ, ತುಂಬ ನೋವು ಅನುಭವಿಸುತ್ತಿದ್ದರು. ಅದನ್ನು ಕೇಳಿ ಸ್ವತಃ ಬಾಪೂಜಿ, ಅವರು ಮದ್ಯ ಸೇವಿಸಲಿ, ಪರವಾಗಿಲ್ಲ, ಎಂದು ಹೇಳಿದ್ದರು. ಲೇಖಕರೊಬ್ಬರು, ಈ ಘಟನೆಯನ್ನು ಉದಾಹರಿಸಿ, ಇದನ್ನೇ ಮುರಾರಜೀ ಅವರಿಗೆ ಕೇಳಿದ್ದರೆ, ಅವರು ಖಂಡಿತಾ ಒಪ್ಪುತ್ತಿರಲಿಲ್ಲ, ಎಂದು ಬರೆದಿದ್ದಾರೆ. ಮುರಾರಜೀ ಅವರು ಅಂತಹ ತತ್ತ್ವನಿಷ್ಠೆ, ವಿಚಾರನಿಷ್ಠೆ ಇಟ್ಟುಕೊಂಡಿದ್ದಂತಹವರು. 1979ರಲ್ಲಿ, ಚರಣ್ ಸಿಂಗ್ - ಇಂದಿರಾ ಷಡ್ಯಂತ್ರದಿಂದ, ಮುರಾರಜೀ ಅವರು ಅಧಿಕಾರ ಕಳೆದುಕೊಂಡಾಗ, ಮದ್ಯಪಾನದ ಲಾಬಿಯ ಒತ್ತಡ - ಪ್ರಭಾವಗಳೂ ಕೆಲಸ ಮಾಡಿದ್ದವೆಂದು ಹೇಳಲಾಗುತ್ತಿತ್ತು.

ಮುರಾರಜೀ ಕುರಿತಾದ ಸ್ವಾರಸ್ಯಪೂರ್ಣ ಘಟನೆಗಳು ಅನೇಕ. 1950ರ ದಶಕದಲ್ಲಿಯೇ, ಕಾಂಗ್ರೆಸಿಗರ ದುರ್ವಿದ್ಯೆ - ದುರಾಚಾರಗಳು ಮೇರೆ ಮೀರಲಾರಂಭಿಸಿದ್ದವು. ಕಾಂಗ್ರೆಸಿಗರು ಖಾದಿಗೆ ಎಳ್ಳು ನೀರು ಬಿಟ್ಟಾಗಿತ್ತು. ಗಾಂಧೀಜಿಯವರ ತತ್ತ್ವಗಳಿಗೆ ಎಂದೋ ತಿಲಾಂಜಲಿ ನೀಡಲಾಗಿತ್ತು. ಖಾದಿ ಎಂಬುದು ಬರಿಯ ಬಾಹ್ಯಪ್ರದರ್ಶನದ ವಸ್ತುವಾಗಿತ್ತು. ಮುರಾರಜಿ ದೇಸಾಯಿ ಅವರು ಒಮ್ಮೆ ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾಗ, ಹೊರಗೆ ಮಾತ್ರ ಬರಿಯ ಖಾದಿ ಜುಬ್ಬ ಹಾಕಿದ್ದ ಅಭ್ಯರ್ಥಿಯೊಬ್ಬ ಸಿಕ್ಕಿಬಿದ್ದ. ಕಡುಶಿಸ್ತಿನ ದೇಸಾಯಿ, ಅವನ ಜುಬ್ಬ ತೆಗೆಸಿ, ಒಳ ಉಡುಪು (ಬನಿಯನ್) ಪರೀಕ್ಷಿಸಿ ಅವನ ಮೋಸ ಕಂಡುಹಿಡಿದು, ಅವನನ್ನು ಆಚೆ ಕಳುಹಿಸಿದ್ದರಂತೆ. ಇದು ತಮಾಷೆಯ ವಿಷಯವೂ ಆಗಿಬಿಟ್ಟಿತು. ಆಗ ಕಾಂಗ್ರೆಸ್ ಪಕ್ಷದಲ್ಲಿ ಫ್ಯಾಷನಬಲ್ ಲೇಡಿ ಎಂಬ ಖ್ಯಾತಿಯ, ಆಧುನಿಕ ವಿಚಾರಗಳ, ತಾರಕೇಶ್ವರಿ ಸಿನ್ಹಾ ಇದನ್ನು ತುಂಬಾ ಅತಿ ಎಂದು ಹೇಳಿ, ವಿರೋಧ ವ್ಯಕ್ತಪಡಿಸಿದ್ದರು. ಸಂಸತ್ ಭವನದ ಮೊಗಸಾಲೆಗಳಲ್ಲಿ, ಕುಚೋದ್ಯ - ಲೇವಡಿಗಳಿಗೆ ಹೆಸರು ಮಾಡಿದ್ದ, ಬಿಂದಾಸ್ ಸ್ವಭಾವದ ಫಿರೋಜ್ ಗಾಂಧಿ (ಇಂದಿರಾ ಗಾಂಧಿಯವರ ಪತಿ) ತಾರಕೇಶ್ವರಿಯವರ ಬಳಿ, ಮುರಾರಜಿಯವರು ಕಾಂಗ್ರೆಸ್ಸಿನ ಮಹಿಳಾ ಅಭ್ಯರ್ಥಿಗಳ ಒಳ ಉಡುಪುಗಳನ್ನೂ ಪರೀಕ್ಷಿಸಿದರೇ, ಎಂದು ಕೇಳಿ, ಎಲ್ಲರ ನಗುವಿಗೆ ಕಾರಣರಾಗಿದ್ದರು. ವಿಷಯ ನೂರಾರು ಕಿವಿ - ಬಾಯಿ ದಾಟಿ, ಮುರಾರಜಿಯವರಿಗೆ ತುಂಬಾ ಬೇಸರವಾಯಿತು.

