ಅಪರೂಪದ ಹಣ್ಣುಗಳು : ಮಡಿಕೆ ಹಣ್ಣು ಹಾಗೂ ಕರ್ಮಂಜಿ


ಮಡಿಕೆ ಹಣ್ಣು: ಮರೆ ಆಗುತ್ತಿರುವ ಕಾಡುಹಣ್ಣುಗಳ ಪೈಕಿ ಮಡಿಕೆ (ಮಜ್ಜಿಗೆ) ಹಣ್ಣು ಸಹ ಒಂದು. ಮಳೆಗಾಲದಲ್ಲಿ ಕಾಡಿನಲ್ಲಿ ಈಗ ಕಾಣಸಿಗುವುದೇ ಅಪರೂಪ. ಇನ್ನು ಮಜ್ಜಿಗೆ ಹಣ್ಣಿನ ಋತುವಿನಲ್ಲಿ ಮಜ್ಜಿಗೆ ಹಣ್ಣಿನ ಮರದ ರೆಂಬೆಕೊಂಬೆಗಳಲ್ಲಿ ಗೋಲಿಯಾಕಾರದ ಹಣ್ಣಿನ ಗೊಂಚಲು. ಈ ಹಣ್ಣು ತಿನ್ನುವಾಗ ಹುಳಿಮಿಶ್ರಿತ ಸಿಹಿಯಾಗಿ ಮಜ್ಜಿಗೆ ರುಚಿ ಹೊಂದಿದೆ. ಆಡುಭಾಷೆಯಲ್ಲಿ ಮಜ್ಜಿಗೆ ಹಣ್ಣೆಂದೇ ಪ್ರಚಲಿತವಾಗಿದೆ.
ಇದು, ಮಾರುಕಟ್ಟೆಯಲ್ಲಿ ಸಿಗದು. ಇದನ್ನು ಸವಿಯಬೇಕೆಂದರೆ ಕಾಡು ಸುತ್ತಾಡಬೇಕು. ಮಳೆಗಾಲದಲ್ಲಿ ಎಲೆ ಬಿಡುತ್ತಲೆ ಕೊಂಬೆಗಳಲ್ಲಿ ಗೊಂಚಲು ಕಾಣಿಸಿಕೊಳ್ಳುತ್ತವೆ. ಬೆಳೆದಂತೆ ಹಸಿರು ಬಣ್ಣದ ಇದು, ಮಾಗುತ್ತಲೇ ಬಿಳಿಬಣ್ಣಕ್ಕೆ ತಿರುಗುತ್ತದೆ.
ಕಾಡಿನ ಇಂಥ ಹಣ್ಣುಗಳಲ್ಲೆಲ್ಲ ಔಷಧಿಯ ಗುಣವಿಶೇಷವಿದೆ. ಹಿರಿಯರು ಅವುಗಳನ್ನು ಪೋಷಿಸುತ್ತಿದ್ದರು. ಈಗ ಬಹುತೇಕ ಕಾಡುಹಣ್ಣುಗಳು ಅಸಡ್ಡೆಗೆ ಒಳಗಾಗಿವೆ.ಆಸಕ್ತರಿಗೆ ಸಿಗುವುದೂ ಅಪರೂಪ ಆಗುತ್ತಿದೆ.
ಕರ್ಮಂಜಿ : ಕೊಡಗಿನ ಕಾಡುಹಣ್ಣುಗಳ ಪೈಕಿ ಅತ್ಯಂತ ಸ್ವಾದಭರಿತ ಹಣ್ಣು ಕರ್ಮಂಜಿ. ಜಿಲ್ಲೆಯ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಈ ಹಣ್ಣು ಈಗ ಕಾಣದಾಗಿದೆ. ಇದನ್ನು ಕರಂಡೆ ಕಾಯಿ ಅಥವಾ ಹಣ್ಣು ಎಂದೂ ಕರೆಯುತ್ತಾರೆ. ಅಪರೂಪಕ್ಕೆ ಅಲ್ಲಿಯೋ, ಇಲ್ಲಿಯೋ ಎಂಬಂತೆ ಕಾಡುಗಳಲ್ಲಿ ಈ ಹಣ್ಣಿನ ಗಿಡ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ನಾಪೊಕ್ಲು ಸಮೀಪದ ಬೇತು ಗ್ರಾಮದಲ್ಲಿ ಕಾಡುಗಳಲ್ಲಿ ಕರ್ಮಂಜಿ ಹಣ್ಣುಗಳ ಗೊಂಚಲು ಗ್ರಾಮೀಣ ಜನರನ್ನು ಸೆಳೆಯುತ್ತಿದೆ.
