ಅಪರೂಪದ ಮೀನುಗಳು ಹಾಗೂ ಅವುಗಳ ದೇಹರಚನೆ
ನೀವು ಈಗಾಗಲೇ ವಿದ್ಯುತ್ ಮೀನು ಬಗ್ಗೆ ಓದಿರುತ್ತೀರಿ. ಸಮುದ್ರದಾಳದಲ್ಲಿ ಸಾವಿರಾರು ಬಗೆಯ ಅಪರೂಪದ ಜಲಚರಗಳಿವೆ. ಅವುಗಳನ್ನು ಕೆಲವೊಂದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಓದುವ ಕೌತುಕ ನಿಮ್ಮದಾಗಲಿ.
ಎಕ್ಸ್ ರೇ ಮೀನು: ನಾವು ಎಕ್ಸ್ ರೇ ಅಥವಾ ಕ್ಷ-ಕಿರಣ ಪರೀಕ್ಷೆಗೆ ಒಳಪಟ್ಟರೆ ನಮ್ಮ ದೇಹದ ಒಳಗಿನ ಅಂಗಗಳು ಕಾಣುತ್ತವೆ. ಹಾಗೆಯೇ ಬರಿಗಣ್ಣಿಗೇ ದೇಹದ ಒಳಗಿರುವ ಎಲ್ಲಾ ಅಂಶಗಳು ಕಾಣಸಿಗುವುದು ಎಕ್ಸ್ ರೇ ಮೀನಿನಲ್ಲಿ. ಇವುಗಳನ್ನು ಪಾರದರ್ಶಕ ಮೀನು ಎಂದೂ ಕರೆಯುತ್ತಾರೆ. ಇದರ ದೇಹದ ಒಳಗಿನ ಮುಳ್ಳು, ಒಳಗಿನ ಅವಯವಗಳು ಎಲ್ಲಾ ಹೊರಗಡೆಯಿಂದಲೇ ನೋಡಬಹುದು. ಈ ಮೀನುಗಳು ದಕ್ಷಿಣ ಅಮೇರಿಕಾದ ಕಡಲುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಇವುಗಳ ದೇಹದ ಒಳಗೆ ಬೆಳಕು ಹರಿದಾಗ ಇನ್ನಷ್ಟು ಸ್ಪಷ್ಟವಾಗಿ ಇದರ ದೇಹ ರಚನೆಯು ಕಂಡು ಬರುತ್ತದೆ.
ಬಾವಲಿ ಮೀನು: ಬಾವಲಿಯಂತಹ ದೇಹರಚನೆಯನ್ನು ಹೊಂದಿರುವ ಕಾರಣ ಇವುಗಳಿಗೆ ಈ ಹೆಸರು ಬಂದಿದೆ. ಬೆನ್ನು ಹಾಗೂ ಹೊಟ್ಟೆಯ ರೆಕ್ಕೆಗಳು ದೇಹದ ಉದ್ದಕ್ಕೂ ಚಾಚಿರುವ ತೆಳ್ಳನೆಯ ಹಾಳೆಯಾಗಿರುವುದರಿಂದ ಅದು ಬಾವಲಿಯ ತೊಗಲಿನ ರೀತಿ ಕಾಣಿಸುತ್ತದೆ. ಇವುಗಳು ಅಧಿಕ ಸಂಖ್ಯೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಕಂಡು ಬರುತ್ತವೆ. ಬಾವಲಿ ಮೀನು ಸುಮಾರು ೧೪ ಇಂಚಿನಷ್ಟು ದೊಡ್ಡ ಗಾತ್ರಕ್ಕೆ ಬೆಳೆಯುತ್ತದೆ. ಇವುಗಳು ಉತ್ತಮ ಈಜುಗಾರರಲ್ಲ. ಆದುದರಿಂದ ಕಡಲಿನ ತಳದಲ್ಲಿ ಇದು ನಿಧಾನವಾಗಿ ಇದು ಚಲಿಸುತ್ತದೆ.
