ಅಪರೂಪದ ವ್ಯಕ್ತಿ

ಅಪರೂಪದ ವ್ಯಕ್ತಿ

ಬರಹ

``ಗುರುಸ್ಮರಣೆ: ಅಪರೂಪದ ವ್ಯಕ್ತಿ ಪ್ರೊ.ಎಸ್.ಗೋಪಾಲ್''  

ಲೇಖಕ~ ಡಾ;ಹೊ.ರಾ.ಶ್ರೀಪಾದ್, ಆಯ್ಕೆಶ್ರೇಣಿ ಭೌತಶಾಸ್ತ್ರ ಉಪನ್ಯಾಸಕ (ಸ್ನಾತಕೋತ್ತರ ವಿಭಾಗ), ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ), ಮಂಡ್ಯ.

ಉತ್ತಮರಾದ ಮಾರ್ಗದರ್ಶಕರು ಸಿಗಬೇಕಾದರೂ ಪುಣ್ಯಮಾಡಿರಬೇಕು. ಆ ವಿಷಯದಲ್ಲಿ ನಾನು ಬಹಳ ಪುಣ್ಯವಂತನೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಏಕೆಂದರೆ ಇಂದು ವಿಶ್ವವಿದ್ಯಾನಿಲಯಗಳಲ್ಲಿ ಪಿ.ಎಚ್.ಡಿ. ಪದವಿಗಾಗಿ ಸಂಶೋಧನೆ ಮಾಡುವವರಿಗೆ ಸಿಗುವ ಅನೇಕ ಮಾರ್ಗದರ್ಶಕರ ಕಥೆ-ಅದರಿಂದ ಸಂಶೋಧನಾ ವಿದ್ಯಾರ್ಥಿಗಳು ಪಡುವ ವ್ಯಥೆ - ಎಲ್ಲವೂ ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆಯಲ್ಲವೇ? ಆದರೆ ಎಂತಹ ಪರಿಸ್ಥಿತಿಯಲ್ಲಿಯೂ ಕೆಲವು ಅಪರೂಪದ ವ್ಯಕ್ತಿಗಳು - ಪರಿಸ್ಥಿತಿಗೆ ಹೊರತಾಗಿರುವವರು ಸಿಗುತ್ತಾರೆ - ಹಲವಾರು ಕಪ್ಪೆಚಿಪ್ಪುಗಳ ಪೈಕಿ ಮುತ್ತನ್ನು ಹೊಂದಿರುವ ಕೆಲವು ವಿಶೇಷವಾದವು ದೊರೆಯುವಂತೆ. ಅಂತಹ ಓರ್ವ ಅಪರೂಪದ ವ್ಯಕ್ತಿ ದಿ. ಪ್ರೊ.ಎಸ್.ಗೋಪಾಲ್ ರವರಾಗಿದ್ದರು.
ಶ್ರೀಯುತರು ಅತ್ಯಂತ ಬಡ, ಸಾಧಾರಣ ಕುಟುಂಬವೊಂದರಲ್ಲಿ ಜನಿಸಿ ಉನ್ನತ ವಿದ್ಯಾಭ್ಯಾಸ ಪಡೆದದ್ದು ಮಾತ್ರವಲ್ಲದೇ ಶಿಕ್ಷಣಕ್ಷೇತ್ರದ ಅತ್ಯುನ್ನತ ಸ್ಥಾನವೊಂದನ್ನು ಸಹ ಗಳಿಸುವ ಸಾಧನೆಗೈದ ಮಹಾನ್ ಸಾಧಕರೂ ಹೌದು. ಕೋಲಾರಜಿಲ್ಲೆಯ ಬಡರೈತ ಕುಟುಂಬವೊಂದರಲ್ಲಿ - ಅವರೇ ಹೇಳಿಕೊಳ್ಳುತ್ತಿದ್ದಂತೆ ಅನಾಗರಿಕವೆನ್ನಬಹುದಾದ ಪರಿಸರದಲ್ಲಿ ೧೯೪೦ರ ಆಗಸ್ಟ್ ೨೪ರಂದು ಜನಿಸಿ ದೂರದೂರಿಗೆ ನಡೆದು ವಿದ್ಯಾಭ್ಯಾಸ ಮಾಡಿದ ಶ್ರೀಯುತರು ಮೈಸೂರು ವಿ.ವಿ.ಯಿಂದ ಬಿ.ಎಸ್ಸಿ., ಎಂ.ಎಸ್ಸಿ. ಹಾಗೂ ಪಿ.ಎಚ್.ಡಿ. ಪದವಿಗಳನ್ನು ಪಡೆದರು. ೧೯೭೦ ರಿಂದ ೧೯೯೫ ರವರೆಗೆ ಮೈಸೂರಿನ ಮಾನಸಗಂಗೋತ್ರಿಯ ಭೌತಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ೧೯೯೫ ರಿಂದ ೨೦೦೧ ರವರೆಗೆ - ಎರಡು ಅವಧಿಗಳಿಗೆ- ಮಂಗಳೂರು ವಿ.ವಿ.ಯ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು. ನಿಜಕ್ಕೂ ಇದೊಂದು ಶ್ಲಾಘನೀಯ ಹಾಗೂ ಅಪರೂಪದ ಸಾಧನಾಗಾಥೆಯಲ್ಲದೇ ಮತ್ತೇನು?