ಮುಳ್ಳುಭರಿತ ಬಳ್ಳಿ ರೂಪದ ಪೊದೆ ಗಿಡವಿದು. ಮರಗಳನ್ನು ಆಧರಿಸಿ 2 ಮೀಟರ್ ಎತ್ತರ ಬೆಳೆಯಬಲ್ಲದು. ಇದರ ಸಸ್ಯಶಾಸ್ತ್ರೀಯ ಹೆಸರು ಕಾರಿಸ್ಸಾ ಕರಂಡಸ್. ಇದು ಅಪೋಸೈನೇಸಿಯೇ ಕುಟುಂಬಕ್ಕೆ ಸೇರಿದೆ. ನಿತ್ಯ ಹಸಿರಾಗಿರುವ ಈ ಸಸ್ಯ ಫೆಬ್ರುವರಿ - ಮಾರ್ಚ್ ತಿಂಗಳಲ್ಲಿ ಮಲ್ಲಿಗೆ ಹೋಲುವ ಹೂವುಗಳನ್ನು ಬಿಡುತ್ತದೆ. ಜುಲೈ–ಆಗಸ್ಟ್ ತಿಂಗಳು ಹಣ್ಣು ದೊರೆಯುವ ಕಾಲ.
ಗೋಲಿಯಾಕಾರದ ಎಳೆ ಕಾಯಿ ಹಸಿರು ಬಣ್ಣ ಹೊಂದಿದ್ದರೆ ಹಣ್ಣಾದಾಗ ಕಪ್ಪು -ನೇರಳೆ ಬಣ್ಣಕ್ಕೆ ತಿರುಗುತ್ತದೆ. ಹಣ್ಣುಗಳು ಗೊಂಚಲಿನಲ್ಲಿ ಇರುತ್ತವೆ. ತಿರುಳಿನ ಬಣ್ಣ ಕೆಂಪು, ಅತಿ ಕಡಿಮೆ ಬೀಜವನ್ನು ಹೊಂದಿರುವುದು ಇದರ ವಿಶೇಷತೆ.
ಎಲೆ, ಕಾಯಿ, ಚಿಗುರು ಚಿವುಟಿದಾಗ ಬಿಳಿ ಬಣ್ಣದ ಮೇಣ ಸ್ರವಿಸುತ್ತದೆ. ರುಚಿಕರವಾದ ಈ ಹಣ್ಣನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುತ್ತಾರೆ. ಕರ್ಮಂಜಿ ಹಣ್ಣಿನಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಹೇರಳವಾಗಿದೆ. ಕಾಯಿ ಉಪ್ಪಿನಕಾಯಿಗೆ ಬಹಳ ಉಪಯುಕ್ತ. ಅಪರೂಪದ ಈ ಕಾಡುಹಣ್ಣಿನ ತಳಿ ರಕ್ಷಣೆ, ಬೆಳೆ ಸಂವರ್ಧನೆಗೆ ಕೊಡಗು ಜಿಲ್ಲೆಯ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ ಆಸಕ್ತಿ ವಹಿಸಿದೆ.
(ಮಾಹಿತಿ ಸಂಗ್ರಹ) ಸತೀಶ್ ಶೆಟ್ಟಿ ಚೇರ್ಕಾಡಿ
ಚಿತ್ರ ೧: ಮಡಿಕೆ ಹಣ್ಣು, ಚಿತ್ರ ೨: ಕರ್ಮಂಜಿ ಹಣ್ಣು
ಚಿತ್ರ ಕೃಪೆ: ಪ್ರಜಾವಾಣಿ ಪತ್ರಿಕೆಯ ಜಾಲತಾಣ