ಚಪ್ಪಟೆ ಮೀನು: ‘ರೇ ಫಿಶ್’ ಎಂದು ಕರೆಯುವ ಮೀನುಗಳು ಗಾಳಿಪಟದಂತೆ ಚೌಕಾಕಾರದಲ್ಲಿರುತ್ತವೆ. ಇವುಗಳು ಸ್ವಲ್ಪ ಮಟ್ಟಿಗೆ ವಿದ್ಯುತ್ ಅನ್ನು ಹೊಂದಿರುತ್ತವೆ. ಚಪ್ಪಟೆ ಮೀನು ಮುಟ್ಟಿದಾಗ ಸಣ್ಣ ಸಣ್ನ ಜೀವಿಗಳು ಜೀವವನ್ನು ಕಳೆದುಕೊಳ್ಳುತ್ತವೆ. ಉದ್ದನೆಯ ಬಾಲವನ್ನು ಹೊಂದಿರುವ ಈ ಮೀನುಗಳ ಬಾಲದ ಬುಡದಲ್ಲಿ ವಿಷಪೂರಿತ ಮುಳ್ಳುಗಳಿರುತ್ತವೆ. ಈ ಮೀನನ್ನು ಉಪಯೋಗಿಸಿ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.
ಸೂಜಿ ಮೀನು: ಹೆಸರೇ ಹೇಳುವಂತೆ ಈ ಮೀನಿನ ಬಾಯಿಯು ಸೂಜಿಯಂತೆ ಚೂಪಾಗಿರುತ್ತದೆ. ಇದನ್ನು ಸೂಜಿ ಮೂಗಿನ ಮೀನು (Needle nose fish) ಎಂದೂ ಕರೆಯುತ್ತಾರೆ. ಸೂಜಿ ಮೀನಿನ ದೇಹ ತೆಳ್ಳಗೆ ಇದ್ದು, ಇದರ ಸೂಜಿಯಂತಹ ಬಾಯಿಯಲ್ಲಿ ಹಲ್ಲಿನಂತಹ ರಚನೆಗಳಿವೆ. ಈ ಮೀನು ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುತ್ತದೆ.ಸೂಜಿ ಮೀನುಗಳು ಅಪಾಯಕಾರಿಯಲ್ಲ. ಆದರೂ ಇದರ ಉದ್ದನೆಯ ಗರಗಸದಂತಹ ಮೂತಿಯು ಗಾಬರಿ ಹುಟ್ಟಿಸುತ್ತದೆ. ಇವು ವಿಷಕಾರಿ ಹಾಗೂ ಆಕ್ರಮಣಕಾರಿಗಳಲ್ಲ.
ಹಾರುವ ಮೀನು: ಇವುಗಳ ಹಕ್ಕಿಗಳ ರೆಕ್ಕೆಯಂತಹ ರಚನೆಗಳಿಂದ ಈ ಮೀನುಗಳಿಗೆ ಹಾರುವ ಮೀನು (Flying fish)ಎಂಬ ಹೆಸರು ಬಂದಿದೆ. ಇವುಗಳು ನೀರಿನ ಮೇಲುಸ್ತರದಲ್ಲಿ ಈಜಾಡುತ್ತಾ, ನೀರಿನಿಂದ ಮೇಲಕ್ಕೆ ಹಾರುತ್ತಾ ಇರುತ್ತವೆ. ಇವುಗಳಲ್ಲಿ ಕೆಲವು ವಿಧದ ಮೀನುಗಳು ೨೦ ರಿಂ ೨೫ ಅಡಿಗಳವರೆಗೆ ಹಾರುವುದೂ ಉಂಟಂತೆ. ಈ ಮೀನುಗಳಲ್ಲಿ ೬೪ ವಿಧದ ಮೀನುಗಳಿವೆ. ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ಪ್ರದೇಶವನ್ನು ಹಾರಾಡುವ ಮೀನುಗಳ ನಗರ ಎಂದು ಕರೆಯುತ್ತಾರೆ.
ಕೆಲವು ಮೀನುಗಳ ಬಗ್ಗೆ ಮಾತ್ರ ಇಲ್ಲಿ ವಿವರಣೆ ಇದೆ. ಇನ್ನೂ ಹಲವಾರು ವಿಶೇಷ ಮೀನುಗಳ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುವೆ.
ಚಿತ್ರಗಳ ವಿವರ ೧. ಎಕ್ಸ್ ರೇ ಮೀನು
೨. ಬಾವಲಿ ಮೀನು
೩. ಚಪ್ಪಟೆ ಮೀನು
೪. ಸೂಜಿ ಮೀನು
೫. ಹಾರುವ ಮೀನು
ಚಿತ್ರ ಸಂಗ್ರಹ: ವಿವಿಧ ಅಂತರ್ಜಾಲ ತಾಣಗಳು