ಶ್ರೀಯುತರ ನಡೆ-ನುಡಿಗಳೆರಡೂ ಅತಿನೇರ ಹಾಗೂ ಅತಿಸರಳವಾಗಿದ್ದವು. ವಿದ್ಯಾರ್ಥಿಗಳನ್ನು ಬಹುಪ್ರೀತಿಯಿಂದ ಕಾಣುತ್ತಿದ್ದ ಅವರು ಕುಲಪತಿಗಳಾಗಿದ್ದಾಗ ಸಹ ವಿದ್ಯಾರ್ಥಿಗಳನ್ನು ಮಾತ್ರವಲ್ಲದೇ ವಿ.ವಿ.ಯ ಅತಿ ಕೆಳಹಂತದ ನೌಕರರನ್ನೂ ಸಹ ಪ್ರೀತಿ, ವಿಶ್ವಾಸಗಳಿಂದ ಕಾಣುತ್ತಿದ್ದರು. ಅವರ ಸಮಸ್ಯೆಗಳನ್ನು ಬಹು ಸಹನೆಯಿಂದ ಆಲಿಸಿ ತಮ್ಮ ಕೈಲಾದ ಎಲ್ಲ ಸಹಾಯವನ್ನು ಮಾಡುತ್ತಿದ್ದರು. ಸಂಶೋಧನಾ ವಿದ್ಯಾರ್ಥಿಗಳನ್ನು ಗುಲಾಮರಂತೆ ಕಾಣುವರೆಂಬ ಅಪವಾದಕ್ಕೆ ಬಹಳ ಮಾರ್ಗದರ್ಶಕರು ಗುರಿಯಾಗಿದ್ದ ಕಾಲದಲ್ಲಿಯೂ ಸಂಶೋಧನಾ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಅಪರೂಪದವ್ಯಕ್ತಿ ಅವರಾಗಿದ್ದರು. ಅವರ ಬಗೆಗೆ ಲಘುವಾಗಿ ಮಾತನಾಡುವವರು ಬಂದು ಸಹಾಯ ಕೇಳಿದರೂ ಸಹ ಅವರಿಗೂ ಸಹ ತಮ್ಮ ಕೈಲಾಗುವ ಎಲ್ಲ ಸಹಾಯ ಮಾಡುವ ಅವರ ಗುಣ ಕಂಡು ಹಲವರು ಬೆರಗಾಗಿರುವುದೂ ಉಂಟು. ಉನ್ನತ ವ್ಯಕ್ತಿತ್ವ ಹೊಂದಿರುವವರಿಗೆ ತಲೆಬಾಗುವ ಗುಣ ಹೊಂದಿದ್ದ ಶ್ರೀಯುತರು `ಅಧ್ಯಾತ್ಮಿಕತೆ' ಯೆಡೆ ವಿಶೇಷ ಒಲವನ್ನು ಹೊಂದಿದ್ದರು. ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಟ್ಟು ಅವರವರ ಕಾರ್ಯಗಳನ್ನು ಸ್ವತಂತ್ರವಾಗಿ ಯಾವುದೇ ನಿರ್ಬಂಧವಿಲ್ಲದೇ ಮಾಡಲು ಬಿಡುತ್ತಿದ್ದುದು ಅವರ ವಿಶೇಷಗುಣಗಳಲ್ಲಿ ಒಂದಾಗಿತ್ತು.