ಆದರೆ, ಅವರಿಗೆ ಪೂರ್ವಗ್ರಹವೇನೂ ಇರಲಿಲ್ಲ. ಮುಂದೊಮ್ಮೆ, ನೆಹರೂ ಅವರು ತಾರಕೇಶ್ವರಿ ಸಿನ್ಹಾ ಅವರನ್ನು ಮುರಾರಜಿ ಅವರ ಸಹಾಯಕ ಮಂತ್ರಿಯಾಗಿ ಕೆಲಸ ಮಾಡಲು ಹೇಳಿದಾಗ, ತಾರಕೇಶ್ವರಿ, ಮೇಲಿನ ಘಟನೆಯ ಹಿನ್ನೆಲೆಯಲ್ಲಿ ತುಂಬ ನರ್ವಸ್ ಆಗಿಬಿಟ್ಟಿದ್ದರಂತೆ. ಮುರಾರಜಿಯವರನ್ನು ಭೇಟಿ ಮಾಡಿದಾಗ, ಅವರು ಈ ಕುರಿತಂತೆ ಆಕ್ಷೇಪಿಸಿದರಾದರೂ, ತಮ್ಮೊಂದಿಗೆ ಕೆಲಸ ಮಾಡಲು ಯಾವ ಅಭ್ಯಂತರವೂ ಇಲ್ಲವೆಂದರು. ಖಾತೆಯ ಕೆಲಸದಲ್ಲಿ ಜೊತೆಗೂಡಿ ಕೆಲಸ ಮಾಡಲು, ತಾರಕೇಶ್ವರಿ ಅವರಿಗೆ ಯಾವ ಮುಜುಗರವೂ ಅಗದಂತೆ ದೇಸಾಯಿ ವರ್ತಿಸಿದರು.