ವಿ.ವಿ.ಗಳ ಅನೇಕ ಪ್ರಾಧ್ಯಾಪಕರು ಸ್ವಜನ ಪಕ್ಷಪಾತಕ್ಕೆ ಹೆಸರಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಶ್ರೀಯುತರು ಆ ವಿಚಾರದಲ್ಲಿಯೂ ಸಹ ಅದರಿಂದ ಹೊರತಾದವರಾಗಿದ್ದರು. ಪ್ರಸ್ತುತ ಲೇಖಕ ಶ್ರೀಪಾದ್ ತನ್ನ ಸಹಪಾಠಿಯಾಗಿದ್ದ ಶ್ರೀಯುತ ಚಂದ್ರಶೇಖರ್ (ಈಗ ಮೈಸೂರಿನಲ್ಲಿ ಅಣುಶಕ್ತಿ ಇಲಾಖೆಯ ವಿಜ್ನಾನಿ)ರೊಂದಿಗೆ ಅವರ ಬಳಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಅವರ ಬಳಿ ಆಗಲೇ ವಿದ್ಯಾರ್ಥಿಗಳಾಗಿದ್ದವರು ಶ್ರೀಯುತ ಶ್ರೀರಾಮಲು (ಈಗ ಕೆ.ಜಿ.ಎಫ್.ಪ್ರಥಮದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು) ಹಾಗೂ ಶ್ರೀ ರವೀಂದ್ರಾಚಾರಿ(ಈಗ ಮಂಗಳೂರು ವಿ.ವಿ.ಯಲ್ಲಿ ಪ್ರವಾಚಕ). ಆಗ ನಾಲ್ವರ ಪೈಕಿ ಒಬ್ಬರೂ ಅವರ ಕುಲಬಾಂಧವರಿರಲಿಲ್ಲದ್ದನ್ನು ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದೂ ಉಂಟು. ಸಮಾಜದ ಕೆಳಸ್ಥರದಿಂದ ಬಂದ ವಿದ್ಯಾರ್ಥಿಗಳಿಗಂತೂ ಒಂದುಕೈ ಮುಂದೆಹೋಗಿ ಸಹಾಯ ಮಾಡುತ್ತಿದ್ದ ಶ್ರೀಯುತರು ವಿದ್ಯಾರ್ಥಿಗಳಿಗೆ ಪ್ರಿಯಗುರುಗಳಾಗಿದ್ದರು. ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ-ಸಂಶೋಧನಾ ವಿಷಯಗಳ ಬಗೆಗೆ ಮಾತ್ರ ಮಾರ್ಗದರ್ಶನವೀಯದೇ ಸಮಾಜದ ವಿವಿಧ ಸಮಸ್ಯೆಗಳ ಬಗೆಗೆ, ವ್ಯಕ್ತಿತ್ವ ನಿರ್ಮಾಣದ ಬಗೆಗೆ, ಪ್ರಚಲಿತ ವಿದ್ಯಮಾನಗಳ ಬಗೆಗೆ ಹಾಗೂ ಜೀವನಕಲೆಯ ಬಗೆಗೆ ಸಹ ಆಗಾಗ್ಗೆ ಮಾರ್ಗದರ್ಶನ ನೀಡುತ್ತಿದ್ದ ಅವರು ವಿದ್ಯಾರ್ಥಿಗಳಿಗೆ `ನಿಜವಾದ ಜೀವನ ಮಾರ್ಗದರ್ಶಕ'ರಾಗಿದ್ದರು.