ಮತಗಳಿಕೆಗಾಗಿ ಇಂದು ಭಯೋತ್ಪಾದಕರ ಪರವಾಗಿ, ದೇಶದ್ರೋಹಿಗಳ ಪರವಾಗಿ ನಿಲ್ಲುತ್ತಿರುವ ಅಯೋಗ್ಯ ರಾಜಕಾರಣಿಗಳ ಮಧ್ಯೆ, ಶಿಸ್ತಿಗೆ - ಕಾನೂನು ಪಾಲನೆಗೆ ಅತಿ ಹೆಚ್ಚು ಮಹತ್ವ ನೀಡಿದ್ದ ಮುರಾರಜೀ ಅಂತಹವರು ಮಹಾನ್ ವ್ಯಕ್ತಿಗಳಾಗಿ ತೋರುತ್ತಾರೆ. 1960ರಲ್ಲಿ, ಅವರು ಅವಿಭಜಿತ ಬಾಂಬೆ ರಾಜ್ಯದ (ನಂತರ ಮಹಾರಾಷ್ಟ್ರ - ಗುಜರಾತ್ ರಾಜ್ಯಗಳು ನಿರ್ಮಾಣವಾದವು) ಮುಖ್ಯಮಂತ್ರಿಯಾಗಿದ್ದಾಗ, ಮಹಾರಾಷ್ಟ್ರ ಪ್ರತ್ಯೇಕತಾ ಚಳವಳಿಯು ಅರಾಜಕತೆಗೆ, ಹಿಂಸೆ - ಲೂಟಿಗಳಿಗೆ ತಿರುಗಿದಾಗ, ಮುರಾರಜಿ ದೇಸಾಯಿ, ಗೋಲೀಬಾರ್ ಗೆ ಆದೇಶ ನೀಡಿ, ಕಾನೂನು ಪಾಲನೆಯ - ಶಿಸ್ತು ಪಾಲನೆಯ ಮಹತ್ವ ಸಾರಿದರು. ಆ ಕಾರಣದಿಂದ ಅವರಿಗೆ ಎಷ್ಟು ವಿರೋಧ ಎದುರಾದರೂ, ಅಧಿಕಾರಕ್ಕೆ ಎರವಾಗಬೇಕಾಗಿ ಬಂದರೂ ಹೆದರಲಿಲ್ಲ. ಆಗ ನಡೆದ ಗೋಲೀಬಾರಿನಲ್ಲಿ ಸತ್ತವರು 105 ಜನ. ತಮ್ಮ ಕ್ರಮವನ್ನು ಅವರು ಸಮರ್ಥಿಸಿಕೊಂಡರೇ ಹೊರತು, ಎಂದಿಗೂಅವರು ರಾಜಕೀಯ ಅವಕಾಶವಾದಿಯಾಗಲೇ ಇಲ್ಲ.

ಸ್ವಮೂತ್ರಪಾನದ ಔಷಧೀಯ ಮಹತ್ವದ ಬಗ್ಗೆ ಅವರು ಪುಸ್ತಕ ಬರೆದಿದ್ದಾರೆ. ಆ ಕುರಿತು ಅವರೆಂದೂ ಸಂಕೋಚ ಪಡುತ್ತಿರಲಿಲ್ಲ. ಎಷ್ಟು ಲೇವಡಿ ಮಾಡಿದರೂ, ವಿರೋಧ ವ್ಯಕ್ತವಾದರೂ ಅವರು ಸೊಪ್ಪು ಹಾಕಲಿಲ್ಲ. ಅವರು ನಿಧನರಾದಾಗ ಅವರಿಗೆ ನೂರನೆಯ ವರ್ಷ (29.02.1896 * 10.04.1995). ಕೊನೆಯವರೆಗೆ ಅವರು ತುಂಬ ಚುರುಕಾಗಿದ್ದರು, ಆರೋಗ್ಯವಂತರಾಗಿದ್ದರು. ಅವರನ್ನು ಲೇವಡಿ ಮಾಡಿದವರು ಮುಂಚೆಯೇ ಮರಣಿಸಿದ್ದು ವಿಧಿಯ ವೈಚಿತ್ರ್ಯವೋ ಏನೋ !

ಏನೇ ಇರಲಿ, ಮನೆಮನೆಗಳಲ್ಲಿ, "ಜನಪ್ರಿಯ" ರಾಜಕೀಯ ನಾಯಕರ ನಡುವೆ, ಮುರಾರಜೀಯವರ ಫೋಟೋ ಕಾಣುವುದಿಲ್ಲ. ಪ್ರಾಯಶಃ ಜನರಿಗೂ ವಿಪರೀತ ಶಿಸ್ತು - ನಿಷ್ಠೆಗಳು ಅಷ್ಟೊಂದು ಇಷ್ಟವಾದಂತೆ ಕಾಣುವುದಿಲ್ಲ.

======================

ಲೇಖಕ : ಮಂಜುನಾಥ ಅಜ್ಜಂಪುರ (ಎ.ಎನ್.ಮಂಜುನಾಥ್), ಬೆಂಗಳೂರು.

9901055998
anmanjunath@gmail.com