ಮೈಸೂರು ವಿ.ವಿ.ಯ ಅನೇಕ ಅಂಗಗಳಲ್ಲಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ಅನೇಕ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ವೈಜ್ನಾನಿಕ ಸಂಘಸಂಸ್ಥೆಗಳ ಆಡಳಿತಮಂಡಳಿಯ ಸದಸ್ಯರೂ ಆಗಿದ್ದರು. ಅನೇಕ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ವೈಜ್ನಾನಿಕ ಕಮ್ಮಟಗಳನ್ನು ಆಯೋಜಿಸಿದ್ದ ಅವರು ಅನೇಕ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ವೈಜ್ನಾನಿಕ ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ಸಂಶೋಧನಾ ವಿಚಾರಗಳನ್ನು ಮಂಡಿಸಿದ್ದರು. ಹನ್ನೆರಡು ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಪದವಿಗಾಗಿ ಸಂಶೋಧನಾ ಮಾರ್ಗದರ್ಶನ ಒದಗಿಸಿದ ಅವರು ನೂರಕ್ಕೂ ಅಧಿಕ ವೈಜ್ನಾನಿಕ ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ವೈಜ್ನಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪಶ್ಚಿಮಜರ್ಮನಿಯ ಜ್ಯೂರಿಚ್ ನಲ್ಲಿರುವ ಪ್ರತಿಷ್ಠಿತ ವೈಜ್ನಾನಿಕಸಂಸ್ಥೆಯಲ್ಲಿ ಅತಿಥಿವಿಜ್ನಾನಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ರೋಮ್ ನ ವಿ.ವಿ.ಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿಯೂ ತಮ್ಮ ವಿಚಾರ ಮಂಡಿಸಿದ್ದರು.
ಮಂಗಳೂರು ವಿ.ವಿ.ಯಲ್ಲಿ ಅವರು ಕುಲಪತಿಗಳಾಗಿದ್ದ ಆರು ವರ್ಷಗಳಂತೂ ಆ ವಿ.ವಿ.ಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ನಮೂದಿಸಲ್ಪಡುವ ವರ್ಷಗಳಾಗಿವೆ. ಆ ಸಮಯದಲ್ಲಿ ಅವರು ಶೈಕ್ಷಣಿಕ ಹಾಗೂ ಆಡಳಿತಕ್ಷೇತ್ರಗಳೆರಡರಲ್ಲಿಯೂ ಹೊಸಕ್ರಾಂತಿಯನ್ನೇ ಮಾಡಿದರು. ಅನೇಕ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಿದ ಅವರು ಎಲ್ಲರಿಗೂ ಸಮೀಪದ ವ್ಯಕ್ತಿಯಾಗಿದ್ದರು. ಎಲ್ಲ ಧರ್ಮಗಳ ಮುಖಂಡರನ್ನು, ಹಲವಾರು ಯತಿಗಳನ್ನು ಆಮಂತ್ರಿಸಿ ವಿ.ವಿ.ಯಲ್ಲಿ ವಿಶೇಷ ಉಪನ್ಯಾಸಗಳನ್ನು, ಚರ್ಚೆಗಳನ್ನು ಏರ್ಪಡಿಸಿ ವಿಶ್ವಭ್ರಾತೃತ್ವ, ಪರಧರ್ಮ ಸಹಿಷ್ಣತೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯ ನಿರ್ವಹಿಸಿದ ಅವರು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಅಧ್ಯಾಪಕೇತರರ ನಡುವೆ ಸಾಮರಸ್ಯಭಾವ ಮೂಡಿಸುವಲ್ಲಿ ವಿಶೇಷಪಾತ್ರ ವಹಿಸಿ ಅವರೆಲ್ಲರಲ್ಲಿ ಆಧ್ಯಾತ್ಮಿಕತೆಯೆಡೆಗೆ ಒಲವುಂಟಾಗುವಂತೆ ಮಾಡಿದ್ದಾರೆ. ವಿ.ವಿ.ಗೆ ವಿವಿದೆಡೆಗಳಿಂದ ಬಹಳಷ್ಟು ಹಣ ತಂದು ಅದರ ಸದುಪಯೋಗವಾಗುವಂತೆ ನೋಡಿಕೊಂಡು ವಿಶ್ವವಿದ್ಯಾನಿಲಯವು ನ್ಯಾಕ್ ನಿಂದ ಉನ್ನತಶ್ರೇಣಿಯನ್ನು ಪಡೆಯುವಂತಾದುದರಲ್ಲಿ ಅವರ ಯೋಗದಾನ ಬಹಳ ಮುಖ್ಯವಾದುದು.
ಇಷ್ಟೆಲ್ಲದರ ನಡುವೆ ಕೃಷಿಯಲ್ಲಿಯೂ ಬಹಳ ಆಸಕ್ತಿ ಹೊಂದಿದ್ದ ಅವರು ಮೈಸೂರಿನ ಬೋಗಾಧಿ ರಸ್ತೆಯಲ್ಲಿರುವ ಅವರದೇ ಆದ `ಸಂಪದ ಫಾರಂ' ನಲ್ಲಿ ಅವರು ನಡೆಸಿದ ಕೃಷಿ ಸಂಶೋಧನೆಗಳು ಒಂದೆರಡಲ್ಲ. ಈ ಎಲ್ಲಾ ಅವರ ಯಶೋಗಾಥೆಯಲ್ಲಿ ಅವರಿಗೆ ಸಂಪೂರ್ಣ ಸಹಕಾರ ನೀಡಿದವರು ಅವರ ಸಹಧರ್ಮಿಣಿಯಾದ ಶ್ರೀಮತಿ ಜಯಲಕ್ಷ್ಮಿಯವರು, ಪುತ್ರಿಯರಾದ ಸೌ||ಶಾಂತಲಾ, ಸೌ|| ಡಾ;ಶುಭ ಹಾಗೂ ಸೌ|| ಶೃತಿಯವರು. ಅಂತೆಯೇ ಅವರಿಗೆ ಸಹಾಯಸ್ಥಂಭಗಳಾಗಿ ನಿಂತವರು ಅಳಿಯಂದಿರಾದ ಶ್ರೀ ಭೈರಾರೆಡ್ಡಿ, ಡಾ; ಚಂದ್ರಶೇಖರ್ ಹಾಗೂ ಡಾ|| ಶ್ರೀಧರ್ ರವರು. ಸಮಾಜ ಹಾಗೂ ಶಿಕ್ಷಣಕ್ಷೇತ್ರ ಅವರಿಂದ ಇನ್ನೂ ಬಹಳಷ್ಟು ಸೇವೆಯನ್ನು ನಿರೀಕ್ಷಿಸುತ್ತಿದ್ದ ಗಳಿಗೆಯಲ್ಲಿಯೇ ಶ್ರೀಯುತರು ೨೦೦೨ರ ಜೂನ್ ೨೩ರಂದು ತೀವ್ರ ಹೃದಯಾಘಾತದಿಂದಾಗಿ ವಿಧಿವಶರಾದರು.
ಮೈಸೂರಿನಲ್ಲಿ ಅವರು ಅನೇಕ ಮಹಾತ್ಮರು ಹಾಗೂ ಪೂಜ್ಯರುಗಳ ಜೊತೆಯಲ್ಲಿ ನಿಕಟ ಸಂಬಂಧ ಹೊಂದಿದ್ದ ಶ್ರೀಯುತರು ಅಲ್ಲಿಯ ಕೆಲವು ಪಾವನಸ್ಥಳಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಹಲವು ಬಾರಿ ಅಂತಹ ಪಾವನಸ್ಥಳಗಳಿಗೆ ಅವರ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಈ ಲೇಖಕನನ್ನೂ ಸಹ ಕರೆದೊಯ್ಯುತ್ತಿದ್ದರು. ಆ ಮಧುರಕ್ಷಣಗಳ ನೆನಪಿನ್ನೂ ಲೇಖಕನ ಮನದಲ್ಲಿ ಹಸಿರಾಗಿಯೇ ಇದೆ. ಆಧ್ಯಾತ್ಮಿಕ ವಿಚಾರಚಿಂತನೆಗೆ ನೀರೆರೆದು ಪೋಷಿಸಿದ ಅವರ ಔದಾರ್ಯ ಲೇಖಕನ ಹೃದಯದಲ್ಲಿ ಶಾಶ್ವತವಾಗಿ ಮನೆ ಮಾಡಿಕೊಂಡಿದೆ.

ಜೈ ಗುರುದೇವ ದತ್ತ